ಸಮಸ್ಯೆಗಳ ಪರಿಹಾರಕ್ಕೆ ಮಾಡಿ ಈ ವ್ರತ, ತಿಳಿಯಿರಿ ಇದರ ಲಾಭ!

By Suvarna News  |  First Published May 26, 2020, 11:11 AM IST

ಮೌನದಿಂದ ಸಂಯಮ ಹಾಗೂ ಒಳ್ಳೆಯ ಚಿಂತನೆಗಳು ಮೂಡುತ್ತದೆ ಎಂದು ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಪರಮಾತ್ಮನೇ ಹೇಳಿದ್ದಾನೆ. ಪಂಚಾಂಗವನ್ನು ಗಮನಿಸಿದರೆ ವರ್ಷದಲ್ಲಿ 16 ಬಾರಿ ಮೌನ ವ್ರತವನ್ನು ಇಂತಹ ದಿನ ಮಾಡಬೇಕು ಎಂದು ಉಲ್ಲೇಖಿಸಲಾಗಿರುತ್ತದೆ. ಇನ್ನು ಮಹರ್ಷಿ ರಮಣ ಹಾಗೂ ಚಾಣಕ್ಯ ಸಹ ಮೌನದ ಉಪಾಸಕರಾಗಿದ್ದರು. ಮಹಾವೀರ 12 ವರ್ಷ ಹಾಗೂ ಬುದ್ಧ 10 ವರ್ಷ ಮೌನದಿಂದ ಇದ್ದು, ಅಪಾರ ಜ್ಞಾನವನ್ನು ಗಳಿಸಿದ್ದರು. ಆಂತರ್ಯದ ಶಕ್ತಿಯನ್ನು ಹೆಚ್ಚಿಸಿ ಸಾಕ್ಷಾತ್ಕಾರಗೊಳ್ಳುವುದರ ಜೊತೆಗೆ ಅತೀಂದ್ರಿಯ ಶಕ್ತಿಯನ್ನೂ ಸಾಧಿಸಬಹುದು ಎಂದು ಹೇಳಲಾಗಿದೆ. ಹಾಗಿದ್ದರೆ, ಮೌನ ವ್ರತದಿಂದಾಗುವ ಲಾಭಗಳೇನು ಎಂಬುದನ್ನು ನೋಡೋಣ.


ಜೀವನದಲ್ಲಿ ಎಲ್ಲರೂ ಕಾಣಬಯಸುವುದು ನೆಮ್ಮದಿಯನ್ನು. ಧನ-ಸಂಪತ್ತುಗಳು ಹೇರಳವಾಗಿದ್ದರೂ ಮನಸ್ಸಿಗೆ ನೆಮ್ಮದಿಯೇ ಇಲ್ಲವಾದರೆ ಬದುಕು ಕಠಿಣವೆನಿಸುತ್ತದೆ. ಧರ್ಮಶಾಸ್ತ್ರ ಹೇಳುವ ಪ್ರಕಾರ, ಮನುಷ್ಯನ ಹಲವು ಸಮಸ್ಯೆಗಳಿಗೆ ಪರಿಹಾರ ಸ್ವತಃ ಆ ವ್ಯಕ್ತಿಯ ಬಳಿಯೇ ಇರುತ್ತದೆ ಎಂಬುದಾಗಿದೆ. ಸಮಸ್ಯೆಗಳಿಗೆ ಸಮಾಧಾನ ಬೇಕಾದಾಗ ಮನಸ್ಸು ಮಾಡಿದರೆ ಅದಕ್ಕೆ ಉತ್ತರ ನಮ್ಮಲ್ಲಿಯೇ ಹುಡುಕಿಕೊಳ್ಳಬಹುದಾಗಿದೆ.

ಭಾರತೀಯ ಸಂಸ್ಕೃತಿಯಲ್ಲಿ ಸತ್ಯ ವ್ರತ, ಸದಾಚಾರ ವ್ರತ, ಸಂಯಮ ವ್ರತ, ಏಕಾದಶಿ ವ್ರತ ಈ ರೀತಿ ಹಲವು ವ್ರತಗಳಿವೆ. ಮೌನ ವ್ರತವೂ ಆ ಬಗೆಯ ವ್ರತಗಳಲ್ಲೊಂದು. ಧಾರ್ಮಿಕವಾಗಿ ನಾವು ಮಾಡುವ  ಮೌನ ವ್ರತವು ಹಲವು ರೀತಿಯಿಂದ ಲಾಭವನ್ನುಂಟು ಮಾಡುವುದಲ್ಲದೇ, ಕೆಲವು ಸಮಯಗಳ ವರೆಗೆ ಮೌನದಿಂದಿರುವುದರಿಂದ ಸಮಸ್ಯೆಗಳ ಪರಿಹಾರ ಸಾಧ್ಯವೆಂಬುದು ಜ್ಞಾನಿಗಳ ಅಭಿಪ್ರಾಯ. ಮಾತನಾಡದೇ ಇರುವುದಷ್ಟೇ ಅಲ್ಲ ಮೌನ ವ್ರತ, ನಮ್ಮೊಳಗಿನ ನಮ್ಮನ್ನು ಅರಿಯುವುದು, ಒಳಿತು-ಕೆಡುಕುಗಳ ಬಗ್ಗೆ ಚಿಂತಿಸುವುದು. ಕೆಲವು ಬಾರಿ ಈ ರೀತಿ ಮಾಡುವುದರಿಂದ ಕೆಲವೇ ದಿನಗಳಲ್ಲಿ ಸಕಾರಾತ್ಮಕ ಪರಿಣಾಮವಾಗುವುದನ್ನು ಗಮನಿಸಬಹುದು. 

ಮೌನ ವ್ರತದ ಲಾಭಗಳು
ಮೌನ ವ್ರತದ ಆರಂಭವೆಂದರೆ ಮಾತನಾಡುವುದನ್ನು ನಿಲ್ಲಿಸುವುದು. ಮಾತನಾಡುವುದನ್ನು ನಿಲ್ಲಿಸಿದರೂ ಮನಸ್ಸಿನ್ನಲ್ಲಿಯೇ ಮಾತನಾಡಿಕೊಳ್ಳುತ್ತಿರುತ್ತೇವೆ. ಆದರೆ ಮನಸ್ಸನ್ನು ನಿಯಂತ್ರಿಸಿ ಮನಸ್ಸಿನಲ್ಲೂ ಮಾತನಾಡದೇ ಇರಲು ಪ್ರಯತ್ನಿಸಬೇಕು. ಶಾಂತರಾಗಿ ಹೊರ ಪ್ರಪಂಚದ ಗದ್ದಲ-ಗೊಂದಲಗಳ ಬಗ್ಗೆ ಚಿಂತಿಸಬಾರದು. ಇದರಿಂದ ಪ್ರಪಂಚವನ್ನು ಹೊಸ ರೀತಿಯಿಂದ ನೋಡಬಹುದು. ಮೌನದಿಂದ ಮನಸ್ಸಿನ ಶಕ್ತಿ ಹೆಚ್ಚುತ್ತದೆ. ಶಕ್ತಿಯುತವಾದ ಮನಸ್ಸಿನಲ್ಲಿ ಯಾವುದೇ ಪ್ರಕಾರದ ಭಯ, ಚಿಂತೆ ಯಾವುದೂ ಇರುವುದಿಲ್ಲ. ಮೌನವನ್ನು ಅಭ್ಯಸಿಸುವುದರಿಂದ ಮಾನಸಿಕ ವಿಕಾರಗಳೇನಾದರೂ ಇದ್ದರೆ ನಾಶವಾಗುತ್ತದೆ. ಹೀಗಾಗಿ ಇವುಗಳ ಪ್ರಯೋಜನಗಳತ್ತ ಗಮನಹರಿಸೋಣ.

ಇದನ್ನು ಓದಿ: ಈ ವಸ್ತುಗಳು ಮನೆಯಲ್ಲಿದ್ದರೆ ಮನೆಗೆ ಒಳಿತಾಗುವುದಿಲ್ಲವಂತೆ!

ಸಂತೃಪ್ತಿ ಪ್ರಾಪ್ತಿ
ಮಾತನಾಡುವುದೇ ಇರುವುದು ಸುಲಭದ ಕೆಲಸವಲ್ಲ. ಮನಸ್ಸಿಗೆ ಅನ್ನಿಸಿದ ವಿಷಯವನ್ನು ತಟ್ಟನೆ ಹೇಳುವುದು ಮಾತಿನಿಂದ ಮಾತ್ರ ಸಾಧ್ಯ. ಮೌನದಿಂದ ಇರುವುದರಿಂದ ವಿಷಯಗಳನ್ನು ನೋಡುವ ರೀತಿ ಬದಲಾಗುತ್ತದೆ. ಕೋಪ ತರಿಸುವ ವಿಚಾರವಾದರೆ ಮೌನವು ಪ್ರತಿಕ್ರಿಯಿಸುವ ರೀತಿಯನ್ನು ಬದಲಾಯಿಸುತ್ತದೆ. ಮಾತಿನಿಂದ ಆಗಬಹುದಾದ ಹಲವು ತೊಂದರೆಗಳಿಗೆ ಪರಿಹಾರ ಲಭಿಸತ್ತದೆ. 

ಮೌನದಿಂದ ಪುಣ್ಯ ಪ್ರಾಪ್ತಿ
ಮನಸ್ಸು ಮತ್ತು ಮಾತಿನ ಮೇಲೆ ನಿಯಂತ್ರಣ ತಂದುಕೊಂಡು ಭಗವಂತನನ್ನು ಧ್ಯಾನಿಸುವುದು ಮತ್ತು ಮನೋವಾಂಛಿತವನ್ನು ಬೇಡುವುದರಿಂದ ಆಶಯ ಈಡೇರುತ್ತದೆ ಎಂಬ ನಂಬಿಕೆ ಇದೆ.

ಇದನ್ನು ಓದಿ: ಕ್ರೂರ-ಪಾಪ ಗ್ರಹಗಳಿಂದ ಬಚಾವಾಗಲು ಈ ಉಪಾಯ ಮಾಡಿ!

ತಪಸ್ಸಿಗೆ ಸಮ
ಮೌನವು ತಪಸ್ಸು ಮಾಡಿದಷ್ಟೇ ಕಷ್ಟಕರವಾದದ್ದು. ಇದರಿಂದ ಶರೀರದ ಶಕ್ತಿ ಹೆಚ್ಚುತ್ತದೆ. ಆಧ್ಯಾತ್ಮಿಕವಾಗಿ ಉನ್ನತಿ ಹೊಂದಬಹುದು. ಮಾತಿನಲ್ಲಿ ಶುದ್ಧತೆ ಕಾಣಬಹುದು. ಮಾತಿನಲ್ಲಿ ಹಿಡಿತವನ್ನು ಸಾಧಿಸಬಹುದು.

ಪ್ರಕೃತಿ ಪುರಾಣ
ಮೌನ ಪ್ರಕೃತಿಯನ್ನು ಹತ್ತಿರ ಮಾಡುತ್ತದೆ. ಅಲ್ಲದೆ, ಪ್ರಕೃತಿಯಿಂದ ನಾವು ಪಡೆಯುವುದು ಇನ್ನೂ ಬೇಕಾದಷ್ಟಿದೆ. ಆದರೆ, ನಾವದಕ್ಕೆ ಪೂರಕವಾಗಿ ಸಮರ್ಪಣಾ ಭಾವ ತೋರಬೇಕು. ಇದಕ್ಕಾಗಿ ಸಾಕಷ್ಟು ಸಿದ್ಧತೆಗಳನ್ನೂ ನಾವು ಕೈಗೊಳ್ಳಬೇಕಿದ್ದು, ಹೊರಹೋಗುವಾಗ ಮೌನವಾಗಿದ್ದರೆ ಒಳ್ಳೆಯದು. ಪ್ರತಿ ಋತುವಿನಲ್ಲಿ ಕೆಲ ಸಮಯ ನೀವು ಮೌನವಹಿಸಿ ಪ್ರಕೃತಿಗೆ ತೆರೆದುಕೊಂಡರೆ ಆ ಋತುವಿನ ಸಕಾರಾತ್ಮಕ ಶಕ್ತಿ ನಿಮ್ಮದಾಗುತ್ತದೆ ಎಂದು ಪುರಾಣ ಹೇಳುತ್ತದೆ. 

ಶಾರೀರಿಕ ಗಮನ ಸಾಧ್ಯ
ಮೌನವಾಗಿದ್ದರೆ ನಮ್ಮ ಶರೀರದ ಮೇಲೆ ನಾವು ಹೆಚ್ಚು ಗಮನವನ್ನು ಹರಿಸಬಹುದಾಗಿದೆ. ಇದರಿಂದ ನಮ್ಮ ದೇಹದಲ್ಲಿರುವ ಚಕ್ರಗಳು ಜಾಗೃತವಾಗಿ ಚೈತನ್ಯಗೊಳಿಸಿಕೊಳ್ಳಬಹುದು. 

ಇದನ್ನು ಓದಿ: ಅಪಮೃತ್ಯುವಿನಿಂದ ಪಾರಾಗಲು ಹೀಗ್ ಸ್ನಾನ ಮಾಡಿ

ಮೋಕ್ಷ ಪ್ರಾಪ್ತಿ
ಸಾಧು-ಸಂತರು ಮೌನದ ಮಹತ್ವವನ್ನು ಕಂಡುಕೊಂಡಿದ್ದರು. ಇಂದಿಗೂ ಸ್ವಾಮೀಜಿಗಳು ಮೌನವ್ರತವನ್ನು ಕೈಗೊಳ್ಳುವುದು ಇದಕ್ಕಾಗಿಯೇ. ಇಲ್ಲಿ ಮೌನ ಆಂತರ್ಯದ ಶಕ್ತಿಯನ್ನು ಹೆಚ್ಚಿಸಿ ಸಾಕ್ಷಾತ್ಕಾರಗೊಳ್ಳಲು ಅನುಕೂಲ ಮಾಡುತ್ತದೆ. ಜೊತೆಗೆ ಅತೀಂದ್ರಿಯ ಶಕ್ತಿಯನ್ನೂ ಸಾಧಿಸಬಹುದು ಎಂಬ ಸತ್ಯವನ್ನು ಆಗಲೇ ಋಷಿ ಮುನಿಗಳು ಕಂಡುಕೊಂಡಿದ್ದರು. ಭಗವಂತನ ಕೃಪೆಗೆ ಪಾತ್ರವಾಗುವ ಮೂಲಕ ನಮ್ಮ ಮೌನ ನಮ್ಮನ್ನು ಮೋಕ್ಷಕ್ಕೆ ಕೊಂಡೊಯ್ಯುತ್ತದೆ ಎಂದು ಹೇಳಲಾಗಿದೆ. 

click me!