Udupi: ಚರ್ಚ್ ಅಂಗಳಕ್ಕೆ ಹೂ ಚೆಲ್ಲಿ ಆಚರಿಸುವ ತೆನೆ ಹಬ್ಬ: ಮೋಂತಿ ಫೆಸ್ಟ್ ಸಂಭ್ರಮ

By Govindaraj S  |  First Published Sep 8, 2022, 11:28 AM IST

ವಿಶ್ವದೆಲ್ಲೆಡೆ ವ್ಯಾಪಿಸಿದ ಕರಾವಳಿ ಮೂಲದ ಕೊಂಕಣಿ ಕ್ರೈಸ್ತ ಕುಟುಂಬಗಳು ಜೊತೆಯಾಗಿ ಸೇರಿಕೊಂಡು ಆಚರಿಸುವ ಕೌಟುಂಬಿಕ ಹಬ್ಬ ಮೊಂತಿ ಫೆಸ್ತ್ ಮತ್ತೆ ಬಂದಿದೆ. ಎರಡು ವರ್ಷಗಳ ಕೊರೋನಾ ವ್ಯಾಧಿಯ ಬಳಿಕ ಈ ಬಾರಿ ಹೆಚ್ಚು ಸಂಭ್ರಮ ಸಡಗರದಿಂದ ಹಬ್ಬವನ್ನು ಕ್ರೈಸ್ತ ಸಮುದಾಯ ಈ ಹಬ್ಬವನ್ನು ಆಚರಿಸಿದೆ.


ವರದಿ: ಶಶಿಧರ ಮಾಸ್ತಿಬೈಲು ಏಷ್ಯಾನೆಟ್ ಸುವರ್ಣ ನ್ಯೂಸ್

ಉಡುಪಿ (ಸೆ.08): ವಿಶ್ವದೆಲ್ಲೆಡೆ ವ್ಯಾಪಿಸಿದ ಕರಾವಳಿ ಮೂಲದ ಕೊಂಕಣಿ ಕ್ರೈಸ್ತ ಕುಟುಂಬಗಳು ಜೊತೆಯಾಗಿ ಸೇರಿಕೊಂಡು ಆಚರಿಸುವ ಕೌಟುಂಬಿಕ ಹಬ್ಬ ಮೊಂತಿ ಫೆಸ್ತ್ ಮತ್ತೆ ಬಂದಿದೆ. ಎರಡು ವರ್ಷಗಳ ಕೊರೋನಾ ವ್ಯಾಧಿಯ ಬಳಿಕ ಈ ಬಾರಿ ಹೆಚ್ಚು ಸಂಭ್ರಮ ಸಡಗರದಿಂದ ಹಬ್ಬವನ್ನು ಕ್ರೈಸ್ತ ಸಮುದಾಯ ಈ ಹಬ್ಬವನ್ನು ಆಚರಿಸಿದೆ. ಆಗಸ್ಟ್ ತಿಂಗಳು ಕೊನೆಗೊಳ್ಳುವ ಮತ್ತು ಸಪ್ಟೆಂಬರ್ ತಿಂಗಳ ಆರಂಭದಲ್ಲಿ ಹಸಿರು ಸೀರೆಯನ್ನು ಹೊದ್ದು ಇಡೀ ಪರಿಸರ ಗದ್ದೆಗಳು ಪ್ರಫುಲ್ಲಿತ ಗೊಳ್ಳುವ ಸಂದರ್ಭದಲ್ಲಿ ಮಂಗಳೂರು ಮೂಲದ ಕೊಂಕಣಿ ಕ್ರೈಸ್ತರು ಈ ದೇಸಿ ಹಬ್ಬವನ್ನು ಆಚರಿಸುತ್ತಾರೆ .ಅದರಲ್ಲೂ ಪುಟ್ಟ ಮಕ್ಕಳು ತಮ್ಮ ಪ್ರೀತಿಯ ಅಮ್ಮ ಮೇರಿ ಮಾತೆಗೆ ತೋಟದಲ್ಲಿ ಬೆಳೆದ ಬಣ್ಣ ಬಣ್ಣದ ಹೂಗಳನ್ನು ಅರ್ಪಿಸಿ ಗೌರವಿಸುತ್ತಾರೆ. 

Tap to resize

Latest Videos

ಮೇರಿ ಮಾತೆಯ ಮೊಂತಿ ಫೆಸ್ತ್ ಹಬ್ಬಕ್ಕೆ 9 ದಿನಗಳ ನೊವೆನಾದೊಂದಿಗೆ ತಯಾರಿ ಆರಂಭಗೊಳ್ಳುತ್ತದೆ. ಪುಟ್ಟ ಮಕ್ಕಳು ಪ್ರತಿನಿತ್ಯ ತಮ್ಮ ತೋಟಗಳಿಂದ ವಿವಿಧ ಬಗೆಯ ಹೂಗಳನ್ನು ಹೆಕ್ಕಿ ತಂದು ಮೇರಿ ಮಾತೆಗೆ ಅರ್ಪಿಸುವ ಕ್ಷಣ ಬಲು ಸುಂದರವಾಗಿದೆ.  ಸೆಪ್ಟೆಂಬರ್ 8ರಂದು ಕುಟುಂಬದ ಏಕತೆಯ ದಿನ, ಹೊಸ ತೆನೆಯ ದಿನವಾಗಿ ಆಚರಿಸುವುದು ಅನಾದಿಕಾಲದಿಂದ ನಡೆದುಕೊಂಡು ಬಂದಿದೆ. ಕುಟುಂಬದಲ್ಲಿ ಯಾವುದೇ ರೀತಿಯ ಮನಸ್ತಾಪವಿದ್ದರೂ ಕೂಡ ಅದನ್ನೆಲ್ಲಾ ಮರೆತು ಎಲ್ಲರೂ ಒಂದಾಗಿ ಜೊತೆಯಾಗಿ ಹೊಸ ತೆನೆಯ ಊಟವನ್ನು ಸೇವಿಸುವ ಭವ್ಯ ಪರಂಪರೆಯನ್ನು ಕ್ರೈಸ್ತ ಸಮುದಾಯ ಹೊಂದಿದೆ. ಕರಾವಳಿಯಲ್ಲಿ ಹಿಂದೂ ಬಾಂಧವರು ಆಚರಿಸುವ ತೆನೆ ಹಬ್ಬದ ಮಾದರಿಯಲ್ಲೇ ಈ ದಿನ ತರಕಾರಿ ಊಟವನ್ನು ಸವಿದು ಕ್ರೈಸ್ತ ಕುಟುಂಬಗಳು ಸಂಭ್ರಮಿಸುತ್ತವೆ

ಮನೆಯೊಳಗೆ ಅವಿತು ಚಿರತೆ ಕಣ್ಣಾಮುಚ್ಚಾಲೆ, ದಿನಪೂರ್ತಿ ಕಾರ್ಯಾಚರಣೆಗೆ ಸುಸ್ತೋಸುಸ್ತು

ಮೋಂತಿ ಪೇಸ್ಟ್ ಇತಿಹಾಸವೇನು?: ಕರಾವಳಿಯ ಮೊಂತಿ ಫೆಸ್ತ್‌ನ ಸಾಂಪ್ರದಾಯಿಕ ಆಚರಣೆಗೆ 300 ವರ್ಷಗಳ ಇತಿಹಾಸವಿದೆ. ಬಂಟ್ವಾಳ ತಾಲೂಕಿನ ಫರಂಗಿಪೇಟೆಯ ಮಾತೆ ಮರಿಯಮ್ಮನ ಇಗರ್ಜಿ ಪ್ರಮುಖ ಸಾಕ್ಷಿಯಾಗಿ ನಿಂತಿದೆ. ಸಂತ ಫ್ರಾನ್ಸಿಸ್ ಅಸಿಸಿ ಅವರಿಗೆ ಸಮರ್ಪಿಸಿದ ಮಠವೊಂದು ಇಲ್ಲಿ ಸ್ಥಾಪನೆಯಾಯಿತು. ನೇತ್ರಾವತಿ ನದಿಯ ಉತ್ತರ ದಿಕ್ಕಿನಲ್ಲಿ ಬೆಟ್ಟದ ಮೇಲಿರುವ ಈ ಪುರಾತನ ಸ್ಥಳಕ್ಕೆ ಮೊಂತೆ ಮರಿಯಾನೊ ಅಥವಾ ಮೌಂಟ್ ಅಫ್ ಮೇರಿ ಎಂದು ಹೆಸರಿಸಲಾಗಿತ್ತು. ಗೋವಾದಿಂದ ಬಂದ ಕಥೋಲಿಕ್ ಧರ್ಮಗುರು ಫಾದರ್ ಜೋಕಿಂ ಮಿರಾಂದಾ ಅವರು ಸ್ಥಳೀಯ ಚರ್ಚ್ ನ ವಾರ್ಷಿಕ ಹಬ್ಬದ ಜತೆಗೆ ಮೇರಿ ಮಾತೆಯ ಜನ್ಮ ದಿನವನ್ನು ಪ್ರಥಮ ಬಾರಿಗೆ ಆಚರಿಸಿದರು ಎನ್ನುವುದು ಪ್ರತೀತಿ. ದೇವನೊಬ್ಬನ ಜನ್ಮಕ್ಕೆ ಕಾರಣವಾದ ಕನ್ಯಾ ಮರಿಯಮ್ಮ(ಮೊಂತಿ ಸಾಯ್ಬಿಣಿ) ಇಷ್ಟಾರ್ಥ ಸಿದ್ಧಿಸುವ ದೇವರು ಎಂಬ ಭಾವನೆ. ಪ್ರಕತಿಯ ಹೊಸ ಬೆಳೆಯನ್ನು ಆಕೆಗೆ ಸಮರ್ಪಿಸಿ ತನ್ಮೂಲಕ ಬದುಕನ್ನು ಹಸನುಗೊಳಿಸುವ ಪ್ರಕ್ರಿಯೆ ಇದು.

ಸೆಪ್ಟೆಂಬರ್ 8 ಮಾತೆ ಮರಿಯಮ್ಮನ ಜನ್ಮದಿನ. ಇದನ್ನೇ ಕೊಂಕಣಿ ಭಾಷೆಯಲ್ಲಿ ‘ಮೊಂತಿ ಫೆಸ್ತ್’ ಎಂದು ಕರೆಯಲಾಗುತ್ತದೆ. ಜಗತ್ತಿನೆಲ್ಲೆಡೆ ಮಾತೆ ಮೇರಿ ಜನ್ಮ ದಿನವನ್ನು ಕ್ರೈಸ್ತ ಧಾರ್ಮಿಕ ಕಟ್ಟುಪಾಡುಗಳ ಕಟ್ಟಳೆಯೊಂದಿಗೆ ಆಚರಿಸಿದರೆ, ಕರಾವಳಿಯ ಕ್ರೈಸ್ತರು ಮಾತ್ರ ಇದನ್ನು ಪ್ರಕೃತಿ ಆರಾಧನೆಯ ತೆನೆಹಬ್ಬವಾಗಿ ಆಚರಿಸುತ್ತಾರೆ. ಕರಾವಳಿ ಮಣ್ಣಿನ ಮೂಲ ಸಂಸ್ಕೃತಿಯನ್ನು ಈ ಮೂಲಕ ಅನಾವರಣಗೊಳಿಸುತ್ತಾರೆ. ಇಲ್ಲಿ ಹಿಂದೂ- ಕ್ರೈಸ್ತ ಎರಡೂ ಸಮುದಾಯಗಳು ಹೊಸ ತೆನೆಯನ್ನು ಮನೆ ತುಂಬಿಸಿಕೊಳ್ಳುವ ತೆನೆ ಹಬ್ಬ ಆಚರಿಸುತ್ತಾರೆ.  ಹಿಂದೂಗಳು ಚೌತಿ, ನವರಾತ್ರಿ ಸಂದರ್ಭಗಳಲ್ಲಿ ‘ಕುರಲ್ ಪರ್ಬ’- ‘ಪುದ್ದಾರ್’ ಆಚರಿಸಿದರೆ, ಕ್ತೆಸ್ತರು ಏಸುಪ್ರಭುವಿನ ಮಾತೆಯಾದ ಮರಿಯಮ್ಮನ ಜನ್ಮ ದಿನವನ್ನೇ ತೆನೆಹಬ್ಬವಾಗಿ ಆಚರಿಸುತ್ತಾರೆ. ಕಾಸರಗೋಡು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ವಿಶಿಷ್ಟ ತೆನೆಹಬ್ಬ ನಡೆಯುತ್ತದೆ.

ಹಬ್ಬದ ಆಚರಣೆ ಹೇಗೆ?: ಕರಾವಳಿಯ ಎಲ್ಲಾ ಚರ್ಚ್ ಗಳಲ್ಲಿ 9 ದಿನ ಮುಂಚಿತವಾಗಿ ಅಂದರೆ ಆಗಸ್ಟ್ 30 ರಿಂದ ವಿಶೇಷವಾಗಿ ನೊವೇನಾ ಪ್ರಾರ್ಥನೆ ಸಲ್ಲಿಸುವುದರೊಂದಿಗೆ ಮೊಂತಿ ಅಥವಾ ತೆನೆ ಹಬ್ಬದ ಆಚರಣೆ ಆರಂಭವಾಗುತ್ತದೆ. 9 ದಿನಗಳ ಕಾಲ ನಡೆಯುವ ನೊವೇನಾ ಪ್ರಾರ್ಥನೆಯಲ್ಲಿ ವಿಶೇಷವಾಗಿ ಚಿಕ್ಕ ಮಕ್ಕಳು ಪ್ರತಿದಿನ ಹೂವುಗಳನ್ನು ಕೊಂಡೊಯ್ದು ಮೇರಿ ಮಾತೆಗೆ ಸಮರ್ಪಿಸಿ ,ಗೀತೆಗಳನ್ನು ಹಾಡುವ ಮೂಲಕ ಸ್ತುತಿಸುತಾರೆ. ಕೊನೆಯ ದಿನ ಅಂದರೆ ಸೆಪ್ಟೆಂಬರ್ 8 ರಂದು ಹಬ್ಬದ ಸಂಭ್ರಮವನ್ನು ಸಾಮೂಹಿಕವಾಗಿ ಆಚರಿಸುತ್ತಾರೆ. ಅಂದು ಹೊಸ ಭತ್ತದ ತೆನೆಗಳನ್ನು ಚರ್ಚ್ ಗೆ ಕೊಂಡೊಯ್ದು ಆಶೀರ್ವಚನ ಮಾಡಿ, ಮೇರಿ ಮಾತೆಗೆ ಪುಷ್ಪಾರ್ಚನೆ ನಡೆಯುತ್ತೆದ. ಬಳಿಕ ಸಂಭ್ರಮದ ಬಲಿ ಪೂಜೆ ನೆರವೇರುತ್ತದೆ. 

ಈ ಧಾರ್ಮಿಕ ಕಾರ್ಯಕ್ರಮಗಳ ಬಳಿಕ ಆಶೀರ್ವದಿಸಿದ ಭತ್ತದ ತೆನೆಗಳನ್ನು ಪ್ರತಿ ಕುಟುಂಬಕ್ಕೆ ವಿತರಿಸಲಾಗುತ್ತದೆ. ಹೂವು ಕೊಂಡು ಹೋದ ಮಕ್ಕಳಿಗೆ ಸಿಹಿ ತಿಂಡಿಯನ್ನು ಹಾಗೂ ಕಬ್ಬನ್ನು ಹಂಚಲಾಗುತ್ತದೆ. ಮಕ್ಕಳಿಗೆ ವಿತರಿಸಿದ ಬಳಿಕ ಕಬ್ಬು ಉಳಿಕೆಯಾದರೆ ಅದನ್ನು ಹಿರಿಯರಿಗೂ ಹಂಚಲಾಗುತ್ತದೆ. ಆ ನಂತರದ ಸಂಭ್ರಮ ಮನೆಗಳಲ್ಲಿ ನಡೆಯುತ್ತದೆ. ತೆನೆಹಬ್ಬವನ್ನು ಕೌಟುಂಬಿಕ ಹಬ್ಬ ಎಂದೇ ಇಲ್ಲಿ ಭಾವಿಸಲಾಗುತ್ತದೆ. ಹಬ್ಬದ ದಿನ ಕುಟುಂಬದವರು ಒಟ್ಟು ಸೇರುತ್ತಾರೆ. ಎಲ್ಲರೂ ಒಟ್ಟಿಗೆ ಕುಳಿತು ನೆಲದ ಮೇಲೆ ಊಟ ಮಾಡುತ್ತಾರೆ. ಕುಟುಂಬಕ್ಕೆ ಸಂಬಂಧಿಸಿದವರು ಹೊರದೇಶ ಅಥವಾ ಪರ ಊರಿನಲ್ಲಿದ್ದರೆ ಅವರಿಗೆ ಅಂಚೆ ಮೂಲಕ ತೆನೆ ಕಳುಹಿಸುವ ಪರಿಪಾಠ ಈಗಲೂ ನಡೆಯುತ್ತಿದೆ.

ಹಬ್ಬಕ್ಕೆ ಬೇಕೇ ಬೇಕು ಬಗೆ ಬಗೆಯ ಶುದ್ದ ಸಸ್ಯಹಾರ ಖಾದ್ಯಗಳು: ಕರಾವಳಿಯ ಕೈಸ್ತರು ಸಂಪೂರ್ಣ ಸಸ್ಯಾಹಾರಿಯಾಗಿ ಆಚರಿಸುವ ಹಬ್ಬವಿದು. 3, 9 ಮತ್ತು 15 ಬಗೆಯ ಸಸ್ಯಹಾರ ಖಾದ್ಯ, ಪಾಯಸ, ಅನ್ನ, ಸಾಂಬಾರು ತಯಾರಿಸಲಾಗುತ್ತದೆ. ಅದರಲ್ಲೂ ವಿಶೇಷವಾಗಿ ಕೆಸುವಿನ ಪತ್ರೋಡೆ ಮಾಡಲಾಗುತ್ತದೆ. ಅದರೊಂದಿಗೆ ಬೆಂಡೆ, ಅಲಸಂಡೆ, ಹೀರೆಕಾಯಿ ಇನ್ನಿತರ ತರಕಾರಿಗಳು ಕೂಡ ಇರುತ್ತವೆ. ಮೊದಲು ಮೊಂತಿ ಫೆಸ್ತ್ ಹಬ್ಬಕ್ಕೆಂದೇ ಮನೆಯಲ್ಲಿ ಈ ಎಲ್ಲಾ ತರಕಾರಿಗಳನ್ನು ಬೆಳೆಯಲಾಗುತ್ತಿತ್ತು. ಬದಲಾದ ಕಾಲದಲ್ಲಿ ಅಂಗಡಿಯಿಂದ ತರುವ ಪರಿಪಾಟ ರೂಢಿಯಾಗಿದೆ. ಕುಟುಂಬದ ಎಲ್ಲರೂ ಅಂದು ಬಾಳೆ ಎಲೆಯಲ್ಲಿ ಊಟ ಮಾಡುವುದು ಬಳಿಕ ಮನೆಯವರೆಲ್ಲಾ ಕೂತು ಜೊತೆಯಾಗಿ ಹರಟೆ ಹೊಡೆಯುವ ಸಂಭ್ರಮ , ಸಡಗರದ ಕೌಟುಂಬಿಕ ಪರ್ವ ಆಗಿ ಈಗಲೂ ಉಳಿದುಕೊಂಡಿದೆ.

ವಿದೇಶಗಳಲ್ಲೂ ಮೊಂತಿ ಫೆಸ್ತ್ ಆಚರಣೆ: ಉದ್ಯೋಗ ಅರಸಿ ವಿದೇಶದಲ್ಲಿ ನೆಲೆಸಿದ ಕರಾವಳಿ ಕ್ರೈಸ್ತರು ಇಂದಿಗೂ ತಮ್ಮ ಆಚರಣೆಯನ್ನು ಮರೆತಿಲ್ಲ. ಕರಾವಳಿಯ ಕಥೊಲಿಕ ಕ್ರೈಸ್ತರು ಎಲ್ಲೇ ವಾಸಿಸುತ್ತಿದ್ದರೂ ಕೂಡ ಅಲ್ಲಿ ಒಟ್ಟಾಗಿ ಈ ತೆನೆ ಹಬ್ಬವನ್ನು ಆಚರಿಸುತ್ತಾರೆ. ಮುಂಬೈ, ಬೆಂಗಳೂರು, ತಮಿಳುನಾಡು, ನವದೆಹಲಿ, ಕೊಲ್ಲಿ ರಾಷ್ಟ್ರ, ಇಂಗ್ಲೆಂಡ್, ಆಮೇರಿಕಾ, ಕೆನಾಡ, ಇಸ್ರೇಲ್ ಇತರೆಡೆ ಕೂಡ ಹರಡಿಕೊಂಡಿರುವ ಕರಾವಳಿ ಕ್ರೈಸ್ತರು ಒಂದು ಕಡೆಯಲ್ಲಿ ಒಟ್ಟಾಗಿ ಸೇರಿ ಈ ಹಬ್ಬವನ್ನು ಆಚರಣೆ ಮಾಡುತ್ತಾರೆ.

ಉಡುಪಿ‌ ಜಿಲ್ಲೆಯಲ್ಲಿ ಮತ್ತೆ ಮಳೆ: ಇಲಿ ಜ್ವರ ಭೀತಿ

ಜಗತ್ತಿನಾದ್ಯಂತ ಏಕಕಾಲಕ್ಕೆ ಕನ್ಯಾಮರಿಯಮ್ಮನ ಜನ್ಮದಿನ ಆಚರಿಸಲಾಗುತ್ತಿದ್ದರೂ ಕರಾವಳಿಯಲ್ಲಿ ಇಲ್ಲಿನ ನೆಲ, ಸಂಸ್ಕೃತಿಯ ಭಾಗವಾಗಿ ಆಚರಿಸಲಾಗುತ್ತಿದೆ. ಬದಲಾವಣೆ ನವೀಕರಣ ಎಲ್ಲಾ ಕಡೆಗಳಲ್ಲೂ ಕಂಡು ಬಂದರೂ ಕೂಡ ಕರಾವಳಿಯ ಕ್ರೈಸ್ತರು ತಮ್ಮ ಆಚರಣೆಯನ್ನು ಬದಲಾವಣೆ ಮಾಡಿಕೊಂಡಿಲ್ಲ. ಕುಟುಂಬದ ಸಂಬಂಧವನ್ನು ಕಡಿದುಕೊಳ್ಳದಂತೆ ಎಲ್ಲರೂ ಒಂದಾಗಿ ಒಟ್ಟಾಗಿ ಮೊಂತಿ ಫೆಸ್ತ್ ಆಚರಣೆಯೊಂದಿಗೆ ಪ್ರಕೃತಿಯ ಆರಾಧನೆಯೊಂದಿಗೆ ಕೌಟಂಬಿಕ ಮೌಲ್ಯಗಳನ್ನು ಎತ್ತಿಹಿಡಿಯುವ ಕೆಲಸ ನಿರಂತರವಾಗಿ ಮುಂದುವರೆದುಕೊಂಡು ಹೋಗಲು ಕರಾವಳಿ ಕರ್ನಾಟಕದ ಮೊಂತಿ ಫೆಸ್ತ್ ತನ್ನದೆ ಆದ ಕೊಡುಗೆ ನೀಡಿದೆ.

click me!