
ತಲೆಗೆ ಎಣ್ಣೆ ಹಚ್ಚುವುದು ಆರೋಗ್ಯಕ್ಕೂ, ಕೂದಲಿನ ಆರೈಕೆಯಿಗೂ ತುಂಬಾನೆ ಒಳ್ಳೆಯದು ಅನ್ನೋದು ಎಲ್ಲರಿಗೂ ಗೊತ್ತಿದೆ. ಇದು ಒಣ ಕೂದಲಿಗೆ ಹೊಳಪು ನೀಡುವುದರ ಜೊತೆಗೆ ದಣಿವನ್ನು ಕಡಿಮೆ ಮಾಡಲು ಸಹ ಸಹಕಾರಿ. ಕೆಲವರು ಸ್ನಾನದ ನೀರಿಗೂ ಸ್ವಲ್ಪ ಎಣ್ಣೆ ಸೇರಿಸಿ ಸ್ನಾನ ಮಾಡುತ್ತಾರೆ. ಆದರೆ, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ತಲೆಗೆ ಎಣ್ಣೆ ಹಚ್ಚಲು ಕೆಲವು ನಿಯಮಗಳು ಮತ್ತು ನಿರ್ದಿಷ್ಟ ದಿನಗಳಿವೆ. ಅವನ್ನು ಪಾಲಿಸದಿದ್ದರೆ ಆರೋಗ್ಯದ ಜೊತೆಗೆ ಆರ್ಥಿಕ ಸಮಸ್ಯೆಗಳೂ ಎದುರಾಗಬಹುದು ಎಂದು ನಂಬಲಾಗಿದೆ.
ಜ್ಯೋತಿಷ್ಯದ ಪ್ರಕಾರ, ವಾರದ ಕೆಲವು ದಿನಗಳಲ್ಲಿ ತಲೆಗೆ ಎಣ್ಣೆ ಹಚ್ಚಬಾರದು. ಈ ದಿನಗಳಲ್ಲಿ ಎಣ್ಣೆ ಮಸಾಜ್ ಮಾಡಿದರೆ ಲಾಭಕ್ಕಿಂತ ನಷ್ಟವೇ ಹೆಚ್ಚು ಎನ್ನಲಾಗುತ್ತದೆ.
ಭಾನುವಾರ: ಭಾನುವಾರ ಸೂರ್ಯ ದೇವರಿಗೆ ಸಮರ್ಪಿತ ದಿನವಾಗಿರುವುದರಿಂದ ಈ ದಿನ ತಲೆಗೆ ಎಣ್ಣೆ ಹಚ್ಚಬಾರದು ಎಂದು ಹೇಳಲಾಗುತ್ತದೆ. ಹೀಗೆ ಮಾಡಿದರೆ ದೇಹದ ಉಷ್ಣತೆ ಹೆಚ್ಚಾಗಿ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಬಹುದು ಎಂಬ ನಂಬಿಕೆಯಿದೆ.
ಮಂಗಳವಾರ: ಮಂಗಳವಾರ ಹನುಮಂತನಿಗೆ ಸಮರ್ಪಿತ ದಿನವಾಗಿದೆ. ಈ ದಿನ ತಲೆಗೆ ಎಣ್ಣೆ ಹಚ್ಚಿದರೆ ಆಯುಷ್ಯ ಕಡಿಮೆಯಾಗುತ್ತದೆ ಎಂಬ ನಂಬಿಕೆ ಜ್ಯೋತಿಷ್ಯದಲ್ಲಿದೆ.
ಗುರುವಾರ ಮತ್ತು ಶುಕ್ರವಾರ: ಈ ಎರಡೂ ದಿನಗಳಲ್ಲಿ ತಲೆಗೆ ಎಣ್ಣೆ ಹಚ್ಚುವುದನ್ನು ತಪ್ಪಿಸಬೇಕು ಎಂದು ಹೇಳಲಾಗುತ್ತದೆ. ಈ ದಿನಗಳಲ್ಲಿ ಎಣ್ಣೆ ಹಚ್ಚುವುದರಿಂದ ಆರ್ಥಿಕ ಸಂಕಷ್ಟ, ದಾರಿದ್ರ್ಯ ಮತ್ತು ಅವಮಾನ ಉಂಟಾಗಬಹುದು ಎಂಬ ನಂಬಿಕೆಯಿದೆ.
ಜ್ಯೋತಿಷ್ಯದ ಪ್ರಕಾರ ಬುಧವಾರ ಮತ್ತು ಶನಿವಾರ ತಲೆಗೆ ಎಣ್ಣೆ ಹಚ್ಚಲು ಅತ್ಯಂತ ಶುಭ ದಿನಗಳೆಂದು ಪರಿಗಣಿಸಲಾಗಿದೆ. ಈ ದಿನಗಳಲ್ಲಿ ಎಣ್ಣೆ ಮಸಾಜ್ ಮಾಡಿದರೆ ಸುಖ-ಸಮೃದ್ಧಿ, ಕಾರ್ಯಗಳಲ್ಲಿ ಯಶಸ್ಸು ಹಾಗೂ ಮನಸ್ಸಿನ ಏಕಾಗ್ರತೆ ಹೆಚ್ಚುತ್ತದೆ ಎಂದು ನಂಬಲಾಗಿದೆ.