ಕೇರಳ ಪದ್ಮನಾಭಸ್ವಾಮಿ ದೇಗುಲದ ಗೋಪುರದಲ್ಲಿ ದೈವಿಕ ವಿಸ್ಮಯ, ಸೂರ್ಯಾಸ್ತದ ರಮಣೀಯ ದೃಶ್ಯ ಕಂಡು ಆನಂದ್ ಮಹೀಂದ್ರಾ ಫಿದಾ!

Published : Sep 24, 2026, 05:33 PM IST
Anand Mahindra

ಸಾರಾಂಶ

ಕೇರಳದ ಶ್ರೀ ಪದ್ಮನಾಭಸ್ವಾಮಿ ದೇವಾಲಯದಲ್ಲಿ 'ವಿಷುವತ್ ಸಂಕ್ರಾಂತಿ'ಯ ದಿನದಂದು ಸೂರ್ಯಾಸ್ತವು ರಾಜಗೋಪುರದ ಕಿಟಕಿಗಳ ಮೂಲಕ ಹಾದುಹೋಗುವ ಅಪರೂಪದ ವಿಸ್ಮಯ ಜರುಗಿದೆ. ಪ್ರಾಚೀನ ಭಾರತೀಯ ಖಗೋಳಶಾಸ್ತ್ರ ಮತ್ತು ವಾಸ್ತುಶಿಲ್ಪದ ನಿಖರತೆಗೆ ಸಾಕ್ಷಿಯಾದ ಈ ದೃಶ್ಯವನ್ನು ಉದ್ಯಮಿ ಆನಂದ್ ಮಹೀಂದ್ರಾ ಶ್ಲಾಘಿಸಿದ್ದಾರೆ.

ತಿರುವನಂತಪುರಂ: ಕೇರಳದ ಸುಪ್ರಸಿದ್ಧ ಶ್ರೀ ಪದ್ಮನಾಭಸ್ವಾಮಿ ದೇವಾಲಯದಲ್ಲಿ ಸೆಪ್ಟೆಂಬರ್ 23 ರಂದು ಭಾರತೀಯ ಪ್ರಾಚೀನ ಖಗೋಳಶಾಸ್ತ್ರ ಮತ್ತು ವಾಸ್ತುಶಿಲ್ಪದ ಅಸಾಧಾರಣ ನಿಖರತೆಗೆ ಸಾಕ್ಷಿಯಾಗುವಂತಹ ಅಪರೂಪದ ಹಾಗೂ ನಯನಮನೋಹರ ವಿದ್ಯಮಾನವೊಂದು ಸಂಭವಿಸಿದೆ. 'ವಿಷುವತ್ ಸಂಕ್ರಾಂತಿ'ಯ ದಿನದಂದು ದೇವಾಲಯದ ಬೃಹತ್ 'ರಾಜಗೋಪುರ'ದ ಆರೂ ಕಿಟಕಿಗಳ ಮೂಲಕ ಸೂರ್ಯಾಸ್ತಮಾನವು ಒಂದರ ನಂತರ ಒಂದರಂತೆ ಕೆಳಗಿಳಿಯುತ್ತಾ ಮುಳುಗುವ ಈ ವಿಸ್ಮಯಕಾರಿ ದೃಶ್ಯವು ಭಕ್ತರು ಹಾಗೂ ವೀಕ್ಷಕರನ್ನು ಮಂತ್ರಮುಗ್ಧಗೊಳಿಸಿದೆ.

ವರ್ಷಕ್ಕೆ ಕೇವಲ ಎರಡು ಬಾರಿ ಮಾತ್ರ ಸಂಭವಿಸುವ ಈ ದೈವಿಕ ಕ್ಷಣವನ್ನು ಸಾವಿರಾರು ಭಕ್ತರು ಕಣ್ಣುಂಬಿಕೊಂಡರು. ಪ್ರಸಿದ್ಧ ಉದ್ಯಮಿ ಆನಂದ್ ಮಹೀಂದ್ರಾ ಅವರು ಈ ಅದ್ಭುತ ಘಟನೆಯ ವಿಡಿಯೋ ಮತ್ತು ಫೋಟೋವನ್ನು ತಮ್ಮ ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಹಂಚಿಕೊಂಡಿದ್ದು, ಭಾರತೀಯ ಪ್ರಾಚೀನ ಇಂಜಿನಿಯರಿಂಗ್ ವೈಭವವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

"ಪ್ರಾಚೀನ ಇಂಜಿನಿಯರಿಂಗ್‌ನ ವಿಸ್ಮಯ": ಆನಂದ್ ಮಹೀಂದ್ರಾ ಪೋಸ್ಟ್!

ಘಟನೆಯ ಕುರಿತು ಸುದೀರ್ಘ ಪೋಸ್ಟ್ ಬರೆದಿರುವ ಆನಂದ್ ಮಹೀಂದ್ರಾ, ಇಂದು ವಿಷುವತ್ ಸಂಕ್ರಾಂತಿ. ಕೇರಳದ ಭವ್ಯವಾದ ಪದ್ಮನಾಭಸ್ವಾಮಿ ದೇವಾಲಯದಲ್ಲಿ, ಶತಮಾನಗಳ ಹಿಂದೆ ಅದರ ನಿರ್ಮಾತೃಗಳು ವಿನ್ಯಾಸಗೊಳಿಸಿದ ವಾಸ್ತುಶಿಲ್ಪದ ಅದ್ಭುತವು ಪ್ರದರ್ಶನಗೊಂಡಿದೆ. ಕರಾರುವಾಕ್ಕಾಗಿ ಜೋಡಿಸಲಾದ ರಾಜಗೋಪುರದ ಕಿಟಕಿಗಳ ಮೂಲಕ ಸೂರ್ಯಾಸ್ತವು ಒಂದೊಂದಾಗಿ ಕೆಳಗಿಳಿಯುತ್ತಾ ಕಣ್ಮರೆಯಾಗುತ್ತದೆ. ಇದು ಪ್ರಾಚೀನ ಖಗೋಳಶಾಸ್ತ್ರ ಮತ್ತು ಇಂಜಿನಿಯರಿಂಗ್‌ನ ನಂಬಲಾಗದ ನಿಖರತೆಗೆ ಉದಾಹರಣೆ. ಈ ದಿನದಂದು ಎಲ್ಲ ರಸ್ತೆಗಳು ಭಗವಾನ್ ಶ್ರೀ ಪದ್ಮನಾಭನ ಅಂಗಳಕ್ಕೆ ಕರೆದೊಯ್ಯಬೇಕು ಎಂದು ಬರೆದುಕೊಂಡಿದ್ದಾರೆ.

ಗೋಪುರದ ಕಿಟಕಿಗಳಲ್ಲಿ ಸೂರ್ಯ ಮುಳುಗುವ ಪಥ

ಈ ಅಪರೂಪದ ವಿದ್ಯಮಾನವು ಅತ್ಯಂತ ಕೌತುಕದಿಂದ ಕೂಡಿರುತ್ತದೆ. ಆರಂಭಿಕವಾಗಿ ಸೂರ್ಯನು ದಿಗಂತದ ಕಡೆಗೆ ವಾಲುತ್ತಿದ್ದಂತೆ, ರಾಜಗೋಪುರದ ಅತ್ಯಂತ ಎತ್ತರದ ಅಂದರೆ ಮೇಲಿನ ಕಿಟಕಿಯ ಮೂಲಕ ಸೂರ್ಯನ ಬೆಳಕು ಮೊದಲು ಗೋಚರಿಸುತ್ತದೆ. ಸೂರ್ಯ ಕೆಳಗಿಳಿದಂತೆ, ಸೂರ್ಯ ರಶ್ಮಿಯು ಅನುಕ್ರಮವಾಗಿ ಅದರ ಕೆಳಗಿರುವ ಕಿಟಕಿಗಳ ಮೂಲಕ ಹಾದುಹೋಗುತ್ತದೆ. ಸೂರ್ಯ ಮೂರನೇ ಕಿಟಕಿಯನ್ನು ತಲುಪಿದಾಗ ದೃಶ್ಯವು ಅತ್ಯಂತ ಪ್ರಕಾಶಮಾನವಾಗಿ ಹಾಗೂ ದೈವಿಕವಾಗಿ ಕಂಗೊಳಿಸುತ್ತದೆ. ಕೊನೆಯ ಎರಡು ಕಿಟಕಿಗಳ ಮೂಲಕ ಸೂರ್ಯನ ಬಿಂಬ ಹಾದುಹೋಗಿ, ಸಂಪೂರ್ಣವಾಗಿ ಮುಳುಗುತ್ತಿದ್ದಂತೆ ದೃಶ್ಯವು ಮುಕ್ತಾಯಗೊಳ್ಳುತ್ತದೆ.

ವಿಷುವತ್ ಸಂಕ್ರಾಂತಿ (Equinox) ಮತ್ತು ದೇವಾಲಯದ ಜ್ಯಾಮಿತಿ:

ವಿಷುವತ್ ಸಂಕ್ರಾಂತಿಯ ದಿನದಂದು ಸೂರ್ಯನು ಭೂಮಿಯ ಸಮಭಾಜಕ ವೃತ್ತದ (Equator) ಮೇಲೆ ನೇರವಾಗಿ ಪ್ರಕಾಶಿಸುತ್ತಾನೆ. ಹೀಗಾಗಿ ಪ್ರಪಂಚದಾದ್ಯಂತ ಹಗಲು ಮತ್ತು ರಾತ್ರಿಯ ಅವಧಿಗಳು ಸಮನಾಗಿರುತ್ತವೆ (ತಲಾ 12 ಗಂಟೆಗಳು). ವರ್ಷದಲ್ಲಿ ಇದು ಎರಡು ಬಾರಿ ಸಂಭವಿಸುತ್ತದೆ:

  • ಮಾರ್ಚ್ 21 ರ ಸುಮಾರಿಗೆ: ವಸಂತ ವಿಷುವತ್ ಸಂಕ್ರಾಂತಿ.
  • ಸೆಪ್ಟೆಂಬರ್ 23 ರ ಸುಮಾರಿಗೆ: ಶರತ್ ವಿಷುವತ್ ಸಂಕ್ರಾಂತಿ.

ಪದ್ಮನಾಭಸ್ವಾಮಿ ದೇವಾಲಯದ ರಾಜಗೋಪುರವನ್ನು ಸೂರ್ಯನ ಪಥಕ್ಕೆ ಕರಾರುವಾಕ್ಕಾಗಿ ಜೋಡಿಸಿ ನಿರ್ಮಿಸಲಾಗಿದೆ. ವರ್ಷದ ಇತರ ದಿನಗಳಲ್ಲಿ ಸೂರ್ಯನು ಗೋಪುರದ ಉತ್ತರ ಅಥವಾ ದಕ್ಷಿಣ ದಿಕ್ಕಿಗೆ ವಾಲಿ ಮುಳುಗುವುದರಿಂದ ಈ ಸಾಲು ಕಿಟಕಿಗಳ ಜೋಡಣೆ ಕಾಣಿಸುವುದಿಲ್ಲ. ಕೇವಲ ಈ ಎರಡು ದಿನಗಳಲ್ಲಿ ಮಾತ್ರ ಸೂರ್ಯ ಕರಾರುವಾಕ್ಕಾಗಿ ಕಿಟಕಿಗಳ ಸಾಲಿನಲ್ಲಿ ಹಾದುಹೋಗುತ್ತಾನೆ.

ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಶ್ಲಾಘನೆ

ಆನಂದ್ ಮಹೀಂದ್ರಾ ಅವರ ಪೋಸ್ಟ್‌ಗೆ ನೆಟ್ಟಿಗರಿಂದ ಅದ್ಭುತ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.

"ತನ್ನ ದೇಶವನ್ನೇ ದೇವರಿಗೆ ಅರ್ಪಿಸಿ, ತಾನು ಆ ದೇವರ ದಾಸನಾಗಿ ಆಡಳಿತ ನಡೆಸಿದ ರಾಜರಿದ್ದ ಏಕೈಕ ಪವಿತ್ರ ಭೂಮಿ ಇದು" ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ.

"ಪ್ರಾಚೀನ ಭಾರತೀಯರು ಖಗೋಳಶಾಸ್ತ್ರ, ವಾಸ್ತುಶಿಲ್ಪ ಹಾಗೂ ಗಣಿತದಲ್ಲಿ ಎಷ್ಟು ಮುಂಚೂಣಿಯಲ್ಲಿದ್ದರು ಎಂಬುದಕ್ಕೆ ಈ ದೇವಾಲಯವೇ ಸಾಕ್ಷಿ. ನಮ್ಮ ಸಂಸ್ಕೃತಿ ಮತ್ತು ಇಂಜಿನಿಯರಿಂಗ್ ಕೌಶಲ್ಯದ ಬಗ್ಗೆ ನಮಗೆ ಹೆಮ್ಮೆಯಿದೆ" ಎಂದು ಮತ್ತೊಬ್ಬರು ಬರೆದಿದ್ದಾರೆ.

ಭಾರತೀಯ ಸಾಂಪ್ರದಾಯಿಕ ಶಿಲ್ಪಶಾಸ್ತ್ರ ಮತ್ತು ಸೂರ್ಯನ ಚಲನೆಯ ನಡುವಿನ ಈ ಅಪೂರ್ವ ಸಮ್ಮಿಲನವು ದೇಶ-ವಿದೇಶಗಳ ಪ್ರವಾಸಿಗರು ಹಾಗೂ ವಿಜ್ಞಾನಾಸಕ್ತರ ಗಮನಸೆಳೆಯುತ್ತಿದೆ.

PREV
Read more Articles on
click me!

Recommended Stories

ಪಿತೃ ಪಕ್ಷದಲ್ಲಿ ಶುಭ ಕಾರ್ಯ ಯಾಕೆ ಮಾಡಬಾರದು? ಈ ಕೆಲಸ ಮಾಡಿದ್ರಂತೂ ಮುಗಿದೇಹೋಯ್ತು!
Navaratri 2026 color list : 9 ದಿನಕ್ಕೆ 9 ಬಣ್ಣ.. 2026ರ ನವರಾತ್ರಿ ಕಲರ್ ಲಿಸ್ಟ್ ಇಲ್ಲಿದೆ