ಶ್ರೀರಾಘವೇಂದ್ರ ಮಠದಲ್ಲಿ ಶಿರೂರು ಮಠದ ಶ್ರೀಲಕ್ಷ್ಮೀವರತೀರ್ಥರ 4 ನೇ ವರ್ಷದ ಆರಾಧನೆ

By Ravi Nayak  |  First Published Aug 5, 2022, 4:39 PM IST

ಉಡುಪಿ ಶ್ರೀಲಕ್ಷ್ಮೀವರತೀರ್ಥ ಶ್ರೀಪಾದರ 4 ನೇ ವರ್ಷದ ಆರಾಧನಾ ಮಹೋತ್ಸವವು ಉಡುಪಿ ರಥಬೀದಿಯಲ್ಲಿರುವ ನಂಜನಗೂಡು ಶ್ರೀರಾಘವೇಂದ್ರ ಮಠದಲ್ಲಿ ಶಾಸ್ತ್ರೋಕ್ತವಾಗಿ ವೈಭವದಿಂದ ಜರಗಿತು.


ವರದಿ- ಶಶಿಧರ ಮಾಸ್ತಿಬೈಲು, ಏಷಿಯಾನೆಟ್ ಸುವರ್ಣ ನ್ಯೂಸ್

 ಉಡುಪಿ (ಆ.5) : ಉಡುಪಿಯ ಶಿರೂರು ಮಠದ ಶ್ರೀ ಲಕ್ಷ್ಮೀವರತೀರ್ಥರು ಆಗಲಿ ನಾಲ್ಕು ವರ್ಷಗಳು ಕಳೆಯಿತು. ಅವರ ಸಾವಿನ ನಿಗೂಢತೆ ಬಯಲಾಗದಿದ್ದರೂ, ಅವರ ಭಕ್ತರು ಮತ್ತು ಅಭಿಮಾನಿಗಳ ಪ್ರೀತಿ ಮಾತ್ರ ಕಡಿಮೆಯಾಗಿಲ್ಲ.  ಶ್ರೀಲಕ್ಷ್ಮೀವರತೀರ್ಥ ಶ್ರೀಪಾದರ 4 ನೇ ವರ್ಷದ ಆರಾಧನಾ ಮಹೋತ್ಸವವು ಉಡುಪಿ ರಥಬೀದಿಯಲ್ಲಿರುವ ನಂಜನಗೂಡು ಶ್ರೀರಾಘವೇಂದ್ರ ಮಠದಲ್ಲಿ ಶಾಸ್ತ್ರೋಕ್ತವಾಗಿ ವೈಭವದಿಂದ ಜರಗಿತು. ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಅನೇಕ ಮಂದಿ ಭಾಗವಹಿಸಿ ಪ್ರಸಾದ ಸ್ವೀಕರಿಸಿದರು.

Tap to resize

Latest Videos

ಮುಂಜಾನೆ  ಶ್ರೀಲಕ್ಷ್ಮೀವರತೀರ್ಥ ಶ್ರೀಪಾದರ  ಪೂರ್ವಾಶ್ರಮದ ಕುಟುಂಬಿಕರು ಹಾಗೂ ಭಕ್ತವೃಂದದ ವತಿಯಿಂದ ಶ್ರೀರಾಘವೇಂದ್ರಗುರುಸಾರ್ವಭೌಮರಿಗೆ ವಿಶೇಷ ಪೂಜೆಗಳನ್ನು ಸಲ್ಲಿಸಲಾಯಿತು.ವೇದಮೂರ್ತಿ ಶ್ರೀಸುಬ್ರಹ್ಮಣ್ಯ ಆಚಾರ್ಯ ಮತ್ತು ಬಳಗದವರಿಂದ  ಪವಮಾನ ಕಲಶಾಭಿಷೇಕ ಹೋಮ ಹಾಗೂ ವಿರಜಾ ಹೋಮ ಜರಗಿತು. ಶ್ರೀಲಕ್ಷ್ಮೀವರತೀರ್ಥಶ್ರೀಪಾದರ ಮೃತ್ತಿಕಾ ವೃಂದಾವನಕ್ಕೆ ಶ್ರೀಕೃಷ್ಣಮುಖ್ಯ ಪ್ರಾಣದೇವರ ಹಾಗೂ ಶ್ರೀ ರಾಘವೇಂದ್ರಗುರುಗಳ ತೀರ್ಥ,ಪಂಚಾಮೃತ ಗಳಿಂದ ಅಭಿಷೇಕ ನಡೆಸಿ ನಂತರ ವಿಶೇಷ ಅಲಂಕಾರ ಪೂಜೆ ಹಾಗೂ ಮಹಾಮಂಗಳಾರತಿ ಬೆಳಗಿಸಲಾಯಿತು.

ಶಿರೂರು ಮಠ ಪೀಠಾಧಿಪತಿ ಕೇಸ್‌ : ಅರ್ಜಿ ಮಾರ್ಪಾಡಿಗೆ ಹೈಕೋರ್ಟ್ ಒಪ್ಪಿಗೆ

ಶ್ರೀಲಕ್ಷ್ಮೀವರತೀರ್ಥ ಶ್ರೀಪಾದರ ಪೂರ್ವಾಶ್ರಮದ ಸಹೋದರ ಪಿ.ಲಾತವ್ಯ ಆಚಾರ್ಯ ಪೂಜಾವಿಧಿಗಳನ್ನು ನಡೆಸಿದರು. ಈ ಶುಭಸಂದರ್ಭದಲ್ಲಿ ಅನಂತೇಶ್ವರ ದೇವಾಲಯದ ಪ್ರಧಾನ ಅರ್ಚಕರಾದ ಶ್ರೀ ವೇದವ್ಯಾಸ ಐತಾಳ್,ಶ್ರೀ ರಾಘವೇಂದ್ರ ಮಠ ಉಡುಪಿಯ ಅಪ್ಪಣ್ಣ ಆಚಾರ್,ಜಯತೀರ್ಥ ಆಚಾರ್,ಧರ್ಮದರ್ಶಿ ಹರಿಕೃಷ್ಣ ಪುನರೂರು,ಸೊಂಡೂರು ಪ್ರಹ್ಲಾದ್ ಆಚಾರ್ಯ,ಸೊಂಡೂರು ಶ್ರೀನಿವಾಸ ಆಚಾರ್ಯ,ರಾಜಗೋಪಾಲ್ ಆಚಾರ್ ಶ್ರೀರಂಗಂ,ಮಡಾಮಕ್ಕಿ ಅನಂತ ತಂತ್ರಿ,ಅಗ್ರಹಾರ ಲಕ್ಷ್ಮಿನಾರಾಯಣ ತಂತ್ರಿ,
ಡಾ.ವ್ಯಾಸರಾಜ ತಂತ್ರಿ ಶ್ರೀಪಾದರ ಪೂರ್ವಾಶ್ರಮದ ಸಹೋದರರಾದ ಪಿ.ವಾದಿರಾಜ ಆಚಾರ್ಯ, ಪಿ.ಶ್ರೀನಿವಾಸ ಆಚಾರ್ಯ,
ಪಿ.ವೃಜನಾಥ ಆಚಾರ್ಯ, ಶ್ರೀವತ್ಸ ರಾವ್,ಅಕ್ಷೋಭ್ಯ ಆಚಾರ್ಯ,ಅರ್ಜುನ ಆಚಾರ್ಯ,ಲಕ್ಷ್ಮೀಶ ಜೋಯಿಸ್ ಸಜೆ, ಕುಂದಾಪುರದ ಮಿನರ್ವ ಸಂಸ್ಥೆಯ ಶಂಕರನಾರಾಯಣ ಹೊಳ್ಳ,ರಾಜೇಂದ್ರ ಆಚಾರ್ಯಬಡಗುಬೆಟ್ಟು, ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
 
ಶ್ರೀಕೇಮಾರು ಮಠದ ಸಾಂದಿಪಿನೀ ಆಶ್ರಮದ ಶ್ರೀ ಈಶವಿಠಲದಾಸ ಸ್ವಾಮೀಜಿಯವರು ತಮ್ಮ ಮಠದಲ್ಲಿ ಶ್ರೀಶಿರೂರು ಶ್ರೀಪಾದರ ಆರಾಧನಾ ಮಹೋತ್ಸವದ ನಿಮಿತ್ತ ವಿಶೇಷ ಪೂಜೆಗಳನ್ನು ಹಮ್ಮಿಕೊಂಡಿದ್ದರು. ಉಡುಪಿ ಶ್ರೀರಾಯರ ಮಠದಲ್ಲಿ ಮಧ್ಯಾಹ್ನ ನಡೆದ ಅನ್ನಸಂತರ್ಪಣೆಯಲ್ಲಿ ಶಿರೂರು ಶ್ರೀಪಾದರ ಊರಪರವೂರ ನೂರಾರು ಭಕ್ತರು ಆಗಮಿಸಿದ್ದರು.

ಉಡುಪಿ ಶಿರೂರು ಮಠದ  ಭಾವಿ ಯತಿಗಳ ಸಂನ್ಯಾಸಾಶ್ರಮ ಸ್ವೀಕಾರ

ಶೀರೂರು ಶ್ರೀಪಾದರ ನಾಲ್ಕನೇ ಆರಾಧನೆಯ ಸಂದರ್ಭದಲ್ಲಿ ಈ ಬಾರಿ ಉಡುಪಿಯ ಅಷ್ಟಮಿ ಬಂದಿದೆ. ಉಡುಪಿಯ ಅಷ್ಟಮಿ ಎಂದರೆ ನಾಡಿನ ಜನ  ಶೀರೂರು ಶ್ರೀ ಲಕ್ಷ್ಮಿವರ ತೀರ್ಥರನ್ನು ನೆನಪು ಮಾಡಿಕೊಳ್ಳುತ್ತಾರೆ. ತಾವು ಬದುಕಿದ್ದಾಗ ಈ ಮಹೋತ್ಸವವನ್ನು ಅತ್ಯಂತ ವೈಭವದಿಂದ ಸ್ವಾಮೀಜಿ ಆಚರಿಸುತ್ತಿದ್ದರು. ಸಾವಿರಾರು ಕಲಾವಿದರಿಗೆ ಪಾರಿತೋಷಕಗಳನ್ನು ನೀಡುತ್ತಿದ್ದರು. ಭಕ್ತರಿಗೆಲ್ಲ ಉಂಡೆ ಚಕ್ಕಲಿ ಹಂಚಿ ಸಂಭ್ರಮ ಪಡುತ್ತಿದ್ದರು. ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ಖುಷಿ ಪಡುತ್ತಿದ್ದರು. 

ಕಳೆದ ಎರಡು ವರ್ಷಗಳಿಂದ ಕೋವಿಡ್ ಕಾರಣಕ್ಕೆ ಅಷ್ಟಮಿ ವೈಭವದಿಂದ ಆಚರಣೆಯಾಗಿಲ್ಲ. ಈ ಬಾರಿ ವೈಭವದ ಅಷ್ಟಮಿ ಆಚರಣೆಗೆ ತಯಾರಿಗಳು ನಡೆಯುತ್ತಿದೆ.ಈ ನಡುವೆ ಶಿರೂರು ಸ್ವಾಮೀಜಿಗಳ ಅಭಿಮಾನಿಗಳು, ಲಕ್ಷ್ಮಿವರತೀರ್ಥರ ನೆನಪಿನಲ್ಲಿ ವೈಭವದ ಕಾರ್ಯಕ್ರಮ ಏರ್ಪಡಿಸಲು ಸಿದ್ಧತೆ ನಡೆಸಿದ್ದಾರೆ.

click me!