ಗ್ಲಾಮ್ ಡಾಲ್ ರಾಗಿಣಿ ಇದ್ದಕ್ಕಿದ್ದಂತೆ ’ಟೆರರಿಸ್ಟ್’ ಆಗಿದ್ಯಾಕೆ ?

By Web DeskFirst Published Oct 8, 2018, 10:53 AM IST
Highlights

ತುಪ್ಪದ ಹುಡುಗಿ ರಾಗಿಣಿ ದ್ವಿವೇದಿ ಇದ್ದಕ್ಕಿದ್ದಂತೆ ಟೆರರಿಸ್ಟ್ ಆಗಿದ್ದಾರೆ. ತುಪ್ಪ ಬೇಕಾ...ತುಪ್ಪ ಎಂದು ಹೇಳುವ ಮೂಲಕ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದ ಈ ಹುಡುಗಿ ಈಗ ಪಕ್ಕಾ ಟೆರರಿಸ್ಟ್ ಆಗಿದ್ದಾರೆ. ಇದರ ಹಿಂದಿದೆ ಕುತೂಹಲಕಾರಿ ವಿಚಾರ. 

ಬೆಂಗಳೂರು (ಅ. 08): ರಾಗಿಣಿ ಅಂದ್ರೆ ಗ್ಲಾಮರ್ ಡಾಲ್. ಈಗ ರಾಗಿಣಿ ಸುದ್ದಿಯಲ್ಲಿರುವುದು ‘ದಿ ಟೆರರಿಸ್ಟ್’ ಚಿತ್ರದ ಕಾರಣಕ್ಕೆ. ಇಲ್ಲಿ ರಾಗಿಣಿ ಕಾಣಿಸಿಕೊಳ್ಳುತ್ತಿರುವುದು ಹೊಸ ಬಗೆಯ ಪಾತ್ರ ಮತ್ತು ಹೊಸ ಬಗೆಯ ಗೆಟಪ್ ಮೂಲಕ. ಗ್ಲಾಮರಸ್ ಜತೆಗೆ ಮಾಸ್ ಲುಕ್ ನಲ್ಲೇ ಹೆಚ್ಚು ಪಾತ್ರಗಳಲ್ಲಿ ಮಿಂಚುತ್ತಿದ್ದ ರಾಗಿಣಿ ಈಗ ಟೆರರಿಸ್ಟ್ ಆಗಿದ್ದೇಕೆ ಅನ್ನೋದೇ ಕುತೂಹಲ. ಆ ಬಗ್ಗೆ ಇಲ್ಲಿ ಮಾತನಾಡಿದ್ದಾರೆ ರಾಗಿಣಿ. 

ರಾಗಿಣಿ ಈಗ ಇದ್ದಕ್ಕಿದ್ದಂತೆ ‘ಟೆರರಿಸ್ಟ್’ ಆಗಿದ್ದೇಕೆ?

ಮೊದಲು ಈ ಚಿತ್ರ ಒಪ್ಪುವುದಕ್ಕೆ ಕಾರಣ, ಕಥೆ ಮತ್ತು ಪಾತ್ರ. ಯಾವುದೇ ಒಬ್ಬ ನಟ ಅಥವಾ ನಟಿಗೆ ಹೊಸಬಗೆಯ ಪಾತ್ರ, ಚಿತ್ರದಲ್ಲಿ ನಟಿಸಬೇಕೆನ್ನುವ ಆಸೆ ಇದ್ದೇ ಇರುತ್ತೆ. ಅಂತಹ ಹೊಸ ಪಾತ್ರ ಸಿಕ್ಕಿದ್ದರಿಂದ ಒಪ್ಪಿದ್ದೇನೆ. ಪ್ರಯೋಗಾತ್ಮಕ ಚಿತ್ರ ಸಿಕ್ಕರೆ ಅಭಿನಯಿಸಬೇಕು ಎನ್ನುವ ಆಸೆ ಇತ್ತು. ಅದೀಗ ‘ಟೆರರಿಸ್ಟ್’ ಮೂಲಕ ಈಡೇರಿದೆ. ಅಕ್ಟೋಬರ್ 18 ಕ್ಕೆ ತೆರೆಗೆ ಬರುತ್ತಿದೆ. ಸದ್ಯಕ್ಕೆ ಅದರಲ್ಲಿ ಬ್ಯುಸಿ ಆಗಿದ್ದೇನೆ.

ಚಿತ್ರದಲ್ಲಿನ ನಿಮ್ಮ ಪಾತ್ರದ ಬಗ್ಗೆ ಹೇಳೋದಾದ್ರೆ..

ನಾನಿಲ್ಲಿ ಒಬ್ಬ ಮುಸ್ಲಿಂ ಹುಡುಗಿ. ಹೆಸರು ರೇಷ್ಮಾ. ಇದೇ ಮೊದಲ ಸಲ ನಾನು ಮುಸ್ಲಿಂ ಹುಡುಗಿ ಪಾತ್ರ ಮಾಡುತ್ತಿರುವುದು. ಇಲ್ಲಿ ಹೆಚ್ಚು ಮಾತುಗಳೇ ಇಲ್ಲ. ನಿರ್ದೇಶಕ ಪಿ.ಸಿ. ಶೇಖರ್ ಹೊಸತನದ ಕಥೆಯೊಂದಕ್ಕೆ, ಭಾವನಾತ್ಮಕ ಸ್ಪರ್ಶ ಕೊಟ್ಟು ಸಿನಿಮಾ ಮಾಡಿದ್ದಾರೆ. ಇಂತಹ ಚಿತ್ರದಲ್ಲಿ ಅಭಿನಯಿಸುವುದೆಂದ್ರೆ ಸಾಕಷ್ಟು ಸವಾಲುಗಳಿರುತ್ತವೆ. ಮೊದಲನೆಯದು, ಪಾತ್ರಕ್ಕೆ ನ್ಯಾಯ ಸಲ್ಲಿಸುವುದು, ಎರಡನೆಯದು ಎಲ್ಲವನ್ನೂ ಭಾವನೆಗಳ ಮೂಲಕವೇ ಹೇಳುವುದು. ಅಂಥದ್ದೇ ಸವಾಲಿನಲ್ಲಿ ಈ ಪಾತ್ರ ನಿಭಾಯಿಸಿದ ಖುಷಿ ನನಗಿದೆ.

ಟೆರರಿಸ್ಟ್ ಅಂದಾಕ್ಷಣ ಸಿನಿಮಾವನ್ನು ಬಹುತೇಕ ನೆಗೆಟಿವ್ ಅರ್ಥದಲ್ಲೇ ನೋಡುವುದೇ ಹೆಚ್ಚಿರುತ್ತೆ...

ಆ ರೀತಿಯ ಕಲ್ಪನೆಯೇ ಬೇಡ. ಇಲ್ಲಿ ಧರ್ಮಗಳಿಗೆ ಧಕ್ಕೆಯಾಗುವಂತಹ ಅಂಶಗಳೂ ಇಲ್ಲ. ಮುಸ್ಲಿಂ ಹುಡುಗಿಯ ಪಾತ್ರ ಅಂದಾಕ್ಷಣ ಅದಕ್ಕೆ ನೂರೆಂಟು ಅರ್ಥಗಳು ಬರುತ್ತವೆ. ಚಿತ್ರ ಇರೋದೇ ಆಕೆಯ ಮೇಲೆ. ಆಕೆಗೂ ಹಾಗೂ ಟೆರರಿಸ್ಟ್ ಗೂ ಏನ್ ಸಂಬಂಧ ಅನ್ನೋದು ಚಿತ್ರದ ಒನ್ ಲೈನ್ ಸ್ಟೋರಿ. ರೇಷ್ಮಾ ಎಂಬ ಮುಗ್ಧ ಹುಡುಗಿಯ ಕಣ್ಣೀರು, ಅವಳ ತುಟಿಯಂಚಿನಲ್ಲಿನ ನಗು, ಭಾವುಕತೆ. ಅವೆಲ್ಲವೂ ಕಮರ್ಷಿಯಲ್ ಆಗಿ ಸೈಕಲಾಜಿಲಕಲ್ ಥ್ರಿಲ್ಲರ್ ಜಾನರ್‌ನಲ್ಲಿ ಸಾಗುತ್ತವೆ.

ಟೆರರಿಸ್ಟ್ ಬಿಟ್ರೆ ರಾಗಿಣಿ ಕೈಯಲ್ಲಿರುವ ಸಿನಿಮಾಗಳು ಯಾವುವು?

ಸಿಕ್ಕಾಪಟ್ಟೆ ಸಿನಿಮಾಗಳಿವೆ ಅಂತ ನಾನು ಸುಳ್ಳು ಹೇಳೋದಿಲ್ಲ, ನಿಜ ಹೇಳ್ಬೇಕಂದ್ರೆ ಈ ವರ್ಷಕ್ಕೆ ತೆರೆಗೆ ಬರಲಿರುವ ಸಿನಿಮಾಗಳು ಎರಡು ಮಾತ್ರ. ಟೆರರಿಸ್ಟ್ ನಂತರ ಶರಣ್ ಕಾಂಬಿನೇಷನ್ ಸಿನಿಮಾ. ಸದ್ಯಕ್ಕೆ ಅದಕ್ಕಿನ್ನು ಟೈಟಲ್ ಇಟ್ಟಿಲ್ಲ. ಒಂದು ಶೆಡ್ಯೂಲ್ ಶೂಟ್ ಮುಗಿದಿದೆ. ಸೆಕೆಂಡ್ ಶೆಡ್ಯೂಲ್ ಶೂಟಿಂಗ್ ಶುರುವಾಗಬೇಕಿದೆ. ಅದು ಕೂಡ ಈ ವರ್ಷವೇ ತೆರೆಗೆ ಬರೋದು ಗ್ಯಾರಂಟಿ.

ಇನ್ನು ‘ಗಾಂಧಿಗಿರಿ’ ಕೂಡ ಬಾಕಿಯಿದೆ. ಅದು ಕೂಡ ಚಿತ್ರೀಕರಣದ ಹಂತದಲ್ಲಿದೆ. ಒಂದಷ್ಟು ಕಾರಣಕ್ಕೆ ತಡವಾಗಿದೆ. ಹಾಗೆಯೇ ಮೂರು ಭಾಷೆಗಳಲ್ಲಿ ಒಂದು ಸಿನಿಮಾ ನಿರ್ಮಾಣವಾಗುತ್ತಿದೆ. ಅದು ಮುಂದಿನ ವರ್ಷದಿಂದ ಶುರುವಾಗುತ್ತಿದೆ. ಹಂತ ಹಂತವಾಗಿ ಹೊಸ ಪ್ರಾಜೆಕ್ಟ್ ಶುರುವಾಗುತ್ತಿವೆ. ಟೆರರಿಸ್ಟ್ ಬಂದ್ರೆ ಎಲ್ಲವೂ ಒಂದು ಹಂತದಲ್ಲಿ ಸ್ಟಾರ್ಟ್ ಆಗೋದು ಗ್ಯಾರಂಟಿ.

ಅದು ಸರಿ, ಮೊದಲಿನಷ್ಟು ನೀವು ಸ್ಯಾಂಡಲ್‌ವುಡ್‌ನಲ್ಲಿ ಸುದ್ದಿಯಲ್ಲಿ ಇಲ್ಲ ಯಾಕೆ?

ಸಿಕ್ಕಾಪಟ್ಟೆ ಸುದ್ದಿಯಲ್ಲಿರಬೇಕು ಅಂದ್ರೆ ವಿವಾದದಲ್ಲಿರಬೇಕು. ಅಂತಹ ವಿವಾದ ನನಗೆ ಬೇಡ. ಸದ್ಯಕ್ಕೆ ನನ್ನ ಕೆಲಸಗಳ ಜತೆಗೆ ನಾನು ಬ್ಯುಸಿ ಆಗಿದ್ದೇನೆ. ಸಿನಿಮಾ ಕೆಲಸಗಳ ಜತೆಗೆ ಸಾಕಷ್ಟು ಈವೆಂಟ್‌ಗಳಲ್ಲಿ ತೊಡಗಿಸಿಕೊಂಡಿದ್ದೇನೆ. ಒಂದೊಂದಾಗಿ ಸಿನಿಮಾಗಳು ತೆರೆಗೆ ಬರುತ್ತಿವೆ. ಮೊದಲಿಗಿಂತ ಈಗ ಹೆಚ್ಚು ಫಿಟ್ ಆಗಿದ್ದೇನೆ. ಮೊದಲಿನಷ್ಟೇ ಅವಕಾಶಗಳೊಂದಿಗೆ ಬ್ಯುಸಿ ಆಗ್ತೀನಿ ಅನ್ನೋ ವಿಶ್ವಾಸವಿದೆ.ಆದ್ರೆ ಈಗ ಗ್ಲಾಮರ್ ಗಿಂತ ಗ್ರಾಮರ್ ಮೂಲಕ ಸುದ್ದಿಯಲ್ಲಿರೋಣ ಅನ್ನೋದು ನನ್ನಾಸೆ.

ಚಿತ್ರದ ವಿಶೇಷತೆಯ ಬಗ್ಗೆ ಹೇಳಿ?

ಮೊದಲಿಗೆ ಚಿತ್ರದ ಕತೆ, ಆನಂತರ ಅದನ್ನು ನಿರ್ಮಾಣ ಮಾಡಿದ ರೀತಿ ಎರಡು ವಿಶೇಷವೇ. ಕತೆ ಅಂತ ಬಂದಾಗ ಇದು ಸಾಮಾನ್ಯ ಸಬ್ಜೆಕ್ಟ್ ಅಲ್ಲ. ಇವತ್ತು ಟೆರರಿಸ್ಟ್ ಅಂದ್ರೆ ಜಗತ್ತೇ ತಲ್ಲಣಿಸುವಂತೆ ಮಾಡಿದ ಸಂಗತಿ ಅದು.

ಅದನ್ನ ನಾವಿಲ್ಲಿ ಹೇಳಲು ಹೊರಟಿಲ್ಲವಾದರೂ, ಸಬ್ಜೆಕ್ಟ್ ಜಗತ್ತಿನ ಯಾವುದೇ ಮೂಲೆಗೂ ಸಂಬಂಧಿಸಿದ್ದೇ ಆಗಿರುತ್ತೆ. ಇನ್ನು ‘ಟೆರರಿಸ್ಟ್’ ಅಂದರೆ, ಹುಡುಗ ನೆನಪಾಗಬಹುದು. ಆದರೆ, ಇಲ್ಲಿ ಹುಡುಗಿ
ಛಾಯೆ ಕಾಣಸಿಗುತ್ತೆ. ಅದೇ ಇಲ್ಲಿರುವ ಇನ್ನೊಂದು ವಿಶೇಷ. ಒಂದಂತೂ ನಿಜ, ಇದು ಯಾರ ಭಾವನೆಗಳಿಗೂ ಧಕ್ಕೆಯಾಗದ ಚಿತ್ರ. ಒಂದು ವ್ಯವಸ್ಥೆಯಲ್ಲಿ ಏನೆಲ್ಲಾ ಆಗಿಹೋಗುತ್ತೆ ಅನ್ನುವುದನ್ನು ಸೂಕ್ಷ್ಮ ವಿಷಯಗಳ ಮೂಲಕ ಹೇಳಲಾಗಿದೆ.  ಎಲ್ಲಾ ವರ್ಗಕ್ಕೂ ಅರಿವು ಮೂಡಿಸುವ ಚಿತ್ರವಾಗುತ್ತೆ.

-ದೇಶಾದ್ರಿ ಹೊಸ್ಮನೆ 

click me!