ನಾಥೂರಾಮ್ ಗಾಂಧಿ ಪ್ರೇಮಿ ವಿನು ಬಳಂಜ ಜೊತೆ ಮಾತುಕತೆ

By Kannadaprabha NewsFirst Published Dec 17, 2018, 9:41 AM IST
Highlights

ಕಿರುತೆರೆಯ ಹೆಸರಾಂತ ನಿರ್ದೇಶಕ ವಿನುಬಳಂಜ ಇದೇ ಮೊದಲು ಸಿನಿಮಾ ನಿರ್ದೇಶನಕ್ಕಿಳಿದಿದ್ದಾರೆ. ರಿಷಬ್ ಶೆಟ್ಟಿ ಅಭಿನಯದ ‘ನಾಥೂರಾಮ್’ ಹೆಸರಿನ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.

ಕಿರುತೆರೆಯಲ್ಲಿನ ಹಲವು ವರ್ಷಗಳ ಜರ್ನಿಯ ಬಳಿಕ ಅವರು ಹಿರಿತೆರೆಗೆ ಬಂದಿದ್ದು ವಿಶೇಷ. ಪ್ರೀತಿ ಇಲ್ಲದ ಮೇಲೆ, ಜೋಗುಳ, ಚಿಟ್ಟೆ ಹೆಜ್ಜೆ ಮುಂತಾದುವು ಅವರ ಸೂಪರ್‌ಹಿಟ್ ಧಾರಾವಾಹಿಗಳು. ಕಿರುತೆರೆಯಲ್ಲಿ ದೊಡ್ಡ ಅನುಭವ ಹೊಂದಿರುವ ವಿನು ಬಳಂಜ ಸಿನಿ ಜಗತ್ತಿಗೆ ಬರುವಾಗ ಸ್ವಲ್ಪ ತಡವಾಗಿದೆ. ಈ ಸಂದರ್ಭದಲ್ಲಿ ಅವರ ಜೊತೆ ಮಾತುಕತೆ.

ನಿರ್ದೇಶಕರಾಗಿ ನೀವು ಸಿನಿಮಾ ಜಗತ್ತಿಗೆ ಬರಲು ಇಷ್ಟು ತಡವಾಗಿದ್ದೇಕೆ?

ತಡವಾಯಿತು ಅಂತೇನು ನನಗನಿಸಿಲ್ಲ. ಯಾಕಂದ್ರೆ, ಸಿನಿಮಾ ನಿರ್ದೇಶನದ ಪ್ರಯತ್ನ ನಡೆಯುತ್ತಲೇ ಇತ್ತು. ಅದ್ಯಾಕೋ ನನಗೂ ಮತ್ತು ನನ್ನ ನಿರ್ದೇಶನದ ಸಿನಿಮಾಕ್ಕೆ ಬಂಡವಾಳ ಹಾಕಲು ಬರುತ್ತಿದ್ದ ಪ್ರೊಡಕ್ಷನ್ ಹೌಸ್‌ಗಳಿಗೂ ಆ ಹೊತ್ತಿಗೆ ಹೊಂದಾಣಿಕೆ ಆಗಿರಲಿಲ್ಲ. ಮೇಲಾಗಿ ನಿರ್ದೇಶನದ ಮೊದಲ ಸಿನಿಮಾಕ್ಕೆ ನನ್ನದೇ ಕತೆಯಿದ್ದರೆ ಸೂಕ್ತ ಎನ್ನುವ ಕಾರಣವೂ ಇತ್ತು. ಅದು ಒಳ್ಳೆಯ ಕತೆಯಾದರೆ ಚೆಂದ ಎನ್ನುವ ಆಸೆಯಿತ್ತು. ಇವೆಲ್ಲವೂ ಒಟ್ಟಿಗೆ ಕೂಡಿ ಬರುವುದಕ್ಕೆ ಇಷ್ಟೆಲ್ಲ ಸಮಯ ಹಿಡಿಯಿತು.

ಕಿರುತೆರೆಯೇ ಇವತ್ತು ದೊಡ್ಡ ಪ್ರಪಂಚ. ಹಾಗಿದ್ದು ,ಸಿನಿಮಾ ಜಗತ್ತಿಗೆ ಬರಲು ಕಾರಣ?

ಇದು ಕನಸುಗಳ ಚೌಕಟ್ಟಿನ ವಿಸ್ತರಣೆ ಅಷ್ಟೆ. ಏನೇ ಮಾಡಿದರೂ ಮತ್ತೆ ಇನ್ನೇನೋ ಮಾಡ್ಬೇಕು ಎಂದೆನಿ ಸುವುದು ಸಹಜ. ಜತೆಗೆ ಸೀರಿಯಲ್ ಜಗತ್ತು ಎಷ್ಟೇ ಮಾಡಿದರೂ ದಾಖಲೆಗೆ ಸಿಗುವುದಿಲ್ಲ. ನಾನು ನಿರ್ದೇಶಿಸಿದ ಯಾವುದೋ ಒಂದು ಧಾರಾವಾಹಿಯ ಒಂದೊಳ್ಳೆ ಸೀನ್ ಮತ್ತೆ ನೋಡೋಣ ಅಂತ ಈಗ ಹುಡುಕಾಡಿದರೆ ಅದು ಸಿಗುವುದು ಕಷ್ಟ. ಸಿನಿಮಾ ಹಾಗಲ್ಲ, ಒಂದು ಸಿನಿಮಾ, ಇನ್ನಾವುದೋ ಕಾಲಕ್ಕೆ ಸುಲಭವಾಗಿ ಸಿಕ್ಕಿ ಬಿಡುತ್ತದೆ. ಅದು ಕೂಡ ಸಿನಿಮಾ ನಿರ್ದೇಶನದ ನನ್ನೊಳಗಿನ ಆಸೆಗೆ ಕಾರಣ.ಹಾಗೆಯೇ ಕನಸುಗಳ ಬೆನ್ನೇರಿ ಸಾಗುವ ಹಂಬಲ. ಆ ಕನಸು ಈಗ ನನಸು.

ಸೀರಿಯಲ್ ಜಗತ್ತಿನ ಇಷ್ಟು ದೊಡ್ಡ ಅನುಭವ ಸಿನಿಮಾ ನಿರ್ದೇಶನಕ್ಕೆ ವರವಾಗುತ್ತಾ?

ಖಂಡಿತಾ ಹೌದು. ಯಾಕಂದ್ರೆ, ಸೀರಿಯಲ್ ಜಗತ್ತು ಈಗ ಹಿಂದಿನಂತಿಲ್ಲ. ಅದರ ವಹಿವಾಟು ಕೂಡ ದೊಡ್ಡ ಮಟ್ಟದಲ್ಲಿದೆ. ಇಲ್ಲಿ ನಿರ್ದೇಶಕರಾಗಿ ಕೆಲಸ ಮಾಡುವವರಿಗೆ ಇವತ್ತಿನ ವ್ಯವಹಾರಿಕ ಜ್ಞಾನ ಇದ್ದೇ ಇರುತ್ತದೆ. ಅದಕ್ಕೆ ತಕ್ಕಂತೆ ಈಗ ಧಾರಾವಾಹಿಗಳು ಕೂಡ ಅದ್ಧೂರಿಯಾಗಿ ನಿರ್ಮಾಣವಾಗುತ್ತವೆ. ಪ್ರತಿ ದಿನ ಪ್ರಸಾರವಾಗುವ ಎಪಿಸೋಡ್‌ಗಳಿಗೆ ಅನುಗುಣವಾಗಿಯೇ ಅದರ ಚಿತ್ರೀಕರಣದ ಕೆಲಸ ಇರುತ್ತೆ. ಅಂತಹ ಒತ್ತಡ, ತಾಳ್ಮೆಯ ಕೆಲಸ ಸಹಜವಾಗಿಯೇ ಸಿನಿಮಾದ ಮೇಕಿಂಗ್ ದೃಷ್ಟಿಯಲ್ಲೂ ಅನುಕೂಲವಾಗುತ್ತೆ ಎನ್ನುವುದು ನನ್ನ ನಂಬಿಕೆ.

‘ನಾಥೂರಾಮ್’ಎನ್ನುವ ಟೈಟಲ್ ಮೂಲಕ ಏನನ್ನು ಹೇಳಲು ಹೊರಟಿದ್ದೀರಿ ?
ಇದು ಗಾಂಧಿ ಅಭಿಮಾನಿಯೊಬ್ಬನ ಕತೆ. ಆತ ಒಬ್ಬ ಲೆಕ್ಚರರ್. ಇವತ್ತಿನ ಸಾಮಾಜಿಕ ಸಮಸ್ಯೆಗಳಿಗೆ ಗಾಂಧಿ ಆದರ್ಶಗಳ ಮೂಲಕ ಆತ ಹೇಗೆ ಉತ್ತರ ನೀಡುತ್ತಾನೆ ಎನ್ನುವುದು ಚಿತ್ರದ ಕತೆ. ಆದರಾಚೆ, ಇದು ಯಾರ ಪರ ಅಥವಾ ಯಾರ ವಿರುದ್ಧದ ಕತೆಯಲ್ಲ. ವಿವಾದಿತ ವಿಷಯಗಳೂ ಇಲ್ಲ. ಸಂದೇಶ ಅಥವಾ ಬೋಧನೆ ಅಂತೇನಿಲ್ಲ. ಸಿನಿಮಾ ಅಂದ್ಮೇಲೆ ರಂಜನೆ ಅಂತಾರೆ ಜನ. ಅದಕ್ಕೆ ತಕ್ಕಂತೆ ಒಂದೊಳ್ಳೆ ಕತೆಯನ್ನು ದೃಶ್ಯ ರೂಪಕ್ಕೆ ತರುವ ಪ್ರಯತ್ನ ಮಾತ್ರ.

ರಿಷಬ್ ಶೆಟ್ಟಿ ಚಿತ್ರದ ನಾಯಕರಾಗಿದ್ದು ಹೇಗೆ?

ರಿಷಬ್ ಶೆಟ್ಟಿ ಅವರನ್ನು ನಾನು ಹತ್ತಿರದಿಂದ ನೋಡಿದವ. ಅವರ ಜನರಲ್ ಮತ್ತು ನಾರ್ಮಲ್ ರಿಯಾಕ್ಷನ್ ಎರಡು ವಿಶೇಷ. ಹಾಗೆಯೇ ಕತೆಯಲ್ಲಿನ ನಾಥೂರಾಮ್ ಪರ್ಸ ನಾಲಿಟಿ ಮತ್ತು ವ್ಯಕ್ತಿತ್ವ ಕೂಡ ವಿಭಿನ್ನ. ಅದನ್ನು ತೋರಿಸುವುದಕ್ಕೆ
ಸೂಕ್ತ ನಟ ಯಾರು ಅಂತ ಹುಡುಕಾಡುತ್ತಿದ್ದಾಗ ರಿಷಬ್ ಶೆಟ್ಟಿಯವರ ಒಂದಷ್ಟು ಫೋಟೋಗಳು ಸಿಕ್ಕವು. ಅವುಗಳನ್ನು ನೋಡುತ್ತಾ ಹೋದಾಗ, ನನ್ನ ಕತೆಯಲ್ಲಿನ ನಾಥೂರಾಮ್ ಇವರೇನಾ ಅಂತೆನಿಸಿತು.

ಸೀರಿಯಲ್, ಸಿನಿಮಾ .. ಮುಂದೆ ಆದ್ಯತೆ ಯಾವುದು?

ಡಿಸೈಡ್ ಮಾಡಿಲ್ಲ. ಇಷ್ಟಕ್ಕೂ ಅದನ್ನು ನಿರ್ಧರಿಸುವುದು ನಾವಲ್ಲ. ನಾವು ಆಯ್ಕೆ ಮಾಡಿಕೊಂಡ ಕ್ಷೇತ್ರಗಳೇ ನಿರ್ಧಾರ ಮಾಡುತ್ತವೆ. ಬೇಡಿಕೆ ಇದ್ದರೆ ಅಲ್ಲಿರುತ್ತೇವೆ. ಇಲ್ಲ ಅಂದ್ರೆ ಬೇರೆಯದು ಆದ್ಯತೆ ಆಗುತ್ತೆ.

ನಾಥೂರಾಮ್ ಎನ್ನುವ ಹೆಸರೇ ಚಿತ್ರದ ಶೀರ್ಷಿಕೆ ಆಗಿದ್ದರ ಉದ್ದೇಶ...

ನಾಥೂರಾಮ್ ಈ ಕತೆಯ ಲೀಡರ್ ಅಥವಾ ಕಥಾ ನಾಯಕ. ಈ ಕಾಲದಲ್ಲಿ ನಾಥೂರಾಮ್ ಹೆಸರಿನ ಒಬ್ಬ ವ್ಯಕ್ತಿ ಗಾಂಧಿಯವರ ಅಭಿಮಾನಿ ಆಗುವುದು, ಅವರ ಆದರ್ಶಗಳನ್ನು ಮೈ ಗೂಡಿಸಿಕೊಳ್ಳುವುದು, ಅವರ ಆದರ್ಶಗಳಂತೆಯೇ ಬದುಕಲು ಹೊರಟಾಗ ಜನ ಆತನನ್ನು ಹೇಗೆ ಸ್ವೀಕರಿಸಬಹುದು ಅಂತ ಹೇಳುವ ಕತೆ. ಆ ಕತೆಗೆ ಆತನ ಹೆಸರೇ ಸೂಕ್ತ ಅನ್ನೋದು ಹಲವರಿಂದ ಅಭಿಪ್ರಾಯ ಬಂತು. ಸಾಕಷ್ಟು ಚರ್ಚೆಯೂ ನಡೆಯಿತು. ಕೊನೆಗೆ ಅದೇ ಸೂಕ್ತ ಎನ್ನುವುದು ಕತೆಯ ಬೇಡಿಕೆಯೂ ಆಗಿತ್ತು. ಹಾಗಾಗಿ ನಾಥೂರಾಮ್ ಎನ್ನುವ ಟೈಟಲ್ ಫೈನಲ್ ಆಯಿತು.

 

click me!