ಗಣೇಶ್ ಮಾಸ್ ಆದ್ರೆ ನಾನು ಕ್ಲಾಸ್ ಅಂದ್ರು ಪ್ರಿಯಾ ಆನಂದ್!

By Web DeskFirst Published Dec 5, 2018, 10:52 AM IST
Highlights

ಪುನೀತ್ ರಾಜ್‌ಕುಮಾರ್ ಜತೆ ‘ರಾಜಕುಮಾರ’ ಚಿತ್ರದಲ್ಲಿ ಕಾಣಿಸಿಕೊಂಡ ಮೇಲೆ ಮತ್ತೊಮ್ಮೆ ಪ್ರಿಯಾ ಆನಂದ್ ಕನ್ನಡ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಕನ್ನಡ ಪ್ರಭದ ಜೊತೆ ಎಕ್ಸ್‌ಕ್ಲೂಸಿವ್ ಆಗಿ ಮಾತನಾಡಿದ್ದಾರೆ ಪ್ರಿಯಾ ಆನಂದ್. 

ಬೆಂಗಳೂರು (ಡಿ. 05):  ಪುನೀತ್ ರಾಜ್‌ಕುಮಾರ್ ಜತೆ ‘ರಾಜಕುಮಾರ’ ಚಿತ್ರದಲ್ಲಿ ಕಾಣಿಸಿಕೊಂಡ ಮೇಲೆ ಮತ್ತೊಮ್ಮೆ ಪ್ರಿಯಾ ಆನಂದ್ ಕನ್ನಡ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಈಗ ಆರೆಂಜ್ ಕತೆ ಹೇಳುವುದಕ್ಕೆ ಹೊರಟಿರುವ ಪ್ರಿಯಾ ಆನಂದ್ ಜತೆ ಮಾತು. ಆರೆಂಜ್ ಚಿತ್ರ ಈ ವಾರ ಬಿಡುಗಡೆಯಾಗಲಿದೆ. 

ಆರೆಂಜ್ ಚಿತ್ರಕ್ಕೆ ನೀವು ನಾಯಕಿ ಆಗಿದ್ದು ಹೇಗೆ?

ಇದಕ್ಕೆ ಕಾರಣ ಪುನೀತ್ ರಾಜ್‌ಕುಮಾರ್ ಜತೆಗೆ ಸಿಕ್ಕ ಯಶಸ್ಸು. ‘ರಾಜಕುಮಾರ’ ಚಿತ್ರ ಶತ ದಿನೋತ್ಸವ ಕಂಡಿತು. ಆ ಚಿತ್ರದ ಮೂಲಕ ನಾನು ಕನ್ನಡ ಪ್ರೇಕ್ಷಕರಿಗೂ ಹೆಚ್ಚು ಪರಿಚಯವಾದೆ. ಅದೇ ಸಕ್ಸಸ್ ನನ್ನ ‘ಆರೆಂಜ್’ ಚಿತ್ರತಂಡಕ್ಕೆ ಪರಿಚಯಿಸಿತು. ಇದು ನನ್ನ ಎರಡನೇ ಕನ್ನಡ ಸಿನಿಮಾ.

 ನಿಮ್ಮ ಹಿನ್ನೆಲೆ ಪುಟ್ಟದಾಗಿ ಹೇಳುವುದಾದರೆ?

ಪೂರ್ತಿ ಹೆಸರು ಪ್ರಿಯಾ ಭಾರದ್ವಾಜ್ ಆನಂದ್. ಚಿತ್ರರಂಗದಲ್ಲಿ ಪ್ರಿಯಾ ಆನಂದ್ ಎನ್ನುವ ಹೆಸರು ಚಾಲ್ತಿಯಲ್ಲಿದೆ. ಹುಟ್ಟಿದ್ದು, ಬೆಳೆದಿದ್ದು ಚೆನ್ನೈನಲ್ಲಿ. ಆದರೆ, ಚಿತ್ರರಂಗದಲ್ಲಿ ಹೆಸರು ಮಾಡಿದ್ದು ತೆಲುಗು
ಸಿನಿಮಾಗಳ ಮೂಲಕ. ತಮಿಳಿನಲ್ಲಿ ‘ವಾಮನನ್’ ನನ್ನ ಮೊದಲ ಸಿನಿಮಾ. ತೆಲುಗಿನಲ್ಲಿ ರಾಣಾ ದಗ್ಗುಬಾಟಿ ಜತೆ ‘ಲೀಡರ್’ ಮೊದಲ ಚಿತ್ರ. ಶೇಖರ್ ಕಮ್ಮಲು ನಿರ್ದೇಶನದ ಈ ಚಿತ್ರ ನನಗೆ ಟಾಲಿವುಡ್‌ನಲ್ಲಿ ದೊಡ್ಡ ಹೆಸರು ತಂದು ಕೊಟ್ಟಿತು. ಇಲ್ಲಿಂದ ನನ್ನ ಸಿನಿಮಾ ಜರ್ನಿ ಶುರುವಾಯಿತು.

‘180’ ಹಾಗೂ ‘ರಾಮ ರಾಮಾ ಕೃಷ್ಣ ಕೃಷ್ಣ’ ಚಿತ್ರಗಳು ಕಮರ್ಷಿಯಲ್ಲಾಗೂ ಹೆಸರು ತಂದುಕೊಟ್ಟವು. ನಂತರ ಮತ್ತೆ ತಮಿಳು, ಹಿಂದಿ ಹಾಗೂ ಮಲಯಾಳಂ ಸಿನಿಮಾಗಳಲ್ಲಿ ನಟಿಸಿದೆ. ಇಲ್ಲಿವರೆಗೂ 25 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದೇನೆ.

ಪಂಚಭಾಷಾ ನಟಿಯಾದ ನಿಮಗೆ ಆಪ್ತವಾದ ಭಾಷೆ ಯಾವುದು?

ಯಾವತ್ತಿಗೂ ತಾಯಿ ಭಾಷೆ ಅಂದರೆ ಎಲ್ಲರಿಗೂ ಪಂಚಪ್ರಾಣ. ನನಗೂ ಅಷ್ಟೆ. ಆದರೆ, ನಟಿಯಾಗಿ ಹೇಳುವುದಾದರೆ ನಾನು ಯಾವತ್ತಿಗೂ ಭಾಷೆಯ ಬೇಲಿ ಹಾಕಿಕೊಂಡವಳಲ್ಲ. ಹಾಗೇನಾದರು ಗಡಿ ಹಾಕಿಕೊಂಡಿದ್ದರೆ ತಮಿಳು ಹುಡುಗಿ ತೆಲುಗಿಗೆ ಬರಕ್ಕೆ ಆಗುತ್ತಿರಲಿಲ್ಲ. ಹಾಗೆ ಕನ್ನಡಕ್ಕೂ ಬರಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ನಟಿಯಾಗಿ ನಾನು ಎಲ್ಲ ಭಾಷೆಗಳನ್ನು ಅಪ್ಪಿಕೊಳ್ಳುತ್ತೇನೆ. ಇನ್ನೂ ಪಾತ್ರದ ವಿಚಾರಕ್ಕೆ ಬಂದರೆ ಕತೆಗೆ ಪೂರಕವಾಗುವಂತಹ ಯಾವುದೇ ರೀತಿಯ ಪಾತ್ರಕ್ಕೂ ನಾನು ಸಿದ್ಧ.

ಬಹುಭಾಷಾ ನಟಿ ಎಂದ ಮೇಲೆ ಸಂಭಾವನೆ ವಿಚಾರದಲ್ಲಿ ನೀವು ಸಿಕ್ಕಾಪಟ್ಟೆ ದುಬಾರಿನಾ?

ಎಲ್ಲಾ ಭಾಷೆಗಳಿಗೂ ಒಂದೇ ರೀತಿಯ ಸಂಭಾವನೆ ತೆಗೆದುಕೊಳ್ಳಲಾಗದು. ಆ ಭಾಷೆಯ ಮಾರುಕಟ್ಟೆ, ನಮ್ಮ ಪಾತ್ರ, ಚಿತ್ರೀಕರಣದ ದಿನಗಳ ಮೇಲೆ ನಿಂತಿರುತ್ತದೆ. ಹೀಗಾಗಿ ಪರೋಕ್ಷವಾಗಿ ನೀವು ಕೇಳುವಂತೆ ಆರೆಂಜ್‌ಗೆ ನನ್ನ ಸಂಭಾವನೆ ಎಷ್ಟು ಎಂದರೆ ಅದು ಪ್ರೊಫೆಷನಲ್ ಸೀಕ್ರೆಟ್.

ಆರೆಂಜ್‌ನಲ್ಲಿ ನಿಮ್ಮದು ಯಾವ ರೀತಿಯ ಪಾತ್ರ?

ಗಣೇಶ್ ಪಕ್ಕಾ ಮಾಸ್, ಸ್ಟೈಲಿಶ್ ಲುಕ್ಕಿಂಗ್. ಇಂಥ ಮಾಸ್ ಹೀರೊ ಜತೆ ಕ್ಲಾಸಿಕ್ ಹುಡುಗಿಯಾಗಿ ಕಾಣಿಸಿಕೊಂಡಿದ್ದೇನೆ. ‘ರಾಜಕುಮಾರ’ ಚಿತ್ರದಲ್ಲಿ ನೋಡಿದ ಪ್ರಿಯಾ ಬೇರೆ, ಇಲ್ಲಿ ನೋಡೋ ಪ್ರಿಯಾ ಆನಂದ್ ಬೇರೆ. ನಿರ್ದೇಶಕ ಪ್ರಶಾಂತ್ ರಾಜ್ ನನ್ನ ಪಾತ್ರವನ್ನು ಅಚ್ಚುಕಟ್ಟಾಗಿ ರೂಪಿಸಿದ್ದಾರೆ. ಅಪ್ಪಟ ಮನೆ ಮಗಳ ಪಾತ್ರವಾಗಿದ್ದರೂ, ಅದಕ್ಕೆ ಗ್ಲಾಮರ್ ಟಚ್ ನೀಡಿದ್ದಾರೆ.

ಚಿತ್ರದಲ್ಲಿನ ನಿಮ್ಮ ಪಾತ್ರ ಕತೆಗೆ ಹೇಗೆ ಪೂರಕವಾಗಿದೆ?

ಆರೆಂಜ್ ಅನ್ನೋ ಟೈಟಲ್ ಶುರುವಾಗುವುದೇ ನನ್ನ ಪಾತ್ರದ ಮೂಲಕ. ಈಗಾಗಲೇ ನೀವು ಟ್ರೇಲರ್‌ನಲ್ಲಿ ನೋಡಿದಂತೆ ರೈಲಿನಲ್ಲಿ ಹೋಗುವ ದೃಶ್ಯ, ನಾನು ನಟ ಗಣೇಶ್ ಅವರಿಗೆ ಒಂದು ಆರೆಂಜ್ ಕೊಡೋದು, ಅದೇ ಗಣೇಶ್ ‘ಒಂದು ಆರೆಂಜ್ ನನ್ನ ಎಲ್ಲಿಯವರೆಗೂ ಕರೆದುಕೊಂಡು ಹೋಗಿದೆ’ ಎನ್ನುವ ಡೈಲಾಗ್ ಕೇಳಿದಾಗ ನನ್ನ ಪಾತ್ರದ ಮಹತ್ವ ನಿಮಗೆ ಗೊತ್ತಾಗಿರುತ್ತದೆ. 

-ಸಂದರ್ಶನ: ಆರ್.ಕೇಶವಮೂರ್ತಿ 

click me!