ಸಂದರ್ಶನ: ನನ್ನೊಳಗೊಬ್ಬ ರಾಕ್ಷಸ ಇದ್ದಾನೆ

By Kannadaprabha NewsFirst Published Nov 16, 2018, 12:35 PM IST
Highlights

ತುಂಬಾ ವರ್ಷಗಳ ನಂತರ ಜಗ್ಗೇಶ್ ತೆರೆ ಮೇಲೆ ಬರುತ್ತಿದ್ದಾರೆ. ಜಗ್ಗೇಶ್ ಅಂದರೆ ಹಾಸ್ಯ ಎಂದುಕೊಂಡವರಿಗೆ ‘ನಾನು ಅದಕ್ಕೂ ಮೀರಿದ ಪ್ರತಿಭೆ’ ಎಂದು ತೋರಿಸುವಂತಿರುವ ಗೆಟಪ್‌ನಲ್ಲಿ ಬಂದಿದ್ದಾರೆ. ಅವರ ಹೊಸ ಚಿತ್ರ ‘8 ಎಂಎಂ’ ಇವತ್ತು ಬಿಡುಗಡೆ. ಈ ಚಿತ್ರದ ಬಗ್ಗೆ ಜಗ್ಗೇಶ್ ಮಾತನಾಡಿದ್ದಾರೆ.

ಜಗ್ಗೇಶ್ ಅಂದರೆ ಹಾಸ್ಯ, ಜಗ್ಗೇಶ್ ಸಿನಿಮಾಗಳೆಂದರೆ ಕಾಮಿಡಿ ಕಿಕ್. 8 ಎಂಎಂ ಯಾವ ಕಿಕ್ ಕೊಡುತ್ತೆ?

ಹಾಸ್ಯಕ್ಕಾಗಿ ಈ ಚಿತ್ರ ನೋಡುವುದಾದರೆ, ನವರಸ ನಾಯಕ ಜಗ್ಗೇಶ್ ಸಿನಿಮಾ ಅಂದುಕೊಂಡು ಬರುವುದಾರೆ ಈ ಸಿನಿಮಾ ನೋಡಬೇಡಿ. ಯಾಕೆಂದರೆ ಹಳೆಯ ಜಗ್ಗೇಶ್ ಇಲ್ಲಿಲ್ಲ. ಹೊಸ ಜಗ್ಗೇಶ್ ಇದ್ದಾರೆ. ಹೊಸತನದ ಕಿಕ್ ಇದೆ. ಪರ್‌ಫಾರ್‌ರ್ಮೆನ್ಸ್ ಜಗ್ಗೇಶ್ ಇಲ್ಲಿದ್ದಾನೆ. ನನ್ನ ನಾನು ಬ್ರೇಕ್ ಮಾಡಿಕೊಂಡು ನಿಮ್ಮ ಮುಂದೆ ಬರುತ್ತಿದ್ದೇನೆ. ನೀವು ಕೂಡ ಹಾಗೆ ಹೊಸ ನಿರೀಕ್ಷೆಗಳೊಂದಿಗೆ ಬನ್ನಿ.

ಯಾವ ಭರವಸೆಯಲ್ಲಿ ಹೀಗೆ ಹೊಸ ಬದಲಾವಣೆಯೊಂದಿಗೆ ಬರುತ್ತಿದ್ದೀರಿ?

ಕನ್ನಡ ಚಿತ್ರರಂಗ ಈಗ ಹೊಸತನದ ಹೊಸ್ತಿಲಿನಲ್ಲಿದೆ. ಈಗಿನ ಪ್ರೇಕ್ಷರಿಗೆ ಬ್ರಾಂಡ್ ಮುಖಗಳಿಗಿಂತ ಒಳ್ಳೆಯ ಕತೆಯ ಸಿನಿಮಾಗಳು ಬೇಕಿವೆ. ಹೀಗಾಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಂತಹ ಸಿನಿಮಾ ದೊಡ್ಡ ಮಟ್ಟದಲ್ಲಿ ಗೆಲ್ಲುತ್ತದೆ. ಈ ಕಾರಣಕ್ಕೆ ಹಿರಿಯ ಕಲಾವಿದರಿಗೆ ಬದಲಾವಣೆಗೆ ಒಳ್ಳೆಯ ಕಾಲ ಎಂಬುದನ್ನು ಈಗ ಬರುತ್ತಿರುವ ಸಿನಿಮಾಗಳು, ಹೊಸ ಹೊಸ ನಿರ್ದೇಶಕರು ತೋರಿಸಿಕೊಡುತ್ತಿದ್ದಾರೆ. ಪ್ರೇಕ್ಷಕರು ಕೂಡ ಕೈ ಹಿಡಿಯುತ್ತಿದ್ದಾರೆ. ಇದೇ ಸರಿಯಾದ ಸಮಯ ಅಂತ ನಾನು ಮೇಕ್‌ಓವರ್ ಮಾಡಿಕೊಂಡು ಹೊಸ ಪ್ರೇಕ್ಷಕರ ಮುಂದೆ ಹೊಸದಾಗಿ ಬರುತ್ತಿದ್ದೇನೆ.

ಚಿತ್ರ ಒಪ್ಪಿಕೊಂಡಿದ್ದಕ್ಕೆ ಮುಖ್ಯಕಾರಣಗಳೇನು?

ತುಂಬಾ ವರ್ಷಗಳಿಂದ ನಗಿಸುತ್ತಲೇ ಬಂದಿದ್ದೇನೆ. ಆದರೆ, ನಗಿಸುವುದಕ್ಕೇ ನಾನು ಸೀಮಿತನಾಗಬೇಕಾ ಎನ್ನುವ ಪ್ರಶ್ನೆ ನನ್ನಲ್ಲಿ ಹುಟ್ಟಿಕೊಂಡಾಗ ನನ್ನ ಮುಂದೆ ಬಂದ ಕತೆ ‘೮ಎಂಎಂ’. ನಗಿಸುವ ಜತೆಗೆ ಬೇರೇನೋ ಮಾಡಬೇಕು ಅನಿಸಿತು. ಪಕ್ಕದ ಭಾಷೆಯಲ್ಲಿ ಮೋಹನ್ ಲಾಲ್ ನೋಡಿ, ಪ್ರತಿ ಚಿತ್ರಕ್ಕೂ ಒಂದೊಂದು ರೀತಿಯ ಗೆಟಪ್‌ನಲ್ಲಿ ಕಾಣಿಸಿಕೊಳ್ಳುತ್ತಾರೆ. ೫೦ ವರ್ಷ ದಾಟಿದ ಒಬ್ಬ ವ್ಯಕ್ತಿ ಏನೆಲ್ಲ ಪ್ರಯೋಗಗಳಿಗೆ ಒಡ್ಡಿಕೊಳ್ಳುತ್ತಿದ್ದಾರಲ್ಲ ಅನಿಸಿದಾಗ ‘8 ಎಂಎಂ’ ಸಿನಿಮಾ ಕೂಡ ನನಗೆ ಅಂಥ ಪ್ರಯೋಗ ಮತ್ತು ಸವಾಲಿನ ಸಿನಿಮಾ ಅನಿಸಿಕೊಂಡಿತು.

ಚಿತ್ರದಲ್ಲಿ ನಿಮ್ಮ ಗೆಟಪ್ ಕೇವಲ ಬದಲಾವಣೆಗಾಗಿಯೋ ಅಥವಾ ಕತೆಗೆ ಪೂರಕವಾಗಿತ್ತೋ?

ಖಂಡಿತ ಕತೆಗೆ ಪೂರಕವಾಗಿರುವ ಗೆಟಪ್ ಇದು. ಹಾಗೆ ನೋಡಿದರೆ ಏಳೆಂಟ್ ಗೆಟಪ್‌ಗಳನ್ನು ಹಾಕಿ ನೋಡಿದೆ. ಯಾವುದೂ ಸೆಟ್ ಆಗಲಿಲ್ಲ. ಕೊನೆಯ ಬಾರಿ ಎಂಬಂತೆ ಲೈಟಾಗಿ ಗಡ್ಡ ಬಿಟ್ಟೆ, ಅದು ಬಿಳಿಯಾಗಿ ಕಂಡಿತು. ಆಗ ಕನ್ನಡಿಯಲ್ಲಿ ನನ್ನ ನಾನು ನೋಡಿಕೊಂಡು ಹೊಸದಾಗಿದೆಯಲ್ಲ ಅಂತ ನನಗೇ ಮೊದಲು ಅನಿಸಿತು. ಸಾಲ್ಟ್ ಆ್ಯಂಡ್ ಪೆಪ್ಪರ್ ಲುಕ್ ಅನ್ನೇ ಮುಂದುವರಿಸಿದೆ.

ಕೈಯಲ್ಲಿ ಪಿಸ್ತೂಲು ಹಿಡಿದಿದ್ದೀರಿ. ನೀವು ಹೀರೋ ನಾ?ವಿಲನ್ನಾ? ನಿಮ್ಮ ಪಾತ್ರದ ಮೂಲಕ ಏನು ಹೇಳುತ್ತೀರಿ?

ನಾನು ಇಲ್ಲಿ ನೆಗೆಟಿವ್ ಹೀರೋ. ಯಾವ ಕಾರಣಕ್ಕೂ ವಿಲನ್ ಅಲ್ಲ. ಇಡೀ ಸಿನಿಮಾ ನನ್ನ ಹೆಗಲ ಮೇಲೆ ನಿಂತಿರುತ್ತದೆ. ಪ್ರತಿಯೊಬ್ಬನೊಳಗೂ ಒಬ್ಬ ರಾಕ್ಷಸ ಇರುತ್ತಾನೆ. ಹಾಗೆ ಮಧ್ಯ ವಯಸ್ಕನಾಗಿರುವ ನನ್ನೊಳಗೂ ಒಬ್ಬ ರಾಕ್ಷಸ ಆಚೆ ಬರುತ್ತಾನೆ. ಆತ ಯಾಕೆ ಆಚೆ ಬರುತ್ತಾನೆ ಎಂಬುದು ಸಿನಿಮಾ ಕತೆ ಮತ್ತು ಪಾತ್ರ ಹೇಳುತ್ತದೆ.

ಚಿತ್ರದ ಕತೆಯನ್ನು ಒಂದು ಸಾಲಿನಲ್ಲಿ ಹೇಳಬಹುದೇ?

ನಿವೃತ್ತಿಯ ನೆರಳಿನಲ್ಲಿರುವ ಪೋಷಕರನ್ನು ಅತ್ಯಂತ ಪ್ರೀತಿಯಿಂದ ಮತ್ತು ಕರುಣೆಯಿಂದ ನೋಡಿಕೊಳ್ಳಬೇಕಾದ ಕರ್ತವ್ಯ ನಮ್ಮ ಸಮಾಜ ಮತ್ತು ಸುತ್ತ ಇರುವ ಸಂಬಂಧಗಳಿಗೆ ಸೇರಿದ್ದು. ಆದರೆ, ನಿವೃತ್ತಿಯಾಗಿರುವ ಜೀವಗಳನ್ನು ನಡು ಬೀದಿಗೆ ಬಿಟ್ಟಿದ್ದಾರೆ. ಹಾಗೆನಡು ಬೀದಿಗೆ ಬಂದವನ ಜೀವನದಲ್ಲಿ ಒಂದು ಘಟನೆ ನಡೆದು, ಆತ ಸರಣಿ ಕೊಲೆಗಾರನಾಗುತ್ತಾನೆ. ಹಾಗೆ ಕೊಲೆಗಾರನಾದ ಮಧ್ಯ ವಯಸ್ಕನ ಕತೆ ಈ ಚಿತ್ರದಲ್ಲಿದೆ.

8 ಎಂಎಂ ಯಾಕೆ ತುಂಬಾ ಹತ್ತಿರ ಅನಿಸುತ್ತಿದೆ?

ಎರಡೂವರೆ ವರ್ಷಗಳ ನಂತರ ನನ್ನ ಪ್ರೇಕ್ಷಕರ ಮುಂದೆ ಕರೆದುಕೊಂಡು ಹೋಗುತ್ತಿರುವ ಸಿನಿಮಾ. ನನ್ನ ಗೆಟಪ್, ಲುಕ್ ನೋಡಿ ತುಂಬಾ ಜನ ಮೆಚ್ಚುಗೆ ಸೂಚಿಸಿದ್ದಾರೆ. ಈ ಸಿನಿಮಾಕ್ಕೆ ಅದು ಮೊದಲ ಗೆಲುವು. ಚಿತ್ರಕ್ಕೆ ಗೀತೆ ರಚನೆ ಮಾಡಿದ್ದೇನೆ. ಹಾಡು, ಟ್ರೇಲರ್ ಗೆದ್ದಿದೆ. ಪ್ರೇಕ್ಷಕರು ಈ ಚಿತ್ರವನ್ನ ಒಪ್ಪಿಕೊಳ್ಳುವ ಭರವಸೆ ಹುಟ್ಟಿದೆ. 

ಈ ಸಿನಿಮಾ ನೋಡುವುದಕ್ಕೆ ನೀವು ಕೊಡುವ ಐದು ಕಾರಣಗಳು ಯಾವುವು?

ನಾನು ಒಂದೇ ಕಾರಣ ಹೇಳುವೆ, ಕನ್ನಡದಲ್ಲಿ ಭಿನ್ನ ರೀತಿಯ ಸಿನಿಮಾಗಳು ಬರುತ್ತಿಲ್ಲ ಎಂದು ಮಾತನಾಡುವ ಅಥವಾ ಭಿನ್ನ ರೀತಿಯ ಚಿತ್ರಗಳಿಗಾಗಿ ಎದುರು ನೋಡುತ್ತಿರುವ ಎಲ್ಲರು ಚಿತ್ರವನ್ನು ಒಮ್ಮೆ ನೋಡಿ.

ಈ ಚಿತ್ರದ ನಂತರ ಜಗ್ಗೇಶ್ ಸಿನಿಮಾ ಆಯ್ಕೆಯಲ್ಲಿ ಬದಲಾಗುತ್ತದೆಯೇ?

ಖಂಡಿತ ನನ್ನ ಸಿನಿಮಾಗಳ ಆಯ್ಕೆ ಇನ್ನೂ ಮುಂದೆ ಬದಲಾಗುತ್ತದೆ. ಹೊಸ ಇಮೇಜ್‌ನ ನಾಲ್ಕು ಕತೆಗಳನ್ನು ಆಯ್ಕೆ ಮಾಡಿಕೊಂಡಿದ್ದೇನೆ. ಎಜುಕೇಷನ್ ಹಾಗೂ ಮಧ್ಯಮ ವರ್ಗದ ಜನರ ಬದುಕನ್ನು ಹೇಳುವ ಕತೆ, ಎರಡು ಧರ್ಮಗಳ ವಿಚಾರವನ್ನು ಹೇಳುವ ಸಿನಿಮಾ (ತೋತಾಪುರಿ), ಡೈವೋರ್ಸ್ ಮೂಲಕ ಕ್ಲಾಸಿಕ್ ಕತೆಯನ್ನು ಹೇಳುವ ಸಿನಿಮಾ (ಪ್ರಿಮಿಯರ್ ಪದ್ಮಿನಿ), ಈಗ

ತೆರೆಗೆ ಬರುತ್ತಿರುವ 8ಎಂಎಂ ಸಿನಿಮಾ. ಚಿತ್ರದಲ್ಲಿ ನಟಿಸಿರುವ ಬೇರೆ ಕಲಾವಿದರ ಬಗ್ಗೆ ಹೇಳುವುದಾರೆ?

ಮಯೂರಿ, ವಸಿಷ್ಠ ಸಿಂಹ, ಆದಿ ಲೋಕೇಶ್, ರಾಕ್‌ಲೈನ್ ವೆಂಕಟೇಶ್ ಅವರು ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇವರ‌್ಯಾರೂ ತಾವಾಗಿ ತೆರೆ ಮೇಲೆ ಬಂದಿಲ್ಲ. ಕ್ಯಾರೆಕ್ಟರ್‌ಗಳಾಗಿ ಬಂದಿದ್ದಾರೆ. ಪ್ರತಿಯೊಂದು ಪಾತ್ರವನ್ನು ನಿರ್ದೇಶಕ ಹರಿಕೃಷ್ಣ ಅಚ್ಚುಕಟ್ಟಾಗಿ ರೂಪಿಸಿದ್ದಾರೆ. ಜ್ಯೂಡಾ ಸ್ಯಾಂಡಿ ಸಂಗೀತ ಅದ್ಭುತವಾಗಿದೆ. ನಿರ್ಮಾಪಕ ಪ್ರದೀಪ್ ಚಿತ್ರ ಅದ್ಧೂರಿಯಾಗಿ ಬರುವುದಕ್ಕೆ ಸಾಥ್ ನೀಡಿದ್ದಾರೆ. 

click me!