ಲೋಕಸಭಾ ಚುನಾವಣೆ ಮುಗಿಯುತ್ತಿದ್ದಂತೆಯೇ ಮಾಜಿ ಸಚಿವ ಬಾಬುರಾವ್ ಚವ್ಹಾಣ್‌ರನ್ನ ಮಲ್ಲಿಕಾರ್ಜುನ ಖರ್ಗೆ ನಡುನೀರಲ್ಲೇ ಕೈಬಿಟ್ಟಿದ್ದಾರೆ. ಚಿಂಚೋಳಿ ಉಪಚುನಾವಣೆ ಟಿಕೆಟ್ ಆಸೆಯಿಂದ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿದ್ದ ಬಾಬುರಾವ್ ಚವ್ಹಾಣ್ ಇದೀಗ ಅನಾಥರಾಗಿದ್ದಾರೆ.
ಕಲಬುರಗಿ, (ಏ.30): ಚಿಂಚೋಳಿ ಉಪಚುನಾವಣೆ ಟಿಕೆಟ್ ಮೇಲೆ ಕಣ್ಣಿಟ್ಟು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದ ಮಾಜಿ ಸಚಿವ ಬಾಬುರಾವ್ ಚವ್ಹಾಣ್‌ಗೆ ನಿರಾಸೆಯಾಗಿದೆ.
ಲೋಕಸಭಾ ಚುನಾವಣೆ ವೇಳೆ ಲಂಬಾಣಿ ಮತಗಳನ್ನ ಸೆಳೆಯಲು ಮಾಜಿ ಸಚಿವ ಬಾಬುರಾವ್ ಚವ್ಹಾಣ್ ಅವರನ್ನ ಕಾಂಗ್ರೆಸ್‌ಗೆ ಕರೆತರುವಲ್ಲಿ ಖರ್ಗೆ ಯಶಸ್ವಿಯಾಗಿದ್ದರು. ಆದ್ರೆ ಚುನಾವಣೆ ಮುಗಿಯುತ್ತಿದ್ದಂತೆಯೇ ಬಾಬುರಾವ್ ಚವ್ಹಾಣ್ ಅವರನ್ನು ಯಾರು ಕ್ಯಾರೆ ಎನ್ನುತ್ತಿಲ್ಲ.
ಉಮೇಶ್ ಜಾಧವ್ ಅವರು ಬಿಜೆಪಿ ಸೇರಿದ್ದರಿಂದ ಅಸಮಾಧನಗೊಂಡಿದ್ದ ಬಾಬುರಾವ್ ಚವ್ಹಾಣ್ ಚಿಂಚೋಳಿ ವಿಧಾಸಭೆ ಟಿಕೆಟ್ ಸಿಗುತ್ತೆ ಎನ್ನುವ ಆಶಾಭಾವನೆಯಿಂದ ಕಾಂಗ್ರೆಸ್ ಸೇರಿದ್ದರು.
ಆದರೆ ಚಿಂಚೋಳಿ ವಿಧಾನಸಭಾ ಉಪಚುನಾವಣೆ ಕಾಂಗ್ರೆಸ್ ಟಿಕೆಟ್ ಸುಭಾಷ್ ರಾಠೋಡ್ ಅವರಿಗೆ ನೀಡಿದ್ದು, ಬಾಬುರಾವ್ ಚವ್ಹಾಣ್‌ಗೆ ದಿಕ್ಕುತೋಚದಂತಾಗಿದೆ.
ಚಿಂಚೋಳಿ ಟಿಕೆಟ್ ಫೈಟ್: ಕಾಂಗ್ರೆಸ್ ನಲ್ಲಿ ಭುಗಿಲೆದ್ದ ಬಂಡಾಯ
ಇನ್ನು ಈ ಬಗ್ಗೆ ಕಲಬುರಗಿಯಲ್ಲಿ ಇಂದು (ಮಂಗಳವಾರ) ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಾಬುರಾವ್ ಚವ್ಹಾಣ್, ಯಾವ ಮಾನದಂಡದ ಮೇಲೆ ಸುಭಾಷ್ ರಾಠೋಡ್ ಗೆ ಟಿಕೆಟ್ ನೀಡಿದ್ದಾರೆಂಬುದು ಗೊತ್ತಿಲ್ಲ.
ನಾಮಪತ್ರ ಸಲ್ಲಿಕೆಗೆ ಹಾಗೂ ಕಾಂಗ್ರೆಸ್ ಬಹಿರಂಗ ಪ್ರಚಾರಕ್ಕೆ ಸುಭಾಷ್ ರಾಠೋಡ್ ನನ್ನ ಆಹ್ವಾನಿಸಿಲ್ಲ. ಈಗ ಅವರು ಕರೆದರೂ ನಾನು ಅವರ ಪರ ಪ್ರಚಾರಕ್ಕೆ ಹೋಗಲ್ಲ ಎಂದು ಬಾಬುರಾವ್ ಚವ್ಹಾಣ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಾನೂ ಸಹ ಚಿಂಚೋಳಿ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಪ್ರಬಲ ಆಕಾಂಕ್ಷಿಯಾಗಿದ್ದೆ. ಸಚಿವ ಪ್ರಿಯಾಂಕ್ ಖರ್ಗೆ ಸಹ ಕಾಂಗ್ರೆಸ್ ಪರ ಪ್ರಚಾರಕ್ಕೆ ಆಗಮಿಸುವಂತೆ ನನ್ನನ್ನು ಆಹ್ವಾನಿಸಿಲ್ಲ.
ನಾನು ಚಿಂಚೋಳಿ ಕ್ಷೇತ್ರದವನು, ಚಿಂಚೋಳಿ ಕ್ಷೇತ್ರದ ಮನೆಮಗಳನ್ನು ಮದುವೆಯಾಗಿದ್ದೇನೆ. ಚಿಂಚೋಳಿ ಕ್ಷೇತ್ರದಲ್ಲಿ ಒಂದು ಬಾರಿ ಸ್ಪರ್ಧಿಸಿ ಕಡಿಮೆ ಅಂತರದಿಂದ ಪರಾಭವಗೊಂಡಿದ್ದೆ. ಆದರೂ ಕಾಂಗ್ರೆಸ್ ಹೈಕಮಾಂಡ್ ಸುಭಾಷ್ ರಾಠೋಡ್ಗೆ ಟಿಕೆಟ್ ನೀಡಿದ್ದು, ಮಲ್ಲಿಕಾರ್ಜುನ ಖರ್ಗೆ ಕಲಬುರಗಿಗೆ ಬಂದ ಬಳಿಕ ಅವರ ಜೊತೆ ಚರ್ಚಿಸಿ ನನ್ನ ಮುಂದಿನ ನಿರ್ಧಾರ ತಿಳಿಸುವೆ ಎಂದರು.
ಒಟ್ಟಿನಲ್ಲಿ ಲೋಕಸಭಾ ಚುನಾವಣೆ ಮುಗಿಯುತ್ತಿದ್ದಂತೆಯೇ ಬಾಬುರಾವ್ ಚವ್ಹಾಣ್ ಒಂಥರಾ ಯೂಸ್ ಅಂಡ್ ಥ್ರೋ ತರ ಆಗಿದ್ದಾರೆ.