
ಲಕ್ನೋ(ಏ.17): ಪ್ರಧಾನಿ ಮೋದಿ ಅವರನ್ನು ಲೋಕಸಭೆ ಚುನಾವಣೆಯಲ್ಲಿ ಕಟ್ಟಿ ಹಾಕುವ ಭರದಲ್ಲಿ ‘ಮೋದಿ ಹೆಸರಿರುವವರೆಲ್ಲಾ ಕಳ್ಳರೇ..’ಎಂದು ಹೇಳಿಕೆ ನೀಡಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪೇಚಿಗೆ ಸಿಲುಕಿದ್ದಾರೆ.
ಮೋದಿ ಉಪನಾಮ ಹೊಂದಿರುವವರೆಲ್ಲಾ ರಾಹುಲ್ ಮೇಲೆ ಗರಂ ಆಗಿರುವುದು ಒಂದೆಡೆಯಾದರೆ, ಇದಕ್ಕೆ ಉತ್ತರವೆಂಬಂತೆ ಅಕ್ಕ ಪ್ರಿಯಾಂಕಾ ಗಾಂಧಿ ಅವರನ್ನು ಬಿಜೆಪಿ ಫೈರ್ ಬ್ರ್ಯಾಂಡ್ ನಾಯಕಿ ‘ಕಳ್ಳನ ಹೆಂಡತಿ..’ಎಂದು ಕರೆದಿದ್ದಾರೆ.
ಪ್ರಿಯಾಂಕಾ ಗಾಂಧಿ ಆಗಮನದಿಂದಾಗಿ ಉತ್ತರಪ್ರದೇಶ ಮತ್ತು ರಾಷ್ಟ್ರ ರಾಜಕಾರಣದ ಮೇಲೆ ಬೀರಿರಬಹುದಾದ ಪರಿಣಾಮ ಏನು ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿರುವ ಉಮಾ ಭಾರತಿ, ದೇಶ ಆಕೆಯನ್ನು ಕಳ್ಳನ ಹೆಂಡತಿ ಎಂದಷ್ಟೇ ನೆನೆಸಿಕೊಳ್ಳಲಿದೆ ಎಂದು ತಿರುಗೇಟು ನೀಡಿದ್ದಾರೆ.
ಇದೇ ವೇಳೆ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಮತ್ತು ಎಸ್ ಪಿ ನಾಯಕ ಆಜಂ ಖಾನ್ ಅವರಿಗೆ ಏಕ ರೀತಿಯ ಶಿಕ್ಷೆ ನೀಡಿರುವ ಚುನಾವಣಾ ಆಯೋಗದ ಕ್ರಮವನ್ನು ಉಮಾ ಭಾರತಿ ವಿರೋಧಿಸಿದ್ದಾರೆ. ಆಯೋಗದ ಮೇಲೆ ಗೌರವವಿದೆಯಾದರೂ, ಈ ವಿಷಯದಲ್ಲಿ ಅದು ಮತ್ತಷ್ಟು ತನಿಖೆ ಮಾಡಿ ನಿರ್ಧಾರ ಕೈಗೊಳ್ಳಬೇಕಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.