ಬಂಡೀಪುರ ವಿಚಾರ : ಕರ್ನಾಟಕ ಬಿಟ್ಟು ಕೇರಳ ಪರ ರಾಹುಲ್ ಬ್ಯಾಟಿಂಗ್ !

By Web DeskFirst Published Apr 20, 2019, 8:02 AM IST
Highlights

ಲೋಕಸಭಾ ಚುನಾವಣೆ ಬೆನ್ನಲ್ಲೇ ರಾಹುಲ್ ಗಾಂಧಿ ಬಂಡೀಪುರ ವಿಚಾರದಲ್ಲಿ ರಾಹುಲ್ ಗಾಂಧಿ ಕೇರಳ ಪರ ಬ್ಯಾಟಿಂಗ್ ಮಾಡಿದ್ದಾರೆ. 

ವಯನಾಡ್‌  :  ವನ್ಯಜೀವಿಗಳ ರಕ್ಷಣೆಗಾಗಿ ಬಂಡೀಪುರ ಅರಣ್ಯದಲ್ಲಿ ವಿಧಿಸಲಾದ ರಾತ್ರಿ ಸಂಚಾರ ನಿರ್ಬಂಧದಿಂದ ಆಗುತ್ತಿರುವ ತೊಂದರೆಗಳ ಬಗ್ಗೆ ತಾವು ಪರಿಶೀಲಿಸುವುದಾಗಿ ವಯನಾಡ್‌ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯೂ ಆಗಿರುವ ಪಕ್ಷದ ಅಧ್ಯಕ್ಷ ರಾಹುಲ್‌ ಗಾಂಧಿ ಹೇಳಿದ್ದಾರೆ. ಆದರೆ ಗಾಂಧಿ ಅವರ ಹೇಳಿಕೆಗೆ ವನ್ಯಜೀವಿ ತಜ್ಞರು ಹಾಗೂ ಪರಿಸರವಾದಿಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಈ ಹೆದ್ದಾರಿಯು ಕರ್ನಾಟಕ ಹಾಗೂ ಕೇರಳದ ವಯನಾಡ್‌ ನಡುವಿನ ಕೊಂಡಿಯಾಗಿದೆ. ಹೀಗಾಗಿ ರಾಹುಲ್‌ ಹೇಳಿಕೆಗೆ ಮಹತ್ವ ಬಂದಿದೆ.

ಕಳೆದ ಬುಧವಾರ ಇಲ್ಲಿ ಚುನಾವಣಾ ಭಾಷಣ ಮಾಡಿದ ಮಾಡಿದ ರಾಹುಲ್‌ ಗಾಂಧಿ ಅವರು, ‘ಬಂಡೀಪುರದಲ್ಲಿ ಹೇರಲಾಗಿರುವ ರಾತ್ರಿ ಸಂಚಾರ ನಿರ್ಬಂಧದ ಬಗ್ಗೆ ನನಗೆ ಅರಿವಿದೆ. ಅಭಿವೃದ್ಧಿ ಹಾಗೂ ಪರಿಸರದ ನಡುವೆ ಏರ್ಪಟ್ಟಿರುವ ಸಂಘರ್ಷದ ಬಗ್ಗೆ ಕೂಡ ನನಗೆ ಗೊತ್ತಿದೆ. ಈ ವಿಷಯಗಳ ಬಗ್ಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ ಎಂಬುದು ನನ್ನ ನಂಬಿಕೆ’ ಎಂದು ಹೇಳಿದರು.

ಆಕ್ಷೇಪ:  ರಾಹುಲ್‌ ಗಾಂಧಿ ಅವರ ಹೇಳಿಕೆಯನ್ನು ಪರಿಸರವಾದಿಗಳು ತೀವ್ರವಾಗಿ ಆಕ್ಷೇಪಿಸಿದ್ದಾರೆ. ‘ಕಾಂಗ್ರೆಸ್‌ ಅಧ್ಯಕ್ಷರಿಗೆ ಈ ಬಗ್ಗೆ ಯಾರೋ ತಪ್ಪು ಮಾಹಿತಿ ನೀಡಿದ್ದಾರೆ. ಸಮಸ್ಯೆಯ ಬಗ್ಗೆ ಅವರಿಗೆ ಮಾಹಿತಿ ಇಲ್ಲ. ವನ್ಯಜೀವಿಗಳ ಹಿತದೃಷ್ಟಿಯಿಂದ ಈ ವಿಷಯವನ್ನು ಪುನಃ ಪರಿಶೀಲನೆಗೆ ಒಳಪಡಿಸಬಾರದು ಎಂಬುದು ನಮ್ಮ ಆಗ್ರಹ. ರಾಹುಲ್‌ ಗಾಂಧಿ ಅವರೇ 2008ರಲ್ಲಿ ಬಂಡೀಪುರ ಹಾಗೂ ನಾಗರಹೊಳೆ ಅರಣ್ಯಗಳಿಗೆ ಭೇಟಿ ನೀಡಿದ್ದರು. ಪ್ರಾಣಿಗಳ ಸಂರಕ್ಷಣೆಗೆ ಸಹಮತ ವ್ಯಕ್ತಪಡಿಸಿದ್ದರು’ ಎಂದು ಪರಿಸರವಾದಿ, ವನ್ಯಜೀವಿ ತಜ್ಞ ಪ್ರವೀಣ್‌ ಭಾರ್ಗವ ಹೇಳಿದ್ದಾರೆ ಎಂದು ಮಾಧ್ಯಮ ವರದಿ ಹೇಳಿದೆ.

ವಯನಾಡ್‌ ಪ್ರಕೃತಿ ಸಂರಕ್ಷಣ ಸಮಿತಿಯ ಅಧ್ಯಕ್ಷ ಎನ್‌. ಬಾದೂಷಾ ಪ್ರತಿಕ್ರಿಯಿಸಿ, ‘ಬಂಡೀಪುರದ ವನ್ಯಜೀವಿಗಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಪಟ್ಟಿಸಿದ್ಧಪಡಿಸಿ ಅವುಗಳನ್ನು ರಾಹುಲ್‌ ಗಾಂಧಿ ಅವರಿಗೆ ನೀಡಲಾಗಿದೆ. ಆದಾಗ್ಯೂ ಕೆಲವು ಸ್ಥಳೀಯ ರಾಜಕಾರಣಿಗಳ ಒತ್ತಡದಿಂದ ಅವರು ಈ ವಿಷಯ ಪ್ರಸ್ತಾಪಿಸಿರಬಹುದು. ಬಂಡೀಪುರವನ್ನು ಪ್ರವಾಸೋದ್ಯಮಕ್ಕೆ ಬಳಸಿಕೊಳ್ಳುವ ಬಲವಾದ ಲಾಬಿ ಇದೆ. ಇದೇ ಲಾಬಿಯು ರಾತ್ರಿ ಸಂಚಾರ ನಿಷೇಧ ತೆರವಿಗೆ ಯತ್ನಿಸುತ್ತಿದೆ. ಆದರೆ ಈ ಒತ್ತಡಕ್ಕೆ ರಾಹುಲ್‌ ಮಣಿಯುವುದಿಲ್ಲ ಎಂಬ ವಿಶ್ವಾಸವಿದೆ’ ಎಂದಿದ್ದಾರೆ.

click me!