ಚೌಕೀದಾರರಿಗೆ ಅವಮಾನ: ರಾಹುಲ್‌ ಪರವಾಗಿ ಚೌಕಿದಾರರ ಕ್ಷಮೆ ಕೇಳಿದ ಮೋದಿ!

By Web DeskFirst Published Mar 21, 2019, 8:13 AM IST
Highlights

25 ಲಕ್ಷ ಚೌಕಿದಾರರನ್ನುದ್ದೇಶಿಸಿ ನಿನ್ನೆ ಭಾಷಣ| ಕಾಂಗ್ರೆಸ್‌ ಅಧ್ಯಕ್ಷರಿಂದ ಚೌಕಿದಾರರಿಗೆ ಅವಮಾನ| ದೇಶಭಕ್ತಿ, ಪ್ರಾಮಾಣಿಕತೆ ಚೌಕಿದಾರರು ಅನ್ವರ್ಥ

ನವದೆಹಲಿ[ಮಾ.21]: ರಫೇಲ್‌ ಯುದ್ಧ ವಿಮಾನ ಖರೀದಿ ವಿಚಾರವನ್ನು ಮುಂದಿಟ್ಟುಕೊಂಡು ‘ಚೌಕಿದಾರ್‌ ಚೋರ್‌ ಹೈ’ ಎಂದು ಹೋದಲ್ಲಿ ಬಂದಲ್ಲಿ ತಮ್ಮನ್ನು ಟೀಕಿಸುತ್ತಿರುವ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಭರ್ಜರಿಯಾಗಿ ತಿರುಗೇಟು ಕೊಟ್ಟಿದ್ದಾರೆ. ದೇಶದ 25 ಲಕ್ಷ ಅಸಲಿ ಚೌಕಿದಾರರ (ಭದ್ರತಾ ಸಿಬ್ಬಂದಿ)ನ್ನು ಉದ್ದೇಶಿಸಿ ಬುಧವಾರ ಭಾಷಣ ಮಾಡಿದ ಮೋದಿ ಅವರು, ಚೌಕಿದಾರ ಚೋರ್‌ ಹೈ ಎಂದ ರಾಹುಲ್‌ ಪರವಾಗಿ ಕ್ಷಮೆ ಯಾಚಿಸಿದ್ದಾರೆ.

ಕೆಲವು ವ್ಯಕ್ತಿಗಳು ತಮ್ಮ ಸ್ವಂತ ಹಿತಾಸಕ್ತಿಗಾಗಿ ಚೌಕಿದಾರರನ್ನು ನಿಂದಿಸುತ್ತಿದ್ದಾರೆ. ಚೌಕಿದಾರರು ಕಳ್ಳರು ಎಂದು ಹೇಳುವ ಮೂಲಕ ಅವರ ನಿಯತ್ತಿನ ಬಗ್ಗೆಯೇ ಪ್ರಶ್ನೆ ಎತ್ತಿದ್ದಾರೆ. ಹೀಗಾಗಿ ಚೌಕಿದಾರರ ಕ್ಷಮೆ ಕೇಳುತ್ತೇನೆ ಎಂದು ಆಡಿಯೋ ಭಾಷಣದಲ್ಲಿ ಮೋದಿ ತಿಳಿಸಿದ್ದಾರೆ.

ಚೌಕಿದಾರರು ದೇಶಭಕ್ತಿ ಹಾಗೂ ಪ್ರಾಮಾಣಿಕತೆಗೆ ಅನ್ವರ್ಥ. ನನ್ನ ಕೆಲಸ ನಿಮ್ಮಂತೆ 24*7 ಕಟ್ಟೆಚ್ಚರದಿಂದ ಇರುವುದು. ನಿಮ್ಮನ್ನು ಅವಮಾನ ಮಾಡುವ ಉದ್ದೇಶದಿಂದಲೇ ಚೌಕಿದಾರ ಕಳ್ಳ ಎಂದು ಪದೇಪದೇ ಹೇಳಲಾಗುತ್ತಿದೆ. ನಮ್ಮನ್ನು ಎಷ್ಟುಬಾರಿ ಅವಮಾನಿಸಿದರೂ ಹೆದರಬೇಕಿಲ್ಲ. ಅಂತಹ ಅವಮಾನಗಳನ್ನು ಆಭರಣಗಳಂತೆ ನಾವು ಧರಿಸಬೇಕು ಎಂದು ಹೇಳಿದ್ದಾರೆ.

ನನ್ನ ಎದುರಾಳಿಗಳಿಗೆ ನನ್ನ ಹೆಸರು ಹೇಳುವ ಹಾಗೂ ನೇರವಾಗಿ ವಾಗ್ದಾಳಿ ನಡೆಸುವ ಧೈರ್ಯವಿಲ್ಲ. ಹೀಗಾಗಿಯೇ ವಾಚ್‌ಮನ್‌ಗಳನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದು ಗುಡುಗಿದರು.

click me!