
ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಹಿಂದಿನ ಸಂಪ್ರದಾಯದಂತೆ ಕಾಂಗ್ರೆಸ್ ಪಕ್ಷದಿಂದ ಮುಸ್ಲಿಮರಿಗೆ ಮೂರು ಕ್ಷೇತ್ರಗಳಿಂದ ಟಿಕೆಟ್ ನೀಡಲಾಗುತ್ತಿತ್ತು. ಆದರೆ, ಈ ಬಾರಿ ಕೇವಲ ಒಂದೇ ಒಂದು ಸ್ಥಾನ ನೀಡಲಾಗಿದೆ ಎಂದು ಹಿರಿಯ ಕಾಂಗ್ರೆಸ್ ನಾಯಕ, ಮಾಜಿ ಸಚಿವ ಆರ್.ರೋಶನ್ ಬೇಗ್ ಬೇಸರ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಪಕ್ಷದಲ್ಲಿ ಮುಸ್ಲಿಮರನ್ನು ನಿರಂತರವಾಗಿ ನಿರ್ಲಕ್ಷ್ಯ ಮಾಡುತ್ತಿರುವುದನ್ನು ಗಮನಿಸಿದರೆ, ಮುಸ್ಲಿಂ ಮುಕ್ತ ಕಾಂಗ್ರೆಸ್ ಮಾಡಬೇಕೆಂಬ ಷಡ್ಯಂತ್ರವೇನಾದರೂ ನಡೆಯುತ್ತಿದ್ದೆಯೇ? ಎಂಬ ಅನುಮಾನ ಮೂಡುತ್ತಿದೆ. ಯಾವ ಕಾರಣಕ್ಕೆ ಮುಸ್ಲಿಮರನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ ಎಂದು ಪ್ರಶ್ನಿಸಿ ರಾಹುಲ್ ಗಾಂಧಿ ಅವರಿಗೆ ಪ್ರತಿಭಟನಾ ಪತ್ರ ಬರೆಯುತ್ತೇನೆ ಅವರು ಹೇಳಿದ್ದಾರೆ.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲಬುರಗಿ, ಧಾರವಾಡ ಹಾಗೂ ಬೆಂಗಳೂರು ಜಿಲ್ಲೆಯಿಂದ ತಲಾ ಒಂದು ಲೋಕಸಭಾ ಕ್ಷೇತ್ರಕ್ಕೆ ಮುಸ್ಲಿಮರಿಗೆ ಟಿಕೆಟ್ ನೀಡಲಾಗುತ್ತಿತ್ತು. ಕಲಬುರಗಿ ಮೀಸಲು ಕ್ಷೇತ್ರವಾದ ಹಿನ್ನೆಲೆಯಲ್ಲಿ ಬೀದರ್ ಕ್ಷೇತ್ರಕ್ಕಾಗಿ ಮುಸ್ಲಿಮರು ಬೇಡಿಕೆ ಇಟ್ಟಿದ್ದರು. ಮುಸ್ಲಿಮರಲ್ಲಿ ಅಭ್ಯರ್ಥಿಗಳಿಲ್ಲ, ಟಿಕೆಟ್ ಕೊಟ್ಟರೆ ಅವರು ಗೆಲ್ಲಲು ಸಾಧ್ಯವಿಲ್ಲ ಎಂಬ ಕುಂಟು ನೆಪ ಹೇಳಿಕೊಂಡು, ಮುಸ್ಲಿಮರಿಗೆ ಟಿಕೆಟ್ ನಿರಾಕರಿಸಲಾಗಿದೆ. ಮುಸ್ಲಿಮರ ನಾಯಕತ್ವವನ್ನೆ ಅಂತ್ಯಗೊಳಿಸಲು ಹೊರಟಂತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.