ಲೋಕಸಭಾ ಚುನಾವಣೆ ಸಮರ ಆರಂಭವಾಗಿದೆ. ಅಭ್ಯರ್ಥಿಗಳ ಪ್ರಚಾರ ಕಾರ್ಯವೂ ಕೂಡ ಜೋರಾಗಿದ್ದು, ಕಲಬುರಗಿಗೆ ಪ್ರಚಾರಕ್ಕೆ ತೆರಳಿದ್ದ ಸಿದ್ದರಾಮಯ್ಯ ಪತ್ರಕರ್ತರಿಗೆ ನಿಂಬೆ ಹಣ್ಣು ನೀಡಿದ್ದಾರೆ.
ಕಲಬುರಗಿ: ಚುನಾವಣಾ ಪ್ರಚಾರ ಸಭೆಗಳಲ್ಲಿ ಪಾಲ್ಗೊಳ್ಳಲು ಕಲಬುರಗಿಗೆ ಹೆಲಿಕಾಪ್ಟರ್‌ನಲ್ಲಿ ಆಗಮಿಸಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪೊಲೀಸ್ ಪರೇಡ್ ಮೈದಾನದ ಹೆಲಿಪ್ಯಾಡಿನಲ್ಲಿ ಬಂದಿಳಿದಾಗ ಅಭಿಮಾನಿಗಳು ಸ್ವಾಗತ ಕೋರಿ ಕೈಯಲ್ಲಿ ನಿಂಬೆಹಣ್ಣು ನೀಡಿದ್ದರು.
ಅದನ್ನು ಗಮನಿಸಿದ ಪತ್ರಕರ್ತರು ‘ಸರ್ ನಿಮ್ಮ ಕೈಯಲ್ಲಿ ನಿಂಬೆಹಣ್ಣು?’ ಎಂದು ಪ್ರಶ್ನಿಸಿಯೇ ಬಿಟ್ಟರು. ಪತ್ರಕರ್ತರ ಪ್ರಶ್ನೆಗೆ ಸ್ಪಂದಿಸಿದ ಸಿದ್ದರಾಮಯ್ಯ ‘ಅಯ್ಯೋ ಹಾಗೇನಿಲ್ಲಪ್ಪ, ಹೆಲಿಕಾಪ್ಟರ್ ಇಳಿಯೋವಾಗ ಕೊಟ್ಟರು, ಹಾಗೇ ತಂದಿದ್ದೇನೆ. ನೀವೇ ತಗೊಳ್ಳಿ’ ಎಂದು ಪ್ರಶ್ನೆ ಕೇಳಿದ ವರದಿಗಾರನ ಕೈಗೇ ಸಿದ್ದು ಆ ನಿಂಬೆಹಣ್ಣು ಕೊಟ್ಟು ಹಾಸ್ಯ ಮಾಡಿದರು.
ಈ ಹಂತದಲ್ಲಿ ಸಿದ್ದು ಹಾಸ್ಯ ಚಟಾಕಿ ಹಾರಿಸಿದಾಗ ನಿಂಬೆಹಣ್ಣನ್ನು ಪಡೆದ ಪತ್ರಕರ್ತ ಅದನ್ನು ಮತ್ತೆ ಸಿದ್ದರಾಮಯ್ಯನವರಿಗೆ ನೀಡಲು ಹೋದಾಗ, ಅದನ್ನು ಮತ್ತೆ ಕೈಗೆತ್ತಿಕೊಂಡ ಸಿದ್ದರಾಮಯ್ಯ ನೇರವಾಗಿ ಪತ್ರಕರ್ತನ ಜೇಬಿಗೆ ತಾವೇ ತುರುಕಿ ಹಾಸ್ಯ ಮಾಡಿದರು.