ಮುಖಾಮುಖಿಯಾದರೂ ಪ್ರಿಯಾಂಕಾ, ಮನೇಕಾ ಗಾಂಧಿ ಮಾತುಕತೆ ಇಲ್ಲ

By Web DeskFirst Published May 11, 2019, 8:28 AM IST
Highlights

 ಪ್ರಿಯಾಂಕಾ ಗಾಂಧಿ ಹಾಗೂ ಅವರ ಚಿಕ್ಕಮ್ಮ ಕೂಡ ಆಗಿರುವ ಕೇಂದ್ರ ಸಚಿವೆ ಮನೇಕಾ ಗಾಂಧಿ ಮುಖಾಮುಖಿ|  ಆದಾಗ್ಯೂ ಇಬ್ಬರು ಪರಸ್ಪರ ಮಾತನಾಡಲಿಲ್ಲ.

ಸುಲ್ತಾನ್‌ಪುರ[ಮೇ.11]: ಕಾಂಗ್ರೆಸ್ಸಿನ ನೂತನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಹಾಗೂ ಅವರ ಚಿಕ್ಕಮ್ಮ ಕೂಡ ಆಗಿರುವ ಕೇಂದ್ರ ಸಚಿವೆ ಮನೇಕಾ ಗಾಂಧಿ ಅವರು ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಉತ್ತರಪ್ರದೇಶದ ಸುಲ್ತಾನ್‌ಪುರದಲ್ಲಿ ಪರಸ್ಪರ ಮುಖಾಮುಖಿಯಾದ ಘಟನೆ ನಡೆದಿದೆ. ಆದಾಗ್ಯೂ ಇಬ್ಬರು ಪರಸ್ಪರ ಮಾತನಾಡಲಿಲ್ಲ.

ಸುಲ್ತಾನ್‌ಪುರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಪರ ಪ್ರಿಯಾಂಕಾ ಗುರುವಾರ ಸಂಜೆ ರೋಡ್‌ ಶೋ ನಡೆಸಿದರು. ಇದೇ ವೇಳೆ ಸುಲ್ತಾನ್‌ಪುರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ಮನೇಕಾ ಗಾಂಧಿ ಅವರು ಎದುರುಗಡೆಯಿಂದ ಬಂದರು. ಈ ಸಂದರ್ಭದಲ್ಲಿ ಭಾರೀ ಸಂಚಾರ ದಟ್ಟಣೆಯಲ್ಲಿ ಸಿಲುಕಿದ ಇಬ್ಬರು ನಾಯಕರು ಒಬ್ಬರಿಗೊಬ್ಬರು ಎದುರು-ಬದುರಾದರೂ, ಮಾತನಾಡಲಿಲ್ಲ. ಮನೇಕಾ ಅವರು ಪ್ರಿಯಾಂಕಾರತ್ತ ನೋಡಲಿಲ್ಲ. ಈ ನಡುವೆ ಪ್ರಿಯಾಂಕಾ ಕೈಬೀಸಿದರು. ಮನೇಕಾ ಅವರತ್ತಲೇ ಪ್ರಿಯಾಂಕಾ ಕೈಬೀಸಿದರು ಎಂದು ಕಾಂಗ್ರೆಸ್ಸಿಗರು ಮಾತನಾಡಿಕೊಂಡರು. ಪೊಲೀಸರು ಬಂದು ದಟ್ಟಣೆ ತೆರವುಗೊಳಿಸಿದರು. ಬಳಿಕ ಮನೇಕಾ ತೆರಳಿದರು.

ತಾವು ಸ್ಪರ್ಧೆ ಮಾಡಿದ ಕ್ಷೇತ್ರದಲ್ಲಿ ಪ್ರಿಯಾಂಕಾ ಪ್ರಚಾರ ಮಾಡುತ್ತಿರುವ ಬಗ್ಗೆ ಪ್ರತಿಕ್ರಿಯಿಸಲು ಮನೇಕಾ ನಿರಾಕರಿಸಿದ್ದಾರೆ. ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ಪ್ರಿಯಾಂಕಾ, ತಾನು ತಮ್ಮ ಪಕ್ಷದ ಅಭ್ಯರ್ಥಿ ಪರ ಪ್ರಚಾರ ಮಾಡಿದ್ದೇನೆಯೇ ಹೊರತು, ಯಾರ ವಿರುದ್ಧವೂ ಅಲ್ಲ ಎಂದಿದ್ದಾರೆ. ಗಾಂಧಿ ಅವರ ಕುಟುಂಬವು ಮನೇಕಾ ಹಾಗೂ ಅವರ ಪುತ್ರ ವರುಣ್‌ ಗಾಂಧಿ ಅವರು ಪ್ರತಿನಿಧಿಸುವ ಕ್ಷೇತ್ರಗಳಲ್ಲಿ ಪ್ರಚಾರ ಕಾರ್ಯವೇ ಕೈಗೊಳ್ಳುತ್ತಿರಲಿಲ್ಲ.

click me!