ಪ್ರಿಯಾಂಕಾ ‘ಗಂಗಾ ಯಾತ್ರೆ’ : 3 ದಿನ ಗಂಗೆಯಲ್ಲಿ 100 ಕಿ.ಮೀ. ಪ್ರಯಾಣ

By Web DeskFirst Published Mar 17, 2019, 12:11 PM IST
Highlights

ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು, ದಿನಗಣನೆ ಆರಂಭವಾಗಿದೆ. ಇದೇ ವೇಳೆ ವಿವಿಧ ಪಕ್ಷಗಳ ಮುಖಂಡರು ಭರ್ಜರಿ ಪ್ರಚಾರದಲ್ಲಿ ತೊಡಗಿದ್ದು, ಪ್ರಿಯಾಂಕ ಗಾಂಧಿ ಕೂಡ ಗಂಗಾಯಾತ್ರೆ ಕೈಗೊಳ್ಳುತ್ತಿದ್ದಾರೆ. 

ನವದೆಹಲಿ: ಗಂಗಾನದಿಯಲ್ಲಿ ಉತ್ತರಪ್ರದೇಶದ ಅಲಹಾಬಾದ್‌ನಿಂದ ವಾರಾಣಸಿಯವರೆಗೆ 100 ಕಿ.ಮೀ. ದೂರವನ್ನು ದೋಣಿಯಲ್ಲಿ ಕ್ರಮಿಸುವ ‘ಗಂಗಾ ಯಾತ್ರೆ’ ಕೈಗೊಳ್ಳಲು ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ನಿರ್ಧರಿಸಿದ್ದಾರೆ. ಈ ಯಾತ್ರೆ ಸೋಮವಾರದಿಂದ ಆರಂಭವಾಗಲಿದ್ದು, ಬುಧವಾರದವರೆಗೆ ನಡೆಯಲಿದೆ. ಮಾರ್ಗ ಮಧ್ಯೆ ನದಿಯ ಅಕ್ಕಪಕ್ಕ ಸಿಗುವ ಎರಡು ಡಜನ್‌ಗೂ ಹೆಚ್ಚು ಹಳ್ಳಿಗಳಿಗೆ ಅವರು ಭೇಟಿ ನೀಡಲಿದ್ದಾರೆ.

ಮುತ್ತಾತ ಜವಾಹರಲಾಲ್‌ ನೆಹರು ಹಾಗೂ ಅಜ್ಜಿ ಇಂದಿರಾಗಾಂಧಿ ಜನಿಸಿದ ಅಲಹಾಬಾದ್‌ನಿಂದ ಪ್ರಧಾನಿ ನರೇಂದ್ರ ಮೋದಿಯವರ ಲೋಕಸಭಾ ಕ್ಷೇತ್ರವಾಗಿರುವ ವಾರಾಣಸಿಗೆ ಪ್ರಿಯಾಂಕಾ ಈ ಯಾತ್ರೆ ಕೈಗೊಳ್ಳುತ್ತಿರುವುದು ವಿಶೇಷ. ಅದಕ್ಕಿಂತ ಮುಖ್ಯವಾಗಿ, ಮೋದಿ ಸರ್ಕಾರದ ಮಹತ್ವಾಕಾಂಕ್ಷಿ ಒಳನಾಡು ಜಲಸಾರಿಗೆ ಯೋಜನೆಯಡಿ ಗಂಗಾನದಿಯಲ್ಲಿ ರೂಪಿಸಿದ ಜಲಮಾರ್ಗದಲ್ಲೇ ಪ್ರಿಯಾಂಕಾ ಸಂಚರಿಸಲಿದ್ದಾರೆ.

ಈ ಯಾತ್ರೆಗೆ ಒಪ್ಪಿಗೆ ನೀಡುವಂತೆ ಉತ್ತರ ಪ್ರದೇಶದ ಕಾಂಗ್ರೆಸ್‌ ಘಟಕ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿದೆ. ಯಾತ್ರೆಯ ವೇಳೆ ಗಂಗಾ ನದಿಯನ್ನು ಕೇವಲ ಧಾರ್ಮಿಕವಾಗಿ ಮಾತ್ರವಲ್ಲ, ತಮ್ಮ ಜೀವನೋಪಾಯಕ್ಕೂ ಅವಲಂಬಿಸಿರುವ ಲಕ್ಷಾಂತರ ಜನರನ್ನು ಪ್ರಿಯಾಂಕಾ ಭೇಟಿ ಮಾಡಲಿದ್ದಾರೆ ಎಂದು ವಕ್ತಾರ ದ್ವಿಜೇಂದ್ರ ತ್ರಿಪಾಠಿ ತಿಳಿಸಿದ್ದಾರೆ.

ಏಕೆ ಈ ಯಾತ್ರೆ?

ಗಂಗಾ ಯಾತ್ರೆಗೆ ಪ್ರಿಯಾಂಕಾ ವಾದ್ರಾ ಮೂರ್ನಾಲ್ಕು ಅಜೆಂಡಾಗಳನ್ನು ಹೊಂದಿದ್ದಾರೆಂದು ಕಾಂಗ್ರೆಸ್‌ನ ಮೂಲಗಳು ಹೇಳುತ್ತವೆ.

1. ತಾಯಿ ಗಂಗೆಯೇ ನನ್ನನ್ನು ವಾರಾಣಸಿಯಿಂದ ಸ್ಪರ್ಧಿಸಲು ಕರೆದಿದ್ದಾಳೆ ಎಂದು ಹೇಳುವ ಮೂಲಕ ಹಿಂದು ಮತಗಳಿಗೆ ಲಗ್ಗೆ ಹಾಕಿದ ಮೋದಿ ಅವರನ್ನು ಅವರದೇ ತಂತ್ರದ ಮೂಲಕ ಎದುರಿಸುವುದು.

2. ಗಂಗಾ ನದಿಯನ್ನು ಸ್ವಚ್ಛ ಮಾಡಿದ್ದೇವೆಂದು ಹೇಳುತ್ತಿರುವ ಮೋದಿ ಮತ್ತು ಯೋಗಿ ಆದಿತ್ಯನಾಥರ ಹೇಳಿಕೆ ಎಷ್ಟುನಿಜ ಎಂಬುದನ್ನು ಪರಿಶೀಲಿಸಿ ಜನರ ಮುಂದಿಡುವುದು.

3. ಹಿಂದುಗಳ ಪವಿತ್ರ ನದಿಯಾದ ಗಂಗೆಯಲ್ಲಿ ಯಾತ್ರೆ ಮಾಡುವ ಮೂಲಕ ವಿಶಿಷ್ಟರೀತಿಯಲ್ಲಿ ತಮ್ಮ ಲೋಕಸಭಾ ಚುನಾವಣೆಯ ಪ್ರಚಾರಕ್ಕೆ ಉತ್ತೇಜನ ನೀಡುವುದು.

4. ಶಿವ ನನಗೆ ಕಾಶಿಯ ದೇವಸ್ಥಾನವನ್ನು ಜೀರ್ಣೋದ್ಧಾರಗೊಳಿಸಲು ಸೂಚಿಸಿದ್ದಾನೆಂದು ಹೇಳಿರುವ ಮೋದಿಯವರಿಗೆ ವಾರಾಣಸಿಯಲ್ಲಿ ಪ್ರಚಾರ ಕೈಗೊಳ್ಳುವ ಮೂಲಕ ಟಾಂಗ್‌ ನೀಡುವುದು.

click me!