ಸೋಲಿಲ್ಲದ ಸರದಾರನ ವಿರುದ್ಧ ಮಾಜಿ ಸಹವರ್ತಿ ಜಾಧವ್ ಬಿಜೆಪಿಯಿಂದ ಕಣಕ್ಕೆ | ಖರ್ಗೆಗೆ ‘ಕೈ’ಕೊಟ್ಟವರ ಕಾಟ ಮೋದಿ ಅಲೆ, ಪಕ್ಷಾಂತರಿಗಳ ಬೆಂಬಲ ನೆಚ್ಚಿಕೊಂಡಿರುವ ಡಾ| ಜಾಧವ್ | 371 ಜೆ ಕೊಡುಗೆಯೇ ಖರ್ಗೆ ಮಂತ್ರ
ಶೇಷಮೂರ್ತಿ ಅವಧಾನಿ, ಕನ್ನಡಪ್ರಭ
ಕಲಬುರಗಿ[ಏ.19]: ಕರ್ನಾಟಕದ ‘ತೊಗರಿ ಕಣಜ’ ಕಲಬುರಗಿ ಎಂದಿದ್ದರೂ ಕಾಂಗ್ರೆಸ್ ಭದ್ರಕೋಟೆ. ಇದುವರೆಗೂ ಇಲ್ಲಿ ನಡೆದಿರುವ 17 ಲೋಕಸಭೆ ಚುನಾವಣೆಗಳಲ್ಲಿ ೧೫ ಬಾರಿ ಕಾಂಗ್ರೆಸ್ ನಿರಾಯಾಸವಾಗಿ ಗೆದ್ದಿದೆ. ಆದರೆ, ಈ ಬಾರಿ ಮಾತ್ರ ಕಾಂಗ್ರೆಸ್‌ಗೆ ತುಸು ಆಯಾಸ ಉಂಟಾಗುವ ಎಲ್ಲಾ ಸಾಧ್ಯತೆಗಳಿವೆ. ಏಕೆಂದರೆ, ಜಿಲ್ಲೆಯ ಜೀವನದಿಗಳಾದ ಭೀಮಾ, ಅಮರ್ಜಾ, ಬೆಣ್ಣೆತೊರಾ, ಕಾಗಿಣಾದಲ್ಲಿ ಸಾಕಷ್ಟು ನೀರು ಹರಿದಂತೆಯೇ ಜಿಲ್ಲೆಯ ರಾಜಕೀಯ ಸನ್ನಿವೇಶ, ಜಾತಿ ಸಮೀಕರಣ ಈ ಬಾರಿ ಸಾಕಷ್ಟು ಬದಲಾಗಿದೆ
ಗೆಲುವಿಗೆ ಪೂರಕವಾಗು ವಂತಹ ಅನೇಕ ಸಂಗತಿಗಳು ಕಳೆದ ೨೦೦೯, ೨೦೧೪ರ ಎರಡೂ ಚುನಾವಣೆಗಳಲ್ಲಿ ಗೋಚರಿಸಿ ಫಲಿತಾಂಶಕ್ಕೂ ಮುನ್ನವೇ ಜನರ ಮಾತಲ್ಲಿ ಡಾ.ಖರ್ಗೆ ಗೆದ್ದಿರುತ್ತಿದ್ದರು. ಈ ಬಾರಿ ಖರ್ಗೆಯನ್ನು ಮಣಿಸಲೇ ಬೇಕೆಂದು ಮಣಿಸಲು ಬಿಜೆಪಿ ಇಲ್ಲಿ ‘ಕೈ’ಗೇ ಆಪರೇಷನ್ ಮಾಡಿದ್ದರಿಂದ ಉಂಟಾಗಿರುವ ರಾಜಕೀಯ ಅಲ್ಲೋಲ- ಕಲ್ಲೋಲ, ತೀವ್ರ ಪೈಪೋಟಿ ಕ್ಷೇತ್ರದಲ್ಲಿ ಹೊಸ ನಮೂನೆ ವಾತಾವರಣ ಹುಟ್ಟುಹಾಕಿದೆ.
ಲೋಕಸಭೆಯಲ್ಲಿ ಕಾಂಗ್ರೆಸ್ ಸಂಸದೀಯ ಗುಂಪಿನ ನಾಯಕ, ಸೋಲಿಲ್ಲದ ಸರದಾರ ಡಾ. ಮಲ್ಲಿಕಾರ್ಜುನ ಖರ್ಗೆ ಕೈ ಹುರಿಯಾಳಾಗಿರುವುದರಿಂದ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿರುವ ಕಲಬುರಗಿಯಲ್ಲಿ ಡಾ. ಉಮೇಶ ಜಾಧವ್ ಬಿಜೆಪಿ ಹುರಿಯಾಳು. ಹೀಗಿದ್ದರೂ ಸಹ ಅಜೇಯ ಖರ್ಗೆ ಮತ್ತು ಮೋದಿ ಅಲೆ ನಡುವೆಯೇ ಇಲ್ಲಿ ‘ಟಕ್ಕರ್’ ಪರಿಸ್ಥಿತಿ ನಿರ್ಮಾಣವಾಗಿರುವುದು ವಿಶೇಷ. ಮೋದಿ ಗಾಳಿ ಜೋರಾಗಿದ್ದ ೨೦೧೪ರಲ್ಲೇ ಖರ್ಗೆ ಕಲಬುರಗಿಯನ್ನು ಬಿಟ್ಟುಕೊಡಲಿಲ್ಲ. ಅಷ್ಟೇ ಅಲ್ಲ, ತಮ್ಮ ಗೆಲುವಿನ ಅಂತರ ಹಿಗ್ಗಿಸಿಕೊಂಡವರು. ಕಳೆದ ಚುನಾವಣೆಗಿಂತಲೂ ಈ ಬಾರಿ ಕ್ಷೇತ್ರದಲ್ಲಿ ಮೊದಿ ಗಾಳಿ ಜೋರಾಗಿ ಬೀಸಿದರೆ ಮಾತ್ರ ಬಿಜೆಪಿಗೆ ಅನುಕೂಲ ಹಾಗೂ ಖರ್ಗೆಗೆ ಕಷ್ಟ. ಇಲ್ಲದೆ ಹೋದಲ್ಲಿ ಖರ್ಗೆ ಪಾರ್ಲಿಮೆಂಟ್ ಗೆಲುವಿನ ಹ್ಯಾಟ್ರಿಕ್ ದಾರಿ ಸರಳ ಎಂಬುದರಲ್ಲಿ ಸಂಶಯವಿಲ್ಲ.
‘ಲಿಂಹಿಂದ’ ಮತಗಳೇ ನಿರ್ಣಾಯಕ
ಲಿಂಗಾಯಿತ, ಹಿಂದುಳಿದ ವರ್ಗ, ದಲಿತ ಮತಗಳೇ ನಿರ್ಣಾಯಕ. ಎಸ್ಸಿ ಮೀಸಲು ಕ್ಷೇತ್ರದಲ್ಲಿ ಲಿಂಗಾಯಿತ ಮತಗಳೇ ಅಧಿಕ, ಪ್ರಬಲ ಕೋಮಿನ ಬೆಂಬಲದ ಜೊತೆಗೇ ಕೋಲಿ ಸಮಾಜದ ಒಲವು ಯಾರು ಗಳಿಸುತ್ತಾರೋ ಅವರೇ ಗೆಲ್ಲುವ ಕುದುರೆಯಾಗೋದು ನಿಶ್ಚಿತ
ಕಾಂಗ್ರೆಸ್ ಪರ ಲಿಂಗಾಯಿತ ಮತಗಳನ್ನು ಪೇರಿಸಲು ಡಾ. ಶರಣಪ್ರಕಾಶ ಪಾಟೀಲ್, ಬಿಆರ್ ಪಾಟೀಲ್, ಡಾ. ಭೀಮಾಶಂಕರ ಬಿಲಗುಂದಿ, ಬಸವರಾಜ ಭೀಮಳ್ಳಿ ಸೇರಿದಂತೆ ಅನೇಕರು ಮುಂದಾದರೆ, ಇತ್ತ ಬಿಜೆಪಿಯಲ್ಲಿ ಶಶಿಲ್ ನಮೋಶಿ, ಮಹಾಂತಗೌಡ ಪಾಟೀಲ್, ಶಾಸಕ ದತ್ತಾತ್ರೇಯ ರೇವೂರ್ ಮೊದಲಾದವರು ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್ ಪ.ಜಾ. ಹಾಗೂ ಅಲ್ಪಸಂಖ್ಯಾತ, ಓಬಿಸಿ ಹಾಗೂ ಲಿಂಗಾಯಿತ ಮತಗಳನ್ನು ನೆಚ್ಚಿದರೆ, ಬಿಜೆಪಿ ಬಂಜಾರಾ, ಕೋಲಿ, ಲಿಂಗಾಯಿತ, ಬ್ರಾಹ್ಮಣರು, ಜೈನ, ಮರಾಠಾ ಮತಗಳನ್ನೇ ನೆಚ್ಚಿಕೊಂಡಿದೆ.
ಎಸ್ಸಿ- ಎಸ್ಟಿ, ಮೈನಾರಿಟಿಯಲ್ಲಿ ಬಿಜೆಪಿ ಅದೆಷ್ಟು ಮತಗಳನ್ನು ತನ್ನ ಬುಟ್ಟಿಗೆ ಸೆಳೆಯುವುದೋ ಅದರ ಮೇಲೆ ಆ ಪಕ್ಷದ ಗೆಲುವು ಅವಲಂಬಿಸಿದೆ. ಒಟ್ಟಾರೆ ೨೦ ಲಕ್ಷ ಮತದಾರರ ಪೈಕಿ ಅಂದಾಜು 4.50 ಲಕ್ಷ ಲಿಂಗಾಯಿತ, ಪಜಾ- 3. 50 ಲಕ್ಷ, ಕುರುಬ- 1.50 ಲಕ್ಷ, ಬಂಜಾರಾ-2.50 ಲಕ್ಷ, ಮುಸ್ಲಿಂ-3 ಲಕ್ಷ, ಕೋಲಿ-2.50 ಲಕ್ಷ, ಬ್ರಾಹ್ಮಣ- 80 ಸಾವಿರ ಸೇರಿದಂತೆ ಇತರೆ ಹಿಂದುಳಿದ ವರ್ಗದ ಮತದಾರರಿದ್ದಾರೆ.
ಕಾಂಗ್ರೆಸ್-ಜೆಡಿಎಸ್ ಬಲ ಹೆಚ್ಚು:
8 ಅಸೆಂಬ್ಲಿ ಕ್ಷೇತ್ರಗಳಲ್ಲಿ ಅಫಜಲ್ಪುರ, ಜೇವರ್ಗಿ, ಕಲಬುರಗಿ (ಉತ್ತರ), ಚಿತ್ತಾಪುರ (ಮೀಸಲು) ಕ್ಷೇತ್ರಗಳಲ್ಲಿ ಕಾಂಗ್ರೆಸ್, ಸೇಡಂ, ಕಲಬುರಗಿ (ದಕ್ಷಿಣ), ಕಲಬುರಗಿ (ಗ್ರಾಮೀಣ) ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು, ಗುರುಮಠಕಲ್‌ನಲ್ಲಿ ಜೆಡಿಎಸ್ ಶಾಸಕರಿದ್ದಾರೆ.
ಪ್ರಗತಿಯೇ ಖರ್ಗೆ ಮಂತ್ರ
ತಮ್ಮ ಸುದೀರ್ಘ 5 ದಶಕದ ರಾಜಕೀಯ ಬದುಕಲ್ಲಿ ೯ ಬಾರಿ ಶಾಸಕರಾಗಿ ೯ ಖಾತೆಗಳ ಸಚಿವರಾಗಿ, ೨ ಬಾರಿ ಸಂಸದರಾಗಿ, ರೇಲ್ವೆ, ಕೇಂದ್ರ ಕಾರ್ಮಿಕ ಸಚಿವರಾಗಿ ಕಲಬುರಗಿ ಪ್ರಗತಿಗೆ ನೀಡಿರೋ ಕೊಡುಗೆಗಳ ಪಟ್ಟಿ ಮಾಡುತ್ತಲೇ ಖರ್ಗೆ ಮತ ಕೇಳುತ್ತಿದ್ದಾರೆ. ‘ಕಲಬುರಗಿಗೆ ಮೈಸೂರು, ಸಿಂಗಪೂರ ಮಾಡಲಾಗದಿದ್ರೂ... ಪರವಾಗಿಲ್ಲ ಅನ್ನೋಥರಾ ಪ್ರಗತಿ ಮಾಡಿದ್ದೇನೆ’ ಎಂದು ಹೇಳುತ್ತ ಜನರ ಮುಂದಿದ್ದಾರೆ.
ಕಳೆದ ಚುನಾವಣೆಯಲ್ಲಿಯೇ ಗೆಲುವಿನ ಕೀಲಿ ಕೈಯಾಗಿದ್ದ ಕಲಂ 371 (ಜೆ) ಅನುಷ್ಠಾನ ಸಂಗತಿ ಈ ಬಾರಿಯೂ ಖರ್ಗೆ ತಮ್ಮ ಸಾಧನೆಯ ಕಿರೀಟ ಎಂದೇ ಬಿಂಬಿಸುತ್ತ ಮತ್ತೊಮ್ಮೆ ಗೆಲುವಿನ ಸೋಪಾನ ಹತ್ತಲು ಹೊರಟಿದ್ದಾರೆ. ಆದರೆ ಮಾಲೀಕಯ್ಯಾ ಗುತ್ತೇದಾರ್, ಡಾ. ಎ.ಬಿ.ಮಾಲಕರೆಡ್ಡಿ, ಬಾಬೂರಾವ್ ಚಿಂಚನ್‌ಸೂರ್ ಸೇರಿದಂತೆ ಹಲವರನ್ನು ಪಕ್ಷದಲ್ಲೇ ಉಳಿಸಿಕೊಳ್ಳಲಾಗದ ಸಂಗತಿ ಈ ಹಿರಿಯ ಕಾಂಗ್ರೆಸ್ಸಿಗನ ವಿಜಯದ ದಾರಿಗೆ ತುಸು ಅಡಚಣೆಯಾಗಿದೆ. ಇವರೆಲ್ಲರೂ ಇಂದು ಬಿಜೆಪಿ ಸೇರಿ ಸೋಲಿಲ್ಲದ ಸರದಾರನಿಗೆ ಸೋಲಿನ ರುಚಿ ತೋರಿಸೋಣವೆಂದು ಜಿದ್ದಿಗೆ ಬಿದ್ದಿದ್ದಾರೆ.
ಇವೆಲ್ಲ ಸವಾಲುಗಳ ನಡುವೆಯೂ ಕಲಂ 371 (ಜೆ), ಇಎಸ್‌ಐಸಿ ಆಸ್ಪತ್ರೆ, ಕೇಂದ್ರೀಯ ವಿವಿ, ಜಯದೇವ ಆಸ್ಪತ್ರೆ, ಕ್ಯಾನ್ಸರ್ ಆಸ್ಪತ್ರೆ ಪುನರುತ್ಥಾನ, ರೇಲ್ವೆ ವಿಭಾಗೀಯ ಕಚೇರಿ ಮುಂಜೂರಾತಿ, ಯಾದಗಿರಿಗೆ ರೇಲ್ವೆ ಕೋಚ್ ಫ್ಯಾಕ್ಟರಿ, ಹೆದ್ದಾರಿ ಯೋಜನೆ ಸೇರಿದಂತೆ ಹಲವಾರು ಪ್ರಗತಿ ಕೆಲಸಗಳನ್ನೇ ಡಾ.ಖರ್ಗೆ ಹೋದಕಡೆಗಳಲೆಲ್ಲಾ ತಾವೇ ಪ್ರಸ್ತಾಪಿಸಿ ಮತಯಾಚನೆಗೆ ಮುಂದಾಗಿದ್ದಾರೆ.
ಆದರೆ ಎಲ್ಲರನ್ನು ಬಿಟ್ಟು ಪುತ್ರ ಪ್ರಿಯಾಂಕ್‌ನನ್ನೇ ಮಂತ್ರಿ ಮಾಡಿದರು, ಖರ್ಗೆಗೆ ಪುತ್ರ ವ್ಯಾಮೋಹ ಎಂಬ ವಿರೋಧಿಗಳ ಟೀಕೆ ಕ್ಷೇತ್ರಾದ್ಯಂತ ಚರ್ಚೆಯಲ್ಲಿದೆ. ಇನ್ನು ಜೆಡಿಎಸ್ ಏಕೈಕ ಶಾಸಕರನ್ನು ಹೊಂದಿದ್ದು, ಗುರುಮಠಕಲ್‌ನ ‘ಖರ್ಗೆ ವಿರೋಧಿ’ ನಾಗನಗೌಡ ಕಂದಕೂರ್ ಬೆಂಬಲ ಅದೆಷ್ಟರಮಟ್ಟಿಗೆ ದೊರಕುವುದೋ ಗೊತ್ತಿಲ್ಲ
ಮೋದಿ ಅಲೆಯೇ ಜಾಧವ್ ಬಲ
ಚಿಂಚೋಳಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಡಾ. ಖರ್ಗೆ ವಿರುದ್ಧ ತೊಡೆ ತಟ್ಟಿರುವ ಡಾ. ಜಾಧವ, ಸಂಪೂರ್ಣವಾಗಿ ಮೋದಿ, ಬಿಜೆಪಿ ಅಲೆಯನ್ನೇ ನಂಬಿದ್ದಾರೆ. ‘ಖರ್ಗೆಯವರಂತೆ ೫ ದಶಕ ರಾಜಕೀಯದಲ್ಲಿಲ್ಲ. ಆದರೆ 6 ವರ್ಷ ರಾಜಕೀಯ ಅನುಭವದಲ್ಲೇ ಚಿಂಚೋಳಿಯಲ್ಲಿ ಪ್ರಗತಿ ಸಾಧಿಸಿದ್ದೇನೆ’ ಎಂಬುದು ಜಾಧವರ ಪ್ರಚಾರ ಬಂಡವಾಳ.
ಅಖಾಡದಲ್ಲಿ 12 ಮಂದಿ ಹುರಿಯಾಳುಗಳು
ಕಾಂಗ್ರೆಸ್‌ನಿಂದ ಡಾ. ಮಲ್ಲಿಕಾರ್ಜುನ ಮಾಪಣ್ಣ ಖರ್ಗೆ, ಬಿಜೆಪಿಯಿಂದ ಡಾ. ಉಮೇಶ್ ಗೋಪಾಲ ಜಾಧವ್, ರಾಜಕುಮಾರ ಗೋಪಿನಾಥ- ಭಾರತೀಯ ಬಹುಜನ ಕ್ರಾಂತಿ ದಳ, ದತ್ತಪ್ಪ ಕೃಷ್ಣಪ್ಪ- ರಾಷ್ಟ್ರೀಯ ಸಮಾಜ ಪಕ್ಷ, ಶರಣಬಸಪ್ಪ ಮಲ್ಲಿಕಾಜಪ್ಪ- ಎಸ್‌ಯುಸಿಐ (ಸಿ), ಶಂಕರ ಲಿಂಬಾಜಿ ಜಾಧವ್- ಭಾರತೀಯ ಪಿಪಲ್ಸ್ ಪಕ್ಷ , ಜಿ. ತಿಮ್ಮಾರಾಜು ಗಂಗಪ್ಪ- ಸ್ವತಂತ್ರ, ಮಹೇಶ್ ಲಂಬಾಣಿ- ಉತ್ತಮ ಪ್ರಜಾಕೀಯ ಪಕ್ಷ, ವಾಸುದೇವರಾವ ಭೀಮರಾವ್- ಬಹುಜನ ಸಮಾಜ ಪಾರ್ಟಿ ಅಭ್ಯರ್ಥಿ ಕಣದಲ್ಲಿದ್ದರೆ, ರಮೇಶ್ ಭೀಮಸಿಂಗ್- ಸ್ವತಂತ್ರ, ಡಾ. ಎಂ.ಪಿ. ದಾರಕೇಶ್ವರಯ್ಯ- ಸ್ವತಂತ್ರ, ವಿಜಯ ಗೋವಿಂದ ಜಾಧವ್- ಸರ್ವ ಜನತಾ ಪಕ್ಷ
2014ರ ಫಲಿತಾಂಶ
ಡಾ. ಮಲ್ಲಿಕಾರ್ಜುನ ಖರ್ಗೆ (ಕಾಂಗ್ರೆಸ್) 5,07,193
ರೇವು ನಾಯಕ ಬೆಳಮಗಿ (ಬಿಜೆಪಿ) 4,32,460
ಮತದಾರರು: 19,20,977| ಪುರುಷ: 9,68,242| ಮಹಿಳೆ: 9,52,733