ಶಾಮನೂರು ಕುಟುಂಬವು ಸ್ಪರ್ಧೆಯಿಂದ ಹಿಂದಕ್ಕೆ| ಹೀಗಾಗಿ ಮಂಜಪ್ಪಗೆ ಕಾಂಗ್ರೆಸ್ ಮಣೆ| ಸಿದ್ದೇಶ್ವರ್ ಓಟಕ್ಕೆ ಮಂಜಪ್ಪ ಬ್ರೇಕ್ ಹಾಕ್ತಾರಾ ಎಂಬ ಬಗ್ಗೆ ಕಾಂಗ್ರೆಸ್ಸಲ್ಲೇ ಜಿಜ್ಞಾಸೆ| ಆದರೆ ಒಬಿಸಿ ಮತ ಕ್ರೋಡೀಕರಣವಾದರೆ ಬಿಜೆಪಿಗೆ ಕಷ್ಟ| ಲಿಂಗಾಯತ-ಕುರುಬರ ಮಧ್ಯೆ 24 ವರ್ಷದ ನಂತರ ಅಖಾಡ
ನಾಗರಾಜ ಎಸ್.ಬಡದಾಳ್, ಕನ್ನಡಪ್ರಭ
ಕ್ಷೇತ್ರ ಸಮೀಕ್ಷೆ: ದಾವಣಗೆರೆ ಲೋಕಸಭಾ ಕ್ಷೇತ್ರ
ದಾವಣಗೆರೆ[ಏ.15]: ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ಹಾಲಿ ಸಂಸದ ಜಿ.ಎಂ.ಸಿದ್ದೇಶ್ವರ್ ಮತ್ತು ಶಾಮನೂರು ಕುಟುಂಬದ ನಡುವ ಮತ್ತೊಮ್ಮೆ ಜಿದ್ದಾಜಿದ್ದಿ ನಡೆಯಲಿದೆ ಎಂಬ ನಿರೀಕ್ಷೆ ಇದೀಗ ಹುಸಿಯಾಗಿರುವುದು ಈ ಬಾರಿಯ ಚುನಾವಣೆಯ ವಿಶೇಷಗಳಲ್ಲಿ ಒಂದು.
ಶಾಮನೂರು ಕುಟುಂಬದ ಸದಸ್ಯರು ಕಣದಲ್ಲಿ ಇದ್ದಿದ್ದರೆ ಅದರ ಚಿತ್ರಣವೇ ಬದಲಾಗುತ್ತಿತ್ತು. ಆದರೆ, ಕೊನೆಯ ಕ್ಷಣದಲ್ಲಿ ಶಾಮನೂರು ಕುಟುಂಬದಿಂದ ಯಾರಿಗೂ ಟಿಕೆಟ್ ಬೇಡ ಎಂದು ಮಾಜಿ ಸಚಿವ ಹಾಗೂ ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿದ ಬಳಿಕ ಜಿಲ್ಲಾಧ್ಯಕ್ಷರಾಗಿದ್ದ ಎಚ್.ಬಿ.ಮಂಜಪ್ಪ ಅವರನ್ನು ಕಣಕ್ಕಿಳಿಸಲಾಯಿತು. ಪರಿಣಾಮ, ಬಿಜೆಪಿಯ ಸಿದ್ದೇಶ್ವರ್ ಅವರ ನಾಲ್ಕನೇ ಬಾರಿ ಗೆಲುವಿಗೆ ಈ ಬಾರಿಯಾದರೂ ಕಾಂಗ್ರೆಸ್ ಅಡ್ಡಿ ಮಾಡಬಲ್ಲದೆ ಎಂಬುದರ ಬಗ್ಗೆ ಆ ಪಕ್ಷದಲ್ಲೇ ಜಿಜ್ಞಾಸೆ ಆರಂಭವಾಗಿದೆ.
ಹಾಗಂತ ಬಿಜೆಪಿಗೆ ಈ ಬಾರಿಯ ಗೆಲುವು ನಿರಾಯಾಸ ಎಂದೂ ಹೇಳುವಂತಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರ ಅಲೆ ಬಲವಾಗಿ ಬೀಸುತ್ತಿರುವುದೇನೊ ನಿಜ. ಕಾಂಗ್ರೆಸ್ಸಿನ ಅಭ್ಯರ್ಥಿ ಕುರುಬ ಸಮುದಾಯಕ್ಕೆ ಸೇರಿದ ಮಂಜಪ್ಪ ಅವರು ವೀರಶೈವ ಲಿಂಗಾಯತ ಸಮುದಾಯಕ್ಕೆ ಸೇರಿದ ಬಿಜೆಪಿಯ ಸಿದ್ದೇಶ್ವರ್ ಅವರನ್ನು ಎದುರಿಸುತ್ತಿದ್ದಾರೆ. ಹಿಂದುಳಿದ ವರ್ಗಗಳ ಮತಗಳೆಲ್ಲವೂ ಕ್ರೋಡೀಕರಣಗೊಂಡಲ್ಲಿ ಮಾತ್ರ ಸಿದ್ದೇಶ್ವರ್ ಅವರನ್ನು ಮಣಿಸಲು ಸಾಧ್ಯ. ಇಲ್ಲವಾದರೆ ಸಿದ್ದೇಶ್ವರ್ ನಾಲ್ಕನೇ ಬಾರಿ ಜಯಭೇರಿ ಬಾರಿಸುವುದು ಕಷ್ಟವಾಗಲಿಕ್ಕಿಲ್ಲ.
ಕಾಂಗ್ರೆಸ್ಸಿನ ಭದ್ರಕೋಟೆಯಾಗಿದ್ದ ದಾವಣಗೆರೆಯಲ್ಲಿ ತೊಂಬತ್ತರ ದಶಕದ ಆರಂಭದಿಂದಲೇ ಟಿಸಿಲೊಡೆದ ಬಿಜೆಪಿಯು ಇಂದು ಆಳವಾಗಿ ಬೇರೂರಿದೆ. ಮತ್ತೊಂದು ಕಡೆ ತನ್ನ ಸಾಂಪ್ರದಾಯಿಕ ಎದುರಾಳಿ ಕಾಂಗ್ರೆಸ್ ಪಾಳಯಕ್ಕೆ ಮಧ್ಯ ಕರ್ನಾಟಕದ ಈ ಜಿಲ್ಲೆಯನ್ನು ಕಬ್ಬಿಣದ ಕಡಲೆಯನ್ನಾಗಿಸಿದೆ. ಕಳೆದ 11 ಚುನಾವಣೆಗಳಲ್ಲಿ 6 ಸಲ ಕಾಂಗ್ರೆಸ್ ಜಯ ದಾಖಲಿಸಿದ್ದರೆ, 5 ಸಲ ಬಿಜೆಪಿ ಗೆದ್ದು ಸಮಬಲದ ಹೋರಾಟ ಕಂಡ ನೆಲವಿದು. ಈಚೆಗೆ ನಡೆದ 6 ಚುನಾವಣೆಗಳಲ್ಲಿ 5ರಲ್ಲಿ ಬಿಜೆಪಿಯೇ ಮೇಲುಗೈ ಸಾಧಿಸಿದೆ. ಅಹಿಂದ-ಲಿಂಗಾಯತರ ಮಧ್ಯೆ ನಡೆಯುತ್ತಿದ್ದ ಚುನಾವಣೆ ಕಳೆದ 6 ಚುನಾವಣೆಗಳಲ್ಲಿ ಪ್ರಬಲ ಲಿಂಗಾಯತ ಜನಾಂಗದ ನಾಯಕರು, ಬೀಗರಾದ ಶಾಮನೂರು ಶಿವಶಂಕರಪ್ಪ-ಜಿ.ಮಲ್ಲಿಕಾರ್ಜುನಪ್ಪ ಮಧ್ಯೆ ಹಾಗೂ ಮಕ್ಕಳ ಮಧ್ಯೆ ನಡೆದಿದ್ದು ಗಮನಾರ್ಹ. ಇಂದು ಬಿಜೆಪಿ ಇಲ್ಲಿ ಆಳವಾಗಿ ಬೇರೂರಿದ್ದು, ಕಾಂಗ್ರೆಸ್ ಪಕ್ಷವು ಕ್ಷೇತ್ರ ಕೈವಶಕ್ಕೆ ಇನ್ನಿಲ್ಲದ ಸಾಹಸಕ್ಕೆ ಮುಂದಾಗಿದೆ.
8 ಕ್ಷೇತ್ರದಲ್ಲಿ 6ರಲ್ಲಿ ಬಿಜೆಪಿ ಪಾರಮ್ಯ
ದಾವಣಗೆರೆ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲೂಕೂ ಸೇರಿದಂತೆ 8 ವಿಧಾನಸಭಾ ಕ್ಷೇತ್ರಗಳು ಒಳಪಡುತ್ತವೆ. ಈ ಕ್ಷೇತ್ರಗಳ ಪೈಕಿ ದಾವಣಗೆರೆ ದಕ್ಷಿಣ, ಹರಿಹರ ಕ್ಷೇತ್ರದ ಮಾತ್ರ ಕಾಂಗ್ರೆಸ್ ಶಾಸಕರಿದ್ದಾರೆ. ದಾವಣಗೆರೆ ಉತ್ತರ, ಮಾಯಕೊಂಡ, ಜಗಳೂರು, ಹರಪನಹಳ್ಳಿ, ಹೊನ್ನಾಳಿ, ಚನ್ನಗಿರಿ ಕ್ಷೇತ್ರದಲ್ಲಿ ಬಿಜೆಪಿ ಶಾಸಕರಿದ್ದಾರೆ.
ಹಿಂದೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ವೇಳೆ ಕಾಂಗ್ರೆಸ್ಸಿನ 7 ಶಾಸಕರು, ಒಬ್ಬ ಜೆಡಿಎಸ್ ಶಾಸಕರಿದ್ದಾಗಲೂ ಬಿಜೆಪಿಯಿಂದ ಜಿ.ಎಂ.ಸಿದ್ದೇಶ್ವರ ಪುನರಾಯ್ಕೆಯಾಗಿ ಹ್ಯಾಟ್ರಿಕ್ ಸಾಧನೆ ಮಾಡಿದ್ದರು. ಬಿಜೆಪಿಯ ಒಬ್ಬ ಶಾಸಕರಿಲ್ಲದಿದ್ದಾಗಲೂ ಮೋದಿ ಅಲೆಯಲ್ಲಿ ಗೆದ್ದರೆಂಬ ಹೆಗ್ಗಳಿಕೆ ಸಿದ್ದೇಶ್ವರ ಅವರಿಗಿದೆ.
ಕಾಂಗ್ರೆಸ್ಸಿನಿಂದ ಅಹಿಂದ ಅಸ್ತ್ರ
ನಾನೂ ಒಲ್ಲೆ, ನೀನೂ ಒಲ್ಲೆ ಎಂಬಂತೆ ಕಾಂಗ್ರೆಸ್ ಪಕ್ಷದ ಸ್ಥಳೀಯ ನಾಯಕರು ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಹಿಂದೆ ಸರಿದರು. ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಈ ಬಾರಿ ಮೈತ್ರಿ ಪಕ್ಷ ಜೆಡಿಎಸ್, ಮಿತ್ರ ಪಕ್ಷಗಳಾದ ಕಮ್ಯುನಿಸ್ಟ್ ಪಕ್ಷ ಸೇರಿದಂತೆ ವಿವಿಧ ಸಂಘಟನೆಗಳ ಬಲವೂ ಇದ್ದು, ಎಸ್.ಎಸ್.ಮಲ್ಲಿಕಾರ್ಜುನ ಗೆಲುವಿಗೆ ಪೂರಕ ವಾತಾವರಣವಿತ್ತು. ಆದರೆ, ಎಸ್.ಎಸ್.ಮಲ್ಲಿಕಾರ್ಜುನ ಕಡೇ ಕ್ಷಣದಲ್ಲಿ ಸ್ಪರ್ಧೆಗೆ ಹಿಂದೇಟು ಹಾಕಿದರು. ಹೈಕಮಾಂಡ್ ಶಾಮನೂರು ಶಿವಶಂಕರಪ್ಪಗೆ ಬಿ ಫಾರಂ ನೀಡಿದರೂ ವಯಸ್ಸು, ಆರೋಗ್ಯದ ಕಾರಣಕ್ಕೆ ಅವರ ಸ್ಪರ್ಧೆಗೆ ಮಕ್ಕಳು ಒಪ್ಪಲಿಲ್ಲ. ಅನಿವಾರ್ಯವಾಗಿ ಹೊಸ ಪೈಲ್ವಾನನ್ನು ಅಖಾಡಕ್ಕೆ ಇಳಿಸಬೇಕಾದ ಅನಿವಾರ್ಯತೆ ಕಾಂಗ್ರೆಸ್ ಹೈಕಮಾಂಡ್ ಮುಂದಿತ್ತು.
ಆಗ ಮಾಜಿ ಮುಖ್ಯಮಂತ್ರಿ ದಿ.ಜೆ.ಎಚ್.ಪಟೇಲರ ಸಹೋದರನ ಪುತ್ರ, ಜಿಲ್ಲಾ ಪಂಚಾಯ್ತಿ ಸದಸ್ಯ ತೇಜಸ್ವಿ ವಿ.ಪಟೇಲ್ಗೆ ಟಿಕೆಟ್ ನೀಡಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್ ಬಳಿ ವಿಪ ಸದಸ್ಯರು, ಮಾಜಿ ಶಾಸಕರು ಒತ್ತಡ ಹೇರಿದ್ದರು. ಯಾವಾಗ ತೇಜಸ್ವಿ ಪಟೇಲ್ ಹೆಸರು ಕೇಳಿ ಬರತೊಡಗಿತೋ ಆಗ ಎಸ್ಸೆಸ್ ಮಲ್ಲಿಕಾರ್ಜುನ ಅವರು ಕುರುಬ ಸಮುದಾಯದ ಮಂಜಪ್ಪ ಅವರನ್ನು ಕಣಕ್ಕಿಳಿಸುವಂತೆ ಮಾಡುವಲ್ಲಿ ಯಶಸ್ವಿಯಾದರು.
ಬಿಜೆಪಿ ಲಿಂಹಿಂದ ಬಲ!
ಸಾಮಾನ್ಯವಾಗಿ ಕಳೆದ 6 ಚುನಾವಣೆಗಳು ಲಿಂಗಾಯತರ ಮಧ್ಯೆಯೇ ನಡೆದಿವೆ. ಅಲ್ಪಸಂಖ್ಯಾತರು, ಹಿಂದುಳಿದವರು, ದಲಿತರ ಮತಗಳ ಪೈಕಿ ಬಹುತೇಕ ಕಾಂಗ್ರೆಸ್ ಪಾಲಾದರೆ, ಬಹುಸಂಖ್ಯಾತ ವೀರಶೈವ ಲಿಂಗಾಯತರು, ಹಿಂದುಳಿದವರು, ದಲಿತರ ಮತಗಳ ಆಧಾರದಲ್ಲಿ ಬಿಜೆಪಿ ಮೇಲುಗೈ ಸಾಧಿಸುತ್ತಾ ಬಂದಿದೆ.
ಕ್ಷೇತ್ರದಲ್ಲಿ ಲೋಕಸಭೆ ಚುನಾವಣೆ ವೇಳೆ ಮಠಮಾನ್ಯಗಳು, ಮಠಾಧೀಶರೂ ಮುಖ್ಯ ಪಾತ್ರ ವಹಿಸುತ್ತಾ ಬಂದಿದ್ದಾರೆಂಬುದರಲ್ಲೂ ಎರಡು ಮಾತಿಲ್ಲ. ವೀರಶೈವ ಲಿಂಗಾಯತ ಮಠಗಳು, ಹಿಂದುಳಿದ ವರ್ಗಗಳು, ದಲಿತ ಸಮುದಾಯದ ವಿವಿಧ ಮಠಗಳ ಪಾತ್ರವೂ ಇಲ್ಲಿ ಮಹತ್ವದ್ದಾಗಿರುತ್ತದೆ. ಪ್ರತಿ ಚುನಾವಣೆಯಲ್ಲೂ ಮಠಗಳಿಗೆ ಅಭ್ಯರ್ಥಿಗಳು, ಮುಖಂಡರು ಎಡತಾಕುತ್ತಾರೆ. ಇದೇನೂ ಹೊಸ ಪರಂಪರೆಯೂ ಅಲ್ಲ. 1996ರ ನಂತರ ಮಠಗಳೂ ಪರೋಕ್ಷವಾಗಿ ರಾಜಕಾರಣಕ್ಕೆ ತಮ್ಮ ಹಸ್ತಗಳನ್ನು ಚಾಚಿದವು. ಅಂದಿನಿಂದ ಇಂದಿನವರೆಗೂ ಇದು ಪ್ರತ್ಯಕ್ಷವಾಗಿಯೋ, ಪರೋಕ್ಷವಾಗಿಯೋ ಮುಂದುವರಿಕುಕೊಂಡೇ ಬರುತ್ತಿದೆ. ಕಳೆದ 24 ವರ್ಷದಿಂದ ಲಿಂಗಾಯತರ ಮಧ್ಯೆ ಇದ್ದ ರಾಜಕೀಯ ಜಿದ್ದಾಜಿದ್ದಿ, ಪೈಪೋಟಿ ಈ ಬಾರಿ ಲಿಂಗಾಯತ ಮತ್ತು ಕುರುಬ ಸಮುದಾಯದ ಅಭ್ಯರ್ಥಿ ಮಧ್ಯೆ ಏರ್ಪಡಲಿದೆ.
ಸದ್ಯದ ಪರಿಸ್ಥಿತಿಯಲ್ಲಿ ಕಾಂಗ್ರೆಸ್ಸಿಗೆ ಮೈತ್ರಿ ಪಕ್ಷವಾಗಿ ಜೆಡಿಎಸ್ ಬೆನ್ನೆಲುಬಾಗಿ ನಿಂತಿದೆ. ಕಳೆದ ಚುನಾವಣೆಗಳಲ್ಲಿ ಕಾಂಗ್ರೆಸ್ಸಿನ ಕೆಲವೇ ಸಾವಿರ ಮತಗಳ ಸೋಲಿಗೆ ಪರೋಕ್ಷವಾಗಿ ಕಾರಣವಾಗಿದ್ದ ಜೆಡಿಎಸ್ ಪಕ್ಷ ಈಗ ಕಾಂಗ್ರೆಸ್ ಪರ ಪ್ರಚಾರಕ್ಕಿಳಿದಿದ್ದು, ಕಮ್ಯುನಿಸ್ಟ್ ಪಕ್ಷವೂ ಕೋಮುವಾದಿ ಪಕ್ಷವನ್ನು ದೂರವಿಡಬೇಕೆಂಬ ಕಾರಣಕ್ಕೆ ಎಚ್.ಬಿ.ಮಂಜಪ್ಪ ಪರ ಪ್ರಚಾರಕ್ಕೆ ಮುಂದಾಗಿದ್ದು, ಕೈ ದಂಡಿನ ಬಲ ಹೆಚ್ಚಿಸಿದೆ. ಅದೇ ರೀತಿ ಬಿಜೆಪಿಗೆ ಮಿತ್ರ ಪಕ್ಷ ಜೆಡಿಯು ಸಾಥ್ ನೀಡಲಿದೆ.
ಲಿಂಗಾಯತ ಮತಗಳೇ ನಿರ್ಣಾಯಕ
ಕ್ಷೇತ್ರದಲ್ಲಿ 4.30 ಲಕ್ಷ ವೀರಶೈವ ಲಿಂಗಾಯತ, 1.45 ಲಕ್ಷ ಕುರುಬ; ಮಾದಿಗ, ಲಂಬಾಣಿ, ಭೋವಿ, ಚಲವಾದಿ ಸೇರಿದಂತೆ 3.50 ಲಕ್ಷದಷ್ಟುಪರಿಶಿಷ್ಟಜಾತಿ, 1.92 ಲಕ್ಷ ಪರಿಶಿಷ್ಟಪಂಗಡ, 1.93 ಲಕ್ಷ ಮುಸ್ಲಿಂ, 40 ಸಾವಿರ ಉಪ್ಪಾರರು, 36 ಸಾವಿರ ಮರಾಠ, 25 ಸಾವಿರ ಯಾದವ, 22 ಸಾವಿರ ವಿಶ್ವಕರ್ಮ, 16 ಸಾವಿರ ನೇಕಾರ, 17 ಸಾವಿರ ರೆಡ್ಡಿ, 20 ಸಾವಿರ ಮಡಿವಾಳ, 9 ಸಾವಿರ ಆರ್ಯವೈಶ್ಯ, 11,500 ಬ್ರಾಹ್ಮಣ, 7 ಸಾವಿರ ಸವಿತಾ ಸಮಾಜ, ಇತರೆ 40 ಸಾವಿರಕ್ಕೂ ಅಧಿಕ ಮತದಾರಿದ್ದಾರೆ.
‘ಅರಿವೇ ಹಾವೇ’ ಕಳೆದ ಸಲ ‘ಕೈ ಕಚ್ಚಿತ್ತು’!
ಕಳೆದ ಚುನಾವಣೆಯಲ್ಲಿ ಬಿಜೆಪಿಯ ಸಿದ್ದೇಶ್ವರ 518894 ಮತಗಳನ್ನು, ಕಾಂಗ್ರೆಸ್ಸಿನ ಎಸ್ಸೆಸ್ ಮಲ್ಲಿಕಾರ್ಜುನ 501287 ಮತಗಳನ್ನು, ಜೆಡಿಎಸ್ನ ಮಹಿಮಾ ಜೆ. ಪಟೇಲ್ 46911 ಮತ ಪಡೆದಿದ್ದಾರೆ. ಒಟ್ಟು ಚಲಾವಣೆಯಾದ ಮತಗಳಲ್ಲಿ ಸಿದ್ದೇಶ್ವರ ಶೇ.46.5 ಮತಗಳನ್ನು, ಮಲ್ಲಿಕಾರ್ಜುನ ಶೇ.45.01 ಮತವನ್ನು ಹಾಗೂ ಮಹಿಮಾ ಪಟೇಲ್ ಶೇ.1.6 ಮತ ಗಳಿಸಿದ್ದರು. ಅರಿವೆ ಹಾವು ಎಂಬುದಾಗಿ ಕಾಂಗ್ರೆಸ್ಸಿಗರಿಂದ ಲೇವಡಿಗೊಳಗಾಗಿದ್ದ ಜೆಡಿಎಸ್ನ ಮಹಿಮಾ ಪಟೇಲ್ ಫಲಿತಾಂಶದ ಮೇಲೆ ಪರಿಣಾಮ ಬೀರಿದ್ದನ್ನು ಇನ್ನೂ ಯಾರೂ ಮರೆತಿಲ್ಲ. ಕಳೆದ ಬಾರಿ ಅರಿವೇ ಹಾವನ್ನೇ ರೊಚ್ಚಿಗೆಬ್ಬಿಸಿ, ಕಚ್ಚಿಸಿಕೊಂಡಿದ್ದ ಕೈಗಳಿಗೆ ಇನ್ನೂ ಗಾಯದ ಕಲೆ, ಕಚ್ಚಿದ್ದ ನೋವು ಇನ್ನೂ ಮರೆತಿಲ್ಲವೆಂಬ ಮಾತು ಸಹ ಇಲ್ಲಿ ಜನರ ಸ್ಮೃತಿ ಪಟಲದಲ್ಲಿದೆ.
ಕಳೆದ ಬಾರಿಯ ಫಲಿತಾಂಶ
ಜಿ.ಎಂ.ಸಿದ್ದೇಶ್ವರ(ಬಿಜೆಪಿ)-518894
ಎಸ್.ಎಸ್.ಮಲ್ಲಿಕಾರ್ಜುನ(ಕಾಂಗ್ರೆಸ್)-501287
ಮಹಿಮಾ ಜೆ.ಪಟೇಲ್(ಜೆಡಿಎಸ್)-46911.
ಅಂತರ-17607.
26 ಅಭ್ಯರ್ಥಿಗಳು ಕಣದಲ್ಲಿ
ಬಿಜೆಪಿಯಿಂದ ಜಿ.ಎಂ.ಸಿದ್ದೇಶ್ವರ, ಕಾಂಗ್ರೆಸ್ನಿಂದ ಎಚ್.ಬಿ.ಮಂಜಪ್ಪ, ಬಿಎಸ್ಪಿಯಿಂದ ಬಿ.ಎಚ್. ಸಿದ್ದಪ್ಪ, ಇಂಡಿಯಾ ಪ್ರಜಾಬಂಧು ಪಕ್ಷದಿಂದ ಎಚ್.ಈಶ್ವರಪ್ಪ, ಉತ್ತಮ ಪ್ರಜಾಕೀಯ ಪಕ್ಷದಿಂದ ಬಿ.ಎ.ಗಣೇಶ್, ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾದ (ಕಮ್ಯುನಿಸ್ಟ್) ಟಿ.ಜೆ.ಮಧು, ಇಂಡಿಯನ್ ಲೇಬರ್ ಪಾರ್ಟಿ(ಅಂಬೇಡ್ಕರ್ ಪುಲೆ)ಯ ಎನ್.ರವೀಂದ್ರ ಹಾಗೂ ಪಕ್ಷೇತರರೂ ಸೇರಿದಂತೆ ಒಟ್ಟು 26 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಒಟ್ಟು ಮತದಾರರು-1611965 | ಪುರುಷ-814413 | ಮಹಿಳೆ-796874 | ಇತರೆ-110 ಇತರೆ |