ಬಿಜೆಪಿ 7 ಕ್ಷೇತ್ರ ಬಾಕಿ ಉಳಿಸಿಕೊಂಡಿದ್ದೇಕೆ?

By Web DeskFirst Published Mar 22, 2019, 12:03 PM IST
Highlights

ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಇದೇ ವೇಳೆ ಬಿಜೆಪಿ ತಮ್ಮ ಮೊದಲ ಪಟ್ಟಿ ಬಿಡುಗಡೆ ಮಾಡಿದೆ. ಒಟ್ಟು 21 ಕ್ಷೇತ್ರಗಳಿಗೆ ಅಭ್ಯರ್ಥಿ ಘೋಷಿಸಿದ್ದು,  7 ಕ್ಷೇತ್ರಗಳನ್ನು ಬಾಕಿ ಉಳಿಸಿಕೊಳ್ಳಲಾಗಿದೆ. 

ಬೆಂಗಳೂರು :  ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ ಮೊದಲ ಹಂತದಲ್ಲಿ 21 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಲಾಗಿದ್ದು, ಚುನಾವಣಾ ರಣತಂತ್ರದ ಭಾಗವಾಗಿ ಇನ್ನೂ ಏಳು ಕ್ಷೇತ್ರಗಳನ್ನು ಬಾಕಿ ಉಳಿಸಿಕೊಂಡಿದೆ.

ಪಕ್ಷದ ಹಾಲಿ ಸಂಸದರ ಪೈಕಿ ಕೊಪ್ಪಳದ ಕರಡಿ ಸಂಗಣ್ಣ ಅವರೊಬ್ಬರನ್ನು ಬಿಟ್ಟು ಇನ್ನುಳಿದವರೆಲ್ಲರಿಗೂ ಟಿಕೆಟ್‌ ನೀಡಲಾಗಿದೆ. ಕರಡಿ ಸಂಗಣ್ಣ ಅವರ ಬದಲು ಬೇರೆಯವರಿಗೆ ನೀಡಲಾಗುತ್ತದೆಯೊ ಅಥವಾ ಹೊಸ ಮುಖಕ್ಕೆ ಮಣೆ ಹಾಕಲಾಗುತ್ತದೆಯೊ ಎಂಬುದು ಸ್ಪಷ್ಟವಾಗಿಲ್ಲ. ಇನ್ನು ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಹಿರಿಯ ನಾಯಕ ದಿವಂಗತ ಅನಂತಕುಮಾರ್‌ ಅವರ ಪತ್ನಿ ತೇಜಸ್ವಿನಿ ಅವರಿಗೆ ಟಿಕೆಟ್‌ ಪಕ್ಕಾ ಎನ್ನಲಾಗಿದ್ದರೂ ಮೊದಲ ಪಟ್ಟಿಯಿಂದ ಅವರ ಹೆಸರನ್ನು ಕೈಬಿಟ್ಟಿರುವುದು ಪಕ್ಷದಲ್ಲಿ ತೀವ್ರ ಅಚ್ಚರಿಗೆ ಕಾರಣವಾಗಿದೆ. ಇನ್ನುಳಿದ ಕ್ಷೇತ್ರಗಳನ್ನು ಅಭ್ಯರ್ಥಿಗಳ ಪೈಪೋಟಿ ಸೇರಿದಂತೆ ತಂತ್ರಗಾರಿಕೆ ಭಾಗವಾಗಿ ಮೊದಲ ಪಟ್ಟಿಯಲ್ಲಿ ಪ್ರಕಟಿಸಿಲ್ಲ ಎಂದು ತಿಳಿದು ಬಂದಿದೆ.

1. ಬೆಂಗಳೂರು ಗ್ರಾಮಾಂತರ

ಮಾಜಿ ಸಚಿವ ಸಿ.ಪಿ. ಯೋಗೇಶ್ವರ್‌ ಪುತ್ರಿ ನಿಶಾ ಅವರಿಗೆ ಟಿಕೆಟ್‌ ನೀಡುವ ಬಗ್ಗೆ ಬಹುತೇಕ ತೀರ್ಮಾನವಾಗಿದೆ. ಆರಂಭದಲ್ಲಿ ಯೋಗೇಶ್ವರ್‌ ಅವರನ್ನೇ ಕಣಕ್ಕಿಳಿಸುವ ಪ್ರಸ್ತಾಪ ಇದ್ದರೂ ಜ್ಯೋತಿಷ್ಯ, ಹೊಸಮುಖ ಎಂಬಿತ್ಯಾದಿ ಕಾರಣಗಳಿಂದಾಗಿ ಪುತ್ರಿಗೆ ಟಿಕೆಟ್‌ ಕೊಡಲು ಒಲವು ವ್ಯಕ್ತವಾಗಿದೆ. ಆದರೆ, ಈ ಕ್ಷೇತ್ರದಿಂದ ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಕಣಕ್ಕಿಳಿಯಬಹುದು ಎಂಬ ವದಂತಿ ಬಲವಾಗಿರುವುದರಿಂದ ಕಾದು ನೋಡಲು ನಿರ್ಧರಿಸಲಾಗಿದೆ.

2. ಕೋಲಾರ

ಈ ಮೀಸಲು ಕ್ಷೇತ್ರದಿಂದ ಪರಿಶಿಷ್ಟಜಾತಿಯ ಬಲಗೈ ಗುಂಪಿಗೆ ಸೇರಿದ ಛಲವಾದಿ ನಾರಾಯಣಸ್ವಾಮಿ ಅವರ ಹೆಸರು ಮುಂಚೂಣಿಯಲ್ಲಿದೆ. ಆದರೆ, ಹಾಲಿ ಕಾಂಗ್ರೆಸ್‌ ಸಂಸದ ಕೆ.ಎಚ್‌.ಮುನಿಯಪ್ಪ ವಿರುದ್ಧ ಅವರ ಪಕ್ಷದಲ್ಲೇ ತೀವ್ರ ವಿರೋಧ ವ್ಯಕ್ತವಾಗುತ್ತಿರುವುದರಿಂದ ಹಾಗೂ ಭೋವಿ ಸಮುದಾಯದವರೊಬ್ಬರಿಗೆ ಅವಕಾಶ ಕಲ್ಪಿಸಬೇಕು ಎಂಬ ಆ ಸಮುದಾಯದ ಮಠಾಧೀಶರ ಒತ್ತಡದಿಂದ ಸೂಕ್ತ ಅಭ್ಯರ್ಥಿಯನ್ನು ಪರಿಶೀಲಿಸಲಾಗುತ್ತಿದೆ.

3. ಬೆಂಗಳೂರು ದಕ್ಷಿಣ

ಅನಂತಕುಮಾರ್‌ ಅವರ ಅಗಲಿಕೆಯಿಂದ ತೆರವಾಗಿರುವ ಈ ಕ್ಷೇತ್ರಕ್ಕೆ ಅವರ ಪತ್ನಿ ತೇಜಸ್ವಿನಿ ಅವರೇ ಅಭ್ಯರ್ಥಿ ಎಂಬುದು ನಿಚ್ಚಳವಾಗಿದ್ದರೂ ಅವರ ಹೆಸರನ್ನು ಮೊದಲ ಪಟ್ಟಿಯಿಂದ ಕೈಬಿಟ್ಟಿರುವುದು ರಾಜ್ಯ ಬಿಜೆಪಿಯಲ್ಲಿ ತೀವ್ರ ಅಚ್ಚರಿ ಮೂಡಿಸಿದೆ. ನಿರ್ದಿಷ್ಟಕಾರಣ ಗೊತ್ತಾಗಿಲ್ಲವಾದರೂ ಎರಡನೇ ಪಟ್ಟಿಯಲ್ಲಿ ಪ್ರಕಟಗೊಳ್ಳುವುದು ಬಹುತೇಕ ಖಚಿತವಾಗಿದೆ.

4. ಮಂಡ್ಯ

ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಸುಮಲತಾ ಅಂಬರೀಷ್‌ ಅವರನ್ನು ಬೆಂಬಲಿಸಬೇಕೆ ಅಥವಾ ರಾಷ್ಟ್ರೀಯ ಪಕ್ಷವಾಗಿ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕೆ ಎಂಬ ಗೊಂದಲ ವರಿಷ್ಠರಲ್ಲಿದೆ.

5. ಚಿಕ್ಕೋಡಿ

ಪಕ್ಷದ ಮುಖಂಡ ಹಾಗೂ ಶಾಸಕಿ ಶಶಿಕಲಾ ಜೊಲ್ಲೆ ಪತಿ ಅಣ್ಣಾ ಸಾಹೇಬ್‌ ಜೊಲ್ಲೆ ಅವರ ಹೆಸರು ಮುಂಚೂಣಿಯಲ್ಲಿದ್ದರೂ ಮಾಜಿ ಸಂಸದ ರಮೇಶ್‌ ಕತ್ತಿ ಅವರೂ ಪ್ರಬಲ ಆಕಾಂಕ್ಷಿಯಾಗಿರುವುದರಿಂದ ಕಾದು ನೋಡಲು ನಿರ್ಧರಿಸಿದೆ.

6. ಕೊಪ್ಪಳ

ಪಕ್ಷದ ಹೈಕಮಾಂಡ್‌ ನಡೆಸಿದ ಆಂತರಿಕ ಸಮೀಕ್ಷೆಯಲ್ಲಿ ಹಾಲಿ ಸಂಸದ ಕರಡಿ ಸಂಗಣ್ಣ ಅವರ ಬಗ್ಗೆ ಹೆಚ್ಚಿನ ಒಲವು ವ್ಯಕ್ತವಾಗಿಲ್ಲ. ಜೊತೆಗೆ ಮಾಜಿ ಶಾಸಕ ಕೆ.ಶರಣಪ್ಪ ಪುತ್ರ ಹಾಗೂ ವೈದ್ಯರಾಗಿರುವ ಡಾ.ಕೆ.ಬಸವರಾಜ ಅವರು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರ ಕುಟುಂಬದ ವೈದ್ಯರೊಂದಿಗಿನ ಸ್ನೇಹದ ಹಿನ್ನೆಲೆಯಲ್ಲಿ ಅವರ ಪರವಾದ ಲಾಬಿಯೂ ಜೋರಾಗಿಯೇ ನಡೆದಿದೆ. ಇಬ್ಬರ ಪೈಕಿ ಒಬ್ಬರಿಗೆ ಅವಕಾಶ ಸಿಗಬಹುದು.

7. ರಾಯಚೂರು

ಮಾಜಿ ಸಚಿವ ಅಮರೇಶ್‌ ನಾಯಕ್‌ ಅವರನ್ನು ಕಣಕ್ಕಿಳಿಸಲು ಒಲವು ವ್ಯಕ್ತವಾಗಿದ್ದರೂ ಮಾಜಿ ಶಾಸಕ ತಿಪ್ಪರಾಜು ಹವಾಲ್ದಾರ್‌ ಅವರನ್ನು ಕಣಕ್ಕಿಳಿಸುವುದು ಸೂಕ್ತ ಎಂಬ ಅಭಿಪ್ರಾಯವನ್ನು ಹಲವು ಮುಖಂಡರು ವ್ಯಕ್ತಪಡಿಸಿರುವುದರಿಂದ ಇಬ್ಬರಲ್ಲಿ ಒಬ್ಬರ ಹೆಸರನ್ನು ಅಂತಿಮಗೊಳಿಸುವ ಸಾಧ್ಯತೆಯಿದೆ.

click me!