ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧ

By Web DeskFirst Published Apr 17, 2019, 10:52 AM IST
Highlights

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧ ಮಾಡಲಾಗಿದೆ. ಒಟ್ಟು 2 ದಿನಗಳ ಕಾಲ ರಾಜ್ಯದಲ್ಲಿ ಮದ್ಯ ಮಾರಾಟ ಸ್ಥಗಿತವಾಗಿದೆ.

ಬೆಂಗಳೂರು :  ಲೋಕಸಭಾ ಚುನಾವಣೆ ಹಿನ್ನೆಲೆ ರಾಜ್ಯದಲ್ಲಿ ಎರಡು ದಿನ ‘ಡ್ರೈ ಡೇ’(ಮದ್ಯ ಮಾರಾಟ ನಿಷೇಧ ದಿನ) ಆಚರಣೆ ಮಾಡುತ್ತಿರುವುದರಿಂದ ಸರ್ಕಾರಕ್ಕೆ ಸುಮಾರು .108 ಕೋಟಿ ತೆರಿಗೆ ಖೋತಾ ಆಗಲಿದೆ ಎಂದು ಅಬಕಾರಿ ಇಲಾಖೆ ಅಂದಾಜಿಸಿದೆ.

ಹೌದು, ನಿರ್ಭಿತ ಮತ್ತು ಆಮಿಷಕ್ಕೆ ಒಳಗಾಗದೆ ಮತದಾರರು ತಮ್ಮ ಇಚ್ಛೆಯ ಅಭ್ಯರ್ಥಿ ಆಯ್ಕೆ ಮಾಡಲೆಂಬ ಕಾರಣಕ್ಕೆ ಚುನಾವಣಾ ಆಯೋಗ ಮದ್ಯ ಮಾರಾಟಕ್ಕೆ ನಿಷೇಧ ವಿಧಿಸಿದೆ. ರಾಜ್ಯದಲ್ಲಿ ಏ.18 ಮತ್ತು ಏ.23ರಂದು ಎರಡು ಹಂತದಲ್ಲಿ ಮತದಾನ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಮತದಾನಕ್ಕೂ ಮುನ್ನ ದಿನ ಮತ್ತು ನಂತರದ ದಿನ ಈ ಡ್ರೈ ಡೇ ಆಚರಣೆ ಜಾರಿಯಲ್ಲಿರುತ್ತದೆ. ಈ ಅವಧಿಯಲ್ಲಿ ಮದ್ಯ ಮಾರಾಟವಿರುವುದಿಲ್ಲ. ಸಾಮಾನ್ಯವಾಗಿ ರಾಜ್ಯದಲ್ಲಿ ನಿತ್ಯ 1.56 ಲಕ್ಷ ಕೇಸ್‌ ಮದ್ಯ, 82 ಸಾವಿರ ಕೇಸ್‌ ಬಿಯರ್‌ ಮಾರಾಟವಾಗಲಿದೆ. ಇದರಿಂದ ಸರ್ಕಾರಕ್ಕೆ .54 ಕೋಟಿ ಆದಾಯ ಬರಲಿದೆ. ಎರಡು ದಿನಗಳ ಕಾಲ ಮದ್ಯ ನಿಷೇಧದಿಂದ ರಾಜ್ಯ ಸರ್ಕಾರದ ಬೊಕ್ಕಸ ಸೇರುವ ಸುಮಾರು .108 ಕೋಟಿ ಆದಾಯ ಖೋತಾ ಆಗಲಿದೆ ಎಂದು ಅಂದಾಜಿಸಲಾಗಿದೆ.

ಶೇ.10.96 ಮಾರಾಟ ಕುಸಿತ:

ಮತದಾರರಿಗೆ ಹೆಂಡ ಹಂಚಿಕೆ ಮಾಡಲಾಗುತ್ತಿದೆ ಎಂದು ರಾಜಕೀಯ ಮುಖಂಡರು ಪರಸ್ಪರ ಆರೋಪಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಆದರೆ, ವಾಸ್ತವ ಅಂಶವೇ ಬೇರೆಯಾಗಿದ್ದು, ಮದ್ಯ ಮಾರಾಟದ ಪ್ರಮಾಣ ಏರಿಕೆ ಆಗಿಲ್ಲ. ಕಳೆದ ವರ್ಷದ ಅಂಕಿ ಅಂಶಗಳಿಗೆ ಹೋಲಿಕೆ ಮಾಡಿದರೆ, ಮಾ.10ರಿಂದ ಏ.14ರವರೆಗೆ ಶೇ.10.96ರಷ್ಟುಮದ್ಯ ಮಾರಾಟದಲ್ಲಿ ಕುಸಿತ ಉಂಟಾಗಿದೆ ಎಂದು ಅಬಕಾರಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಶೇ.10ರಷ್ಟುಹೆಚ್ಚಿನ ಮಾರಾಟದ ಮೇಲೆ ನಿಗಾ:

ಚುನಾವಣೆ ಹಿನ್ನೆಲೆಯಲ್ಲಿ ಅಬಕಾರಿ ಇಲಾಖೆ ರಾಜ್ಯದಲ್ಲಿರುವ ಮದ್ಯ ಮಾರಾಟ ಮಳಿಗೆಗಳಲ್ಲಿ ಸಹಜ ಮಾರಾಟಕ್ಕಿಂತ ಶೇ.10ರಷ್ಟುಹೆಚ್ಚಿನ ಪ್ರಮಾಣದ ಮದ್ಯ ಮಾರಾಟ ಮಾಡುವ ಮಾರಾಟದಂಗಡಿ ಮೇಲೆ ಕ

ಟ್ಟುನಿಟ್ಟಿನ ನಿಗಾ ವಹಿಸಲಾಗಿದ್ದು, ಒಂದು ವೇಳೆ ಅಕ್ರಮ ಚಟುವಟಿಕೆ ನಡೆಸುತ್ತಿರುವುದು ಕಂಡುಬಂದರೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅಬಕಾರಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಇಂದು, ನಾಳೆ ‘ಎಣ್ಣೆ’ ಸಿಗಲ್ಲ

ಏ.18ರಂದು ಚುನಾವಣೆ ನಡೆಯಲಿರುವ ಲೋಕಸಭಾ ಕ್ಷೇತ್ರದಲ್ಲಿ ಏ.16ರ ಸಂಜೆ 6ರಿಂದ ಏ.19ರ ಬೆಳಗ್ಗೆ 6ರವರೆಗೆ, ಇನ್ನು ಏ.23ರಂದು ಮತದಾನ ನಡೆಯಲಿರುವ ಕ್ಷೇತ್ರದಲ್ಲಿ ಏ.21ರ ಸಂಜೆ 6ರಿಂದ ಏ.24ರ ಬೆಳಗ್ಗೆ 6ರ ವರೆಗೆ ಮದ್ಯ ಮಾರಾಟ ಸಂಪೂರ್ಣವಾಗಿ ನಿಷೇಧಿಸಲಾಗುತ್ತದೆ. ಮದ್ಯ ಪ್ರಿಯರಿಗೆ ಈ ದಿನಗಳಲ್ಲಿ ಮದ್ಯ ದೊರೆಯುವುದಿಲ್ಲ.

2.3 ಮದ್ಯ ಸಂಗ್ರಹಕ್ಕೆ ಅವಕಾಶ:

ಅಬಕಾರಿ ಇಲಾಖೆ ನಿಯಮದ ಪ್ರಕಾರ ಪ್ರತಿಯೊಬ್ಬ ವ್ಯಕ್ತಿ 2.3 ಲೀಟರ್‌ ಮದ್ಯ, 18.2 ಲೀಟರ್‌ ಬಿಯರ್‌ ಸಂಗ್ರಹ ಮಾಡಿಕೊಳ್ಳಬಹುದಾಗಿದೆ. ಅದರಂತೆ ಮದ್ಯ ಪ್ರಿಯರು ಡ್ರೈ ಡೇ ದಿನಕ್ಕೂ ಮುನ್ನ ಇಲಾಖೆ ಮಾನದಂಡದ ಪ್ರಮಾಣದಷ್ಟುಮದ್ಯ ಖರೀದಿ ಸಂಗ್ರಹಕ್ಕೆ ಅಡ್ಡಿ ಇರುವುದಿಲ್ಲ. ಅದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹಣೆ ಕಂಡು ಬಂದರೆ, ಅಬಕಾರಿ ಇಲಾಖೆ ಕ್ರಮ ಕೈಗೊಳ್ಳಲಿದೆ.

ಚುನಾವಣೆ ಹಿನ್ನೆಲೆಯಲ್ಲಿ ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಂಡ ಪರಿಣಾಮ ಅಕ್ರಮ ಮದ್ಯ ಸಂಗ್ರಹಣೆಗೆ ಕಡಿವಾಣ ಬಿದ್ದಿದೆ. ಬೇಡಿಕೆಗೆ ಅನುಗುಣವಾಗಿ ಪೂರೈಕೆ ಮಾಡಲಾಗುತ್ತಿದೆ. ಆದರೆ, ಹೆಚ್ಚಿನ ಪ್ರಮಾಣದಲ್ಲಿ ಮದ್ಯ ಮಾರಾಟವಾಗುವ ಕಡೆ ನಿಗಾ ವಹಿಸಲಾಗಿದೆ.

-ರಾಜೇಂದ್ರ ಪ್ರಸಾದ್‌ ಜಂಟಿ ಆಯುಕ್ತರು ಅಬಕಾರಿ ಇಲಾಖೆ.

ವರದಿ :  ವಿಶ್ವನಾಥ ಮಲೇಬೆನ್ನೂರು

click me!