ಇಂತಹ ರಾಜಕಾರಣ ನನಗೆ ಬೇಸರ ತರಿಸಿದೆ : ಸುಮಲತಾ

Published : Mar 24, 2019, 11:52 AM IST
ಇಂತಹ ರಾಜಕಾರಣ ನನಗೆ ಬೇಸರ ತರಿಸಿದೆ : ಸುಮಲತಾ

ಸಾರಾಂಶ

ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು, ಇದೇ ವೇಳೆ ವಿವಿಧ ಪಕ್ಷಗಳು ಭರ್ಜರಿ ಪ್ರಚಾರ ಕಾರ್ಯದಲ್ಲಿ ತೊಡಗಿವೆ. ಮಂಡ್ಯದಲ್ಲಿ ಪ್ರಚಾರದ ವೇಳೆ ಸುಮಲತಾ ಅಂಬರೀಶ್ ದರ್ಶನ್ ಮನೆ ಮೇಲಿನ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಅಸಮಾಧಾನ ಹೊರಹಾಕಿದ್ದಾರೆ. 

ಮಂಡ್ಯ : ನಟ ದರ್ಶನ್ ಅವರ ಬೆಂಗಳೂರು ನಿವಾಸದ ಮೇಲೆ ಕಲ್ಲು ತೂರಾಟ ನಡೆದಿರುವ ಘಟನೆಯನ್ನು ಖಂಡಿಸಿರುವ ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಈ ರೀತಿಯ ಕೃತ್ಯಗಳ ಮೂಲಕ ಹೆದರಿಸುವ ಮಟ್ಟಕ್ಕೆ ರಾಜಕಾರಣ ಮಾಡುವುದು ನನಗೆ ಬೇಸರ ತರಿಸಿದೆ ಎಂದು ತಿಳಿಸಿದ್ದಾರೆ. 

ಶನಿವಾರ ಭಾರತೀನಗರ ಸಮೀಪದ ಬೊಪ್ಪಸಮುದ್ರ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಬೆಂಬಲಕ್ಕೆ ನಿಂತಿರುವ ನಟರಾದ ದರ್ಶನ್ ಮತ್ತು ಯಶ್ ಬಲವನ್ನು ನೋಡಿ ರಾಜಕೀಯ ವಿರೋಧಿಗಳಿಗೆ ನಡುಕ ಉಂಟಾಗಿದೆ. ಹೀಗಾಗಿ ಹೆದರಿಸುವ ಸಲುವಾಗಿ ಉದ್ದೇಶ ಪೂರ್ವಕವಾಗಿಯೇ ಕಲ್ಲು ತೂರಾಟ ನಡೆಸಲಾಗಿದೆ ಎಂದು ಆರೋಪಿಸಿದರು.

ಜಿಲ್ಲೆಯಲ್ಲಿ ನಾನು ಪ್ರಚಾರ ಕೈಗೊಂಡ ಎಲ್ಲಾ ಹಳ್ಳಿಗಳಲ್ಲೂ ಅತ್ಯಂತ ಭರವಸೆ ಮೂಡಿಸುವ ಪ್ರತಿಕ್ರಿಯೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ವಿರೋಧಿಗಳು ನಡುಗಿ ಹೋಗಿದ್ದಾರೆ. ಹೀಗಾಗಿ ಕೆ.ಆರ್.ಪೇಟೆಯ ಸೋಮನಹಳ್ಳಿಯಲ್ಲಿ ದರ್ಶನ್ ಅಭಿಮಾನಿಗಳ ಮೇಲೆ ಪೊಲೀಸರಿಂದ ಲಾಠಿ ಚಾರ್ಜ್ ಮಾಡಿಸಿ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು. ಇಂತಹ ದಾಳಿಗಳಿಂದ ನಾವು ಹೆದರುವುದಿಲ್ಲ. ಅಭಿಮಾನಿಗಳ್ಯಾರೂ ಪ್ರಚೋದನೆಗೆ ಒಳಗಾಗುವ ಅಗತ್ಯವಿಲ್ಲ. ಯಾರು ಏನೇ ಮಾಡಿದರೂ ಫಲಿತಾಂಶದಲ್ಲಿ ಉತ್ತರ ಸಿಗುತ್ತದೆ ಎಂದು ಹೇಳಿದರು. 

ಅನುಕಂಪ ಗಿಟ್ಟಿಸಲು ಪ್ರಯತ್ನ: ಇದೇ ವೇಳೆ ನಮ್ಮ ಕಾರ್ಯಕರ್ತರು, ಅಭಿಮಾನಿಗಳು ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಕಾರಿನ ಮೇಲೆ ಕಲ್ಲು ತೂರಾಟ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ ಸುಮಲತಾ, ಅನುಕಂಪ ಗಿಟ್ಟಿಸಲು ಇಂತಹ ಘಟನೆಗಳನ್ನು ಸೃಷ್ಟಿಸುತ್ತಿದ್ದಾರೆ ಎಂದರು. ಇದು ತಂತ್ರಗಾರಿಕೆ ಹೊರತು ಬೇರೆ ಏನೂ ಅಲ್ಲ. ನಾವು ಯಾರನ್ನೂ ಪ್ರಚೋದನೆ ಮಾಡಿಲ್ಲ. ಗಿಮಿಕ್‌ಗಾಗಿ ವಿರೋಧಿಗಳೇ ಈ ರೀತಿ ಮಾಡಿರಬಹುದು ಎಂದು ತಿಳಿಸಿದರು.

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!