ರಾಜಕೀಯಕ್ಕೆ ಬಂದಿದ್ದೆ ನೋವು ಮರೆಯಲು ಎಂದು ಕಣ್ಣೀರು ಹಾಕಿದ ಸುಮಲತಾ

By Web DeskFirst Published Mar 31, 2019, 10:49 AM IST
Highlights

ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು, ಅಭ್ಯರ್ಥಿಗಳು ಭರ್ಜರಿ ಪ್ರಚಾರ ನಡೆಸುತ್ತಿದ್ದು, ಶನಿವಾರ ಪ್ರಚಾರದ ವೇಳೆ ಸುಮಲತಾ ಅಂಬರೀಶ್ ಕಣ್ಣೀರು ಹಾಕಿದ ಘಟನೆ ನಡೆದಿದೆ. 

ಮಂಡ್ಯ : ನಾನು ಯಾರ ಮುಂದೆಯೂ ಕಣ್ಣೀರು ಹಾಕಲ್ಲ, ಹಾಕಲ್ಲ ಎಂದು ಹೇಳುತ್ತಲೇ ಮಂಡ್ಯ ಲೋಕಸಭಾ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ಸುಮಲತಾ ಅಂಬರೀಶ್ ದುಃಖದಿಂದಲೇ ಪ್ರಚಾರ ನಡೆಸಿದ ಪ್ರಸಂಗ ಶನಿವಾರ ನಡೆಯಿತು.

ಮಂಡ್ಯ ತಾಲೂಕಿನ ಕೀಲಾರ ಗ್ರಾಮದಲ್ಲಿ ಪ್ರಚಾರ ಮಾಡುತ್ತಿದ್ದ ವೇಳೆ ಭಾವೋದ್ವೇಗಕ್ಕೆ ಒಳಗಾದ ಸುಮಲತಾ, ನನಗೆ ಅನುಕಂಪ ಬೇಡ, ಜನರ ಪ್ರೀತಿ ಬೇಕು, ಆ ನೋವನ್ನು ಕಳೆದುಕೊಳ್ಳಲು ನಾನು ಜನರ ಮುಂದೆ ನಿಂತಿದ್ದೇನೆ. ನಾನು ಯಾರ ಮುಂದೆಯೂ ಕಣ್ಣೀರು ಹಾಕಲ್ಲ. ನನಗೆ ನೋವಾದಾಗ ನನ್ನ ಜೊತೆಗಿದ್ದವರು ಮಂಡ್ಯ ಜನರು ಎಂಬುದನ್ನು ನಾನು ಮರೆಯುವುದಿಲ್ಲ ಎಂದು ತಿಳಿಸಿದರು.

ಆದರೆ ಮರುಕ್ಷಣವೇ ಗದ್ಗದಿತರಾದ ಸುಮಲತಾ ಅವರು, ಕುರ್ಚಿಗೆ ಗೌರವ ಕೊಡದೆ, ಮಹಿಳೆ ಎನ್ನುವುದನ್ನು ನೋಡದೆ ಸಿಎಂ, ಸಚಿವರು ಮಾತನಾಡುತ್ತಿದ್ದಾರೆ. ನನ್ನ ಮುಖದಲ್ಲಿ ನೋವಿಲ್ಲ ಅಂತಾರೆ. ನನ್ನ ನೋವು ಮರೆಯಲು ಜನರ ಮುಂದೆ ಬಂದಿದ್ದೇನೆ ಎಂದಾಗ ಅವರ ಕಣ್ಣಾಲಿಗಳು ತೇವಗೊಂಡವು. 

ಮಂಡ್ಯ ಜನರ ಜೊತೆ ನಾನು ಇರುತ್ತೇನೆ ಎಂಬ ವಿಶ್ವಾಸದಿಂದ ಕಾಂಗ್ರೆಸ್ ಕಾರ್ಯಕರ್ತರು ಬಾವುಟ ಹಿಡಿದು ನನ್ನ ಮುಂದೆ ಬಂದಿದ್ದಾರೆ. ರೈತ ಸಂಘ, ಕಾಂಗ್ರೆಸ್, ಬಿಜೆಪಿ ಮೂರು ಶಕ್ತಿ ನನ್ನ ಜೊತೆ ಇದೆ. ಇಂತಹ ಬೆಂಬಲ ದೇಶದಲ್ಲಿ ಯಾರಿಗೂ ಸಿಕ್ಕಿದೆ ಹೇಳಿ ಎಂದು ಪ್ರಶ್ನೆ ಮಾಡಿದ ಅವರು, ಇಂದು ಅಂಬರೀಶ್ ಇಲ್ಲ. ನಾನು ಸ್ಪರ್ಧೆ ಮಾಡುತ್ತಿದ್ದೇನೆ ಎನ್ನುವ ಒಂದು ಕಾರಣಕ್ಕೆ ನನ್ನ ಬಗ್ಗೆ ಮಾತನಾಡುತ್ತಾರೆ. ಅದಕ್ಕೆ ಜನರೇ ಉತ್ತರ ಕೊಡುತ್ತಾರೆ ಎಂದರು. 

ನನ್ನ ಹೆಸರಿನ ಮೂರು ಜನರನ್ನು ಅಭ್ಯರ್ಥಿಯನ್ನಾಗಿ ಹಾಕಿದ್ದಾರೆ. ಇನ್ನು ಏನು ಕುತಂತ್ರ ಮಾಡುತ್ತಾರೋ ಮಾಡಲಿ. ಅಂಬರೀಶ್ ಬಗ್ಗೆ ಬಾಯಿಗೆ ಬಂದಂತೆ ಮಾತನಾಡ್ತಾರೆ. ಈಗ ಅಧಿಕಾರದಲ್ಲಿರುವವರು ನನ್ನ ಬಗ್ಗೆ ಮಾತನಾಡುತ್ತಾರೆ. ಮಹಿಳೆಯರು ಇದನ್ನ ಒಪ್ಪುತ್ತಾರೆಯೇ? ಎಂದರು.

click me!