ಬೆಂಗಳೂರು ಉತ್ತರದಿಂದ ಕಾಂಗ್ರೆಸ್ ನಾಯಕ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧೆ?

Published : Mar 24, 2019, 08:57 AM IST
ಬೆಂಗಳೂರು ಉತ್ತರದಿಂದ ಕಾಂಗ್ರೆಸ್ ನಾಯಕ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧೆ?

ಸಾರಾಂಶ

ಉಡುಪಿ ಚಿಕ್ಕಮಗಳೂರು ಕ್ಷೇತ್ರಕ್ಕೆ ಕಾಂಗ್ರೆಸ್ ನಾಯಕ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಿರುವ ಬೆನ್ನಲ್ಲೇ ಇದೀಗ ಮತ್ತೊಂದು ಕ್ಷೇತ್ರಕ್ಕೂ ಇದೇ ತಂತ್ರ ಅನುಸರಿಸುವ ಸಾಧ್ಯತೆ ಇದೆ. 

ಬೆಂಗಳೂರು :  ಪ್ರಮೋದ್‌ ಮಧ್ವರಾಜ್‌ (ಉಡುಪಿ-ಚಿಕ್ಕಮಗಳೂರು) ನಂತರ ಕಾಂಗ್ರೆಸ್‌ನ ಮತ್ತೊಬ್ಬ ನಾಯಕರಾದ ಬಿ.ಎಲ್‌. ಶಂಕರ್‌ ಜೆಡಿಎಸ್‌ ಚಿಹ್ನೆ ಮೇಲೆ ಲೋಕಸಭಾ ಚುನಾವಣೆ ಎದುರಿಸುವ ಸಾಧ್ಯತೆಯಿದ್ದು, ಈ ಬಗ್ಗೆ ಭಾನುವಾರ ನಡೆಯಲಿರುವ ಕಾಂಗ್ರೆಸ್‌ ಶಾಸಕರು ಹಾಗೂ ಕೆಪಿಸಿಸಿ ಅಧ್ಯಕ್ಷರ ಸಭೆಯ ನಂತರ ಅಂತಿಮ ತೀರ್ಮಾನ ಹೊರಬೀಳುವ ನಿರೀಕ್ಷೆಯಿದೆ.

ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ದೇವೇಗೌಡರು ಸ್ಪರ್ಧಿಸುವುದಿಲ್ಲ ಎಂದು ಖಚಿತವಾದ ನಂತರ ಈ ಕ್ಷೇತ್ರವನ್ನು ತನಗೆ ಮರಳಿಸುವಂತೆ ಕಾಂಗ್ರೆಸ್‌ ಕೋರಿತ್ತು ಎನ್ನಲಾಗಿದೆ. ಕಾಂಗ್ರೆಸ್‌ನ ಐವರು ಶಾಸಕರಿರುವ ಈ ಕ್ಷೇತ್ರದಲ್ಲಿ ದೇವೇಗೌಡರು ಸ್ಪರ್ಧಿಸುತ್ತಾರೆ ಎಂಬ ಏಕೈಕ ಕಾರಣಕ್ಕೆ ಬೆಂಗಳೂರು ಉತ್ತರ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡಲು ನಿರ್ಧರಿಸಲಾಗಿತ್ತು. ದೇವೇಗೌಡರು ನಿಲ್ಲುವುದಿಲ್ಲ ಎನ್ನುವುದಾದರೆ ಈ ಕ್ಷೇತ್ರವನ್ನು ನಮಗೆ ಬಿಟ್ಟುಕೊಡಿ ಎಂಬ ವಾದವನ್ನು ಕಾಂಗ್ರೆಸ್‌ ಮಂಡಿಸಿತ್ತು ಎನ್ನಲಾಗಿದೆ.

ಆದರೆ, ಕ್ಷೇತ್ರ ಹಂಚಿಕೆ ಮುಗಿದ ಅಧ್ಯಾಯವಾಗಿದೆ. ಈ ಹಂತದಲ್ಲಿ ಯಾವುದೇ ಕ್ಷೇತ್ರವನ್ನು ಹಿಂತಿರುಗಿಸಲಾಗದು. ಆದರೆ, ಕ್ಷೇತ್ರದಲ್ಲಿ ಕಾಂಗ್ರೆಸ್‌ ಶಕ್ತಿ ಹೆಚ್ಚಿರುವುದರಿಂದ ನಿಮ್ಮ ಪಕ್ಷದ ನಾಯಕರೇ ಜೆಡಿಎಸ್‌ ಚಿಹ್ನೆಯಿಂದ ಸ್ಪರ್ಧಿಸಲಿ ಎಂಬ ಪ್ರಸ್ತಾಪವಿಟ್ಟಿದ್ದು, ಈ ಹಿನ್ನೆಲೆಯಲ್ಲಿ ಬಿ.ಎಲ್‌. ಶಂಕರ್‌ ಅವರ ಹೆಸರು ಮುನ್ನೆಲೆಗೆ ಬಂದಿತು ಎನ್ನಲಾಗಿದೆ.

ಈ ಬಗ್ಗೆ ಕಾಂಗ್ರೆಸ್‌ ನಾಯಕರು ಭಾನುವಾರ ಸಭೆ ನಡೆಸಲಿದ್ದು, ಈ ಸಭೆಯಲ್ಲಿ ಜೆಡಿಎಸ್‌ ನೀಡಿರುವ ಪ್ರಸ್ತಾಪದ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮೂಲಗಳು ಹೇಳಿವೆ. ಒಂದು ವೇಳೆ ಕಾಂಗ್ರೆಸ್‌ ಪಕ್ಷವು ಬಿ.ಎಲ್‌. ಶಂಕರ್‌ ಅವರನ್ನು ಜೆಡಿಎಸ್‌ನಿಂದ ಕಣಕ್ಕೆ ಇಳಿಸಲು ಒಪ್ಪದಿದ್ದರೆ, ಆಗ ಜೆಡಿಎಸ್‌ ಶಾಸಕ ಗೋಪಾಲಯ್ಯ ಅವರಿಗೆ ಕಣಕ್ಕೆ ಇಳಿಯಲು ಸೂಚಿಸಬಹುದು ಎಂದು ತಿಳಿದು ಬಂದಿದೆ.

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!