ಕಲಬುರಗಿ ಲೋಕಸಭಾ ಕ್ಷೇತ್ರದ ಉಸ್ತುವಾರಿ ಹೊತ್ತಿರುವ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ, ವಿಧಾನಪರಿಷತ್ ಸದಸ್ಯ ರವಿಕುಮಾರ್ ಅವರು ಪೊಲೀಸರ ವ ವಿರುದ್ಧ ಗಂಭೀರ ಆರೋಪಗಳನ್ನ ಮಾಡಿದ್ದಾರೆ.
ಬೆಂಗಳೂರು,[ಏ.22]: ಕಲಬುರಗಿಯಲ್ಲಿ ಈ ಬಾರಿ ಬಿಜೆಪಿ ಅಭ್ಯರ್ಥಿ ಉಮೇಶ್ ಜಾದವ್ ಅವರು 2 ಲಕ್ಷಕ್ಕಿಂತ ಅಧಿಕ ಮತಗಳಿಂದ ಗೆಲ್ಲುವುದು ನಿಶ್ಚಿತ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದುವರಗೆ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡೇ ಗೆಲ್ಲುತ್ತಿದ್ದ ಮಲ್ಲಿಕಾರ್ಜುನ ಖರ್ಗೆ ಸೋಲುತ್ತಾರೆ. ಹಾಗಾಗಿಯೇ ಮಲ್ಲಿಕಾರ್ಜುನ ಖರ್ಗೆ ಹಾಗೂ ಅವರ ಪುತ್ರ ಪ್ರಿಯಾಂಕ ಖರ್ಗೆ ವಾಮ ಮಾರ್ಗಗಳನ್ನು ಹಿಡಿದಿದ್ದಾರೆ.
ಖರ್ಗೆಯವರಿಗೆ ಪೊಲೀಸರ ಬೆಂಬಲವಿದ್ದು, ಬೆಂಗಳೂರಲ್ಲಿ ಡಿಸಿಪಿ ಆಗಿರುವ ಶಶಿಕುಮಾರ್ ಕಲಬುರಗಿನಲ್ಲಿ ಖರ್ಗೆಯವರ ಬೆನ್ನ ಹಿಂದೆ ನಿಂತಿದ್ದಾರೆ. ಅಷ್ಟೇ ಅಲ್ಲದೇ ಪೊಲೀಸರ ವಾಹನಗಳಲ್ಲೇ ಹಣ ಹೆಂಡ ಸಾಗಾಟವಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದರು.
ವಾಡಿ ಚಿತ್ತಾಪುರಗಳಲ್ಲಂತೂ ಅಲ್ಲಿನ ಪಿಎಸ್ ಐ ಗಳು ಕಾಂಗ್ರೆಸ್ ಕಾರ್ಯಕರ್ತರಂತೆ ದುಡಿಯುತ್ತಿದ್ದಾರೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ 100 ಕೋಟಿ ರೂ ಖರ್ಚು ಮಾಡುತ್ತಿದೆ.ಈ ಸಂಬಂಧ ಚುನಾವಣಾ ಆಯೋಗಕ್ಕೆ ದೂರು ಕೊಟ್ಟಿದ್ದೇವೆ ಎಂದು ಹೇಳಿದರು.
ಈ ಸರ್ಕಾರದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಶಾಸಕರು ಚುನಾವಣೆ ಮುಗಿಯುವುದನ್ನೇ ಕಾಯುತ್ತಿದ್ದಾರೆ. ಚುನಾವಣೆ ಮುಗಿಯುತ್ತಿದ್ದಂತೆಯೇ ಮೈತ್ರಿ ಸರ್ಕಾರ ಬಿದ್ದು ಹೋಗಿ,ಬಿಜೆಪಿ ಸರ್ಕಾರ ಬರುತ್ತದೆ ಎಂದು ಬಾಂಬ್ ಸಿಡಿಸಿದರು.