ಹೈಕದಲ್ಲಿ ಜಾರಕಿಹೊಳಿ ಬೀಗರ ಹವಾ!

By Web DeskFirst Published Apr 10, 2019, 9:29 AM IST
Highlights

ಹೈಕದಲ್ಲಿ ಜಾರಕಿಹೊಳಿ ಬೀಗರ ಹವಾ! ರಾಯಚೂರು ಸಂಸದ, ಕಾಂಗ್ರೆಸ್‌ ಅಭ್ಯರ್ಥಿ ಬಿ.ವಿ.ನಾಯಕ್‌ ಬಳ್ಳಾರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವೈ.ದೇವೇಂದ್ರಪ್ಪ |  ಇಬ್ಬರೂ ಗೋಕಾಕ ಜಾರಕಿಹೊಳಿ ಕುಟುಂಬದ ಬೀಗರು | ಗಣಿನಾಡು ವಶಕ್ಕೆ ಜಾರಕಿಹೊಳಿ ಸೋದರರ ಲಗ್ಗೆ | ಜಾರಕಿಹೊಳಿ ಬೀಗರಾಗಲಿರುವ ಶ್ರೀರಾಮುಲು ಇಕ್ಕಟ್ಟಿನಲ್ಲಿ
 

ಹುಬ್ಬಳ್ಳಿ (ಏ. 10):  ಹಿಂದೆಂದಿಗಿಂತಲೂ ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ‘ಕುಟುಂಬ ರಾಜಕಾರಣ’ ಢಾಳಾಗಿ ಕಾಣಿಸಿಕೊಂಡಿದ್ದು, ಹೈದ್ರಾಬಾದ್‌ ಕರ್ನಾಟಕದಲ್ಲೀಗ ‘ಜಾರಕಿಹೊಳಿ ಬೀಗರ ಹವಾ’ ಬಲು ಜೋರಾಗಿ ಕೇಳಿ ಬರುತ್ತಿದೆ. ರಾಯಚೂರು ಮತ್ತು ಬಳ್ಳಾರಿ ಲೋಕಸಭಾ ಕಣದಲ್ಲಿರುವ ಇಬ್ಬರು ಅಭ್ಯರ್ಥಿಗಳು ವಿಭಿನ್ನ ಕಾರಣಕ್ಕಾಗಿ ಗಮನ ಸೆಳೆದಿದ್ದು, ಕಾಂಗ್ರೆಸ್‌ ಮತ್ತು ಬಿಜೆಪಿಗೆ ತಲೆನೋವಾಗಿ ಪರಿಣಮಿಸಿದೆ.

'ಚೌಕೀದಾರ್ ಅಲ್ಲ ಶೋಕಿದಾರ್, ಅಧಿಕಾರಕ್ಕೆ ಬಂದರೆ ಹಗರಣಗಳ ತನಿಖೆ'

ರಾಯಚೂರು ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ, ಹಾಲಿ ಸಂಸದ ಬಿ.ವಿ.ನಾಯಕ್‌, ಅರಣ್ಯ ಸಚಿವ ಸತೀಶ್‌ ಜಾರಕಿಹೊಳಿ ಸೋದರಿ ಲಕ್ಷ್ಮೇ ಅವರ ಪತಿ. ನಾಯಕ್‌ ತಂದೆ ಎ.ವೆಂಕಟೇಶ್‌ ನಾಯಕ್‌ ಇದೇ ಕ್ಷೇತ್ರದಲ್ಲಿ ನಾಲ್ಕು ಬಾರಿ ಗೆಲುವು ಸಾಧಿಸಿದವರು. ಈಗ ಬಿಜೆಪಿ ಅಭ್ಯರ್ಥಿಯಾಗಿ ರಾಜಾ ಅಮರೇಶ್ವರ ನಾಯಕ್‌ ಎದುರಾಳಿಯಾಗಿದ್ದರಿಂದ ಇದು ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ.

ಇನ್ನೊಂದೆಡೆ ಬಳ್ಳಾರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವೈ.ದೇವೇಂದ್ರಪ್ಪ ಕೂಡ ಜಾರಕಿಹೊಳಿಗೆ ಬೀಗರು. ಇವರು ಬೆಳಗಾವಿ ಅಬಕಾರಿ ಇಲಾಖೆಯ ಪ್ರಾದೇಶಿಕ ಜಂಟಿ ಆಯುಕ್ತ ಡಾ.ವೈ.ಮಂಜುನಾಥ ಅವರ ತಂದೆ. ಡಾ.ಮಂಜುನಾಥ ಪತ್ನಿ ಮಹಾದೇವಿ ಅವರು ಜಾರಕಿಹೊಳಿ ಅವರ ಇನ್ನೊಬ್ಬ ಸೋದರಿ. ಬಳ್ಳಾರಿ ಕ್ಷೇತ್ರಕ್ಕೆ ಲಖನ್‌ ಜಾರಕಿಹೊಳಿ ಬಿಜೆಪಿ ಅಭ್ಯರ್ಥಿಯಾಗಲಿದ್ದಾರೆ ಎನ್ನುವ ದೊಡ್ಡ ಸುದ್ದಿ ಸುಳ್ಳಾಗಿ ಅವರ ಬೀಗರು ಅರಸಿಕೆರೆಯ ದೇವೇಂದ್ರಪ್ಪ ಕಣಕ್ಕಿಳಿದಿದ್ದಾರೆ.

‘ವಾಯುದಾಳಿ ಯೋಧರಿಗೆ’ ನಿಮ್ಮ ಮೊದಲ ಮತ: ಮೋದಿ ಮನವಿ

ಬಿ.ವಿ.ನಾಯಕ್‌ ಹಾಗೂ ದೇವೇಂದ್ರಪ್ಪ ಇವರ ಬೆನ್ನಿಗೆ ನಿಲ್ಲುವುದೂ ಜಾರಕಿಹೊಳಿ ಸೋದರರಿಗೆ ಅನಿವಾರ್ಯವಾಗಿದೆ. ಜಾರಕಿಹೊಳಿ ಸಹೋದರರಲ್ಲಿ ರಮೇಶ್‌, ಸತೀಶ್‌, ಲಖನ್‌ ಕಾಂಗ್ರೆಸ್ಸಿನಲ್ಲಿದ್ದರೆ, ಬಾಲಚಂದ್ರ ಹಾಲಿ ಬಿಜೆಪಿ ಶಾಸಕ. ಒಬ್ಬ ಬೀಗ ಕಾಂಗ್ರೆಸ್‌, ಇನ್ನೊಬ್ಬ ಬೀಗ ಬಿಜೆಪಿ ಅಭ್ಯರ್ಥಿ. ಇಲ್ಲಿ ಜಾರಕಿಹೊಳಿ ಸೋದರರ ನಿಲುವು ಅತ್ಯಂತ ಕುತೂಹಲ ಮೂಡಿಸಿದೆ.

ಗಣಿನಾಡಿನ ಮೇಲೆ ಹಿಡಿತಕ್ಕೆ ಯತ್ನ?:

ಗಡಿನಾಡು ಬೆಳಗಾವಿಯಲ್ಲಿ ತಮ್ಮ ರಾಜಕೀಯ ಕಬಂದ ಬಾಹುಗಳನ್ನು ಚಾಚಿರುವ ಜಾರಕಿಹೊಳಿ ಸೋದರರು ಇದೀಗ ಗಣಿನಾಡು ಬಳ್ಳಾರಿಯನ್ನು ಕೈವಶ ಮಾಡಿಕೊಳ್ಳುವ ಮೊದಲ ಹೆಜ್ಜೆಯೇ ವೈ.ದೇವೇಂದ್ರಪ್ಪ ಸ್ಪರ್ಧೆ ಎನ್ನಲಾಗುತ್ತಿದೆ. ಕಾಂಗ್ರೆಸ್‌ ಶಾಸಕರಾಗಿಯೂ ರಾಜ್ಯ ಮುಖಂಡರೊಂದಿಗೆ ಮುನಿಸಿಕೊಂಡಿರುವ ರಮೇಶ್‌ ಜಾರಕಿಹೊಳಿ ವೈ.ದೇವೇಂದ್ರಪ್ಪ ಅವರಿಗೆ ಬಿಜೆಪಿ ಟಿಕೆಟ್‌ ಕೊಡಿಸುವಲ್ಲಿ ದೊಡ್ಡ ಪಾತ್ರ ವಹಿಸಿದ್ದಾರೆ ಎನ್ನುವುದು ಜನಜನಿತ. ಇಷ್ಟರಲ್ಲಿಯೇ ಬಿಜೆಪಿ ಪ್ರಭಾವಿ ನಾಯಕ ಬಿ.ಶ್ರೀರಾಮುಲು ಅವರೊಂದಿಗೆ ರಮೇಶ್‌ ಬೀಗತನಕ್ಕೆ ಮುಂದಾಗಿದ್ದರಿಂದ ಚುನಾವಣಾ ಅಖಾಡದಲ್ಲಿ ದೇವೇಂದ್ರಪ್ಪ ಅವರ ಜೋಶ್‌ ಕಿಕ್ಕೇರಿಸಿದೆ.

ಇಕ್ಕಟ್ಟಿನಲ್ಲಿ ಶ್ರೀರಾಮುಲು

ಲೋಕಸಭೆಯಿಂದ ವಿಧಾನಸಭೆಗೆ ಬಂದ ಶ್ರೀರಾಮುಲು ಅವರಿಗೆ ಬಳ್ಳಾರಿ ಉಪಚುನಾವಣೆಯಲ್ಲಿ ಸೋದರಿ ಜೆ.ಶಾಂತಾ ಅವರನ್ನು ಗೆಲ್ಲಿಸಲು ಆಗಲಿಲ್ಲ. ಮೊಳಕಾಲ್ಮೂರು ಕ್ಷೇತ್ರದ ಶಾಸಕರಾಗಿದ್ದರಿಂದ ಬಳ್ಳಾರಿ ರಾಜಕೀಯದಿಂದ ಹೊರಗಿದ್ದಾರೆ. ಈ ಚುನಾವಣೆಯಲ್ಲಿ ಸೋದರಿ ಶಾಂತಾಗೆ ಮತ್ತೆ ಬಳ್ಳಾರಿ ಟಿಕೆಟ್‌ ಕೇಳಿದ್ದರೂ ಬಿಜೆಪಿ ನೀಡಲಿಲ್ಲ. ಅಳಿಯ ಸುರೇಶ್‌ ಬಾಬು ಸೋಲುಂಡಿದ್ದಾರೆ. ರಾಯಚೂರು ಸಂಸದರಾಗಿದ್ದ ಫಕ್ಕೀರಪ್ಪ ರಾಜಕೀಯದಿಂದ ದೂರವಾದಂತಿದೆ.

ಸೋಮಶೇಖರ ರೆಡ್ಡಿ ತಮ್ಮಷ್ಟಕ್ಕೆ ತಾವಿರುತ್ತಾರೆ. ಇನ್ನು ಜನಾರ್ದನ ರಡ್ಡಿ ಆಟ ಮೊದಲಿನ ಹಾಗೆ ನಡೆಯುತ್ತಿಲ್ಲ. ಇಂಥ ಸಂದಿಗ್ದ ಸ್ಥಿತಿಯಲ್ಲಿ ರಮೇಶ್‌ ಜಾರಕಿಹೊಳಿ ಅಣತಿಯಂತೆ ಬಿಜೆಪಿ ದೇವೇಂದ್ರಪ್ಪ ಅವರಿಗೆ ತನ್ನ ಟಿಕೆಟ್‌ ನೀಡಿದೆ. ಇದು ನಿಜಕ್ಕೂ ಶ್ರೀರಾಮುಲು ಅವರನ್ನು ಇಕ್ಕಟ್ಟಿಗೆ ಸಿಲುಕಿಸಿದೆ ಮತ್ತು ಅಸ್ತಿತ್ವದ ಪ್ರಶ್ನೆಯಾಗಿ ಕಾಡುತ್ತಿದೆ. ಅದರಂತೆ ಸಚಿವ ಸತೀಶ್‌ ಜಾರಕಿಹೊಳಿ ನಂಬಿ ಪುನಃ ಕಣದಲ್ಲಿರುವ ಕಾಂಗ್ರೆಸ್‌ ಅಭ್ಯರ್ಥಿ, ಸಂಸದ ವಿ.ಎಸ್‌.ಉಗ್ರಪ್ಪ ಅವರಿಗೆ ಈ ಬೀಗರ ಭಯ ಶುರುವಾಗಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

- ಮಲ್ಲಿಕಾರ್ಜುನ ಸಿದ್ದಣ್ಣವರ

click me!