ಪ್ರಜ್ವಲ್‌ ವಿರುದ್ಧ ಪ್ರತಿಷ್ಠೆಗೆ ಸ್ಪರ್ಧಿಸಿಲ್ಲ ಎಂದ ನಿಖಿಲ್‌

By Web DeskFirst Published Mar 14, 2019, 10:53 AM IST
Highlights

ಲೋಕಸಭಾ ಚುನಾವಣೆಗೆ ದಿನಗಣನೆಗೆ ಆರಂಭವಾಗಿದೆ. ಇದೇ ವೇಳೆ ಜೆಡಿಎಸ್ ನಿಂದ ಇಬ್ಬರು ಯುವ ನಾಯಕರು ಸ್ಪರ್ಧೆ ಮಾಡುವುದು ಬಹುತೇಕ ಖಚಿತವಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ನಿಖಿಲ್ ತಾವು ಪ್ರಜ್ವಲ್ ವಿರುದ್ಧ ಪ್ರತಿಷ್ಠೆಗಾಗಿ ಸ್ಪರ್ಧೆ ಮಾಡಿಲ್ಲ ಎಂದು ಹೇಳಿದ್ದಾರೆ. 

ಬೆಂಗಳೂರು :  ಲೋಕಸಭಾ ಚುನಾವಣೆ ಸಮರವನ್ನು ಮಂಡ್ಯ ಕ್ಷೇತ್ರದಿಂದ ಎದುರಿಸಲು ಸಜ್ಜಾಗಿರುವ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್‌ ಕುಮಾರಸ್ವಾಮಿ ನಗರದ ಗಾಳಿ ಆಂಜನೇಯ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.

ತಮ್ಮ ಆಪ್ತರೊಂದಿಗೆ ದೇವಾಲಯಕ್ಕೆ ತೆರಳಿದ ನಿಖಿಲ್‌, ತಾವು ಸ್ಪರ್ಧಿಸಲಿರುವ ಮಂಡ್ಯ ಕ್ಷೇತ್ರದಿಂದ ಚುನಾವಣೆಯಲ್ಲಿ ಗೆಲುವು ನೀಡುವಂತೆ ದೇವರಲ್ಲಿ ಪ್ರಾರ್ಥಿಸಿದರು.

ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಈಗ ತಾನೇ ರಾಜಕಾರಣಕ್ಕೆ ಹೆಜ್ಜೆ ಇಡುತ್ತಿದ್ದೇನೆ. ನನಗೆ ರಾಜಕೀಯ ಅನುಭವ ಕಡಿಮೆ ಇದೆ. ಮಂಡ್ಯದಲ್ಲಿ ದೊಡ್ಡವರ ಮಟ್ಟದಲ್ಲಿ ಮೈತ್ರಿಯಾಗಿದೆ. ಮಂಡ್ಯ ಕಾಂಗ್ರೆಸ್‌ ನಾಯಕರೊಂದಿಗೆ ನಾನು ಪ್ರತ್ಯೇಕ ಮಾತುಕತೆ ನಡೆಸುವ ಅವಶ್ಯಕತೆ ಇಲ್ಲ. ನಟಿ ಸುಮಲತಾ ವಿರುದ್ಧ ಗೆಲುವು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮಂಡ್ಯ ಜಿಲ್ಲೆಯ ಏಳು ಜೆಡಿಎಸ್‌ ಶಾಸಕರ ಒತ್ತಡದಿಂದ ನನಗೆ ಟಿಕೆಟ್‌ ಸಿಕ್ಕಿದೆ. ಅಲ್ಲದೇ, ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಹಾಗೂ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸಂಬಂಧವೇ ನನಗೆ ಗೆಲುವಿಗೆ ಶ್ರೀರಕ್ಷೆ. ಪ್ರಜ್ವಲ್‌ ವಿರುದ್ಧ ಪ್ರತಿಷ್ಠೆಗಾಗಿ ನಾನು ಚುನಾವಣೆಗಾಗಿ ಇಳಿದಿಲ್ಲ. ಲಕ್ಷಾಂತರ ಕಾರ್ಯಕರ್ತರ ಧ್ವನಿಯಾಗಿ ನಾನು ಮತ್ತು ಪ್ರಜ್ವಲ್‌ ಸ್ಪರ್ಧೆ ಮಾಡುತ್ತಿದ್ದೇವೆ. ಪ್ರಜ್ವಲ್‌ ಮತ್ತು ನಾನು ಇಬ್ಬರು ಸೇರಿ ಪಕ್ಷ ಕಟ್ಟಬೇಕಿದೆ. ಜನರು ನೀಡುವ ತೀರ್ಪೇ ಅಂತಿಮವಾಗಿರುತ್ತದೆ. ಅದಕ್ಕೆ ನಾವು ತಲೆಬಾಗಲೇಬೇಕು ಎಂದರು.

ಇತಿಹಾಸದಲ್ಲಿಯೇ ಮೊದಲ ಬಾರಿಗೆ ಮಂಡ್ಯ ಜಿಲ್ಲೆಗೆ ಮುಖ್ಯಮಂತ್ರಿಗಳು ಒಂಭತ್ತು ಸಾವಿರ ಕೋಟಿ ರು. ಅನುದಾನ ನೀಡಿದ್ದಾರೆ. ಅದು ನನ್ನ ಗೆಲುವಿಗೆ ಸಹಕಾರವಾಗಲಿದೆ. ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧ ಚರ್ಚೆಯಾಗುತ್ತಿದೆ. ಈ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಕ್ಷೇತ್ರದ ಎಲ್ಲಾ ನಾಯಕರ ಬೆಂಬಲ ಇದೆ ಎಂದು ಹೇಳಿದರು.

ಲಕ್ಷಾಂತರ ಕಾರ್ಯಕರ್ತರ ಧ್ವನಿಯಾಗಿ ನಾನು ಮತ್ತು ಪ್ರಜ್ವಲ್‌ ಸ್ಪರ್ಧೆ ಮಾಡುತ್ತಿದ್ದೇವೆ. ಪ್ರಜ್ವಲ್‌ ಮತ್ತು ನಾನು ಇಬ್ಬರು ಸೇರಿ ಪಕ್ಷ ಕಟ್ಟಬೇಕಿದೆ. ಜನರು ನೀಡುವ ತೀರ್ಪೇ ಅಂತಿಮವಾಗಿರುತ್ತದೆ. ಅದಕ್ಕೆ ನಾವು ತಲೆಬಾಗಲೇಬೇಕು.

- ನಿಖಿಲ್‌ ಕುಮಾರಸ್ವಾಮಿ, ಮಂಡ್ಯ ಕ್ಷೇತ್ರದ ಜೆಡಿಎಸ್‌ ಸಂಭಾವ್ಯ ಅಭ್ಯರ್ಥಿ

click me!