ಜೆಡಿಎಸ್ ಬೆಂಬಲಿಸಲು ಮನಸ್ಸಿರಲಿಲ್ಲ ಎಂದ ಮಂಡ್ಯ ಮುಖಂಡ

By Web DeskFirst Published May 12, 2019, 1:05 PM IST
Highlights

ಲೋಕಸಭಾ ಚುನಾವಣೆ ಮುಕ್ತಾಯವಾಗಿದ್ದು, ಫಲಿತಾಂಶಕ್ಕೆ ದಿನಗಣನೆ ಆರಂಭವಾಗಿದೆ. ಇದೇ ವೇಳೆ ಮಂಡ್ಯ ಮುಖಂಡರೋರ್ವರು ತಾವು ಸುಮಲತಾಗೆ ಯಾವುದೇ ಬೆಂಬಲ ನೀಡಿಲ್ಲ. ಜೆಡಿಎಸ್ ನ್ನು ಸಪೋರ್ಟ್ ಮಾಡಿಲ್ಲ ಎಂದಿದ್ದಾರೆ. 

ಮಂಡ್ಯ : ಲೋಕಸಭಾ ಚುನಾವಣೆ ಮುಕ್ತಾಯವಾಗಿದೆ. ಚುನಾವಣಾ ಫಲಿತಾಂಶಕ್ಕೆ ದಿನಗಣನೆ ಆರಂಭವಾಗಿದೆ. ಆದರೂ ಚುನಾವಣಾ ವಿಚಾರದ ಚರ್ಚೆ ಮುಂದುವರಿದಿದೆ. 

ಇತ್ತ ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದ ಸುಮಲತಾ ಅಂಬರೀಶ್ ಗೆ ಹಲವು ಕಾಂಗ್ರೆಸಿಗರು ಬೆಂಬಲ ನೀಡಿದ್ದು, ತಾವು ಮಾತ್ರ ಸುಮಲತಾ ಪರ ನಿಂತಿಲ್ಲ ಎಂದು ಮಾಜಿ ಸಚಿವ ಹಾಗೂ ಕಾಂಗ್ರೆಸ್ ಮುಖಂಡ ಪಿ.ಎಂ.ನರೇಂದ್ರ ಸ್ವಾಮಿ ಸ್ಪಷ್ಟಪಡಿಸಿದರು. 

ಮಂಡ್ಯದ ಮಳವಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಾನು ತಟಸ್ಥವಾಗಿರುವ ವಿಚಾರವನ್ನು ನಮ್ಮ ನಾಯಕರಿಗೆ ಸ್ಪಷ್ಟಪಡಿಸಿದ್ದೆ. ಈ ಬಾರಿ ಚುನಾವಣೆಯಲ್ಲಿ ತಾವು ಮೈತ್ರಿ ಧರ್ಮ ಪಾಲಿಸಿಲ್ಲ. ಯಾರ ಪರವಾಗಿಯೂ ನಿಂತಿಲ್ಲ ಎಂದರು. 

ಡಿಕೆ.ಶಿವಕುಮಾರ್, ಸಿದ್ದರಾಮಯ್ಯ, ವೇಣುಗೋಪಾಲ್‌ ಅವರಿಗೆ ತಮ್ಮ ತಟಸ್ಥ ನಿಲುವಿನ ಬಗ್ಗೆ ತಿಳಿಸಿದ್ದೆ. ನನಗೆ ಹಿಡಿಸದ, ಉಸಿರುಗಟ್ಟಿಸುವ ವಾತಾವರಣದಲ್ಲಿ ನಾನು ಇರುವುದಿಲ್ಲ. ಮಳವಳ್ಳಿ ಕ್ಷೇತ್ರದ ಕಾಂಗ್ರೆಸ್ಸಿಗರ ಧನಿಯಾಗಿರುತ್ತೇನೆ. ಇನ್ನೊಂದು ಪಕ್ಷದ ಧನಿಯಾಗಲ್ಲ ಎಂದು ಸ್ಪಷ್ಟಪಡಿಸಿದರು. 

ಸುಮಲತಾ ಪರ ನಾನೆಲ್ಲೂ ಕಾಣಿಸಿಕೊಂಡಿಲ್ಲ. ಜೆಡಿಎಸ್ ಪರ ಚುನಾವಣೆ ಮಾಡಲು ಮನಸಿಲ್ಲದ ಕಾರಣ ತಟಸ್ಥವಾಗಿದ್ದೆ. ಯಾವುದೋ ಬರ್ತಡೇ ಪಾರ್ಟಿಗೆ ಹೋದಾಗ ನಾವು ಸುಮಲತಾ ಮುಖಾಮುಖಿ ಆಗಿದ್ದೆವು. ನಾನು ಸುಮಲತಾ ಅವರ ಜೊತೆಗೆ ಡಿನ್ನರ್ ಪಾರ್ಟಿ ಮಾಡಿಲ್ಲ. ನಾನು ಜವಾಬ್ದಾರಿಯುತ ರಾಜಕಾರಣ ಮಾಡೋನು. ಗುಲಾಮಗಿರಿ ರಾಜಕಾರಣ ಮಾಡೋನಲ್ಲ ಎಂದ ಅವರು, ಇದೇ ವೇಳೆ ಮತ್ತೆ ಸಿದ್ದರಾಮಯ್ಯ ಅಭಿವೃದ್ಧಿ ದೃಷ್ಟಿಯಿಂದ ಮುಖ್ಯಮಂತ್ರಿಯಾಗಲಿ ಎಂದೂ ಹೇಳಿದರು.

click me!