ದೇವೇಗೌಡ ಸ್ಪರ್ಧಿಸೋ ಕ್ಷೇತ್ರ ಫೈನಲ್, ನಾಮಪತ್ರ ಸಲ್ಲಿಸಲು ಮುಹೂರ್ತವೂ ಫಿಕ್ಸ್

By Web DeskFirst Published Mar 22, 2019, 10:37 PM IST
Highlights

ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಈ ಬಾರಿಯ ಲೋಕಸಭಾ ಚುನಾವಣೆಗೆ ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎನ್ನುವ ಕುತೂಹಲಕ್ಕೆ ತೆರೆಬಿದ್ದಿದ್ದು, ನಾಮಪತ್ರ ಸಲ್ಲಿಕೆಗೂ ಮುಹೂರ್ತ ಫಿಕ್ಸ್ ಆಗಿದೆ.

ಬೆಂಗಳೂರು, [ಮಾ.22]: ತೀವ್ರ ಕುತೂಹಲ ಮೂಡಿಸಿದ್ದ ಎಚ್.ಡಿ. ದೇವೇಗೌಡ ಕ್ಷೇತ್ರ ಆಯ್ಕೆ ಬಹುತೇಕ ಫೈನಲ್ ಆಗಿದ್ದು, ಅಧಿಕೃತ ಘೋಷಣೆಯೊಂದೇ ಬಾಕಿ ಇದೆ.

ದೇವೇಗೌಡ ಅವರು ತುಮಕೂರಿನಿಂದ ಸ್ಪರ್ಧಿಸುವುದು ಖಚಿತವಾಗಿದ್ದು, ಸೋಮವಾರ ಅಂದ್ರೆ ಮಾ.25ರಂದು ನಾಮಪತ್ರ ಸಲ್ಲಿಸಲಿದ್ದಾರೆ ಎನ್ನುವ ಸುದ್ದಿ ಜೆಡಿಎಸ್ ಉನ್ನತ ಮೂಲಗಳಿಂದ ತಿಳಿದುಬಂದಿದೆ..

ಇಂದು [ಶುಕ್ರವಾರ] ಸಂಜೆಯಿಂದ ಪದ್ಮನಾಭನಗರದಲ್ಲಿರುವ ದೇವೇಗೌಡ ಅವರ ನಿವಾಸದಲ್ಲಿ ಸಿಎಂ ಕುಮಾರಸ್ವಾಮಿ ಸೇರಿದಂತೆ ತುಮಕೂರು ಭಾಗದ ಎಲ್ಲಾ ಜೆಡಿಎಸ್ ಮುಖಂಡರುಗಳ ಜತೆ ಸುದೀರ್ಘ ಸಭೆ ನಡೆಸಿ ಈ ಅಂತಿಮ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ.

ಬೆಂಗಳೂರು ಉತ್ತರ ಹಾಗು ತುಮಕೂರು ಈ ಎರಡು ಕ್ಷೇತ್ರಗಳು ದೊಡ್ಡಗೌಡ್ರ ಮುಂದೆ ಇದ್ದವು. ಆದ್ರೆ ಯಾವ ಕ್ಷೇತ್ರದಿಂದ ಕಣಕ್ಕಿಳಿಯಬೇಕೆಂಬ ಗೊಂದಲದಲ್ಲಿ ದೇವೇಗೌಡ್ರು ಇದ್ದರು.

ಅಷ್ಟೇ ಅಲ್ಲದೇ ತಮ್ಮ ತವರು ಕ್ಷೇತ್ರ ಹಾಸನವನ್ನು ಮೊಮ್ಮಗನಿಗೆ ಬಿಟ್ಟುಕೊಟ್ಟಿರುವ ದೇವೇಗೌಡ ಅವರು ಈ ಬಾರಿ ಲೋಕಸಭಾ ಚುನಾವಣೆ ಸ್ಪರ್ಧಿಸುವುದು ಅನುಮಾನ ಎಂಬ ಸುದ್ದಿಗಳೂ ಸಹ ಹರಿದಾಡಿದ್ದವು. ಇದ್ರಿಂದ ಜೆಡಿಎಸ್ ಕಾರ್ಯಕರ್ತರು ಗೊಂದಲದಲ್ಲಿದ್ದರು.

ಇದೀಗ ಈ ಎಲ್ಲಾ ಗೊಂದಲಗಳಿಗೆ ತೆರೆಬಿದ್ದಿದ್ದು, ದೊಡ್ಡಗೌಡ್ರು ಅಂತಿಮವಾಗಿ ಕಲ್ಪತರು ನಾಡಿನಿಂದ ಸ್ಪರ್ಧಿಸಲು ನಿರ್ಧರಿಸಿದ್ದಾರೆ.

click me!