ಭಿನ್ನಮತ ಶಮನಕ್ಕೆ ಮುಂದಾದ ಸಿದ್ದರಾಮಯ್ಯಗೆ ಶುರುವಾಗಿದೆ ಮಜ್ಲೀಸ್ ಕಾಟ!

By Web DeskFirst Published Mar 29, 2019, 7:46 PM IST
Highlights

ಕಾಂಗ್ರೆಸ್ ಒಳಬೇಗುದಿ ಶಮನಕ್ಕೆ ಮುಂದಾದ ಸಿದ್ದರಾಮಯ್ಯಗೆ ಸ್ವಕ್ಷೇತ್ರದಲ್ಲೇ ಶುರುವಾಯ್ತು ಕಂಟಕ| ಜಿಲ್ಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಟಕ್ಕರ್ ಕೊಡೋಕೆ ಮುಂದಾದ ಎಐಎಂಐಎಂ| ಭಿನ್ನಮತ ಶಮನಗೊಳಿಸಲು ಜಿಲ್ಲೆಯ ಹಿರಿಯ ನಾಯಕರ ಕ್ಷಮೆ ಕೋರಿದ ವಿಜಯಾನಂದ ಕಾಶಪ್ಪನವರ| ವಿಧಾನಸಭಾ ಚುನಾವಣೆ ವೇಳೆ ಸೋತಿದ್ದಕ್ಕೆ ಜಿಲ್ಲೆ ಹಿರಿಯ ಕಾಂಗ್ರೆಸ್ಸಿಗರ ವಿರುದ್ದ ದೂರಿದ್ದ ಕಾಶಪ್ಪನವರ| ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಪತ್ನಿಗೆ ಬಾಗಲಕೋಟೆ ಲೋಕಸಭಾ ಟಿಕೆಟ್| ಒಳಬೇಗುದಿ ಮಧ್ಯೆ ಕಾಂಗ್ರೆಸ್ ಅಭ್ಯರ್ಥಿಗೆ ಟಕ್ಕರ್ ಕೊಡೋಕೆ ಮುಂದಾದ ಎಐಎಂಐಎಂ ಅಭ್ಯರ್ಥಿ|

ಮಲ್ಲಿಕಾರ್ಜುನ ಹೊಸಮನಿ

ಬಾಗಲಕೋಟೆ(ಮಾ.29): ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವಕ್ಷೇತ್ರದ ಜಿಲ್ಲೆ ಬಾಗಲಕೋಟೆಯಲ್ಲಿ ಶತಾಯಗತಾಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಿಸೋದಕ್ಕೆ ಮುಂದಾಗಿದ್ದಾರೆ.

ಆದರೆ ಸಿದ್ದರಾಮಯ್ಯ ಜಿಲ್ಲಾ ಕಾಂಗ್ರೆಸ್‌ನ ಒಳಬೇಗುದಿ ಶಮನ ಮಾಡೋಕೆ ಇನ್ನಿಲ್ಲದ ಕಸರತ್ತು ನಡೆಸಿರೋ ಮಧ್ಯೆಯೇ ಇದೀಗ ಅಲ್ಪಸಂಖ್ಯಾತರ ಮತಗಳ ಮೇಲೆ ಕಣ್ಣಿಟ್ಟಿರುವ ಎಐಎಂಐಎಂ ಪಕ್ಷದ ಸ್ಪರ್ಧೆ ಮತ್ತೊಂದು ತಲೆನೋವಾಗಿ ಪರಿಣಮಿಸಿದೆ.

"

 ಕಳೆದ ವಿಧಾನಸಭಾ ಚುನಾವಣೆಯಲ್ಲಿ ಚಾಮುಂಡೇಶ್ವರಿಯಲ್ಲಿ ಸೋಲಿನ ಬಳಿಕ ಬಾದಾಮಿಯಿಂದ ಗೆದ್ದು ಬಂದಿರೋ ಮಾಜಿ ಸಿಎಂ ಸಿದ್ದರಾಮಯ್ಯ ಸ್ವಕ್ಷೇತ್ರದ ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ಅಭ್ಯರ್ಥಿಯನ್ನ ಗೆಲ್ಲಿಸೋಕೆ ಪಣತೊಟ್ಟಿದ್ದಾರೆ. 

ಈ ಬಾರಿ ಕಾಂಗ್ರೆಸ್‌ನಿಂದ ಹುನಗುಂದದ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಪತ್ನಿ ವೀಣಾ ಕಾಶಪ್ಪನವರಿಗೆ ಟಿಕೆಟ್ ನೀಡಿದ್ದು, ಹೀಗಾಗಿ ವೀಣಾ ಇಂದು ಸಾಂಕೇತಿಕವಾಗಿ ಕುಟುಂಬಸ್ಥರೊಂದಿಗೆ ಬಂದು ನಾಮಪತ್ರ ಸಲ್ಲಿಸಿದ್ದಾರೆ.

"

ಆದರೆ ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಸೋತ ವೇಳೆ ವಿಜಯಾನಂದ ಕಾಶಪ್ಪನವರ ಸ್ವಕ್ಷೇತ್ರದ ಜಿಲ್ಲೆಯಲ್ಲಿ ಮಾಜಿ ಸಚಿವ ಎಸ್.ಆರ್.ಪಾಟೀಲ, ಸಚಿವ ಆರ್.ಬಿ.ತಿಮ್ಮಾಪೂರ ಸೇರಿದಂತೆ ಸ್ವಕ್ಷೇತ್ರದ ಜಿಲ್ಲೆಯ ಕಾಂಗ್ರೆಸ್ ನಾಯಕರ ವಿರುದ್ದ ಪಕ್ಷ ವಿರೋಧ ಚಟುವಟಿಕೆ ಕುರಿತು ಹೈಕಮಾಂಡ್‌ಗೆ ದೂರು ನೀಡಿದ್ದರು. 

ಇದರಿಂದ ಜಿಲ್ಲೆಯ ಕಾಂಗ್ರೆಸ್‌ನಲ್ಲಿ ಆಂತರಿಕ ಬೇಗುದಿ ಹೆಚ್ಚಿತ್ತು. ಆದರ ಇದೀಗ ಸಿದ್ದರಾಮಯ್ಯ ಸಭೆ ನಡೆಸಿ ಎಲ್ಲ ನಾಯಕರನ್ನ ಒಗ್ಗೂಡಿಸಿ ಮುನ್ನಡೆಯುವಂತೆ ಕರೆ ನೀಡಿದ್ದಾರೆ. ಈ ಮಧ್ಯೆ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಸಹ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ತಾವು ಹಿಂದೆ ತಪ್ಪು ತಿಳುವಳಿಕೆಯಿಂದ  ನಾಯಕರ ವಿರುದ್ದ ಹೇಳಿಕೆ ನೀಡಿದ್ದು, ಈ ಬಗ್ಗೆ ಕ್ಷಮೆ ಕೋರುತ್ತೇನೆ ಎಂದಿದ್ದಾರೆ. 

ಇದು ಕಾಂಗ್ರೆಸ್ ಆಂತರಿಕ ಬೇಗುದಿ ಶಮನಕ್ಕೆ ಸಿದ್ದರಾಮಯ್ಯ ಮಾಡಿದ ಒಂದು ಪ್ರಯತ್ನವಾದರೆ, ಮತ್ತೊಂದೆಡೆ ಈ ಬಾರಿ ಲೋಕಸಭೆಗೆ ಬಾಗಲಕೋಟೆಯಿಂದ ಎಐಎಂಐಎಂ ಪಕ್ಷ ಸ್ಪರ್ಧೆಗೆ ಮುಂದಾಗಿರೋದು ತಲೆನೋವಾಗಿದೆ. 

ಕಳೆದ ಬಾರಿ ವಿಧಾನಸಭೆ ಚುನಾವಣೆಯಲ್ಲೂ ಸ್ಪರ್ಧಿಸಿದ್ದ ಎಐಎಂಐಎಂ ಪಕ್ಷ ಇದೀಗ ಲೋಕಸಭೆಗೆ ಎಐಎಂಐಎಂ ಪಕ್ಷದ ರಾಜ್ಯಾಧ್ಯಕ್ಷ ಉಸ್ಮಾನ್ ಗಣಿ ಸ್ಪರ್ಧೆ ಮಾಡಲಿರುವುದರಿಮದ ಅಲ್ಪಸಂಖ್ಯಾತ ಮತಗಳನ್ನ ಸೆಳೆಯುವ ಮೂಲಕ ಕಾಂಗ್ರೆಸ್ ಗೆಲುವಿಗೆ ಅಡ್ಡಿಯಾಗಬಹುದು. 

ಏನೇ ಆದರೂ ನಮ್ಮ ಸ್ಪರ್ಧೆ ನಿಶ್ಚಿತ ಎಂದಿರುವ ಉಸ್ಮಾನ್ ಗಣಿ, ಹಲವು ವರ್ಷಗಳಿಂದ ಕಾಂಗ್ರೆಸ್‌ಗೆ ದುಡಿದರೂ ಏನು ಪ್ರಯೋಜನವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

"

ಹೀಗಾಗಿ ಈ ಬಾರಿ ಎಐಎಂಐಎಂ ಪಕ್ಷದಿಂದ ಸ್ಪರ್ಧಿಸಿ ಅಲ್ಪಸಂಖ್ಯಾತ ಮತಗಳನ್ನ ಸೆಳೆಯುವ ಮೂಲಕ ಗೆಲುವು ಸಾಧಿಸುತ್ತೇವೆ ಅನ್ನೋ ವಿಶ್ವಾಸದಲ್ಲಿದ್ದಾರೆ ಎಐಎಂಐಎಂ ಪಕ್ಷದ ಜಿಲ್ಲೆಯ ನಾಯಕರು.                          

ಒಟ್ಟಿನಲ್ಲಿ ಸತತ ಮೂರು ಬಾರಿ ಗೆಲುವು ಕಾಣುವ ಮೂಲಕ ಬಿಜೆಪಿ ಭದ್ರಕೋಟೆಯಾಗಿರೋ ಬಾಗಲಕೋಟೆ ಲೋಕಸಭಾ ಮತಕ್ಷೇತ್ರವನ್ನು ಕಾಂಗ್ರೆಸ್ ತೆಕ್ಕೆಗೆ ಹಾಕಲು ಮಾಜಿ ಸಿಎಂ ಸಿದ್ದರಾಮಯ್ಯ ಮುಂದಾಗಿದ್ದು, ಇದಕ್ಕೆ ಕಾಂಗ್ರೆಸ್ ಒಳಬೇಗುದಿ ಶಮನವಾದ್ರೂ ಎಐಎಂಐಎಂ ಪಕ್ಷದ ಭರಾಟೆಯನ್ನ ಯಾವ ರೀತಿ ಎದುರಿಸಿ ಗೆಲವು ಸಾಧಿಸಲಿದ್ದಾರೆ ಎಂಬುದು ಕಾದು ನೋಡಬೇಕಿದೆ.

click me!