
ನವದೆಹಲಿ(ಏ.02): 2019ರ ಸಾರ್ವತ್ರಿಕ ಚುನಾವಣೆಗೆ ಕಾಂಗ್ರೆಸ್ ಪಕ್ಷ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ಪ್ರಮುಖವಾಗಿ ಉದ್ಯೋಗ ಸೃಷ್ಟಿ, ಸಾಲ ಪಾವತಿಸದ ರೈತರ ವಿರುದ್ಧ ಪ್ರಕರಣ ದಾಖಲು ಮಾಡದ ಭರವಸೆ ನೀಡಿದೆ.
ನವದೆಹಲಿಯಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡಿ ಮಾತನಾಡಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಪಕ್ಷ ಮತ್ತು ದೇಶ ಇಡಬೇಕಾದ ಹೆಜ್ಜೆಗಳ ಒಟ್ಟಾರೆ ಹೂರಣ ಚುನಾವಣೆ ಪ್ರಣಾಳಿಕೆಯಲ್ಲಿದೆ ಎಂದು ಹೇಳಿದರು.
ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದರೆ ಸಾಲ ಮರುಪಾವತಿ ಮಾಡದ ರೈತರ ವಿರುದ್ಧ ಕೇಸು ದಾಖಲಿಸುವುದಿಲ್ಲ. ಸಾಲ ಮರುಪಾವತಿ ಮಾಡದಿರುವುದು ಕ್ರಿಮಿನಲ್ ಅಪರಾಧವಾಗುವುದಿಲ್ಲ. ರೈತರಿಗೆ ಪ್ರತ್ಯೇಕ ಕಿಸಾನ್ ಬಜೆಟ್ ಮಂಡಿಸಲಾಗುವುದು ಎಂದು ಪ್ರಣಾಳಿಕೆಯಲ್ಲಿ ಘೋಷಿಸಲಾಗಿದೆ.
ಮಧ್ಯಪ್ರದೇಶ, ಕರ್ನಾಟಕ, ಛತ್ತೀಸ್ಗಢ, ಪಂಜಾಬ್ನಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿ ಸಾಲಮನ್ನಾ ಮಾಡಲಾಗಿದೆ. ಸಾಲ ಮರುಪಾವತಿ ಮಾಡದ ರೈತರನ್ನು ಅಪರಾಧಿಗಳೆಂದು ಪರಿಗಣಿಸಿ ಜೈಲಿಗೆ ಹಾಕುವುದನ್ನು ತಪ್ಪಿಸಲಾಗುವುದು ಎಂದು ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ವಾಗ್ದಾನ ಮಾಡಿದೆ.
ಇದೇ ವೇಳೆ ಶಿಕ್ಷಣಕ್ಕೆ ಬಜೆಟ್ ನಲ್ಲಿ ಶೇ.6ರಷ್ಟು ಹಣ ಮೀಸಲಿಡುವುದಾಗಿ ಕಾಂಗ್ರೆಸ್ ಭರವಸೆ ನೀಡಿದೆ. ಸರ್ಕಾರಿ ಆಸ್ಪತ್ರೆಗಳನ್ನು ಬಲವರ್ಧನೆ, ರೈತರು, ಯುವಜನತೆ, ಮಹಿಳೆಯರು, ಕೈಗಾರಿಕೆ, ಅಲ್ಪಸಂಖ್ಯಾತರು, ಆರೋಗ್ಯವಲಯ, ವಿದೇಶಿ ನೀತಿ, ರಾಷ್ಟ್ರೀಯ ಭದ್ರತೆ ಮೊದಲಾದ ವಿಷಯಗಳನ್ನು ಪ್ರಣಾಳಿಕೆಯಲ್ಲಿ ನಮೂದಿಸಲಾಗಿದೆ.
ಬಡತನ ತೊಲಗಿಸಲು ದೇಶದ ಶೇ.20ರಷ್ಟು ಅತಿ ಬಡ ಕುಟುಂಬಗಳಿಗೆ ವರ್ಷಕ್ಕೆ 72 ಸಾವಿರ ರೂ. ಸಹಾಯಧನ, ಖಾಲಿ ಇರುವ 22 ಲಕ್ಷ ಸರ್ಕಾರಿ ಉದ್ಯೋಗಗಳನ್ನು ಭರ್ತಿ ಮಾಡುವುದು, ಪಂಚಾಯ್ತಿಗಳಲ್ಲಿ 10 ಲಕ್ಷ ಉದ್ಯೋಗಗಳ ಭರ್ತಿ, ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ಕಾರ್ಮಿಕರಿಗೆ ಕನಿಷ್ಠ ಕೆಲಸ ದಿನಗಳನ್ನು 100ರಿಂದ 150 ದಿನಗಳಿಗೆ ಹೆಚ್ಚಿಸುವುದು, ಜಿಡಿಪಿಯಲ್ಲಿ ಶೇ.6ರಷ್ಟು ಹಣ ಶಿಕ್ಷಣಕ್ಕೆ ಮೀಸಲು, ಖಾಸಗಿ ಇನ್ಷೂರೆನ್ಸ್ ಕಂಪನಿಗಳಿಗೆ ತಿಲಾಂಜಲಿ, ಜಿಎಸ್ಟಿಯನ್ನು ಸರಳಗೊಳಿಸುವುದು ಸೇರಿದಂತೆ ಭರವಸೆಗಳ ಮಹಾಪೂರವನ್ನೇ ಕಾಂಗ್ರೆಸ್ ಪ್ರಣಾಳಿಕೆ ಮೂಲಕ ಹರಿಸಿದೆ.
ಇನ್ನು ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಅಧಿಕಾರಕ್ಕೆ ಬಂದ ಮೊದಲ ದಿನವೇ ರಫೆಲ್ ಹಗರಣದ ತನಿಖೆ ಪ್ರಾರಂಭ, ಮಾನಹಾನಿ ಪ್ರಕರಣವನ್ನು ಅಪರಾಧ ಕೃತ್ಯ ಎಂದು ಪರಿಗಣಿಸುವ ಐಪಿಸಿ ಸೆಕ್ಷನ್ 499 ಅನ್ನು ಕೈಬಿಟ್ಟು ; ಈ ಪ್ರಕರಣವನ್ನು ಸಿವಿಲ್ ಅಫೆನ್ಸ್ ಎಂದು ಪರಿಗಣಿಸುವುದು, ರಾಷ್ಟ್ರದ್ರೋಹ ವಿಚಾರದಲ್ಲಿರುವ ಐಪಿಸಿ ಸೆಕ್ಷನ್ 124ಎ ಅನ್ನು ಕೈಬಿಡುವುದೂ ಸೇರಿದಂತೆ ಅನೇಕ ಭರವಸೆಗಳನ್ನು ಕಾಂಗ್ರೆಸ್ ನೀಡಿದೆ.
ಇನ್ನು ಚುನಾವಣಾ ಪ್ರಣಾಳಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಪಕ್ಷದ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಸೇರಿದಂತೆ ಅನೇಕ ಹಿರಿಯ ನಾಯಕರು ಉಪಸ್ಥಿತರಿದ್ದರು.