ಸಾರಾ ಒಳ ಏಟು : ಸಿದ್ದರಾಮಯ್ಯ ತಿರುಗೇಟು

By Web DeskFirst Published Mar 18, 2019, 8:33 AM IST
Highlights

ಜೆಡಿಎಸ್ ಮುಖಂಡ ಸಾ ರಾ ಮಹೇಶ್ ವಿರುದ್ಧ ಕಾಂಗ್ರೆಸ್ ಮುಖಂಡ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ  ಗರಂ ಆಗಿದ್ದಾರೆ. 

ಬೆಂಗಳೂರು :  ಮಂಡ್ಯದಲ್ಲಿ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರ ಸ್ವಾಮಿ ಸ್ಪರ್ಧೆ ವಿರೋಧಿಸಿದರೆ ಮೈಸೂರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಒಳಏಟು ತಿನ್ನಬೇಕಾದೀತು ಎಂಬ ಅರ್ಥದಲ್ಲಿ ಸಚಿವ ಸಾ.ರಾ. ಮಹೇಶ್ ನೀಡಿದ್ದ ಹೇಳಿಕೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗರಂ ಆಗಿದ್ದಾರೆ. ಸಾ.ರಾ. ಮಹೇಶ್ ಈ ರೀತಿಯ ಹೇಳಿಕೆ ನೀಡಿದ್ದು ಸರಿಯಲ್ಲ, ದೋಸ್ತಿ ಪಕ್ಷಗಳು ಒಟ್ಟಾಗಿ ಸರ್ಕಾರ ರಚಿಸಿದ್ದು, ಈಗ ಲೋಕಸಭಾ ಚುನಾವಣೆ ಯಲ್ಲಿ ಜಂಟಿಯಾಗಿಯೇ ಪ್ರ ಚಾರ ನಡೆಸುವ ಮೂಲಕ ಮೈತ್ರಿ ಧರ್ಮ ಪಾಲಿಸಬೇಕು ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ನಾವು ಪರಸ್ಪರ ನಂಬಿಕೆಯಿಂದ ಮೈತ್ರಿ ಮಾಡಿಕೊಂಡಿದ್ದೇವೆ. ಎಲ್ಲದಕ್ಕೂ ನಂಬಿಕೆ ಇರಬೇಕು. ಆದರೆ, ಈ ರೀತಿಯ ಹೇಳಿಕೆಗಳಿಂದ ನಂಬಿಕೆ ಹಾಳಾಗಲಿದೆ.  ನಾವು ಜತೆಯಾಗಿ ಕೆಲಸ ಮಾಡುವುದಿಲ್ಲ, ಅಲ್ಲಿ ಹಾಗಾಗುತ್ತದೆ, ಹೀಗಾಗುತ್ತದೆ ಅಂತ ಊಹೆ ಮಾಡಿ ಕೊಂಡು ಮಾತನಾಡುವುದು ಸರಿಯಲ್ಲ ಎಂದರು.

ನಾವು ಇನ್ನೂ ಪ್ರಚಾರವನ್ನೇ ಶುರು ಮಾಡಿಲ್ಲ.ಕೂಸು ಹುಟ್ಟುವ ಮೊದಲೇ ಕುಲಾವಿ ಬಗ್ಗೆ ಮಾತು ಯಾಕೆ? ನಾವು ಚುನಾವಣಾ ಪ್ರಚಾರದ ಕುರಿತು ಚರ್ಚಿಸಿದ ಬಳಿಕವೇ ಈ ವಿಚಾರದ ಕುರಿತು ತೀರ್ಮಾನ ಮಾಡಲಾಗುವುದು ಎಂದು ಸ್ಪಷ್ಟನೆ ನೀಡಿದರು. 

‘ಪ್ರಧಾನಿ’ ಹೇಳಿಕೆಗೂ ಸಿದ್ದು ಟಾಂಗ್: ಇನ್ನು ಎಚ್. ಡಿ.ದೇವೇಗೌಡ ಅವರೇ ನಮ್ಮ ಪ್ರಧಾನಿ ಅಭ್ಯರ್ಥಿ ಎನ್ನುವ ಸಾ.ರಾ. ಮಹೇಶ್ ಹೇಳಿಕೆಗೂ ಸಿದ್ದರಾಮಯ್ಯ ಟಾಂಗ್ ನೀಡಿದ್ದಾರೆ. ‘ರಾಹುಲ್ ಗಾಂಧಿ ಅವರೇ ಪ್ರಧಾನಿ ಅಭ್ಯರ್ಥಿ ಎಂದು ಎಚ್.ಡಿ.ದೇವೇಗೌಡರೇ ಹಲವು ಬಾರಿ ಹೇಳಿದ್ದಾರೆ. ನಾನು ದೇವೇಗೌಡ ಅವರ ಮಾತನ್ನು ನಂಬುತ್ತೇನೆಯೇ ಹೊರತು ಬೇರೆ ನಾಯಕರು ಹೇಳಿದನ್ನಲ್ಲ. ನಮ್ಮ ಪ್ರಧಾನಿ ಅಭ್ಯರ್ಥಿ ರಾಹುಲ್ ಗಾಂಧಿಯೇ ಹೊರತು ಬೇರೆ ಯಾರು ಅಲ್ಲ ಎಂದರು. 

click me!