ಯಾರಿಂದಲೂ ಹಣ ಪಡೆದಿಲ್ಲ: ಮಂಜುನಾಥನ ಸನ್ನಿಧಿಯಲ್ಲಿ ಮುದ್ದಹನುಮೇಗೌಡರ ಆಣೆ!

By Web DeskFirst Published May 2, 2019, 1:04 PM IST
Highlights

ನಾಮಪತ್ರ ವಾಪಸ್ ಪಡೆಯಲು, ಪ್ರಚಾರದಲ್ಲಿ ಭಾಗವಹಿಸಲು ದುಡ್ಡು ಪಡೆದಿಲ್ಲ| ಯಾವ ವ್ಯಕ್ತಿಯಿಂದಲೂ, ಯಾವ ಪಕ್ಷದಿಂದಲೂ ನಯಾಪೈಸೆ ಪಡೆದಿಲ್ಲ| ನಾಮಪತ್ರ ವಾಪಸ್ ಪಡೆಯಲು ಕೋಟಿ ಕೋಟಿ ಡೀಲ್ ಆಗಿದೆ ಎಂಬ ಆಡಿಯೋ ಬಗ್ಗೆ ಸ್ಪಷ್ಟನೆ| ಧರ್ಮಸ್ಥಳ ಮಂಜುನಾಥಸ್ವಾಮಿ ಸನ್ನಿಧಿಯಲ್ಲಿ ನಿಂತು ಸ್ಪಷ್ಟಪಡಿಸುತ್ತಿದ್ದೇನೆ| ತುಮಕೂರು ಕ್ಷೇತ್ರದ ಹಾಲಿ ಸಂಸದ ಮುದ್ದಹನುಮೇಗೌಡ ಸ್ಪಷ್ಟನೆ

ಮಂಗಳೂರು[ಮೇ02]: ಸಂಸದ ಮುದ್ದಹನುಮೇಗೌಡರು ಧರ್ಮಸ್ಥಳದಲ್ಲಿ ಸುದ್ದಿಗೋಷ್ಠಿಯೊಂದರಲ್ಲಿ ಮಾತನಾಡುತ್ತಾ ನಾಮಪತ್ರ ಹಿಂಪಡೆಯಲು ತಾನು ಹಣ ಪಡೆದಿದ್ದೇನೆ ಎಂಬ ಆರೋಪಗಳೆಲ್ಲವೂ ಸತ್ಯಕ್ಕೆ ದೂರವಾದುದು ಎಂದು ಸ್ಪಷ್ಟನೆ ನೀಡಿದ್ದಾರೆ. ಮಂಜುನಾಥನ ಸನ್ನಿಧಿಯಲ್ಲಿ ನಿಂತು ನಾನು ಈ ಮಾತನ್ನು ಹೇಳುತ್ತಿದ್ದೇನೆ ಎಂದು ಶಪಥ ಮಾಡಿದ್ದಾರೆ. ಇವರು ಕೆಲ ದಿನಗಳ ಹಿಂದಷ್ಟೇ ನಡೆದಿದ್ದ ಲೋಕಸಭಾ ಚುನಾವಣೆಯಲ್ಲಿ ತುಮಕೂರು ಕ್ಷೇತ್ರವನ್ನು ಕಾಂಗ್ರೆಸ್‌ಗೆ ಬಿಟ್ಟುಕೊಟ್ಟಿದ್ದರೂ ದೇವೇಗೌಡರ ವಿರುದ್ಧ ಕಣಕ್ಕಿಳಿದು ಅಂತಿಮ ಕ್ಷಣದಲ್ಲಿ ಧರ್ಮಸಂಕಟದಿಂದ ನಾಮಪತ್ರವನ್ನು ಹಿಂಪಡೆದಿದ್ದರು ಎಂಬುವುದು ಗಮನಾರ್ಹ.

"

ದೇವೇಗೌಡರ ವಿರುದ್ಧ ಮುದ್ದಹನುಮೇಗೌಡರು ಕಣಕ್ಕಿಳಿದಿದ್ದ ವಿಚಾರ ಕಾಂಗ್ರೆಸ್​ ನಾಯಕರನ್ನು ಮುಜುಗರಕ್ಕೀಡು ಮಾಡಿತ್ತು. ಕೈ ನಾಯಕರು ಮುದ್ದಹನುಮೇಗೌಡರ ಸಂಧಾನಕ್ಕೆ ಸಾಕಷ್ಟು ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಅಂತಿಮವಾಗಿ ಹೈಕಮಾಂಡ್​ ಕೂಡ ಇದರಲ್ಲಿ ಮಧ್ಯಪ್ರವೇಶ ಮಾಡಬೇಕಾದ ಅನಿವಾರ್ಯತೆ ಎದುರಾಗಿತ್ತು. ಕೊನೆಗೆ ಧರ್ಮಸಂಕಟದಿಂದ ಅವರು ತಮ್ಮ ನಾಮಪತ್ರ ಹಿಂಪಡೆದಿದ್ದರು. ಆದರೆ ಕಳೆದ ವಾರ ಮುದ್ದಹನುಮೇಗೌಡರ ಕುರಿತ ಆಡಿಯೋವೊಂದು ಸೋರಿಕೆಯಾಗಿತ್ತು. ಆ ಆಡಿಯೋದಲ್ಲಿ ಮುದ್ದಹನುಮೇಗೌಡರು ನಾಮಪತ್ರ ಹಿಂಪಡೆಯಲು ಮೂರೂವರೆ ಕೋಟಿ ರೂ. ಪಡೆದಿದ್ದಾರೆ. ಚುನಾವಣೆ ಮುಗಿದ ಬಳಿಕ ಇನ್ನಷ್ಟು ಹಣ ನೀಡಬೇಕೆಂದು ಬೇಡಿಕೆಯಿಟ್ಟಿದ್ದಾರೆ ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ​ ಆಪ್ತನೊಬ್ಬ ಕಾಂಗ್ರೆಸ್​ ಕಾರ್ಯಕರ್ತರ ಬಳಿ ಹೇಳುತ್ತಿರುವುದು ದಾಖಲಾಗಿತ್ತು.

ಈ ವಿಚಾರ ಭಾರೀ ಸದ್ದು ಮಾಡಿತ್ತಾದರೂ ಮುದ್ದಹನುಮೇಗೌಡರು ಮಾತ್ರ ಈ ಕುರಿತಾಗಿ ಯಾವುದೇ ಸ್ಪಷ್ಟನೆ ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ  ಇಂದು ಗುರುವಾಗ ಧರ್ಮಸ್ಥಳಕ್ಕೆ ಹೋಗಿ ಮಂಜುನಾಥನ ದರ್ಶನ ಪಡೆದ ಬಳಿಕ ಅವರು ನಡೆಸಲಿದ್ದ ಸುದ್ದಿಗೋಷ್ಠಿ ಭಾರೀ ಮಹತ್ವ ಪಡೆದಿತ್ತು. ಸದ್ಯ ತಮ್ಮ ವಿರುದ್ಧದ ಆರೋಪಕ್ಕೆ ಸ್ಪಷ್ಟನೆ ನೀಡಿರುವ ಮುದ್ದಹನುಮೇಗೌಡರು 'ನಾನು ಪ್ರಾಮಾಣಿಕನಿದ್ದೇನೆ. ವರಿಷ್ಠರ ಸಲಹೆ ಮೇರೆಗೆ ತುಮಕೂರು ಕ್ಷೇತ್ರವನ್ನು ತ್ಯಾಗ ಮಾಡಿದ್ದೇನೆ. ಪಾರ್ಟಿಯವರು ಬಹಳ ಗೌರವ ಕೊಟ್ಟು ಗೌರವವಾಗಿ ನಡೆಸಿಕೊಂಡರು. ಯಾವುದೇ ವ್ಯಕ್ತಿಗಳಿಂದ ಒಂದು ನಯಾ ಪೈಸವನ್ನೂ ಪಡೆದಿಲ್ಲ. ನನ್ನ ವಿರುದ್ಧ ಷಡ್ಯಂತ್ರ ಮಾಡುವವರಿಗೆ ಒಳ್ಳೆಯ ಬುದ್ಧಿ ಕೊಡಲು ಪ್ರಾರ್ಥನೆ ಮಾಡಿದ್ದೇನೆ.  ನನ್ನ ಮಟ್ಟಿಗೆ ಇದೊಂದು ಗಂಭೀರ ವಿಚಾರವಾಗಿದ್ದರಿಂದಲೇ ಈ ಸ್ಪಷ್ಟನೆ ನೀಡಿದ್ದೇನೆ. ಡೀಲ್ ಆಗಿದ್ದಾರೆ ಎಂದು ಹೇಳಿದರೆ ನನ್ನ ಮನಸ್ಸಿಗೆ ನನಗೆ ನೋವಾಗಿದೆ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

click me!