‘ಚೌಕೀದಾರ್‌ ಶೇರ್‌ ಹೈ’: ಮೋದಿ ಕುರಿತ ಮಂಗಳೂರಿಗನ ಚಿತ್ರ ವೈರಲ್‌

By Web DeskFirst Published Mar 26, 2019, 12:28 PM IST
Highlights

 ‘ರುದ್ರ ಹನುಮ’ ಚಿತ್ರಬಿಡಿಸಿ ಮಂಗಳೂರಿನ ಕರಣ್‌ ಆಚಾರ್ಯ| ‘ಚೌಕೀದಾರ್‌ ಶೇರ್‌ ಹೈ’: ಮೋದಿ ಕುರಿತ ಮಂಗಳೂರಿಗನ ಚಿತ್ರ ವೈರಲ್‌

ಮಂಗಳೂರು[ಮಾ.26]: ‘ರುದ್ರ ಹನುಮ’ ಚಿತ್ರಬಿಡಿಸಿ ಮಂಗಳೂರಿನ ಕರಣ್‌ ಆಚಾರ್ಯ ಪ್ರಧಾನಿ ನರೇಂದ್ರ ಮೋದಿಯಿಂದ ಪ್ರಶಂಸೆಗೆ ಒಳಗಾಗುವ ಮೂಲಕ ದೇಶದ ಗಮನ ಸೆಳೆದಿರುವುದು ಗೊತ್ತೇ ಇದೆ. ಈಗ ಮಂಗಳೂರಿನ ಹವ್ಯಾಸಿ ಕಲಾವಿದ ಜೀವನ್‌ ಆಚಾರ್ಯ ಅವರು ರಾಜಗಾಂಭೀರ‍್ಯದ ಪ್ರಧಾನಿ ಮೋದಿಯ ಅರ್ಧ ಮುಖ ಹಾಗೂ ಇನ್ನರ್ಧ ಸಿಂಹ ಮುಖದ ಚಿತ್ರ ರಚಿಸಿ ಎಲ್ಲರಿಂದ ಶಹಭಾಸ್‌ಗಿರಿ ಪಡೆಯುತ್ತಿದ್ದಾರೆ. ‘ಭಾರತ್‌ ಕಾ ಶೇರ್‌’ ಶೀರ್ಷಿಕೆಯ ಈ ಚಿತ್ರದಲ್ಲಿ ‘ಚೌಕೀದಾರ್‌ ಶೇರ್‌ ಹೈ’ ಎಂದು ಬರೆಯಲಾಗಿದೆ.

ಹೊಸ ಭಾರತದ ಕಲ್ಪನೆ ಜೊತೆಗೆ ನರೇಂದ್ರ ಮೋದಿ ಆಗಮಿಸುವ ಭಂಗಿಯಲ್ಲಿ ಇದನ್ನು ಚಿತ್ರಿಸಲಾಗಿದೆ. ‘ಕೇವಲ ಎರಡೇ ದಿನಗಳಲ್ಲಿ ಈ ಚಿತ್ರವನ್ನು ರಚಿಸಿದ್ದು, ರಾಷ್ಟ್ರಹಿತ ಹಾಗೂ ರಾಷ್ಟ್ರ ನಾಯಕರ ದೃಷ್ಟಿಯಿಂದ ಇಂತಹ ಚಿತ್ರವನ್ನು ರಚಿಸಿದ್ದೇನೆ. ನಾನು ಯಾವುದೇ ಪಕ್ಷದ ಕಾರ್ಯಕರ್ತನಲ್ಲ’ ಎಂದು ಮಂಗಳೂರಿನ ಖಾಸಗಿ ಕಾಲೇಜಿನಲ್ಲಿ ಚಿತ್ರಕಲಾ ಶಿಕ್ಷಕರಾಗಿರುವ ಜೀವನ್‌ ಆಚಾರ್ಯ ಸ್ಪಷ್ಟಪಡಿಸಿದ್ದಾರೆ. ಈ ಚಿತ್ರ ಚುನಾವಣೆ ಸಂದರ್ಭದಲ್ಲಿ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಲಾರಂಭಿಸಿದೆ.

ಡಿಜಿಟಲ್‌ನ ವೆಕ್ಟರ್‌ ಕಲಾತ್ಮಕತೆಯಲ್ಲಿ ರಚಿಸಿದ ಈ ಚಿತ್ರಕ್ಕೆ ಅಪಾರ ಬೇಡಿಕೆಯೂ ವ್ಯಕ್ತವಾಗುತ್ತಿದೆ. ಸದ್ಯ ಜೀವನ್‌ ಆಚಾರ್ಯ ಮೋದಿ ಅವರ ಇದೊಂದೇ ಚಿತ್ರ ರಚಿಸಿದ್ದಾರೆ. ಇವರು ಕೇವಲ ಚಿತ್ರಕಲಾವಿದರಾಗಿದ್ದು, ಪ್ರಿಂಟ್‌ ಉದ್ಯಮವನ್ನು ಹೊಂದಿಲ್ಲ. ಆದರೂ ಇದನ್ನು ಸ್ಟಿಕ್ಕರ್‌ ರೂಪದಲ್ಲಿ ನೀಡುವಂತೆ ಅಭಿಮಾನಿಗಳು ಒತ್ತಾಯಿಸುತ್ತಿದ್ದಾರೆ. ವಾಹನ ಹಾಗೂ ಬ್ಯಾನರ್‌ಗಳಲ್ಲಿ ಬಳಸಲು ಇದನ್ನು ಮೊಬೈಲ್‌ ಮೂಲಕ ಸ್ಕ್ರೀನ್‌ಶಾಟ್‌ ತೆಗೆದು ಪ್ರಿಂಟ್‌ ಹಾಕಿಸಬಹುದು, ಸ್ಟ್ರಿಕ್ಕರ್‌ ಕೂಡ ಮಾಡಿಸಲು ಅವಕಾಶವಿದೆ ಎನ್ನುತ್ತಾರೆ ಜೀವನ್‌ ಆಚಾರ್ಯ.

ಮಂಗಳೂರಿನ ಕದ್ರಿ ಕಂಬಳ ನಿವಾಸಿಯಾದ ಜೀವನ್‌ ಆಚಾರ್ಯ ಅವರು ನಗರದ ಮಹಾಲಸಾ ಚಿತ್ರಕಲಾ ಶಾಲಾಯಲ್ಲಿ ಅಭ್ಯಾಸ ಮಾಡಿದ್ದಾರೆ. ಕಾರ್ಟೂನಿಸ್ಟ್‌ ಜಾನ್‌ ಚಂದ್ರನ್‌ ಹಾಗೂ ಕರಣ್‌ ಆಚಾರ್ಯ ಅವರ ಶಿಷ್ಯ. ಅಲೋಶಿಯಸ್‌ ಕಾಲೇಜಿನ ಮ್ಯೂಸಿಯಂಗೆ ಇವರು ವಿಭಿನ್ನ ರೀತಿಯ ಚಿತ್ರಗಳನ್ನು ರಚಿಸಿಕೊಟ್ಟಿದ್ದಾರೆ. ಜೀವನ್‌ ಆಚಾರ್ಯರ ತಂದೆ ಕದ್ರಿ ಮಲ್ಲಿಕಟ್ಟೆಯಲ್ಲಿ ಚಿನ್ನಾಭರಣ ವ್ಯಾಪಾರ ನಡೆಸುತ್ತಿದ್ದಾರೆ.

click me!