ದೋಸ್ತಿ ಸರ್ಕಾರ ಪತನ ಸಾಧ್ಯತೆ. ಏಕೆಂದರೆ...?

By Web DeskFirst Published May 24, 2019, 8:16 AM IST
Highlights

ಲೋಕಸಭಾ ಚುನಾವಣೆ ಮುಕ್ತಾಯವಾಗಿದೆ. ಫಲಿತಾಂಶದಲ್ಲಿ ಬಿಜೆಪಿ ಕರ್ನಾಟಕದಲ್ಲಿ ಕ್ಲೀನ್ ಸ್ವೀಪ್ ಮಾಡಿದೆ. ಇದೇ ಸಂದರ್ಭದಲ್ಲಿ ,ಮೈತ್ರಿ ಸರ್ಕಾರಕ್ಕೆ ಕಂಟಕ ಎದುರಾಗಿದೆ.

ಬೆಂಗಳೂರು :  ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ರಾಜ್ಯ ಹಾಗೂ ರಾಷ್ಟ್ರದಲ್ಲಿ ಭರ್ಜರಿ ಜಯಭೇರಿ ಬಾರಿಸಿದ ಬೆನ್ನಲ್ಲೇ ರಾಜ್ಯ ರಾಜಕಾರಣದಲ್ಲಿ ತಲ್ಲಣ ಉಂಟಾಗಿದ್ದು, ಕಾಂಗ್ರೆಸ್‌ ಮತ್ತು ಜೆಡಿಎಸ್‌ ನೇತೃತ್ವದ ಸಮ್ಮಿಶ್ರ ಸರ್ಕಾರದ ಅಸ್ತಿತ್ವಕ್ಕೆ ಧಕ್ಕೆ ಉಂಟಾಗಿ ಪತನಗೊಳ್ಳಲಿದೆಯೇ ಎಂಬ ಅನುಮಾನಗಳನ್ನು ಹುಟ್ಟು ಹಾಕಿದೆ.

1. ರಾಜ್ಯದಲ್ಲಿ ಪಕ್ಷ 22 ಸ್ಥಾನಗಳಲ್ಲಿ ಗೆಲುವು ಸಾಧಿಸಿದಲ್ಲಿ ಅಧಿಕಾರ ತಾನಾಗಿಯೇ ಬರುತ್ತದೆ ಎಂಬ ಮಾತುಗಳನ್ನು ಚುನಾವಣಾ ಪೂರ್ವದಲ್ಲಿ ಬಿಜೆಪಿ ರಾಷ್ಟೀಯ ಅಧ್ಯಕ್ಷ ಅಮಿತ್‌ ಶಾ ಅವರು ಪಕ್ಷದ ಸಭೆಯಲ್ಲಿ ಹೇಳಿದ್ದರು. ಇದೀಗ ಅವರ ಗುರಿ ಮೀರಿ 25 ಸ್ಥಾನಗಳನ್ನು ಬಿಜೆಪಿ ಗಳಿಸಿದೆ. ಹೀಗಾಗಿ, ಪಕ್ಷದ ವರಿಷ್ಠರೂ ರಾಜ್ಯದಲ್ಲಿ ಪರ್ಯಾಯ ಸರ್ಕಾರ ರಚಿಸುವ ಪ್ರಯತ್ನಕ್ಕೆ ಹಸಿರು ನಿಶಾನೆ ತೋರಬಹುದು ಎಂಬ ಮಾತು ಗಂಭೀರವಾಗಿ ಕೇಳಿಬರುತ್ತಿದೆ.

2. ಚುನಾವಣಾ ಪ್ರಕ್ರಿಯೆ ಆರಂಭವಾಗುವ ಮೊದಲೇ ಆಡಳಿತಾರೂಢ ಕಾಂಗ್ರೆಸ್ಸಿನ ಹಲವು ಶಾಸಕರು ತಮ್ಮ ಸರ್ಕಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಬಿಜೆಪಿಗೆ ಬೆಂಬಲ ನೀಡಲು ಮುಂದಾಗಿದ್ದರು. ಇದಕ್ಕೆ ಪೂರಕವಾಗಿ ಹಲವು ಬೆಳವಣಿಗೆಗಳೂ ನಡೆದಿದ್ದವು. ಆದರೆ, ಚುನಾವಣೆ ಸಮೀಪಿಸಿದ್ದರಿಂದ ರಾಷ್ಟ್ರ ಮಟ್ಟದಲ್ಲಿ ಪಕ್ಷದ ವರ್ಚಸ್ಸಿಗೆ ಧಕ್ಕೆ ಉಂಟಾಗಬಹುದು ಎಂಬ ಕಾರಣಕ್ಕಾಗಿ ಬಿಜೆಪಿ ಹೈಕಮಾಂಡ್‌ ತಡೆ ಒಡ್ಡಿತ್ತು. ಇದೀಗ ಚುನಾವಣೆ ಮುಗಿದಿರುವುದರಿಂದ ಮತ್ತೆ ಚಟುವಟಿಕೆಗಳು ಗರಿಗೆದರಬಹುದು.

3. ಕಾಂಗ್ರೆಸ್ಸಿನ ಮಾಜಿ ಸಚಿವ ಹಾಗೂ ಶಾಸಕ ರಮೇಶ್‌ ಜಾರಕಿಹೊಳಿ ಅವರು ಈಗಾಗಲೇ ಹಲವು ಬಾರಿ ತಾವು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿಕೆ ನೀಡಿದ್ದಾರೆ. ಜೊತೆಗೆ ತಮ್ಮೊಂದಿಗೆ ಹಲವು ಶಾಸಕರಿದ್ದಾರೆ ಎಂದೂ ಅವರು ಪುನರುಚ್ಚರಿಸುತ್ತಲೇ ಬಂದಿದ್ದಾರೆ. ಅವರ ನೇತೃತ್ವದ ತಂಡ ಈಗ ರಾಜೀನಾಮೆಗೆ ಮುಂದಾದಲ್ಲಿ ಮತ್ತೆ ಸರ್ಕಾರದ ಮಟ್ಟದಲ್ಲಿ ಗೊಂದಲ ನಿರ್ಮಾಣವಾಗುವುದು ನಿಶ್ಚಿತ.

4. ಇದೀಗ ಕೇಂದ್ರದಲ್ಲಿ ಮತ್ತೆ ಬಿಜೆಪಿ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದಿರುವುದರಿಂದ ಹಾಗೂ ರಾಜ್ಯದಲ್ಲಿ ದಾಖಲೆ ಎಂಬಂತೆ 25 ಸ್ಥಾನಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಿರುವುದರಿಂದ ಆ ಪಕ್ಷದ ಅಲೆ ಇದೆ ಎಂಬುದು ಸಾಬೀತಾಗಿದೆ. ಹೀಗಾಗಿ, ಆಡಳಿತಾರೂಢ ಪಕ್ಷಗಳ ಅತೃಪ್ತ ಶಾಸಕರು ತಮ್ಮ ರಾಜಕೀಯ ಭವಿಷ್ಯಕ್ಕಾಗಿ ಅವರವರ ಪಕ್ಷ ಉಳಿದುಕೊಳ್ಳುವ ಬದಲು ಬಿಜೆಪಿಗೆ ವಲಸೆ ಬಂದು ಉಪಚುನಾವಣೆ ಎದುರಿಸಲು ಸಜ್ಜಾಗಬಹುದು.

5. ಅತೃಪ್ತ ಶಾಸಕರ ರಾಜೀನಾಮೆ ಪರ್ವ ಆರಂಭವಾಗಿ ಗೊಂದಲ ತೀವ್ರವಾದಲ್ಲಿ ಬಿಜೆಪಿ ರಾಜ್ಯಪಾಲರ ಮೊರೆ ಹೋಗಬಹುದು. ಆಗ ರಾಜ್ಯಪಾಲರು ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚಿಸುವಂತೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಗೆ ಸೂಚಿಸಬಹುದು. ಆ ವೇಳೆ ವಿಶ್ವಾಸಮತ ಯಾಚಿಸಲು ವಿಫಲವಾದಲ್ಲಿ ಸರ್ಕಾರ ಪತನಗೊಳ್ಳಬಹುದು. ಒಂದು ವೇಳೆ ವಿಶ್ವಾಸಮತ ಯಾಚನೆಯಲ್ಲಿ ಸೋಲುಂಟಾಗುವ ಭೀತಿ ಎದುರಾದಲ್ಲಿ ಮುಖ್ಯಮಂತ್ರಿಗಳು ಮುಂಚಿತವಾಗಿಯೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬಹುದು.

click me!