
ಬಾಗಲಕೋಟೆ : ಮಂಡ್ಯದಲ್ಲಿ ತಮ್ಮ ಪುತ್ರನ ವಿರುದ್ಧ ಸಂಚು ನಡೆಯುತ್ತಿದೆ ಎಂದು ಸಿಎಂ ಹೇಳುತ್ತಾರೆ. ಇದನ್ನು ಸಂಚು ಎಂದು ಹೇಳಲಾಗದು, ಇದೊಂದು ರಾಜಕಾರಣ ಎಂದು ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ರಾಜಕಾರಣದಲ್ಲಿ ಒಬ್ಬರನ್ನೊಬ್ಬರು ಸೋಲಿಸುವುದು ಇದ್ದದ್ದೇ. ಆದರೆ ಇದನ್ನು ಸಂಚು ಎಂದು ಕರೆಯಲು ಸಾಧ್ಯವಿಲ್ಲ. ಇದು ಸೂಕ್ತವಾದ ಪದವೂ ಅಲ್ಲ ಎಂದು ಈಶ್ವರಪ್ಪ ಹೇಳಿದ್ದಾರೆ.
ಸಂಚು ಎಂದು ಹೇಳುವುದಾದರೆ ನೀವು ಮಂಡ್ಯದಲ್ಲಿ ಆಗಲೇ ಸೋಲು ಒಪ್ಪಿಕೊಂಡಂತೆ. ನಾವು ಪಕ್ಷೇತರ ಅಭ್ಯರ್ಥಿ ಗೆಲ್ಲಿಸಲೆಂದೆ ಸುಮಲತಾಗೆ ಬೆಂಬಲ ಕೊಟ್ಟಿದ್ದೇವೆ. ತಮ್ಮ ಮಗ ಸೋಲುತ್ತಾನೆ ಎಂದು ಈ ರೀತಿಯಾಗಿ ಹೇಳಿಕೆ ನೀಡುತ್ತಿದ್ದಾರೆ ಎಂದರು.
ಇನ್ನು ಜೆಡಿಸ್ ಕಾಂಗ್ರೆಸ್ ಒಗ್ಗಟ್ಟಾಗಿ ಇರುತ್ತೇವೆ ಎಂದು ಹೇಳುತ್ತಾರೆ. ದೇವೇಗೌಡರು ಬಿಜೆಪಿ ಎರಡಂಕಿ ದಾಟುವುದಿಲ್ಲ ಎಂದು ಹೇಳುತ್ತಾರೆ. ಮೈತ್ರಿ ಬಗ್ಗೆ ವಿಶ್ವಾಸವಿದ್ದವರು ಮಂಡ್ಯದಲ್ಲಿ ಯಾಕೆ ಸೋಲಿನ ಸಂಚು ರೂಪಿಸಿದ್ದಾರೆ ಎನ್ನುತ್ತಾರೆ ಎಂದು ಈಶ್ವರಪ್ಪ ಟಾಂಗ್ ನೀಡಿದರು.
ಸುಮಲತಾ ಸೋಲಿಗಾಗಿ ಈಗ ರಾಹುಲ್ ಗಾಂಧಿಯನ್ನು ಮಂಡ್ಯಕ್ಕೆ ಕರೆದುಕೊಂಡು ಹೋಗ್ತಿದ್ದಾರೆ. ಆದರೆ ಈಗಾಗಲೇ ಜನ ಮಂಡ್ಯದಲ್ಲಿ ಸುಮಲತಾ ಗೆಲ್ಲಿಸಬೇಕು, ನಿಖಿಲ್ ಸೋಲಿಸಬೇಕೆಂದು ತೀರ್ಮಾನ ಮಾಡಿದ್ದಾರೆ ಎಂದು ಈಶ್ವರಪ್ಪ ಹೇಳಿದರು.
ಮುಖ್ಯಮಂತ್ರಿ ಕುಮಾರಸ್ವಾಮಿಗೆ ಮಗನ ಗೆಲುವೊಂದು ಬಿಟ್ಟರೆ ಬೇರೆ ಕಡೆಗೆ ಯಾವುದೇ ರೀತಿಯ ಆಸಕ್ತಿ ಇಲ್ಲ. ಹಾಸನ ತುಮಕೂರಿಗೂ ಸಹ ಪ್ರಚಾರಕ್ಕೆ ಹೋಗುತ್ತಿಲ್ಲ ಎಂದು ಬಾಗಲಕೋಟೆಯಲ್ಲಿ ಕೆ.ಎಸ್ ಈಶ್ವರಪ್ಪ ಹೇಳಿದರು.