ಮೈಸೂರು ಪೇಟಾ ನಂದೇ: ಪ್ರತಾಪ್ ಗಟ್ಟಿ ಮಾತಿನ ಹಿಂದಿನ ಗುಟ್ಟು!

By Web DeskFirst Published May 21, 2019, 5:30 PM IST
Highlights

17ನೇ ಲೋಕಸಭಾ ಚುನಾವಣೆ ಫಲಿತಾಂಶವನ್ನು ಇಡೀ ದೇಶವೇ ಎದುರು ನೋಡುತ್ತಿದ್ದು, ಇನ್ನೊಂದು ದಿನ ಬಾಕಿ ಇದೆ. ಮೈಸೂರಿನಲ್ಲಿ ಹಾಲಿ ಸಂಸದ ಪ್ರತಾಪ್ ಸಿಂಹ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದು, ಗೆಲುವಿನ ಗುಟ್ಟು ಬಿಚ್ಚಿಟ್ಟಿದ್ದಾರೆ. 

ಮೈಸೂರು, (ಮೇ.21): ಹಾಲಿ ಸಂಸದ ಪ್ರತಾಪ್ ಸಿಂಹ ಅವರು ಈ ಬಾರಿಯೂ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ಇಡೀ ಕ್ಷೇತ್ರದಲ್ಲಿ ಬಿಜೆಪಿ ಪರವಾಗಿ ಮತದಾನವಾಗಿದೆ. ಆದ್ದರಿಂದಲೇ ಚುನಾವಣೋತ್ತರ ಸಮೀಕ್ಷೆಗಳು ನನ್ನ ಪರವಾಗಿವೆ. ಯಾವುದೋ ಒಂದು ಸಮೀಕ್ಷೆ ಮಾತ್ರ ಉಲ್ಟಾ ಬಂದಿದ್ದು, ಅದರ ಬಗ್ಗೆ ನಾನು ತಲೆ ಕೆಡಿಸಿಕೊಳ್ಳಲ್ಲ. ನಾನು ಕನಿಷ್ಠ ಒಂದೂವರೆ ಲಕ್ಷ ಮತಗಳ ಅಂತರದಲ್ಲಿ ಗೆಲ್ಲುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಳೆದ ಬಾರಿ ಐವರು ಕಾಂಗ್ರೆಸ್ ಶಾಸಕರಿದ್ದರು. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದರು, ವಿ.ಶ್ರೀನಿವಾಸಪ್ರಸಾದ್, ಎಚ್.ಡಿ.ಮಹದೇವಪ್ಪ ಸಚಿವರಾಗಿದ್ದರು. ಈಗ ಒಬ್ಬರು ಕಾಂಗ್ರೆಸ್ ಶಾಸಕರು ಮಾತ್ರ ಇದ್ದಾರೆ. ಹೀಗಾಗಿ ನಾನು ಗೆಲ್ಲುವುದು ನಿಶ್ಚಿತ ಎಂದು ಆತ್ಮವಿಶ್ವಾಸದಿಂದ ಹೇಳಿದರು.

ನಾವು ಚುನಾವಣೆಯಲ್ಲಿ ಸಂಘಟನಾತ್ಮಕವಾಗಿ ಕೆಲಸ ಮಾಡಿದ್ದೇವೆ. ದೇಶಾದ್ಯಂತ ಬಿಜೆಪಿ 300ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ. ಕಳೆದ ಬಾರಿ ಬಿಜೆಪಿ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬಂದಿದ್ದರೂ ಮಿತ್ರಪಕ್ಷಗಳನ್ನು ಜತೆಗೂಡಿಸಿಕೊಂಡು ಎನ್​ಡಿಎ ಸರ್ಕಾರ ರಚಿಸಿತ್ತು. ಈ ಬಾರಿಯೂ ಅದೇ ರೀತಿ ಎನ್​ಡಿಎ ನೇತೃತ್ವದಲ್ಲೇ ಸರ್ಕಾರ ರಚಿಸುತ್ತೇವೆ ಎಂದು ಹೇಳಿದರು.

ಸಿ ವೋಟರ್ ಹಾಗೂ ಮೈ ಎಕ್ಸಿಸ್ ಎನ್ನುವ ಸಂಸ್ಥೆಗಳು, ಮೈಸೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿಜಯ್ ಶಂಕರ್ ಗೆಲ್ಲಲಿದ್ದು, ಪ್ರತಾಪ್ ಸಿಂಹ ಸೋಲು ಅನುಭವಿಸಲಿದ್ದಾರೆ ಎಂದು ಸಮೀಕ್ಷೆಯಲ್ಲಿ ತಿಳಿಸಿವೆ.

ಗೆದ್ದವರಾರು? ಬಿದ್ದವರಾರು ? ಮಹಾಸಂಗ್ರಾಮದ ಮಹಾಫಲಿತಾಂಶ. ಗುರುವಾರ 23 ಮೇ.

click me!