ಲೋಕಸಭೆ ಚುನಾವಣೆ ಪ್ರಚಾರದ ವೇಳೆ ಬಿಜೆಪಿ ಶಾಸಕ ಸಿ. ಟಿ. ರವಿಗೆ ಘೇರಾವ್ ಹಾಕಿದ ಘಟನೆ ನಡೆದಿದೆ| ಚಿಕ್ಕಮಗಳೂರು ಜಿಲ್ಲೆ ದೇವನೂರಿನಲ್ಲಿ ಸಿ.ಟಿ.ರವಿಗೆ ತರಾಟೆ ತೆಗೆದುಕೊಂಡಿದ್ದಾರೆ.
ಚಿಕ್ಕಮಗಳೂರು, [ಏ.17]: ಚುನಾವಣೆಗೆ ಒಂದು ದಿನ ಬಾಕಿ ಇರುವಾಗ ಬಿಜೆಪಿ ಅಭ್ಯರ್ಥಿ ಪರ ಮತಯಾಚನೆಗೆ ಹೋಗಿದ್ದ ಶಾಸಕ ಸಿ.ಟಿ.ರವಿಗೆ ಚಿಕ್ಕಮಗಳೂರು ತಾಲೂಕಿನ ದೇವನೂರಿನ ಗ್ರಾಮಸ್ಥರು ಘೇರಾವ್ ಹಾಕಿದ್ದಾರೆ.
ಇಂದು [ಬುಧವಾರ] ಉಡುಪಿ_ಚಿಕ್ಕಮಗಳೂರು ಲೋಕಸಭಾ ಅಭ್ಯರ್ಥಿ ಶೋಭಾ ಕರಂದ್ಲಾಜೆ ಪರ ಪ್ರಚಾರಕ್ಕೆ ಹೋಗಿದ್ದ ಸಿ.ಟಿ.ರವಿ ಅವರನ್ನು ಕುಡಿಯುವ ನೀರು, ರಸ್ತೆ ಮೂಲಭೂತ ಸೌಲಭ್ಯ ನೀಡುವಂತೆ ಗ್ರಾಮಸ್ಥರು ತರಾಟೆ ತೆಗೆದುಕೊಂಡರು.
ಸಖತ್ ಕ್ಲಾಸ್ ತೆಗೆದುಕೊಂಡ ಮೇಲೂ ಸಿ.ಟಿ.ರವಿ, ಇದು ದೇಶದ ಚುನಾವಣೆ ಮೋದಿಗೆ ಮತ ಹಾಕಿ ಎಂದರು. ಸ್ಥಳಿಯರು ನೀವು ಹೇಳಿದ್ರು ಮೋದಿಗೆ ವೋಟ್ ಹಾಕ್ತೀವಿ, ಹೇಳದಿದ್ದರೂ ವೋಟ್ ಹಾಕ್ತೀವಿ. ಮೊದಲು ನಮಗೆ ನೀರು ಕೊಡಿ ಎಂದು ಆಗ್ರಹಿಸಿದರು. ಗ್ರಾಮಸ್ಥರು ತರಾಟೆ ತಗೆದುಕೊಳ್ಳುತ್ತಿದ್ದಂತೆ ಸಿ. ಟಿ. ರವಿ. ಸ್ಥಳದಿಂದ ಕಾಲ್ಕಿತ್ತಿದ್ದಾರೆ.