ನಿಖಿಲ್ ಎಲ್ಲಿದ್ದೀಯಪ್ಪ ಟ್ರೋಲ್ ಗೆ ಹೊಸ ಸೇರ್ಪಡೆ| ತಂದೆಗೆ ಸೋಲಿನ ಭಯದಿಂದ ಮನೆಲಿರುವುದಾಗಿ ಹೇಳುವ ನಿಖಿಲ್| ಮಾಜಿ ಸಚಿವ, ಶಾಸಕ ರಾಜುಗೌಡ ಕುಹುಕ| ಮಂಡ್ಯದಲ್ಲಿ ನಿಖಿಲ್ ಸೋಲು ಖಚಿತ ಎಂದ ರಾಜುಗೌಡ| ಮೇ.23ರ ಬಳಿಕ ಮೈತ್ರಿ ಸರ್ಕಾರ ಉರುಳುವುದು ಖಚಿತ ಎಂದ ಶಾಸಕ| ಯಡಿಯೂರಪ್ಪ ಸಿಎಂ ಆಗುವ ಕಾಲ ಸನ್ನಿಹಿತ ಎಂದ ರಾಜುಗೌಡ|
ದಾವಣಗೆರೆ(ಏ.19): ಇಷ್ಟು ದಿನ ನಿಖಿಲ್ ಎಲ್ಲಿದ್ದೀಯಪ್ಪ ಅಂತಾ ಕೇಳಿದ್ರೆ ಮಂಡ್ಯದಲ್ಲಿರುವುದಾಗಿ ಹೇಳುತ್ತಿದ್ದ ನಿಖಿಲ್ ಕುಮಾರಸ್ವಾಮಿ, ಇದೀಗ ತಂದೆ ಕುಮಾರಸ್ವಾಮಿ ನಿಖಿಲ್ ಎಲ್ಲಿದ್ದೀಯಪ್ಪ ಅಂತಾ ಕೇಳಿದರೆ ಸೋಲಿನ ಭಯದಿಂದ ಬೆಂಗಳೂರಿನ ಮನೆಯಲ್ಲಿರುವುದಾಗಿ ಹೇಳುತ್ತಾರೆ ಎಂದು ಮಾಜಿ ಸಚಿವ, ಶಾಸಕ ರಾಜುಗೌಡ ಕುಹುಕವಾಡಿದ್ದಾರೆ.
ದಾವಣಗೆರೆಯಲ್ಲಿ ಮಾತನಾಡಿದ ರಾಜುಗೌಡ, ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಸೋಲು ಕಟ್ಟಿಟ್ಟ ಬುತ್ತಿ ಎಂದು ಹೇಳಿದ್ದಾರೆ. ಅಲ್ಲದೇ ತುಮಕೂರಿನಲ್ಲಿ ಹೆಚ್‌ಡಿ ದೇವೇಗೌಡ ಮತ್ತು ಹಾಸನದಲ್ಲಿ ಪ್ರಜ್ವಲ್ ರೇವಣ್ಣ ಕೂಡ ಸೋಲ್ತಾರೆ ಎಂದು ರಾಜುಗೌಡ ಭವಿಷ್ಯ ನುಡಿದರು.
ಚುನಾವಣೆ ಬಳಿಕ ಯಡಿಯೂರಪ್ಪ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನವನ್ನು ಕಳೆದುಕೊಳ್ಳಲಿದ್ದಾರೆ ಎಂಬ ಶಾಮನೂರು ಶಿವಶಂಕರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದ ರಾಜುಗೌಡ, ಲೋಕಸಭೆ ಚುನಾವಣೆ ಬಳಿಕ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬರಲಿದ್ದು ಸಿಎಂ ಆದ ಬಳಿಕ ಯಡಿಯೂರಪ್ಪ ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಳಿಯವುದು ಸಹಜ ಎಂದು ತಿರುಗೇಟು ನೀಡಿದ್ದಾರೆ.
ಮೇ.23ರ ಬಳಿಕ ಮೈತ್ರಿ ಸರ್ಕಾರ ಬೀಳುವುದು ಶತಸಿದ್ಧವಾಗಿದ್ದು, ರಾಜ್ಯದಲ್ಲಿ ಬಿಜೆಪಿ ಪಕ್ಷ ಮತ್ತೆ ಅಧಿಕಾರದ ಗದ್ದುಗೆ ಹಿಡಿಯಲಿದೆ ಎಂದು ರಾಜುಗೌಡ ಭರವಸೆ ವ್ಯಕ್ತಪಡಿಸಿದರು. ಆದರೆ ಯಾವುದೇ ಕಾರಣಕ್ಕೂ ಆಪರೇಶನ್ ಕಮಲ ಮಾಡುವುದಿಲ್ಲ ಎಂದು ರಾಜುಗೌಡ ಹೇಳಿದರು.