ಮೋದಿ ಕಿತ್ತೆಸೆಯಲು ಬಯಸಿದ್ದ ಅಟಲ್, ಬ್ರೇಕ್ ಹಾಕಿದ್ದ ಅಡ್ವಾಣಿ!

By Web DeskFirst Published May 11, 2019, 2:38 PM IST
Highlights

ಮತ್ತೆ ಸದ್ದು ಮಾಡಿದ ಗುಜರಾತ್ ಧಂಗೆ| ಮೋದಿ ಅಮಾನತಿಗೆ ಯೋಚಿಸಿದ್ದ ವಾಜಪೇಯಿ| ಆದರೆ ಅಡ್ವಾಣಿ ಅಂದು ತೆಗೆದುಕೊಂಡ ಆ ನಿರ್ಧಾರದಿಂದ ಮೋದಿ ಕುರ್ಚಿ ಗಟ್ಟಿ| ಮಾಜಿ ಬಿಜೆಪಿ ನಾಯಕನ ಸ್ಫೋಟಕ ಹೇಳಿಕೆ

ಗಾಂಧೀನಗರ[ಮೇ.11]: ಪ್ರಧಾನಿ ಸ್ಥಾನದ ಪ್ರಬಲ ಅಭ್ಯರ್ಥಿಯಾಗಿ ಬಿಂಬಿತಗೊಂಡಿದ್ದ ಹಾಗೂ ಬಿಜೆಪಿಗೆ ಗುಡ್ ಬೈ ಹೇಳಿದ ನಾಯಕ ಯಶವಂತ್ ಸಿನ್ಹಾ ಲಾಲ್ ಕೃಷ್ಣಾ ಅಡ್ವಾಣಿ ಕುರಿತಾಗಿ ಸ್ಫೋಟಕ ಹೇಳಿಕೆಯೊಂದನ್ನು ನೀಡಿದ್ದಾರೆ. 

ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಕ್ಯಾಬಿನೆಟ್ ಸದಸ್ಯರಾಗಿದ್ದ ಮಾಜಿ ವಿತ್ತ ಸಚಿವ ಯಶವಂತ್ ಸಿನ್ಹಾ ಶುಕ್ರವಾರದಂದು ಮಾತನಾಡುತ್ತಾ 2002ರಲ್ಲಿ ನಡೆದ ಗುಜರಾತ್ ಧಂಗೆ ಬಳಿಕ, ವಾಜಪೇಯಿಯವರು ಅಂದು ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯನ್ನು ಅಮಾನತುಗೊಳಿಸಲು ನಿರ್ಧರಿಸಿದ್ದರು. ಆದರೆ ಇದನ್ನರಿತ ಪಕ್ಷದ ಎರಡನೇ ರ್ಯಾಂಕ್ ನಾಯಕರಾಗಿದ್ದ ಅಡ್ವಾಣಿ ಗೃಹ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಬೆದರಿಕೆಯೊಡ್ಡಿದ್ದರು. ಈ ಕಾರಣದಿಂದಲೇ ಅಂದು ಮೋದಿ ಕುರ್ಚಿ ಉಳಿದುಕೊಂಡಿತ್ತು ಎಂದಿದ್ದಾರೆ.

ಭೋಪಾಲ್ ನ ಕಾರ್ಯಕ್ರಮವೊಂದರಲ್ಲಿ ಕೇಳಲಾದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಬಿಜೆಪಿಯ ಮಾಜಿ ಪ್ರಭಾವಿ ನಾಯಕ ಯಶವಂತ್ ಸಿನ್ಹಾ 'ಗುಜರಾತ್ ನಲ್ಲಿ ನಡೆದ ಕೋಮು ಗಲಭೆ ಬಳಿಕ ಮೋದಿಯನ್ನು ಸಿಎಂ ಕುರ್ಚಿಯಿಂದ ಕೆಳಗಿಳಿಸುವ ನಿರ್ಧಾರ ಕೈಗೊಂಡಿದ್ದರು. ಬಳಿಕ ಗೋವಾದಲ್ಲಿ ನಡೆದಿದ್ದ ಬಿಜೆಪಿ ರಾಷ್ಟ್ರೀಯ ಮುಖಂಡರ ಸಭೆಯಲ್ಲಿ ಒಂದು ವೇಳೆ ಮೋದಿ ರಾಜೀನಾಮೆ ನೀಡದಿದ್ದರೆ, ತಾವೇ ಖುದ್ದು ಅವರನ್ನು ಅಮಾನತುಗೊಳಿಸಲು ನಿರ್ಧರಿಸಿದ್ದರು. ಈ ಕುರಿತಾಗಿ ಅಂದಿನ ಸಭೆಯಲ್ಲಿ ಚರ್ಚೆಯೂ ನಡೆದಿತ್ತು. ನನಗೆ ತಿಳಿದ ಮಟ್ಟಿಗೆ ಅಂದು ವಾಜಪೇಯಿಯವರ ನಿರ್ಧಾರವನ್ನು ಅಡ್ವಾಣಿ ವಿರೋಧಿಸಿದ್ದರು. ಅಲ್ಲದೇ ಮೋದಿಯನ್ನು ಅಮಾನತು ಮಾಡಿದರೆ ತಾನು ಗೃಹ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿಯೂ ಬೆದರಿಕೆ ಹಾಕಿದ್ದರು. ಈ ಕಾರಣದಿಂದ ಅಂದು ಈ ಪ್ರಸ್ತಾಪ ಅಲ್ಲೇ ನಿಂತಿತು ಹಾಗೂ ಮೋದಿ ಮುಖ್ಯಮಂತ್ರಿಯಾಗಿ ಮುಂದುವರೆದರು' ಎಂದಿದ್ದಾರೆ.

ಮೋದಿ ಹಾಗೂ ಅಮಿತ್ ಶಾ ವಿರುದ್ಧ ವಾಗ್ದಾಳಿ ನಡೆಸಿದ ಸಿನ್ಹಾ ಬಿಜೆಪಿ ಇಂದು ಅಟಲ್- ಅಡ್ವಾಣಿ ಕಾಲದಲ್ಲಿದ್ದ ಬಿಜೆಪಿ ಪಕ್ಷವಾಗಿ ಉಳಿದುಕೊಂಡಿಲ್ಲ. ಅಟಲ್ ಜೀ ಕಾಲದಲ್ಲಿ ಸಿದ್ಧಾಂತದ ಸಂಘರ್ಷ ಇರಲಿಲ್ಲ. ಉದಾರವಾದಿತನವಿತ್ತು, ಆದರೆ ಅದು ಇಂದಿನ ಬಿಜೆಪಿ ಪಕ್ಷದಲ್ಲಿಲ್ಲ. ಇಂದು ದೆಶದಲ್ಲಿ ಅಸಹಿಷ್ಣುತೆಯ ವಾತಾವರಣವಿದೆ. ಸದ್ಯ ನಡೆಯುತ್ತಿರುವ ಲೋಕಸಭಾ ಚುನಾವಣೆಯಲ್ಲೂ ಬಿಜೆಪಿ ಪಾಕಿಸ್ತಾನ ಸಮಸ್ಯೆಯನ್ನೇ ಪ್ರಮುಖ ಚುನಾವಣಾ ವಿಚಾರವನ್ನಾಗಿಸಿದೆ, ಇದು ದೌರ್ಭಾಗ್ಯ' ಎಂದಿದ್ದಾರೆ.

click me!