
ನವದೆಹಲಿ(ಏ.25): 2019ರ ಲೋಕಸಭೆ ಚುನಾವಣೆಗೆ ಆಮ್ ಆದ್ಮಿ ಪಕ್ಷ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ದೆಹಲಿಗೆ ಸಂಪೂರ್ಣ ರಾಜ್ಯದ ಸ್ಥಾನಮಾನ ನೀಡುವ ಭರವಸೆ ನೀಡಿದೆ.
ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಇಂದು ಪ್ರಣಾಳಿಕೆ ಬಿಡುಗಡೆ ಮಾಡಿದ ಸಿಎಂ ಅರವಿಂದ್ ಕೇಜ್ರಿವಾಲ್, ದೆಹಲಿಗೆ ಪೂರ್ಣ ಪ್ರಮಾಣದ ರಾಜ್ಯ ಸ್ಥಾನಮಾನ ಸಿಗುವವರೆಗೂ ನಮ್ಮ ಹೋರಾಟ ಮುಂದುವರೆಯಲಿದೆ ಎಂದು ಹೇಳಿದ್ದಾರೆ.
ಮುಂದಿನ ವಿಧಾನಸಭೆಯಲ್ಲೂ ಆಪ್ ಪಕ್ಷ ಅಧಿಕಾರಕ್ಕೆ ಬರಲಿದ್ದು, ದೆಹಲಿಗೆ ಪೂರ್ಣ ಪ್ರಮಾಣದ ರಾಜ್ಯ ಸ್ಥಾನಮಾನ ಸಿಗಬೇಕಾದರೆ ಲೋಕಸಭೆಗೆ ಹೆಚ್ಚಿನ ಸಂಖ್ಯೆಯಲ್ಲಿ ಆಪ್ ಅಭ್ಯರ್ಥಿಗಳು ಆಯ್ಕೆಯಾಗಬೇಕಿದೆ ಎಂದು ಕೇಜ್ರಿವಾಲ್ ಹೇಳಿದರು.
ಇದೇ ವೇಳೆ ಪ್ರಧಾನಿ ಮೋದಿ-ಅಮಿತ್ ಶಾ ಜೋಡಿಯನ್ನು ತಡೆಯಲು, ಆಪ್ ಯಾವುದೇ ಜಾತ್ಯತೀತ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳಲು ಸಿದ್ಧ ಎಂದು ದೆಹಲಿ ಸಿಎಂ ಘೋಷಿಸಿದರು.