'ಸ್ಮೃತಿ'ಪಟಲದಲ್ಲಿದೆ ಅಮೇಥಿ: ಇರಾನಿ ಗೆಲುವಿನ ಕಾರಣ ಇಲೈತಿ!

By Web DeskFirst Published Apr 13, 2019, 2:28 PM IST
Highlights

ಕಾಂಗ್ರೆಸ್ ಕೋಟೆ ಛಿದ್ರಗೊಳಿಸಲು ಸಜ್ಜಾಗಿದ್ದಾರೆ ಸ್ಮೃತಿ ಇರಾನಿ| ಅಮೇಥಿಯ ಬಿಜೆಪಿ ಅಭ್ಯರ್ಥಿ ಸ್ಮೃತಿ ಇರಾನಿ ಜೊತೆ ಮೈ ನೇಶನ್ ಸಂದರ್ಶನ| ಕಾಂಗ್ರೆಸ್ ಅಧ್ಯಕ್ಷ ರಾಹುಕಲ್ ಗಾಂಧಿ ನಿದ್ದೆಗೆಡೆಸಿರುವ ಸ್ಮೃತಿ ಪ್ರಚಾರ ವೈಖರಿ| ಗಾಂಧಿ ಪರಿವಾರದ ಕ್ಷೇತ್ರ ಕಸಿಯಲಿದ್ದಾರಾ ಸ್ಮೃತಿ ಇರಾನಿ?| ಸ್ಮೃತಿ ಇರಾನಿ ಗೆಲುವಿಗಿರುವ ಪ್ರಮುಖ ಕಾರಣಗಳು ಏನು?| ಅಮೇಥಿ ಕ್ಷೇತ್ರಕ್ಕೆ ಸ್ಮೃತಿ ಇರಾನಿ ಕೊಡುಗೆ ಏನು? ಗೆಲುವಿನ ಮೂಲಕ ಇತಿಹಾಸ ಬರೆಯಲಿದ್ದಾರಾ ಸ್ಮೃತಿ ಇರಾನಿ?|

ಅಮೇಥಿ(ಏ.13): ಕರ್ನಾಟಕದ ಮಟ್ಟಿಗೆ ಮಂಡ್ಯ ಲೋಕಸಭಾ ಕ್ಷೇತ್ರ ಹೇಗೆ ಕುತೂಹಲ ಕೆರಳಿಸಿದೆಯೋ, ಅದೇ ರೀತಿ ಉತ್ತರ ಪ್ರದೇಶದಲ್ಲಿ ಮತ್ತು ರಾಷ್ಟ್ರ ಮಟ್ಟದಲ್ಲಿ ಅಮೇಥಿ ಕ್ಷೇತ್ರ ತೀವ್ರ ಕುತೂಹಲ ಮೂಡಿಸಿದೆ.

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅಭ್ಯರ್ಥಿಯಾಗಿರುವ ಅಮೇಥಿ ಕ್ಷೇತ್ರಕ್ಕೆ ಬಿಜೆಪಿಯ ಸ್ಮೃತಿ ಇರಾನಿ ಲಗ್ಗೆ ಅಭ್ಯರ್ಥಿಯಾಗಿ ಲಗ್ಗೆ ಇಟ್ಟಿದ್ದಾರೆ. ಕಳೆದ ಬಾರಿ ಸ್ಮೃತಿ ಇರಾನಿ ಸ್ಪರ್ಧೆ ಅಷ್ಟೇನೂ ಕುತೂಹಲ ಮೂಡಿಸಿರಲಿಲ್ಲವಾದರೂ, 5 ವರ್ಷಗಳ ಬಳಿಕ ಇಲ್ಲಿನ ರಾಜಕೀಯದಲ್ಲಿ ಸಾಕಷ್ಟು ನೀರು ಹರಿದಿದೆ.

'ನಾನು ಬರುತ್ತಿದ್ದೇನೆ..'ಎಂಬ ಸಂದೇಶ ಹೊತ್ತು ಸ್ಮೃತಿ ಇರಾನಿ ಅಮೇಥಿಗೆ ಕಾಲಿಟ್ಟಿದ್ದಾರೆ. ಭರ್ಜರಿ ಪ್ರಚಾರ, 5 ವರ್ಷಗಳಲ್ಲಿ ಕೇಂದ್ರ ಸರ್ಕಾರ ಈ ಕ್ಷೇತ್ರದಲ್ಲಿ ಮಾಡಿದ ಅಭಿವೃದ್ಧಿ ಕಾರ್ಯ ಮತ್ತು ವಂಶವಾದ ರಾಜಕಾರಣವನ್ನು ಎದುರು ಹಾಕಿಕೊಳ್ಳುವ ಛಾತಿಯನ್ನು ಸ್ಮೃತಿ ಇರಾನಿ ಬೆನ್ನಿಗೆ ಕಟ್ಟಿಕೊಂಡು ಬಂದಿದ್ದಾರೆ.

ಅಮೇಥಿಯಲ್ಲಿ ಗೆಲುವಿನ ಅನುಮಾನ ಮೂಡಿದ್ದರಿಂದಲೇ ರಾಹುಲ್ ಗಾಂಧಿ ದಕ್ಷಿಣದ ಕೇರಳಕ್ಕೆ ವಲಸೆ ಬಂದಿದ್ದಾರೆ ಎಂಬ ಮಾತುಗಳೂ ಇಲ್ಲಿ ಜೋರಾಗಿಯೇ ಕೇಳಿ ಬರುತ್ತಿದೆ. ರಾಹುಲ್ ಕೇರಳದಿಂದ ಸ್ಪರ್ಧೆ ಮಾಡುವ ಮೂಲಕ ಸತತ 15 ವರ್ಷ ಅವರನ್ನು ಗೆಲ್ಲಿಸಿದ ಅಮೇಥಿ ಜನರಿಗೆ ಅಪಮಾನ ಮಾಡಿದ್ದಾರೆ ಎಂಬ ಸ್ಮೃತಿ ಇರಾನಿ ಆರೋಪದಲ್ಲಿ ಹುರುಳಿದ್ದಂತಿದೆ.

ಅಮೇಥಿಯಲ್ಲಿ ಸ್ಮಥರಿ ಇರಾನಿ ಗೆಲುವಿನ ಸಾಧ್ಯತೆ ಹೆಚ್ಚಾಗಿದೆ ಎಂಬ ವಿಶ್ಲೇಷಣಗಳ ಮಧ್ಯೆ ಸ್ಮೃತಿ ಇರಾನಿ ಮೈ ನೇಶನ್ ಜೊತೆ ವಿಶೇಷ ಸಂದರ್ಶನ ನೀಡಿದ್ದು, ತಮ್ಮ ಗೆಲುವಿಗೆ ಕಾರಣಗಳನ್ನು ನೀಡಿದ್ದಾರೆ.

1. ರಾಹುಲ್‌ಗೆ ಧನಸಹಾಯದ ಮೂಲ ಕಟ್?:

ಗಾಂಧಿ ಪರಿವಾರದ ಕ್ಷೇತ್ರ ಎಂದೇ ಗುರುತಿಸಿಕೊಂಡಿದ್ದ ಅಮೇಥಿಯಲ್ಲಿ ಇದುವರೆಗೂ ಗೆದ್ದು ಬಂದಿದ್ದು ಗಾಂಧಿ ವಂಶದ ಕುಡಿಗಳೇ. ಅದರಂತೆ ರಾಹುಲ್ ಗಾಂಧಿ ಕೂಡ ಈ ಕ್ಷೇತ್ರದಿಂದ ಸತತ ಮೂರು ಬಾರಿ ಸಂಸದರಾಗಿ ಆಯ್ಕೆಯಾಗಿ ಬಂದಿದ್ದಾರೆ.

ಚುನಾವಣೆಯಲ್ಲಿ ಹನದ ಹೊಳೆ ಹರಿಯುವುದು ಸಾಮಾನ್ಯ ಸಂಗತಿ. ಆದರೆ ತನ್ನ ಭದ್ರಕೋಟೆಯನ್ನಾಗಿ ಮಾಡಿಕೊಂಡ ಅಮೇಥಿಯಲ್ಲಿ ಕಾಂಗ್ರೆಸ್‌ನ ಕುರುಡು ಕಾಂಚಾಣದ ರುದ್ರ ನರ್ತನ ರಹಸ್ಯವಾಗಿಯೇನೂ ಉಳಿದಿಲ್ಲ.

ಆದರೆ ಉತ್ತರ ಪ್ರದೇಶ ಮತ್ತು ಕೇಂದ್ರ ಸರ್ಕಾರ ಚುನಾವಣೆಗಳಲ್ಲಿ ಕಪ್ಪುಹಣದ ವಹಿವಾಟಿನ ಮೇಲೆ ತೀವ್ರ ನಿಗಾ ಇರಿಸಿದ ಪರಿಣಾಮ ಅಮೇಥಿಯಲ್ಲಿ ಹಣ ಹಂಚುವುದು ಕಾಂಗ್ರೆಸ್‌ಗೆ ಕಷ್ಟಸಾಧ್ಯವಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಅದರಲ್ಲೂ ಅಮೇಥಿಯ ಕೆಲವು ಹಿರಿಯ ಕಾಂಗ್ರೆಸ್ ನಾಯಕರು ಈ ಬಾರಿ ಬಿಜೆಪಿ ಸೇರಿದ್ದು, ಕಾಂಗ್ರೆಸ್‌ನ ಹಣದ ಮೂಲದ ಕುರಿತು ಬಿಜೆಪಿಗೆ ಅವರು ಮಾಹಿತಿ ನೀಡುತ್ತಿರುವುದು ಕಾಂಗ್ರೆಸ್‌ಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

2. 5 ವರ್ಷದಿಂದ ಕ್ಷೇತ್ರದಲ್ಲಿ ಸ್ಮೃತಿ ಕೆಲಸ:

2014ರ ಲೋಕಸಭಾ ಚುನಾವಣೆಯಲ್ಲಿ ಸೋತ ಬಳಿಕ ಸ್ಮೃತಿ ಇರಾನಿ ಕ್ಷೇತ್ರದಿಂದ ಮುಖ ತಿರುಗಿಸಿಲ್ಲ. ಅಮೇಥಿಯೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದ ಸ್ಮೃತಿ ಇರಾನಿ, ಇಲ್ಲಿನ ಅಭಿವೃದ್ಧಿ ಕಾರ್ಯಗಳಿಗೆ ಕೇಂದ್ರ ಸರ್ಕಾರದಿಂದ ಅನುದಾನ ತರುವಲ್ಲಿ ಯಶಸ್ವಿಯಾಗಿದ್ದಾರೆ. ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಹರಿದು ಬರುವಂತೆ ಮಾಡುವಲ್ಲಿಯೂ ಸ್ಮೃತಿ ಮಹತ್ತರ ಪಾತ್ರ ನಿರ್ವಹಿಸಿದ್ದಾರೆ.

2014ರ ಲೋಕಸಭೆ ಚುನಾವಣೆ ಬಳಿಕ ನಡೆದ ವಿಧಾನಸಭೆ ಚುನಾವಣೆಯಲ್ಲಿ ಅಮೇಥಿ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ಒಟ್ಟು 5 ವಿಧಾನಸಭಾ ಕ್ಷೇತ್ರಗಳ ಪೈಕಿ 4 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಜಯಗಳಿಸಿದೆ. ಇದೂ ಕೂಡ ಸ್ಮೃತಿ ಗೆಲುವಿಗೆ ಸಹಾಯಕಾರಿಯಾಗಬಲ್ಲದು.

3. ಮುಸ್ಲಿಂ ಮತಗಳ ಹಂಚಿಕೆ:

ಕಾಂಗ್ರೆಸ್ ಬಹುವಾಗಿ ಮೆಚ್ಚಿಕೊಂಡಿರುವ ಮುಸ್ಲಿಂ ಮತಗಳು ಉತ್ತರ ಪ್ರದೇಶದಲ್ಲಿ ಧೃವೀಕರಣಗೊಂಡಿರುವುದು ಸುಳ್ಳಲ್ಲ. ಇದು ಅಮೇಥಿ ಕ್ಷೇತ್ರದ ಮೇಲೂ ಪರಿಣಾಮ ಬೀರಲಿರುವುದು ನಿಶ್ಚಿತ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಎಸ್‌ಪಿ, ಬಿಎಸ್ ಪಿ, ಕಾಂಗ್ರೆಸ್ ಹೀಗೆ ಮುಸ್ಲಿಂ ಮತಗಳು ಹರಿದು ಹಂಚಿ ಹೋಗಿ ಬಿಜೆಪಿಗೆ ಅನುಕೂಲವಾಗಿತ್ತು.

ಅಷ್ಟೇ ಅಲ್ಲದೇ ಸ್ವಲ್ಪ ಪ್ರಮಾಣದಲ್ಲಿ ಮುಸ್ಲಿಂ ಮತಗಳು ಬಿಜೆಪಿ ಪರವಾಗಿ ಇರುವುದೂ ಅಮೇಥಿ ಕ್ಷೇತ್ರದಲ್ಲಿ ಕಾಂಗ್ರೆಸ್‌ನ್ನು ಚಿಂತೇಗೀಡುವಂತೆ ಮಾಡಿದೆ.

4. ಕ್ಷೇತ್ರದ ಅಭಿವೃದ್ಧಿ ಕಡೆಗಣಿಸಿದ ಕಾಂಗ್ರೆಸ್:

ಸ್ವಾತಂತ್ರ್ಯೋತ್ತರ ಭಾರತದದಲ್ಲಿ ಗಾಂಧಿ ಪರಿವಾರವನ್ನು ಕಣ್ಣುಮುಚ್ಚಿ ನಂಬಿದ, ಚುನಾವಣೆಗಳಲ್ಲಿ ಗೆಲ್ಲಿಸಿದ ಅಮೇಥಿ ಕ್ಷೇತ್ರದ ಅಭಿವೃದ್ಧಿಯನ್ನು ಕಾಂಗ್ರೆಸ್ ಕಡೆಗಣಿಸಿರುವುದು ಕನ್ನಡಿಯಲ್ಲಿನ ಸತ್ಯ.

ಕ್ಷೇತ್ರದಲ್ಲಿ ಪುರುಷ ಸಾಕ್ಷರತೆ ಪ್ರಮಾಣ ಕೇವಲ 64.4ರಷ್ಟಿದ್ದು, ಮಹಿಳಾ ಸಾಕ್ಷರತೆ ಪ್ರಮಾಣ 53.5ರಷ್ಟಿದೆ. ತಲಾವಾರು ವರಮಾನ ಕೇವಲ 15,559ರೂ ಇದ್ದರೆ, ರಾಜ್ಯದ ತಲಾವಾರು ವರಮಾನ 26,698 ರೂ. ಇದೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರುವುದಕ್ಕೂ ಮೊದಲು ಕ್ಷೇತ್ರದಲ್ಲಿ ಕೇವಲ ಶೇ. 37.2ರಷ್ಟು ಮನೆಗಳಿಗೆ ಮಾತ್ರ ವಿದ್ಯುತ್ ಸೌಕರ್ಯವವಿತ್ತು. ಇದೀಗ ಈ ಸಂಖ್ಯೆ ದ್ವಿಗುಣಗೊಂಡಿದೆ.

5. ಅಮೇಥಿಗೆ ಸ್ಮೃತಿ ಇರಾನಿ ಕೊಡುಗೆ ಏನು?:

ಸೋತರೂ ಕ್ಷೇತ್ರದೊಂದಿಗೆ ಸಂಬಂಧ ಗಟ್ಟಿಗೊಳಿಸುತ್ತಲೇ ಹೋದ ಸ್ಮೃತಿ ಇರಾನಿ, ಕೇಂದ್ರ ಸರ್ಕಾರದ ನೆರವಿನೊಂದಿಗೆ ಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳಿಗೆ ಕಾರಣೀಭೂತರಾಗಿದ್ದಾರೆ.

ವಿಶ್ವದ ಅತೀ ದೊಡ್ಡ ಆರೋಗ್ಯ ಯೋಜನೆಯಾದ ಆಯುಷ್ಮಾನ್ ಭಾರತ ಯೋಜನೆಯಡಿಯಲ್ಲಿ ಅಮೇಥಿಯಲ್ಲಿ ಸುಮಾರು 1.75 ಲಕ್ಷ ಕುಟುಂಬಗಳು ಆರೋಗ್ಯ ಸೇವೆ ಪಡೆಯುತ್ತಿವೆ. ಸೌಭಾಗ್ಯ ಯೋಜನೆಯಡಿ ಕ್ಷೇತ್ರದಲ್ಲಿ ಬಹುತೇಕ ಕುಟುಂಬಗಳು ವಿದ್ಯುತ್ ಸೌಕರ್ಯ ಪಡೆದುಕೊಂಡಿವೆ.

ಅಮೇಥಿಯಲ್ಲಿ ಇದೇ ಮೊದಲ ಬಾರಿಗೆ ಕೃಷಿ ವಿಜ್ಞಾನ ಕೇಂದ್ರವನ್ನು ಸ್ಥಾಪಿಸಲಾಗಿದೆ. ಅಲ್ಲದೇ ಮಣ್ಣು ಪರೀಕ್ಷಾ ಕೇಂದ್ರವನ್ನೂ ಕೂಡ ಸ್ಥಾಪಿಸಲಾಗಿದೆ. ಇದೆಲ್ಲಕೂ ಮಿಗಿಲಾಗಿ ಅಮೇಥಿಯಲ್ಲಿ ಎಕೆ-47 ಶಸ್ತ್ರ ತಯಾರಿಕಾ ಘಟಕ ಸ್ಥಾಪಿಸಿ ಉದ್ಯೋಗ ಸೃಷ್ಟಿಗೆ ಪ್ರಧಾನಿ ಮೋದಿ ನೆರವಾಗಿದ್ದಾರೆ.

6. ರಾಜ್ಯದಲ್ಲಿ ಬಿಜೆಪಿ ಸರ್ಕಾರ:

ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದು, ಇದೂ ಕೂಡ ಸ್ಮೃತಿ ಇರಾನಿ ಗೆಲುವಿಗೆ ಕಾರಣವಾಗಬಹುದು ಎಂದು ಅಂದಾಜಿಸಲಾಗಿದೆ. 2014ರ ಲೋಕಸಭೆ ಚುನಾವಣೆಯಲ್ಲಿ ಕೇವಲ 20 ದಿನ ಪ್ರಚಾರ ಮಾಡಿಯೂ ರಾಹುಲ್ ಕೇವಲ 1.07 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಲು ಕಾರಣರಾಗಿದ್ದ ಸ್ಮೃತಿ ಇರಾನಿ ಈ ಬಾರಿ ಮ್ಯಾಜಿಕ್ ಮಾಡಲಿರುವುದು ಖಚಿತ ಎನ್ನುತ್ತಿವೆ ವಿವಿಧ ವಿಶ್ಲೇಷಣೆಗಳು.

ದೇಶದಲ್ಲಿ ಏ.11ರಿಂದ ಮೇ.19 ರವರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23 ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28.

click me!