ರಣ ರಣ ಮಂಡ್ಯದಲ್ಲಿ ಕೊನೆಗೂ ಸ್ವಾಭಿಮಾನಕ್ಕೆ ಗೆಲುವು ಸಿಕ್ಕಿದೆ. ನಿಖಿಲ್ ಕುಮಾರಸ್ವಾಮಿ ವಿರುದ್ಧ ಸುಮಲತಾ ಅಂಬರೀಶ್ ಒಂದು ಲಕ್ಷಕ್ಕೂ ಅಧಿಕ ಮತಗಳಿಂದ ಜಯಭೇರಿ ಬಾರಿಸಿದ್ದಾರೆ. ಹಾಗಾದ್ರೆ ನಿಖಿಲ್ ಕುಮಾರಸ್ವಾಮಿ ಸೋಲಿಗೆ ಕಾರಣಗಳೇನು..? ಈ ಕೆಳಗಿನಂತಿವೆ.
ಬೆಂಗಳೂರು, [ಮೇ.23]: ಎಲ್ಲರ ಕುತೂಹಲಕ್ಕೆ ಕಾರಣವಾಗಿದ್ದ ರಣ ರಣ ಮಂಡ್ಯದ ಲೋಕಸಭೆ ಚುನಾವಣೆ ಫಲಿತಾಂಶ ಕೊನೆಗೂ ಹೊರಬಿದ್ದಿದೆ. ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರು ಅಭೂತ ಪೂರ್ವ ಗೆಲುವು ಸಾಧಿಸಿ, ನಿಖಿಲ್ ಕುಮಾರಸ್ವಾಮಿಗೆ ಭಾರೀ ಆಘಾತ ನೀಡಿದ್ದಾರೆ.
ತೀವ್ರ ಜಿದ್ದಾಜಿದ್ದಿಗೆ ಕಾರಣವಾಗಿದ್ದ ಮಂಡ್ಯ ಲೋಕಸಭಾ ಕ್ಷೇತ್ರ ಮತದಾರ ಕೊನೆಗೂ 'ಸ್ವಾಭಿಮಾನಕ್ಕೆ ಮತಹಾಕಿದ್ದಾರೆ. ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಸುಮಲತಾ ಅಂಬರೀಶ್ ಅವರು 703660 ಮತಗಳನ್ನು ಪಡೆದರೆ, ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ನಿಖಲ್ ಕುಮಾರಸ್ವಾಮಿ 577784 ಮತಗಳನ್ನು ಪಡೆದಿದ್ದಾರೆ. ಈ ಮೂಲಕ ಸುಮಲತಾ 125876 ಮತಗಳಿಂದ ಗೆದ್ದು ಬೀಗಿದ್ದಾರೆ.
ಪುತ್ರ ನಿಖಿಲ್ ಕುಮಾರಸ್ವಾಮಿ ಪರ ಖುದ್ದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ, ಎಂಟು ಜನ ಶಾಸಕರು ಮಂಡ್ಯದಲ್ಲೇ ಠಿಕಾಣಿ ಹೂಡಿ ಹಲವು ಲೆಕ್ಕಾಚಾರಗಳನ್ನು ಮಾಡಿ ಪ್ರಚಾರ ಮಾಡಿದರೂ ಎಲ್ಲಾ ಲೆಕ್ಕಾಚಾರಗಳು ಉಲ್ಟಾಪಲ್ಟವಾಗಿವೆ.
ಅಷ್ಟಕ್ಕೂ ಜೆಡಿಎಸ್ ಎಡವಿದ್ದೇಲಿ..? ನಿಖಿಲ್ ಕುಮಾರಸ್ವಾಮಿ ಸೋಲಿಗೆ ಕಾರಣವಾದ ಆರು ಕಾರಣಗಳಾವುವು..? ನೋಡೋಣ ಬನ್ನಿ.
ಕಾರಣ:1 ಉದ್ಘಟತನ ಹೇಳಿಕೆಗಳು
ಹೌದು...ಸುಮಲತಾ ಅವರ ವಿರುದ್ಧ ಜೆಡಿಎಸ್ ನಾಯಕರ ಅಪ್ರಬುದ್ಧ ಹೇಳಿಕೆ ನಿಖಿಲ್ ಸೋಲಿಗೆ ಬಹುಮುಖ್ಯ ಕಾರಣ. 'ಗಂಡ ಸತ್ತು ಮೂರು ತಿಂಗಳಾಗಿಲ್ಲ, ಇವೆಲ್ಲ ಬೇಕಾ?'ಎಂದು ಸಚಿವ ರೇವಣ್ಣ ಹೇಳಿಕೆ ನೀಡಿದ್ದು, 'ಸುಮಲತಾ ಅವರು ಗೌಡ್ತಿ ಅಲ್ಲ' ಸೇರಿದಂತೆ ಶಿವರಾಮೇಗೌಡರ ಅವಾಚ್ಯ ಹೇಳಿಕೆಗಳು ನಿಖಿಲ್ ಸೋಲಿಗೆ ಪ್ರಮುಖ ಕಾರಣ. ನಿ
ಕಾರಣ 2: ಅತಿಯಾದ ಆತ್ಮವಿಶ್ವಾಸ
ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಒಳಪಡುವ 8 ಜನ ಶಾಸಕರು, ಸಿಎಂ ಕುಮಾರಸ್ವಾಮಿ, ಸರ್ಕಾರ, ಮಾಜಿ ಪ್ರಧಾನಿ ದೇವೇಗೌಡರ ಹೆಸರು. ಇಷ್ಟೇಲ್ಲ ಇದ್ದು ಅದು ಹೇಗೆ ಸೋಲುತ್ತೇವೆ ಎನ್ನುವ ಆತ್ಮವಿಶ್ವಾಸ. ಇನ್ನು ಮುಖ್ಯವಾಗಿ ಸುಮಲತಾಗೆ ಅಭಿಮಾನಿಗಳಿರಬಹದು ಆದ್ರೆ ಅದು ವೋಟ್ ಆಗಿ ಪರಿವರ್ತನೆ ಆಗುವುದಿಲ್ಲ ಎನ್ನುವುದು ಜೆಡಿಎಸ್ ನವರ ಅತಿಯಾದ ಆತ್ಮವಿಶ್ವಾವೇ ನಿಖಿಲ್ ಗೆ ಮುಳುವಾಯ್ತು.
ಕಾರಣ 3: ಸಿಎಂ ಕುಮಾರಸ್ವಾಮಿಯ ಬಾಲಿಶ ಹೇಳಿಕೆಗಳು
'ಬೇಲಿಯೇ ಎದ್ದು ಹೊಲ ಮೇದಂತೆ' ಕೇವಲ ನಾಯಕರುಗಳು ಮಾತ್ರವಲ್ಲದೇ ಸ್ವತಃ ಸಿಎಂ ಕುಮಾರಸ್ವಾಮಿ ಅವರೇ ಬಹಿರಂಗವಾಗಿ ಸುಮಲತಾ ಅವರ ವಿರುದ್ಧ ಇಲ್ಲಸಲ್ಲದ ಹೇಳಿಕೆಗಳು ಸಹ ನಿಖಿಲ್ ಗೆಲುವಿಗೆ ಮುಳುವಾಗಿವೆ. ರೖತರು ಸತ್ತಾಗ ಸುಮಕ್ಕ ಎಲ್ಲಿದ್ರು..? ಬಸ್ ಬಿದ್ದಾಗ ಸುಮಕ್ಕ ಎಲ್ಲಿ ಮಲಗಿದ್ರು..?, ಅಂಬರೀಶ್ ಶವ ನಾನೆ ತಂದಿದ್ದು, ಕಳ್ಳೆತ್ತು-ಜೋಡೆತ್ತು. ಹೀಗೆ ಕುಮಾರಸ್ವಾಮಿ ಅವರ ಬಾಲಿಶ ಹೇಳಿಕೆಗಳು ಸಹ ಸೋಲಿಗೆ ಕಾರಣಗಳು ಎನ್ನಬಹುದು.
ಕಾರಣ 4: ಯಶ್-ದರ್ಶನ್ ಟಾರ್ಗೆಟ್
ನೂರಕ್ಕೆ ನೂರಷ್ಟು ಸತ್ಯ ಮುಖ್ಯಮಂತ್ರಿ ಕುಮಾರಸ್ವಾಮಿ ಸೇರಿದಂತೆ ಜೆಡಿಎಸ್ ನಾಯಕರುಗಳು ನಟರಾದ ಯಶ್ ಹಾಗೂ ದರ್ಶನ್ ಅವರನ್ನು ವೈಯಕ್ತಿ ಟಾರ್ಗೇಟ್ ಮಾಡಿದರು. ಅದು ಯಶ್-ದರ್ಶನ್ ಅಭಿಮಾನಿಗಳು ಜೆಡಿಎಸ್ ವಿರುದ್ಧ ಸಿಡಿದೆದ್ದಿರುವುದು ಸಹ ನಿಖಿಲ್ ಹಿನ್ನೆಡೆಗೆ ಕಾರಣ.
ಕಾರಣ 5: ಜೆಡಿಎಸ್ ನ ಕುತಂತ್ರಿ ರಾಜಕಾರಣ
ಇದು ನಿಖಿಲ್ ಕುಮಾರಸ್ವಾಮಿ ಪ್ರಮುಖ ಕಾರಣವಾಗಿದೆ. ಮಂಡ್ಯದಲ್ಲಿ ಗೆಲ್ಲಲೇಬೇಕೆಂದು ಸುಮಲತಾ ಅವರನ್ನು ವೈಯಕ್ತಿ ನಿಂಧಿಸುವುದು ಮಾತ್ರವಲ್ಲದೇ ಅವರ ವಿರುದ್ಧ ಹಲವು ಕುತಂತ್ರಿ ರಾಜಕಾರಣ ಮಾಡಿದ್ದು ಸೋಲಿ ಪ್ರಮುಖ ಅಂಶವಾಗಿದೆ. ಮತದಾರರಿಗೆ ಗೊಂದಲ ಸೃಷ್ಟಿಸಲು 3 ಜನ ಸುಮಲತಾ ಎನ್ನುವರಿಂದ ನಾಮಪತ್ರ ಹಾಕಿಸಿದರು. ಅದ್ರಲ್ಲೂ ಅವರ ಕ್ರಮ ಸಂಖ್ಯೆ ಅಕ್ಕ ಪಕ್ಕ ಮತ್ತು ಸೇಮ್ ಸೀರೆ ಕನ್ನಡಕ ಹಾಕ್ಸಿದ್ದು. ಸುಮಲತಾ ಅವರ ಹಿಂದೆ ಗೂಢಾಚಾರಿಗಳನ್ನು ಬಿಟ್ಟಿದ್ದು ಹೀಗೆ ಹಲವು ಕುತಂತ್ರ ರಾಜಕಾರಣವೇ ಮುಳುವಾದವು.
ಕಾರಣ 6: ಕುಮಾರಸ್ವಾಮಿ ಯಾರ ಕಾಲು ಹಿಡಿಯಲ್ಲ ಎಂದಿದ್ದು
ಮಂಡ್ಯದಲ್ಲಿ ಪುತ್ರನ ಗೆಲುವಿಗೆ ಕಾಂಗ್ರೆಸ್ ನಾಯಕರಾದ ಚಲುವರಾಸ್ವಾಮಿ, ನರೇಂದ್ರಸ್ವಾಮಿ ಸೇರಿದಂತೆ ಇನ್ನು ಕೆಲ ನಾಯಕರನ್ನು ಕಡೆಗಣಿಸಿದ್ದಲ್ಲದೇ ಅವರ ವಿರುದ್ಧ ಇಲ್ಲಸಲ್ಲದ ಹೇಳಿಕೆಗಳನ್ನು ನೀಡಿದ್ದು ಸೋಲಿಗೆ ಪ್ರಮುಖ ಅಂಶವಾಗಿದೆ. ನಾನು ಯಾರ ಕಾಲು ಹಿಡಿಯುವುದಿಲ್ಲ ಎಂದು ಸಿಎಂ ಕುಮಾರಸ್ವಾಮಿ ಅವರು ಪರೋಕ್ಷವಾಗಿ ಚಲುವರಾಸ್ವಾಮಿ ಹಾಗೂ ನರೇಂದ್ರಸ್ವಾಮಿ ವಿರುದ್ಧ ಕಿಡಿಕಾರಿದ್ದರು.