ಬೆಂಗಳೂರು (ಅ.16): ದೇಶದ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿಗಳ (IIT) ಪ್ರವೇಶಕ್ಕೆ ನಡೆಯುವ ಜೆಇಇ (JEE) (ಅಡ್ವಾನ್ಸ್) ಪರೀಕ್ಷಾ ಫಲಿತಾಂಶ ಶುಕ್ರವಾರ ಪ್ರಕಟವಾಗಿದ್ದು, ಬೆಂಗಳೂರಿನ (Bengaluru) ಆಕ್ಸ್‌ಫರ್ಡ್ ಇಂಡಿಪೆಂಡೆಂಟ್ ಪಿಯು ಕಾಲೇಜಿನ (Oxford independent PU college) ವಿದ್ಯಾರ್ಥಿ (Students) ವೀರೇಶ್ ಬಿ.ಪಾಟೀಲ್ ರಾಜ್ಯಕ್ಕೆ ಪ್ರಥಮ ರ‍್ಯಾಂಕ್ (First Rank) ಹಾಗೂ ದೇಶಕ್ಕೆ 39ನೇ ರ‍್ಯಾಂಕ್ ಪಡೆದಿದ್ದಾರೆ.
ಅದೇ ರೀತಿ ರಾಜಧಾನಿಯ ಯಲಹಂಕದ (Yalahanka) ನ್ಯಾಷನಲ್ ಪಬ್ಲಿಕ್ ಸ್ಕೂಲ್ (National public School) ವಿದ್ಯಾರ್ಥಿ ಸಿ.ಪ್ರೇಮಾಂಕುರ್ ರಾಜ್ಯಕ್ಕೆ 2ನೇ ರ‍್ಯಾಂಕ್ ಪಡೆದಿದ್ದು ದೇಶಕ್ಕೆ 54ನೇ ರ‍್ಯಾಂಕ್ (Rank) ಪಡೆದಿದ್ದಾರೆ. ಕುತೂಹಲಕಾರಿ ವಿಷಯವೆಂದರೆ ಇಬ್ಬರೂ ಟಾಪರ್‌ಗಳು ಐಐಟಿ (IIT) ಬಾಂಬೆಯಲ್ಲಿ ಕಂಪ್ಯೂಟರ್ ಸೈನ್ಸ್ ಕೋರ್ಸಿಗೆ ಪ್ರವೇಶ ಪಡೆಯಲು ನಿರ್ಧರಿಸಿದ್ದಾರೆ. ಇವರಲ್ಲದೆ ಬೆಂಗಳೂರಿನ ಎಫ್‌ಐಟಿ (FIT) ಜೆಇಇ ತರಬೇತಿ ಕೇಂದ್ರದ ವಿದ್ಯಾರ್ಥಿಗಳಾದ ಪ್ರಥಮ್ ಸಾಹು ದೇಶಕ್ಕೆ 131ನೇ, ಉಧವ್ ವರ್ಮಾ- 164, ಹಾರ್ದಿಕ್ ಅಗರ್‌ವಾಲ್- 166, ಮಿಹಿರ್ ದೇಶಪಾಂಡೆ- 182, ಲಕ್ಷವಂತ್ ಬಾಲಚಂದ್ರನ್- 188, ಪ್ರಾಂಜಲ್ ಸಿಂಗ್- 216 ರ‍್ಯಾಂಕ್ ಪಡೆದಿದ್ದಾರೆ.
JEE ಅಡ್ವಾನ್ಸ್ ಫಲಿತಾಂಶ 2021 ಪ್ರಕಟ, 360ಕ್ಕೆ 348 ಅಂಕ ಪಡೆದ ಮರಿದುಲ್‌ಗೆ ಮೊದಲ ರ‍್ಯಾಂಕ್!
ರಾಜ್ಯಕ್ಕೆ ಟಾಪ್ ರ‍್ಯಾಂಕ್ ಪಡೆದಿರುವ ವೀರೇಶ್ ಕರ್ನಾಟಕದ (Karnataka) ಕೆ-ಸಿಇಟಿಯಲ್ಲಿ ಎಂಜಿನಿಯರಿಂಗ್ ವಿಭಾಗದಲ್ಲಿ 7ನೇ ರ‍್ಯಾಂಕ್ ಮತ್ತು ಕಾಮೆಡ್-ಕೆ (comded K) ಪರೀಕ್ಷೆಯಲ್ಲಿ ಮೊದಲ ರ‍್ಯಾಂಕ್ ಗಳಿಸಿದ್ದರು. ಇನ್ನು, ಪ್ರೇಮಾಂಕುರ್ ಕೆ-ಸಿಇಟಿಯಲ್ಲಿ ಇಂಜಿನಿಯರಿಂಗ್ ವಿಭಾಗದಲ್ಲಿ ಎರಡನೇ ರ‍್ಯಾಂಕ್ ಪಡೆದಿದ್ದರು.
ಕೋವಿಡ್ ವಾರಿಯರ್ ಮಗನ ಸಾಧನೆ
ಬೆಂಗಳೂರಿನ ಬಿ.ಪಿ.ಹರ್ಷಿತ್ ಜೆಇಇ ಅಡ್ವಾನ್ಸ್‌ನಲ್ಲಿ 392ನೇ ರ‍್ಯಾಂಕ್ ಪಡೆದಿದ್ದು, ತನ್ಮೂಲಕ ಮಗ ಐಐಟಿ (IIT) ಪ್ರವೇಶ ಪಡೆಯಬೇಕೆಂಬ ಕೋವಿಡ್‌ನಿಂದ ಮೃತಪಟ್ಟತನ್ನ ತಂದೆಯ ಆಸೆಯನ್ನು ಪೂರೈಸಿದ್ದಾನೆ. ಈ ವಿದ್ಯಾರ್ಥಿಯ ತಂದೆ ಡಾ.ಬಾಲಾಜಿ ಪ್ರಸಾದ್ ಖಾಸಗಿ ಆಸ್ಪತ್ರೆಯಲ್ಲಿ ನೆಫ್ರೋಲಾಜಿಸ್ಟ್ (nephrologist) ಆಗಿದ್ದರು. ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದರು. ಒಂದೆಡೆ ತಂದೆ ಕಳೆದುಕೊಂಡ ನೋವಿನ ನಡುವೆ ತಂದೆಯ ಆಸೆಯನ್ನೂ ಪೂರೈಸುವಲ್ಲಿ ವಿದ್ಯಾರ್ಥಿ ಯಶಸ್ವಿಯಾಗಿದ್ದಾನೆ.
ಕೋವಿಡ್ ಸಂದರ್ಭದಲ್ಲಿ ಎಲ್ಲಾ ರೀತಿಯ ಪರೀಕ್ಷಾ ತಯಾರಿ ಆಫ್‌ಲೈನ್‌ನಿಂದ ಆನ್‌ಲೈನ್‌ಗೆ ಬದಲಾದವು. ಆರಂಭದಲ್ಲಿ ಇದು ಸ್ವಲ್ಪ ಕಷ್ಟವಾಯಿತು. ಆದರೂ, ನಿರಂತರ ಶ್ರಮದಿಂದ ಉತ್ತಮ ಫಲಿತಾಂಶ ಬಂದಿದೆ. ಇದಕ್ಕೆ ನಾನು ತರಬೇತಿ ಪಡೆದ ಎಎಲ್‌ಎಲ್‌ಇಎನ್ ತರಬೇತಿ ಸಂಸ್ಥೆ, ನನ್ನ ಕಾಲೇಜಿನ ಶಿಕ್ಷಕರು ಮತ್ತು ನನ್ನ ಪೋಷಕರ ಪ್ರೋತ್ಸಾಹ ಕಾರಣ. ಅವರೆಲ್ಲರಿಗೂ ಧನ್ಯವಾದ ತಿಳಿಸುತ್ತೇನೆ.
- ವೀರೇಶ್ ಪಾಟೀಲ್, ರಾಜ್ಯ ಟಾಪರ್
ಬೆಂಗಳೂರಿನ ಎಫ್‌ಐಟಿ ಜೆಇಇನಲ್ಲಿ ತರಬೇತಿ ಪಡೆದಿದ್ದು ಉತ್ತಮ ರಾರಯಂಕ್ ಪಡೆಯಲು ಸಹಕಾರಿಯಾಯಿತು.ಐಐಟಿ ಬಾಂಬೆಯಲ್ಲಿ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್‌ಗೆ ಪ್ರವೇಶ ಪಡೆಯಲು ಇಚ್ಚಿಸಿದ್ದೇನೆ. ನನ್ನ ಶಿಕ್ಷಕರು, ಸ್ನೇಹಿತರು ಮತ್ತು ಕುಟುಂಬ ಸದಸ್ಯರ ಬೆಂಬಲ ಮತ್ತು ಪೋತ್ಸಾಹ ನನ್ನ ಇಂದಿನ ಸಾಧನೆಗೆ ಕಾರಣ.
- ಪ್ರೇಮಾಂಕುರ, ರಾಜ್ಯಕ್ಕೆ ದ್ವಿತೀಯ ಟಾಪರ್