ಯುಪಿಎಸ್ಸಿ ಕೋಚಿಂಗ್‌ ಪಡೆಯದೇ 440ನೇ ರ್‍ಯಾಂಕ್‌ ಪಡೆದ ವರ್ತಕನ ಪುತ್ರಿ ಕೃಪಾ ಜೈನ್‌!

By Kannadaprabha NewsFirst Published Apr 17, 2024, 10:02 AM IST
Highlights

ಯಾವುದೇ ಕೋಚಿಂಗ್‌ ಪಡೆಯದೆ ಮನೆಯಲ್ಲೇ ಸ್ವಂತ ತಯಾರಿ ಮಾಡಿಕೊಂಡು ಯುಪಿಎಸ್ಸಿಯಲ್ಲಿ 440 ರ್‍ಯಾಂಕ್‌ ಪಡೆದು ಸೈ ಎನಿಸಿಕೊಂಡಿದ್ದಾರೆ ಹುಬ್ಬಳ್ಳಿಯ ಕೃಪಾ ಜೈನ್‌. ಕೃಪಾ ಜೈನ್‌ ವ್ಯಾಪಾರಸ್ಥರ ಮಗಳು. 

ಶಿವಾನಂದ ಗೊಂಬಿ

ಹುಬ್ಬಳ್ಳಿ (ಏ.17): ಯಾವುದೇ ಕೋಚಿಂಗ್‌ ಪಡೆಯದೆ ಮನೆಯಲ್ಲೇ ಸ್ವಂತ ತಯಾರಿ ಮಾಡಿಕೊಂಡು ಯುಪಿಎಸ್ಸಿಯಲ್ಲಿ 440 ರ್‍ಯಾಂಕ್‌ ಪಡೆದು ಸೈ ಎನಿಸಿಕೊಂಡಿದ್ದಾರೆ ಹುಬ್ಬಳ್ಳಿಯ ಕೃಪಾ ಜೈನ್‌. ಕೃಪಾ ಜೈನ್‌ ವ್ಯಾಪಾರಸ್ಥರ ಮಗಳು. ಅವರ ತಂದೆ ಅಭಯ ಜೈನ್‌ ಎಪಿಎಂಸಿಯಲ್ಲಿ ಕಿರಾಣಿ ಅಂಗಡಿ ಹೊಂದಿದ್ದಾರೆ. ತಾಯಿ ಇಂದಿರಾ ಜೈನ್‌ ಗೃಹಿಣಿ. ಕೃಪಾ ಪ್ರೌಢಶಿಕ್ಷಣವನ್ನು ನಗರದ ಡಿ.ಕೆ.ಪಬ್ಲಿಕ್‌ ಸ್ಕೂಲ್‌ನಲ್ಲಿ ಪೂರೈಸಿದ್ದಾರೆ. ಪಿಯುಸಿಯನ್ನು ಕೆಎಲ್‌ಇ ಪ್ರೇರಣಾ ಕಾಲೇಜ್‌ನಲ್ಲಿ ಮಾಡಿದ್ದಾರೆ. ಪಿಯುಸಿಯಲ್ಲಿ ಜಿಲ್ಲೆಗೆ ಟಾಪರ್‌ ಆಗಿದ್ದವರು ಕೃಪಾ.

ಮುಂದೆ ಬೆಂಗಳೂರಿನ ಆರ್‌ವಿ ಎಂಜಿನಿಯರಿಂಗ್‌ ಕಾಲೇಜ್‌ನಲ್ಲಿ ಕಂಪ್ಯೂಟರ್‌ ಸೈನ್ಸ್‌ನಲ್ಲಿ ಎಂಜಿನಿಯರಿಂಗ್‌ ಮಾಡಿದ್ದಾರೆ. ಬಳಿಕ ಖಾಸಗಿ ಕಂಪನಿಯೊಂದರಲ್ಲಿ ಸಾಫ್ಟ್‌ವೇರ್‌ ಡೆವಲಪರ್‌ ಆಗಿ ಕೆಲಸ ಮಾಡಿದ್ದಾರೆ. ಬಳಿಕ, ಕೆಲಸಕ್ಕೆ ರಾಜೀನಾಮೆ ನೀಡಿ ಯುಪಿಎಸ್‌ಸಿ ತಯಾರಿ ಮಾಡಲು ಶುರು ಮಾಡಿದರು. ಮೊದಲಿಗೆ ಕೋಚಿಂಗ್‌ ಪಡೆಯಬೇಕೆಂದು ಕೋಚಿಂಗ್‌ ಸೆಂಟರ್‌ನಲ್ಲಿ ಪ್ರವೇಶವನ್ನೂ ಪಡೆದಿದ್ದರು. ಆದರೆ, ಅದೇಕೋ ಸ್ವಂತವಾಗಿಯೇ ತಯಾರಿ ಮಾಡಬೇಕು ಎಂದುಕೊಂಡು ಕೋಚಿಂಗ್‌ ಪಡೆಯುವ ಗೋಜಿಗೆ ಹೋಗಲಿಲ್ಲ. ಮನೆಯಲ್ಲೇ ಕುಳಿತು ದಿನಕ್ಕೆ 14- 15 ಗಂಟೆ ನಿರಂತರ ಅಧ್ಯಯನ ನಡೆಸುತ್ತಾ ತಯಾರಿ ಮಾಡಿಕೊಂಡಿದ್ದಾರೆ. 

ಮೊದಲ ಪ್ರಯತ್ನದಲ್ಲಿ ಪ್ರಿಲಿಮ್ಸ್‌ನಲ್ಲೂ ಪಾಸಾಗಲಿಲ್ಲ. ಆದರೂ ಧೃತಿಗೆಡದೇ ತಮ್ಮ ಪ್ರಯತ್ನ ಮುಂದುವರಿಸಿದ್ದಾರೆ. ಎರಡನೆಯ ಪ್ರಯತ್ನದಲ್ಲಿ ಮೊದಲ ಪಟ್ಟಿಯಲ್ಲೇನೂ ಆಯ್ಕೆಯಾಗಲಿಲ್ಲ. ಆದರೆ ಮೀಸಲು ಪಟ್ಟಿಯಲ್ಲಿ ಐಆರ್‌ಎಂಎಸ್‌ (ಇಂಡಿಯನ್‌ ರೈಲ್ವೆ ಮ್ಯಾನೇಜ್‌ಮೆಂಟ್‌ ಸರ್ವೀಸ್‌)ಗೆ ಆಯ್ಕೆಯಾಗಿದ್ದರು. ಅಲ್ಲಿ ಮತ್ತೆ ಒಂದು ವರ್ಷ ರಜೆ ಹಾಕಿ ಮತ್ತೊಮ್ಮೆ ಯುಪಿಎಸ್‌ಸಿ ತಯಾರಿ ನಡೆಸಿ ಮೂರನೆಯ ಸಲ ಪರೀಕ್ಷೆ ಕುಳಿತಿದ್ದರು. ಮೂರನೇ ಪ್ರಯತ್ನದಲ್ಲಿ ಯುಪಿಎಸ್‌ಸಿಗೆ 440ನೆಯ ರ್‍ಯಾಂಕ್‌ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಯುಪಿಎಸ್‌ಸಿಯಲ್ಲಿ 3 ಬಾರಿ ಫೇಲಾಗಿದ್ದ ವಿಜೇತಾ ರಾಜ್ಯಕ್ಕೆ ಟಾಪರ್‌: ದೇಶಕ್ಕೆ 100ನೇ ರ್‍ಯಾಂಕ್‌

ಚಿಕ್ಕವಯಸ್ಸಿನಿಂದಲೂ ನನಗೆ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಪಾಸಾಗಬೇಕೆಂಬ ಕನಸಿತ್ತು. ಕಳೆದ ಸಲ ಮೊದಲ ಪಟ್ಟಿಯಲ್ಲಿ ಹೆಸರು ಇರಲಿಲ್ಲ. ಆದರೆ, ರಿಸರ್ವ್‌ ಲಿಸ್ಟ್‌ನಲ್ಲಿ ಐಆರ್‌ಎಂಎಸ್‌ನಲ್ಲಿ ಸೆಲೆಕ್ಟ್‌ ಆಗಿದ್ದೆ. ಮತ್ತೆ 3ನೇ ಸಲ ಪರೀಕ್ಷೆಯಲ್ಲಿ ಕುಳಿತಿದ್ದೆ. ಇದೀಗ 440ನೆಯ ರ್‍ಯಾಂಕ್‌ ಬಂದಿದೆ. ಖುಷಿ ಎನಿಸಿದೆ. ತಂದೆ- ತಾಯಿ ಸಹಕಾರ, ಪ್ರೋತ್ಸಾಹವೇ ಈ ಸಾಧನೆಗೆ ಕಾರಣ.
-ಕೃಪಾ ಜೈನ್‌

click me!