ಶಾಲೆ ಬಿಟ್ಟ ಮಕ್ಕಳ ಪತ್ತೆ ಕೇಂದ್ರದ ಮಹತ್ವದ ಹೆಜ್ಜೆ, ರಾಜ್ಯ ಸರ್ಕಾರಗಳಿಗೆ ಖಡಕ್ ಸೂಚನೆ!

By Kannadaprabha NewsFirst Published Jan 11, 2021, 12:45 PM IST
Highlights

ಶಾಲೆ ಬಿಟ್ಟ ಮಕ್ಕಳ ಪತ್ತೆಗೆ ಮನೆಬಾಗಿಲ ಸಮೀಕ್ಷೆ| ಕೇಂದ್ರ ಶಿಕ್ಷಣ ಇಲಾಖೆಯಿಂದ ರಾಜ್ಯ ಸರ್ಕಾರಗಳಿಗೆ ಸೂಚನೆ| ಕೊರೋನಾ ಕಾರಣಕ್ಕೆ ಶಾಲೆ ಬಿಟ್ಟಿರುವ ಮಕ್ಕಳು

ನವದೆಹಲಿ(ಜ.11): ಕೊರೋನಾ ಕಾರಣದಿಂದಾಗಿ ಶಾಲೆಯಿಂದ ಹೊರಗೆ ಉಳಿದ ವಿದ್ಯಾರ್ಥಿಗಳ ಪತ್ತೆಗೆ ಮನೆ ಬಾಗಿಲ ಸಮೀಕ್ಷೆ ಕೈಗೊಳ್ಳುವಂತೆ ಕೇಂದ್ರ ಶಿಕ್ಷಣ ಇಲಾಖೆ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದೆ. ಶಿಕ್ಷಣದಿಂದ ವಿಮುಖರಾದ ಮಕ್ಕಳನ್ನು ಪುನಃ ಶಾಲೆಗಳಿಗೆ ಕರೆತರುವ ನಿಟ್ಟಿನಿಂದ ಕ್ರಿಯಾ ಯೋಜನೆಯೊಂದನ್ನು ರೂಪಿಸುವಂತೆಯೂ ಸೂಚಿಸಿದೆ. ಅಲ್ಲದೇ ಈ ವರ್ಷ ವಿದ್ಯಾರ್ಥಿಗಳು ಶಾಲಾ ಶಿಕ್ಷಣವನ್ನು ಕೊನೆಗೊಳಿಸುವುದನ್ನು ತಡೆಯಲು ಫೇಲ್‌ (ನಪಾಸು) ಮಾಡುವ ನಿಯಮಗಳನ್ನು ಸಡಿಲಗೊಳಿಸುವಂತೆಯೂ ತಿಳಿಸಲಾಗಿದೆ.

ಲಾಕ್‌ಡೌನ್‌ ಹಾಗೂ ಕೊರೋನಾ ಕಾರಣದಿಂದಾಗಿ ಪೋಷಕರ ಜೊತೆ ವಲಸೆ ಹೋದ ಮಕ್ಕಳ ಗುರುತಿಸುವಿಕೆ, ಅವರಿಗೆ ಶಾಲೆಗೆ ಪ್ರವೇಶ ಕಲ್ಪಿಸುವುದು ಮತ್ತು ಶಿಕ್ಷಣವನ್ನು ಮುಂದುವರಿಸುವ ಉದ್ದೇಶದಿಂದ ಈ ಸಮೀಕ್ಷೆ ಕೈಗೊಳ್ಳಲಾಗುತ್ತಿದೆ. ಶಾಲೆಯಿಂದ ಹೊರಗುಳಿದ 6ರಿಂದ 18 ವರ್ಷದ ಒಳಗಿನ ಮಕ್ಕಳನ್ನು ಗುರುತಿಸಲು ಮನೆ ಬಾಗಿಲ ಸಮೀಕ್ಷೆ ಕೈಗೊಳ್ಳಬೇಕು ಮತ್ತು ಇಂತಹ ವಿದ್ಯಾರ್ಥಿಗಳು ಪುನಃ ಶಾಲೆಗೆ ಮರಳಲು ಕ್ರಿಯಾ ಯೋಜನೆ ರೂಪಿಸುವಂತೆ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಶಿಕ್ಷಣ ಇಲಾಖೆ ಸಲಹೆ ನೀಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶಾಲೆಗೆ ಹೋಗುವ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಲಭ್ಯವಾಗುವ ನಿಟ್ಟಿನಿಂದ ಹಾಗೂ ಕೊರೋನಾದಿಂದ ಉಂಟಾದ ಹಾನಿಯನ್ನು ಕಡಿಮೆ ಮಾಡುವ ನಿಟ್ಟಿನಿಂದ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಶಿಕ್ಷಣ ಇಲಾಖೆ ವಿಸ್ತೃತ ಮಾರ್ಗಸೂಚಿಯನ್ನು ಸಿದ್ಧಪಡಿಸಿದೆ.

ಶಿಫಾರಸುಗಳು ಏನೇನು?:

ಸಂಚಾರಿ ಶಾಲೆಗಳ ಸ್ಥಾಪನೆ, ಗ್ರಾಮಗಳಲ್ಲಿ ಸಣ್ಣ ಸಣ್ಣ ಗುಂಪುಗಳನ್ನು ರಚಿಸಿ ಪಾಠ ಮಾಡುವುದು, ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಹಾಗೂ ಡಿಜಿಟಲ್‌ ವೇದಿಕೆಗಳ ಮೂಲಕ ನೀಡುತ್ತಿರುವ ಶಿಕ್ಷಣವನ್ನು ಹೆಚ್ಚಿಸುವುದು, ಟೀವಿ, ರೇಡಿಯೋಗಳ ಬಳಕೆ, ವಿದ್ಯಾರ್ಥಿಗಳಿಗೆ ಸಮವಸ್ತ್ರ, ಮಧ್ಯಾಹ್ನದ ಬಿಸಿ ಊಟ ಒದಗಿಸುವುದು ಸೇರಿದಂತೆ ಹಲವು ಕ್ರಮಗಳನ್ನು ಶಿಕ್ಷಣ ಇಲಾಖೆ ಶಿಫಾರಸು ಮಾಡಿದೆ ಅಧಿಕಾರಿಗಳು ತಿಳಿಸಿದ್ದಾರೆ.

click me!