ವಾರದ ಹಿಂದೆ ನಿವೃತ್ತಿಗೊಂಡ ಮುಖ್ಯೋಪಾಧ್ಯಾಯರು.
ಶಿಕ್ಷಕರಿಲ್ಲದೇ ಅತಂತ್ರರಾದ ಅನುದಾನಿತ ಶಾಲೆಯ ಮಕ್ಕಳು.
ಶಿಕ್ಷಕರನ್ನು ನೇಮಿಸಿ, ಇಲ್ಲವೇ ಸರ್ಕಾರದ ಸುಪರ್ದಿಗೆ ಪಡೆಯಿರಿ
ಉಡುಪಿ (ಜೂ.08): ಈ ಶಾಲೆಗೆ ಬರೋಬ್ಬರಿ 116 ವರ್ಷಗಳ ಇತಿಹಾಸವಿದೆ. ಶತಮಾನೋತ್ಸವದ ಸಂಭ್ರಮ ಕಂಡು ದಾನಿಗಳ ಸಹಕಾರದಿಂದ ಕಳೆದ ವರ್ಷವಷ್ಟೇ 115ನೇ ವರ್ಷದ ಅದ್ದೂರಿ ಕಾರ್ಯಕ್ರಮವೂ ನಡೆದು ಹೋಗಿದೆ. ಗ್ರಾಮೀಣ ಭಾಗದ ಸಹಸ್ರಾರು ಮಕ್ಕಳಿಗೆ ಆಸರೆಯಾಗಿದ್ದ ಈ ಶಾಲೆ ಇಂದು ಶಿಕ್ಷಕರಿಲ್ಲದೇ ಅತಂತ್ರ ಸ್ಥಿತಿಗೆ ಬಂದು ತಲುಪಿದೆ. ಶಿಕ್ಷಣ ಇಲಾಖೆ ಹಾಗೂ ಆಳುವ ಸರ್ಕಾರಗಳ ಬೇಜವಾಬ್ದಾರಿಗಳಿಗೆ ವಿದ್ಯಾರ್ಥಿಗಳ ಭವಿಷ್ಯ ತೂಗುಯ್ಯಾಲೆ ಆಗಿದೆ.
ತಾಲೂಕಿನ ಬೈಂದೂರು ವಲಯದ ಗುಲ್ವಾಡಿ ಸರ್ವೋದಯ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ 78 ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಿದ್ದಾರೆ. ಇರುವ ಓರ್ವ ಶಿಕ್ಷಕರು ಮೇ 31 ರಂದು ಸೇವಾ ನಿವೃತ್ತಿ ಹೊಂದಿದ್ದಾರೆ. ಪ್ರಸ್ತುತ ಈ ಶಾಲೆಯಲ್ಲಿ ಶಿಕ್ಷಕರಿಲ್ಲದೇ ಹಳೆ ವಿದ್ಯಾರ್ಥಿಗಳು ಎಸ್‍ಡಿಎಂಸಿ ಸಹಕಾರದಲ್ಲಿ ಐವರು ಗೌರವ ಶಿಕ್ಷಕರನ್ನು ನೇಮಿಸಿದ್ದಾರೆ.
undefined
ಈ ವರ್ಷವೇ ಪಠ್ಯ ಪುಸ್ತಕ ಪರಿಷ್ಕರಣೆ ಆಗಲಿದೆ: ಕೆಲವು ಪಾಠಗಳು ಮಾತ್ರ ಬೋಧಿಸಲು ಅನುಮತಿ
ಗ್ರಾಮೀಣ ಭಾಗದ ಮಕ್ಕಳಿಗೆ ಆಸರೆ: ಗುಲ್ವಾಡಿ ಭಾಗದ ಉದಯ ನಗರ, ಸೌಕೂರು ಕುದ್ರು, ಕಳುವಿನ ಬಾಗಿಲು, ದಾಸರಬೆಟ್ಟು, ಗುಡಾರ ಹಕ್ಲು ಸೇರಿದಂತೆ ಮೊದಲಾದ ಸುತ್ತು ಮುತ್ತಲಿನ ಊರಿನ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಕಳೆದ ವರ್ಷಕ್ಕಿಂತ ಈ ಬಾರಿ ದಾಖಲಾತಿ ಜಾಸ್ತಿಯಾಗಿದೆ. 2012ರಿಂದ ಇಬ್ಬರು ಶಿಕ್ಷಕರು ಮಾತ್ರ ಸೇವೆ ಸಲ್ಲಿಸುತ್ತಿದ್ದು, ಕಳೆದ ವರ್ಷ ಮೇ ತಿಂಗಳಲ್ಲಿ ಅನಾರೋಗ್ಯದಿಂದ ಸಹ ಶಿಕ್ಷರೋರ್ವರು ಸಾವನ್ನಪ್ಪಿದ್ದಾರೆ. ಶಾಲಾ ಮುಖ್ಯೋಪಾಧ್ಯಾಯರಾದ ಜಯಕರ ಶೆಟ್ಟಿ ಅತಿಥಿ ಶಿಕ್ಷಕರ ನೆರವಿನಿಂದ ಶಾಲೆಯನ್ನು ಮುನ್ನಡೆಸಿದ್ದಾರೆ. ಕಳೆದ 8 ವರ್ಷಗಳಿಂದ ಐವರು ಗೌರವ ಶಿಕ್ಷಕರ ಆಸರೆಯಿಂದಲೇ ಶಾಲೆ ನಡೆಯುತ್ತಿತ್ತು. ಕಳೆದ ವರ್ಷದಿಂದೀಚೆಗೆ ಹಳೆ ವಿದ್ಯಾರ್ಥಿಗಳು ಹಾಗೂ ಶಾಲಾಭಿವೃದ್ದಿ ಸಮಿತಿ ಐವರು ಅತಿಥಿ ಶಿಕ್ಷಕರ ವೇತನ ಭರಿಸುತ್ತಿದೆ. ಮೂಖ್ಯೋಪಾಧ್ಯಾಯ ಜಯಕರ ಶೆಟ್ಟಿ ಅವರು ಮೇ 31 ರಂದು ಸೇವಾ ನಿವೃತ್ತಿ ಹೊಂದಿದ್ದು, ಇದೀಗ ಶಾಲೆಯ ಮಕ್ಕಳು ಶಿಕ್ಷಕರಿಲ್ಲದೇ ಅನಾಥರಾಗಿ ಅಲೆದಾಡುತ್ತಿದ್ದಾರೆ. ಅತಿಥಿ ಶಿಕ್ಷಕರಿದ್ದರೂ ಸರ್ಕಾರದ ಯಾವುದೇ ಜವಾಬ್ದಾರಿಯನ್ನು ಅವರಿಗೆ ನಿರ್ವಹಿಸಲು ಬರುವುದಿಲ್ಲ.
ಸರ್ಕಾರಕ್ಕೆ ಹಸ್ತಾಂತರಿಸಲು ಮನವಿ: ಶಿಕ್ಷಕರ ಕೊರತೆ, ಕೆಲವು ಮೂಲಭೂತ ಸಮಸ್ಯೆಗಳಿಂದಾಗಿ ಅನುದಾನಿತ ಶಾಲೆಯನ್ನು ಸರ್ಕಾರಕ್ಕೆ ಹಸ್ತಾಂತರಿಸುವ ಬಗ್ಗೆ ಸಂಬಂಧಪಟ್ಟ ಇಲಾಖೆಗೆ ಮನವಿಯನ್ನೂ ಸಲ್ಲಿಸಲಾಗಿದೆ. ಕಳೆದ ಎರಡು ವರ್ಷಗಳಿಂದ ಈ ಪ್ರಯತ್ನ ಚಾಲ್ತಿಯಲ್ಲಿದೆ. ಆದರೆ ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಮನವಿಗೆ ಸ್ಪಂದಿಸುತ್ತಿಲ್ಲ. ಸಾವಿರಾರು ಮಕ್ಕಳಿಗೆ ವಿದ್ಯಾರ್ಜನೆ ಮಾಡಿದ ಶಾಲೆಯನ್ನು ಉಳಿಸಿಕೊಳ್ಳಬೇಕು ಎನ್ನುವುದು ಹಳೆ ವಿದ್ಯಾರ್ಥಿಗಳ ಹಾಗೂ ಶಾಲಾಭಿವೃದ್ದಿ ಸಮಿತಿಯ ಪ್ರಯತ್ನಗಳಿಗೆ ಇನ್ನೂ ಜಯ ಸಿಕ್ಕಿಲ್ಲ. ಆಡಳಿತ ಮಂಡಳಿಯೊಳಗಿನ ಒಳಜಗಳ ಕೋರ್ಟ್ ಮೆಟ್ಟಿಲೇರಿದ್ದು, ಕಳೆದ 20 ವರ್ಷಗಳಿಂದ ಆಡಳಿತ ಮಂಡಳಿ ಇಲ್ಲದೇ ಶಾಲೆ ಕಾರ್ಯ ನಿರ್ವಹಿಸುತ್ತಿದೆ. ಇದೀಗ ಆಡಳಿತ ಮಂಡಳಿಗೆ ಸಂಬಂಧಪಟ್ಟವರು ಸರ್ಕಾರಕ್ಕೆ ಹಸ್ತಾಂತರಿಸಲು ಒಪ್ಪಿಗೆ ನೀಡಿದ್ದಾರೆ.
Chikkamagaluru: ಕಾಫಿನಾಡಲ್ಲಿ ಶಿಕ್ಷಕರ ಕೊರತೆ: ಶಾಲೆಗೆ ಮಕ್ಕಳನ್ನೇ ಕಳುಹಿಸದ ಪೋಷಕರು!
ಶಾಲೆಯ ಸಾಧನೆಗೇನೂ ಕಮ್ಮಿಯಿಲ್ಲ: ಈ ಶಾಲೆಯಲ್ಲಿ ಕಲಿತವರು ಇಂದು ಅನೇಕ ಹುದ್ದೆಗಳಲ್ಲಿದ್ದಾರೆ. ಪಿಎಸ್‍ಐ, ಕೆಎಎಸ್, ನ್ಯಾಯಧೀಶ, ವೈದ್ಯ, ಲೇಖಕರೂ ಸೇರಿಂದತೆ ಇನ್ನೂ ಅನೇಕ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಹಿಂದೆ ವಾಲಿಬಾಲ್‍ನಲ್ಲಿ ಈ ಶಾಲೆಯ ವಿದ್ಯಾರ್ಥಿಗಳು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದು, ಸಾಂಸ್ಕೃತಿಕ ಕ್ಷೇತ್ರದಲ್ಲೂ ಗಣನೀಯ ಸಾಧನೆಗೈದಿದ್ದಾರೆ. 1ರಿಂದ 7ನೇ ತರಗತಿ ತನಕ ಇದ್ದು, ಒಟ್ಟು 8 ಕೊಠಡಿಗಳಿವೆ. ಒಂದು ಶಾಲಾ ಕಚೇರಿ ಸೇರಿದಂತೆ ಅಕ್ಷರ ದಾಸೋಹ ಕೊಠಡಿ ಇದೆ. ವಿಸ್ತೀರ್ಣವಾದ ಮೈದಾನ ಹೊಂದಿದ್ದು, ಶಾಲೆಯ ಎರಡು ಎಕರೆ ಜಾಗ ಸರ್ಕಾರದ ಹೆಸರಲ್ಲಿದೆ.