Udupi ಪರೀಕ್ಷೆ ಬರೆಯಲು ಬಂದ ಹಿಜಾಬ್ ಹೋರಾಟಗಾರ್ತಿಯರ ಹೈಡ್ರಾಮಾ

By Suvarna NewsFirst Published Apr 22, 2022, 6:07 PM IST
Highlights

ಉಡುಪಿಯಲ್ಲಿ ಹಿಜಾಬ್ ಧರಿಸಿಯೇ ಪರೀಕ್ಷೆ ಬರೆಯಲು ಅವಕಾಶ ನೀಡಬೇಕೆಂದು ಪಟ್ಟು ಹಿಡಿದ ಇಬ್ಬರು ವಿದ್ಯಾರ್ಥಿಗಳು ಕೊನೆಗೆ ಪರಿಕ್ಷೆ ಬರೆಯಲಾಗದೆ ಹಿಂತಿರುಗಿರುವ ಘಟನೆ ನಡೆದಿದೆ.

ವರದಿ: ಶಶಿಧರ ಮಾಸ್ತಿಬೈಲು, ಏಷ್ಯಾನೆಟ್ ಸುವರ್ಣ ನ್ಯೂಸ್

ಉಡುಪಿ (ಏ.22): ಹಿಜಾಬ್ (Hijab) ಹುಡುಗಿಯರು ಮತ್ತೆ ತಮ್ಮ ಹೈಡ್ರಾಮಾ ಮುಂದುವರಿಸಿದ್ದಾರೆ. ಹಿಜಾಬ್ ಹಾಕಿಕೊಂಡು ಪರೀಕ್ಷೆ ಬರೆಯುವುದಕ್ಕೆ ಅವಕಾಶ ಇಲ್ಲ ಎಂದು ಗೊತ್ತಿದ್ದರೂ, ಕೊನೆಯ ಕ್ಷಣದಲ್ಲಿ ಹಾಲ್ ಟಿಕೆಟ್ ಪಡೆದು ಪರೀಕ್ಷಾ ಕೇಂದ್ರಕ್ಕೆ (Exam Centre) ಹೋಗಿ ಪರೀಕ್ಷೆ ಬರೆಯಲು ಅವಕಾಶ ಕೇಳಿದ್ದಾರೆ. ಅವಕಾಶ ನಿರಾಕರಿಸಿದಾಗ, ಮಾಧ್ಯಮಗಳ ಕ್ಯಾಮರಾ ಮುಂದೆ ಬಾಯಿಮುಚ್ಚಿಕೊಂಡು ಹೋಗಿ ಮನೆ ಸೇರಿದ್ದಾರೆ.

ಗುರುವಾರ ಸಂಜೆಯವರೆಗೂ ಹಿಜಾಬ್ ಹೋರಾಟಗಾರ್ತಿಯರು ಹಾಲ್ ಟಿಕೆಟ್ ಪಡೆಯದ ಕಾರಣ, ತಮ್ಮ ಅಂತಿಮ ಪರೀಕ್ಷೆಗಳನ್ನು ಬರೆಯುವುದೇ ಇಲ್ಲ ಎಂದು ಭಾವಿಸಲಾಗಿತ್ತು. ಹೈಕೋರ್ಟ್ ಮೊರೆ ಹೋದ ಆರು ಮಂದಿಯ ಪೈಕಿ ಹೋರಾಟಗಾರ್ತಿಯರ ಲೀಡರ್ ಆಗಿರುವ ಅಲಿಯಾ ಆಸಾದಿ ಮತ್ತು ರೇಷಂ ಇಂದು ಪರೀಕ್ಷೆ ಬರೆಯಬೇಕಾಗಿತ್ತು. ಕಾಮರ್ಸ್ ವಿಭಾಗದ ಬಿಸಿನೆಸ್ ಸ್ಟಡೀಸ್ ಪರೀಕ್ಷೆ ನಿಗದಿಯಾಗಿತ್ತು.ಬೆಳಿಗ್ಗೆ 9.30 ರ ವರೆಗೂ, ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಭಾಗವಹಿಸುವುದಿಲ್ಲ ಎಂದೇ ಭಾವಿಸಲಾಗಿತ್ತು.

ಆದರೆ 9.30 ಕ್ಕೆ ಸರಿಯಾಗಿ ಹೈಡ್ರಾಮಾ ಆರಂಭವಾಗಿತ್ತು. ವಿದ್ಯಾರ್ಥಿನಿಗಾಗಿ ಮಾಧ್ಯಮಗಳು ಒಂದು ಗೇಟಿನಲ್ಲಿ ಕಾಯುತ್ತಿದ್ದರೆ, ಅಲಿಯಾ ಮತ್ತೊಂದು ಗೇಟಿನ ಮೂಲಕ ಸರ್ಕಾರಿ ಪದವಿಪೂರ್ವ ಹೆಮ್ಮಕ್ಕಳ ಕಾಲೇಜಿಗೆ ಹೋಗಿ ಪ್ರಾಂಶುಪಾಲರಿಂದ ಹಾಲ್ ಟಿಕೆಟ್ ಪಡೆದಿದ್ದಳು. ಅಲ್ಲಿಂದ ನೇರ ವಿದ್ಯೋದಯ ಪಬ್ಲಿಕ್ ಸ್ಕೂಲ್ ಗೆ ತೆರಳಿ ಎಕ್ಸಾಮ್ ಸೆಂಟರ್ ನಲ್ಲಿ ಪರೀಕ್ಷೆ ಬರೆಯಲು ಅವಕಾಶ ಕೇಳಿದಳು. ಈ ಬೆನ್ನಲ್ಲೇ ಮತ್ತೋರ್ವ ವಿದ್ಯಾರ್ಥಿನಿ ರೇಷಂ ಕೂಡ ಹಾಲ್ ಟಿಕೆಟ್ ಪಡೆದು ಪರೀಕ್ಷೆ ಬರೆಯಲು ಬಂದಳು.

ಬಳ್ಳಾರಿಯಲ್ಲಿ ಅಕಾಲಿಕ ಮಳೆ ಸೃಷ್ಟಿಸಿದ ಅವಾಂತರ ಒಂದೆರಡಲ್ಲ!

ಹಿಜಾಬ್ ಧರಿಸಿಯೇ ಪರೀಕ್ಷೆ ಬರೆಯಲು ಅವಕಾಶ ನೀಡಬೇಕೆಂದು ಪಟ್ಟು ಹಿಡಿದರು.‌ ಸ್ವತಃ ತಹಶೀಲ್ದಾರ್ ಅರ್ಚನಾ ಭಟ್ ಸ್ಥಳಕ್ಕಾಗಮಿಸಿ ಮನವೊಲಿಸಿದರು. ಪೊಲೀಸ್ ಅಧಿಕಾರಿಗಳು ಕೂಡ ಸ್ಥಳದಲ್ಲೇ ಇದ್ದರೂ. ಪರೀಕ್ಷಾ ಅಧಿಕಾರಿಗಳು ಹಿಜಾಬ್ ತೆಗೆದು ಪರೀಕ್ಷೆ ಬರೆಯುವಂತೆ ಸೂಚಿಸಿದರು. ಚೇಂಬರ್ ನಲ್ಲಿ ಸುಮಾರು ಅರ್ಧ ಗಂಟೆಗಳ ಕಾಲ ವಾಗ್ವಾದ ನಡೆಸಿದ ಅಲಿಯಾ ಮತ್ತು ರೇಶಂ ಹಿಜಾಬ್ ತೆಗೆಯಲು ಒಪ್ಪಲಿಲ್ಲ.

ಬೆಳಿಗ್ಗೆ 10:15 ಕ್ಕೆ ಪರೀಕ್ಷೆ ಆರಂಭವಾಯಿತು. ನಿಯಮಾನುಸಾರ ಶಿಕ್ಷಣ ಇಲಾಖೆ ಅವಕಾಶ ಕಲ್ಪಿಸಿದಂತೆ ಹೆಚ್ಚುವರಿ 30 ನಿಮಿಷಗಳನ್ನು ನೀಡಲಾಯಿತು. 10:45 ರೊಳಗೆ ಪರೀಕ್ಷೆ ಬರೆಯಲು ತೆರಳುವಂತೆ ಸೂಚಿಸಲಾಯಿತು. ಆದರೆ ಹಿಜಾಬ್ ತೆಗೆಯಲು ವಿದ್ಯಾರ್ಥಿನಿಯರು ಒಪ್ಪಲಿಲ್ಲ. ನಿಗದಿತ ಸಮಯ ಮುಗಿಯುತ್ತಿದ್ದಂತೆ ಪರೀಕ್ಷಾ ಕೇಂದ್ರದಿಂದ ತೆರಳುವಂತೆ ಸೂಚಿಸಲಾಯಿತು. ಪರೀಕ್ಷಾ ಕೇಂದ್ರದಿಂದ ಹೊರ ಬಂದ ಇಬ್ಬರು ವಿದ್ಯಾರ್ಥಿನಿಯರು ಮಾಧ್ಯಮಗಳಿಗೆ ಯಾವುದೇ ಮಾಹಿತಿ ನೀಡದೆ ರಿಕ್ಷಾ ಹತ್ತಿ ಮನೆಗೆ ತೆರಳಿದರು.

ಕೊಪ್ಪಳದಿಂದ ಸ್ಪರ್ಧೆ ಮಾಡ್ತಾರಾ ಸಿದ್ದರಾಮಯ್ಯ

ಹಿಜಾಬ್ ತೆಗೆದಿರಿಸಿ ಪರೀಕ್ಷೆ ಬರೆಯಲು ಅವಕಾಶ ಇಲ್ಲ ಎಂಬುದು ವಿದ್ಯಾರ್ಥಿನಿಯರಿಗೂ ಗೊತ್ತಿತ್ತು.‌ ಇಷ್ಟಾದರೂ ಹೈಕೋರ್ಟ್ ಆಜ್ಞೆಯನ್ನು ಉಲ್ಲಂಘಿಸಿ ಪರೀಕ್ಷೆ ಬರೆಯಲು ಮುಂದಾಗಿ ಹೈಡ್ರಾಮಾ ಮಾಡಿದರು. ಈ ಮೂಲಕ ತಮ್ಮ ಪ್ರತಿಭಟನೆಯನ್ನು ದಾಖಲಿಸಿದರು.

ನಾಳೆ ನಾಟಕ ಮಾಡಿದರೆ ಕ್ರಿಮಿನಲ್ ಕೇಸ್ ಹಾಕ್ತೇವೆ ಶಾಸಕ ಭಟ್: ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿನಿಯರು ಮಾಡಿದ ಈ ನಾಟಕ ವ್ಯಾಪಕ ಟೀಕೆಗೆ ಗುರಿಯಾಗಿದೆ. ಅನ್ಯ ವಿದ್ಯಾರ್ಥಿಗಳ ಪೋಷಕರು ಈ ಕುರಿತು ಕಿಡಿಕಾರಿದ್ದಾರೆ. ಇನ್ನೊಂದೆಡೆ ಶಾಸಕ ರಘುಪತಿ ಭಟ್ ನಾಳೆ ಮತ್ತೆ ಡ್ರಾಮಾ ಮಾಡಿದರೆ ಕ್ರಿಮಿನಲ್ ಕೇಸ್ ಹಾಕುತ್ತೇವೆ. ನ್ಯಾಯಾಂಗ ನಿಂದನೆಯ ಕೇಸು ಹಾಕುತ್ತೇವೆ ಎಂದರು. ಈ ಕುರಿತು ಕಾನೂನು ಕ್ರಮ ಜರುಗಿಸುವಂತೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯನ್ನು ಆಗ್ರಹಿಸಿದ್ದಾರೆ. 

click me!