ಬೋರ್ಡ್ ಎಕ್ಸಾಂ ಬಹಳಷ್ಟು ಬಾರಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ನಿರ್ಣಾಯಕವಾಗಿರುತ್ತವೆ. ಇದರಲ್ಲಿ ಉತ್ತಮ ಅಂಕ ಗಳಿಸಲು ಹೇಗೆ ತಯಾರಿ ನಡೆಸಬೇಕು ಎಂದು ಟಾಪರ್‌ಗಳು ಟಿಪ್ಸ್ ನೀಡಿದ್ದಾರೆ.
ಬೋರ್ಡ್ ಪರೀಕ್ಷೆಯು ವಿದ್ಯಾರ್ಥಿಯ ಜೀವನದಲ್ಲಿ ಯಶಸ್ಸಿನ ಪ್ರಮುಖ ಹಂತಗಳಲ್ಲಿ ಒಂದಾಗಿದೆ. ಇದಲ್ಲದೆ, ಮುಂಬರುವ ಹಲವು ಮೈಲಿಗಲ್ಲುಗಳಿಗೆ ಇದು ಪ್ರಮುಖ ಹೆಜ್ಜೆಯಾಗಿದೆ. ಹಾಗಾಗಿ, ಬೋರ್ಡ್ ಪರೀಕ್ಷೆಗೆ ತಯಾರಾಗುತ್ತಿರುವ ವಿದ್ಯಾರ್ಥಿಗಳಿಗೆ ಈ ಹಂತದಲ್ಲಿ ಯಶಸ್ಸನ್ನು ಸಾಧಿಸಿದ ಟಾಪರ್‌ಗಳು ಕೆಲ ಟಿಪ್ಸ್ ನೀಡಿದ್ದಾರೆ. ಬಹುತೇಕ ಎಲ್ಲ ಟಾಪರ್‌ಗಳ ಸಕ್ಸಸ್ ಮಂತ್ರ ಒಂದೇ ತರವಿದೆ. ಹಾಗಿದ್ದರೆ, ಬೋರ್ಡ್ ಪರೀಕ್ಷೆಗಳಲ್ಲಿ 99+ ಅಂಕಗಳನ್ನು ಗಳಿಸಲು ಯಾವ ರೀತಿ ನೀವು ತಯಾರಿ ನಡೆಸಬೇಕು ಎಂಬುದನ್ನು ಇಲ್ಲಿ ತಿಳಿಸಿದ್ದೇವೆ.
ಸ್ಥಿರತೆ
ನಿಮ್ಮ ಓದಿನ ರೀತಿಯಲ್ಲಿ ಸ್ಥಿರತೆ ಮುಖ್ಯ. ಬಹುತೇಕರು ಕೊನೆಯ ಕ್ಷಣದಲ್ಲಿ ತಯಾರಾಗಿ ಹೋಗಿ ಎಕ್ಸಾಂ ಬರೆಯುತ್ತಾರೆ. ಆದರೆ, ವರ್ಷದ ಆರಂಭದಿಂದ ಪರೀಕ್ಷಾ ಹಂತದವರೆಗೂ ನಿಯಮಿತವಾಗಿ ಪ್ರತಿದಿನ ಇಷ್ಟು ಸಮಯವೆಂದು ಅಧ್ಯಯನಕ್ಕೆ ಮೀಸಲಿರಿಸಬೇಕು. ಜೊತೆಗೆ, ಅಧ್ಯಯನದ ಸಮಯದಲ್ಲಿ ಸಣ್ಣ ವಿರಾಮಗಳು ಸಹ ಅಗತ್ಯ ಎಂಬುದನ್ನು ಮರೆಯಬಾರದು.
undefined
ಸುಮ್ಮನೆ ಪ್ಲ್ಯಾನ್ ಮಾಡಿದರೆ ಸಾಲದು
ಬಹಳಷ್ಟು ವಿದ್ಯಾರ್ಥಿಗಳು ಹೀಗೆ ಓದುತ್ತೇವೆ ಎಂದು ಯೋಜನೆ ರೂಪಿಸುತ್ತಾರೆ. ಆದರೆ, ಅದರಂತೆ ನಡೆದುಕೊಳ್ಳದೆ ಕಡೆಯ ಕ್ಷಣದಲ್ಲಿ ಒದ್ದಾಡುತ್ತಾರೆ. ಅಧ್ಯಯನದ ಸಮಯವನ್ನು ನಿಗದಿಪಡಿಸುವುದು ಮತ್ತು ಅದೇ ಸಮಯದಲ್ಲಿ ಉತ್ಪಾದಕವಾಗಿ ಏನನ್ನೂ ಮಾಡದಿದ್ದರೆ ಯಾವುದೇ ಪ್ರಯೋಜನವಾಗುವುದಿಲ್ಲ. ಹೀಗಾದರೆ ಸಾಲದು, ಯೋಜಿಸಿದ ಪ್ಲ್ಯಾನ್ ಅನುಷ್ಠಾನವೂ ಆಗಬೇಕು.
ಗುಣಮಟ್ಟದ ಜ್ಞಾನ
ವಿದ್ಯಾರ್ಥಿಗಳು ತಾವು ಓದಿದ ಕಾನ್ಸೆಪ್ಟ್ ಅರ್ಥ ಮಾಡಿಕೊಳ್ಳಲು ಹೆಚ್ಚು ಸಮಯ ನೀಡಬೇಕು. ಅಂದರೆ, ಮಾರ್ಕ್ಸ್‌ಗಾಗ ಓದದೆ, ಜ್ಞಾನಕ್ಕಾಗಿ ಓದಬೇಕು. ಓದಿದ್ದೆಲ್ಲವನ್ನೂ ಅರ್ಥ ಮಾಡಿಕೊಂಡರೆ, ಮಾರ್ಕ್ಸ್ ತನ್ನಂತಾನೆಯೇ ಹಿಂಬಾಲಿಸುತ್ತದೆ.
ಮಾದರಿ ಪತ್ರಿಕೆ ಅಭ್ಯಾಸ
ಎಲ್ಲವನ್ನೂ ಓದಿದ ಬಳಿಕ ಹಳೆಯ ವರ್ಷದ ಪ್ರಶ್ನಾ ಪತ್ರಿಕೆಗಳು, ಮಾದರಿ ಪತ್ರಿಕೆಗಳನ್ನು ತೆಗೆದುಕೊಂಡು ಉತ್ತರಿಸುತ್ತಾ ಹೋಗಬೇಕು. ಆಗ, ತಮಗೆ ಬಾರದ ವಿಷಯಗಳು ಯಾವುವು, ಯಾವುದರ ಬಗ್ಗೆ ತಾವಿನ್ನೂ ಕಲಿಯಬೇಕಿದೆ ಎಂಬುದು ಅರ್ಥವಾಗುತ್ತದೆ. ನಂತರ ಕಲಿಯಬೇಕಾದುದಕ್ಕೆ ಆದ್ಯತೆ ನೀಡಿದರೆ ಪರೀಕ್ಷೆಗೆ ಹೆದರುವ ಅಗತ್ಯ ಬರುವುದಿಲ್ಲ.
ಸಮಯ ನಿರ್ವಹಣೆ
ಹೆಚ್ಚಿನ ಅಂಕಗಳನ್ನು ಗಳಿಸಲು ಇಡೀ ವರ್ಷ ನಿರಂತರವಾಗಿ ಅಧ್ಯಯನ ಮಾಡುವುದು ಅತ್ಯಗತ್ಯ. ಓದಿಗಾಗಿ ಮೀಸಲಿಟ್ಟ ಸಮಯವನ್ನು ಯಾವುದೇ ಕಾರಣಕ್ಕೂ ಬೇರೆ ಕೆಲಸಗಳಲ್ಲಿ ಕಳೆಯಬಾರದು. ಹಾಗೆಯೇ ನಿಗದಿತ ಸಮಯದಲ್ಲಿ ಉತ್ತರಿಸುವ ವೇಗ ಪಡೆಯಲು ಹೆಚ್ಚಿನ ಅಭ್ಯಾಸ ಮಾಡಬೇಕು.
ಸಹಾಯ ಕೇಳಿ
ನೀವೆಷ್ಟೇ ಬುದ್ಧಿವಂತರಿರಬಹುದು. ಹಾಗಂಥ ಎಲ್ಲವೂ ನಿಮಗೆ ಗೊತ್ತಿರಬೇಕೆಂದಿಲ್ಲ. ಕೆಲವು ಡೌಟ್ಸ್ ಬಂದಾಗ ಅದರ ಪರಿಹಾರಕ್ಕಾಗಿ ಪರಿಣತರ ಸಹಾಯ ಪಡೆಯಲು ಹಿಂದು ಮುಂದು ನೋಡಬೇಡಿ. ತಾನು ಎಲ್ಲಿ ಏನು ತಪ್ಪಾಗಿ ಪ್ರಶ್ನೆ ಕೇಳುತ್ತೇನೋ ಎಂಬ ಅಂಜಿಕೆ ಬೇಡ. ವಿಷಯವನ್ನು ನೀವು ಅರಿತುಕೊಳ್ಳುವುದು ಮುಖ್ಯ.
ಆರೋಗ್ಯ ಕಾಪಾಡಿಕೊಳ್ಳಿ
ದೇಹ ಮತ್ತು ಮನಸ್ಸು ಆರೋಗ್ಯದಿಂದಿದ್ದಾಗ ಮಾತ್ರ ಚೆನ್ನಾಗಿ ಅಧ್ಯಯನ ಮಾಡಲು ಸಾಧ್ಯ. ಹಾಗಾಗಿ, ಬಹುತೇಕ ಟಾಪರ್‌ಗಳು ತಮ್ಮ ಆರೋಗ್ಯಕ್ಕೆ ಮಹತ್ವ ನೀಡುತ್ತಾರೆ. ನೀವು ಕೂಡಾ ಆರೋಗ್ಯವನ್ನು ಕಡೆಗಣಿಸಬೇಡಿ. ಉತ್ತಮ ನಿದ್ರೆ, ಆಹಾರದಲ್ಲಿ ಹೊಂದಾಣಿಕೆ ಬೇಡ.