2017-18 ನೇ ಸಾಲಿನಲ್ಲಿ ಮೂರು ಸರ್ಕಾರಿ ಶಾಲೆಗಳಿಗೆ ಬೀಗ ಬಿದ್ದಿದ್ದರೆ, 2019-20 ನೇ ಸಾಲಿನಲ್ಲಿ ಎರಡು, 2020-21 ನೇ ಸಾಲಿನಲ್ಲಿ ಒಂದು ಶಾಲೆ, 2021-22 ನೇ ಸಾಲಿನಲ್ಲಿ ಎರಡು ಶಾಲೆಗಳು ವಿದ್ಯಾರ್ಥಿಗಳಿಲ್ಲದೇ ಬಂದ್ ಆಗಿತ್ತು. 2022-23ನೇ ಸಾಲಿನಲ್ಲೂ ಎರಡು ಶಾಲೆಗಳು ವಿದ್ಯಾರ್ಥಿಗಳಿಲ್ಲದೇ ಶಾಲೆ ಬಂದ್ ಮಾಡಿದ್ದರೆ, ಸದ್ಯ ಪ್ರಸ್ತುತ ವರ್ಷ ತಾಲೂಕಿನ ಮೂರು ಶಾಲೆಗಳು ವಿದ್ಯಾರ್ಥಿಗಳೇ ಇಲ್ಲದೇ ಬಂದ್ ಆಗಿವೆ.
ಭರತ್ ರಾಜ್ ಕಲ್ಲಡ್ಕ, ಏಷಿಯಾನೆಟ್ ಸುವರ್ಣ ನ್ಯೂಸ್, ಕಾರವಾರ
ಉತ್ತರ ಕನ್ನಡ(ಆ.09): ಸರಕಾರಿ ಶಾಲೆಗಳಿಗೆ ಮಕ್ಕಳ ಪ್ರವೇಶಾತಿ ಹಾಗೂ ಅಭ್ಯಾಸ ಕಡಿಮೆಯಾಗಿರುವುದರಿಂದ ಉತ್ತರಕನ್ನಡ ಜಿಲ್ಲೆಯಲ್ಲಿ ಅತ್ಯಲ್ಪ ಮಕ್ಕಳಿರುವ ಶಾಲೆಗಳನ್ನು ಸ್ಥಳೀಯ ಸರಕಾರಿ ಶಾಲೆಗಳ ಜತೆ ವಿಲೀನಗೊಳಿಸಲು ಸರಕಾರ ಇದೀಗ ಮತ್ತೆ ಚಿಂತನೆ ನಡೆಸಿದೆ.
undefined
ಈ ಮೂಲಕ ಸರಕಾರಿ ಶಾಲೆಗಳ ಅಂತ್ಯಕ್ಕೆ ಮತ್ತೆ ಮುನ್ನುಡಿ ಬರೆದಂತಾಗಿದೆ. ಕಾರವಾರ ಶೈಕ್ಷಣಿಕ ಜಿಲ್ಲೆಯಲ್ಲಿ 5ಕ್ಕಿಂತ ಕಡಿಮೆ ವಿದ್ಯಾರ್ಥಿಗಳಿರುವ ಕಿರಿಯ ಪ್ರಾಥಮಿಕ ಹಾಗೂ ಹಿರಿಯ ಪ್ರಾಥಮಿಕ ಶಾಲೆಗಳು ಅಂಕೋಲಾದಲ್ಲಿ 11, ಭಟ್ಕಳದಲ್ಲಿ 3, ಹೊನ್ನಾವರದಲ್ಲಿ 7, ಕಾರವಾರದಲ್ಲಿ 24, ಕುಮಟಾದಲ್ಲಿ 9 ಸೇರಿ ಒಟ್ಟು 54 ಶಾಲೆಗಳಿವೆ.
ವಿದ್ಯಾಕಾಶಿ ಧಾರವಾಡಲ್ಲಿ ಸರ್ಕಾರಿ ಶಾಲೆಯ 496 ಕೊಠಡಿಗಳು ಶಿಥಿಲ: ಜೀವಭಯದಲ್ಲಿ ಮಕ್ಕಳಿಗೆ ಪಾಠ ಭೋದನೆ
ಇನ್ನು 10ಕ್ಕಿಂತ ಕಡಿಮೆಯಿರುವ ವಿದ್ಯಾರ್ಥಿಗಳು ಕ್ರಮವಾಗಿ ಅಂಕೋಲಾದಲ್ಲಿ 15, ಭಟ್ಕಳದಲ್ಲಿ 10, ಹೊನ್ನಾವರದಲ್ಲಿ 28, ಕಾರವಾರದಲ್ಲಿ 22, ಕುಮಟಾದಲ್ಲಿ 19 ಸೇರಿ ಒಟ್ಟು 94 ಸರಕಾರಿ ಶಾಲೆಗಳಿವೆ. ಇನ್ನು ಶಿರಸಿ ಶೈಕ್ಷಣಿಕ ಜಿಲ್ಲೆಯಲ್ಲಿ 10ಕ್ಕಿಂತ ಕಡಿಮೆಯಿರುವ ಶಾಲೆಗಳು ಶಿರಸಿಯಲ್ಲಿ 44, ಸಿದ್ಧಾಪುರದಲ್ಲಿ 30, ಯಲ್ಲಾಪುರದಲ್ಲಿ 25, ಮುಂಡಗೋಡದಲ್ಲಿ 2, ಹಳಿಯಾಳದಲ್ಲಿ 5, ಜೊಯಿಡಾದಲ್ಲಿ 43 ಸೇರಿದಂತೆ ಒಟ್ಟು 149 ಶಾಲೆಗಳಿವೆ. ಕಳೆದ 6 ವರ್ಷಗಳಲ್ಲಿ ಈವರೆಗೆ 13 ಸರಕಾರಿ ಶಾಲೆಗಳನ್ನು ಮುಚ್ಚಲಾಗಿದೆ.
2017-18 ನೇ ಸಾಲಿನಲ್ಲಿ ಮೂರು ಸರ್ಕಾರಿ ಶಾಲೆಗಳಿಗೆ ಬೀಗ ಬಿದ್ದಿದ್ದರೆ, 2019-20 ನೇ ಸಾಲಿನಲ್ಲಿ ಎರಡು, 2020-21 ನೇ ಸಾಲಿನಲ್ಲಿ ಒಂದು ಶಾಲೆ, 2021-22 ನೇ ಸಾಲಿನಲ್ಲಿ ಎರಡು ಶಾಲೆಗಳು ವಿದ್ಯಾರ್ಥಿಗಳಿಲ್ಲದೇ ಬಂದ್ ಆಗಿತ್ತು. 2022-23ನೇ ಸಾಲಿನಲ್ಲೂ ಎರಡು ಶಾಲೆಗಳು ವಿದ್ಯಾರ್ಥಿಗಳಿಲ್ಲದೇ ಶಾಲೆ ಬಂದ್ ಮಾಡಿದ್ದರೆ, ಸದ್ಯ ಪ್ರಸ್ತುತ ವರ್ಷ ತಾಲೂಕಿನ ಮೂರು ಶಾಲೆಗಳು ವಿದ್ಯಾರ್ಥಿಗಳೇ ಇಲ್ಲದೇ ಬಂದ್ ಆಗಿವೆ. ಇದರ ಜತೆ ಒಂದು ಅನುದಾನಿತ ಪ್ರೌಢ ಶಾಲೆ ಕೂಡಾ ಬಂದ್ ಆಗುವ ಹಂತಕ್ಕೆ ತಲುಪಿದೆ. ಸರಕಾರಿ ಶಾಲೆಗಳು ಅವನತಿಯತ್ತ ಸಾಗುತ್ತಿರುವ ಹಿನ್ನೆಲೆ ಹೋರಾಟಗಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಖಾಸಗಿ ಇಂಗ್ಲಿಷ್ ಮೀಡಿಯಂ ಶಾಲೆಗಳತ್ತ ಜನರ ವ್ಯಾಮೋಹ ಹಾಗೂ ಸಂಬಂಧಪಟ್ಟ ಶಿಕ್ಷಣಾಧಿಕಾರಿಗಳು ನಿರ್ಲಕ್ಷ್ಯದಿಂದಾಗಿ ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿದೆ. ಶಾಲೆಗಳನ್ನು ಮುಚ್ಚುವುದು ಅಥವಾ ವಿಲೀನಗೊಳಿಸುವ ಬದಲು ಅಧಿಕಾರಿಗಳು ಪೋಷಕರ ಗಮನ ಸೆಳೆದು ಸರಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚಳವಾಗಲು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.